Asianet Suvarna News Asianet Suvarna News

ಹುಬ್ಬಳ್ಳಿ ಸ್ಲಂ ಬಾಯ್‌ಗೆ ಮಂತ್ರಿ ಪಟ್ಟ..!

* ಹುಬ್ಬಳ್ಳಿ ಗಿರಣಿಚಾಳದಲ್ಲಿ ಆಡಿ ಬೆಳೆದ ಶಂಕರ ಪಾಟೀಲ್‌ ಮುನೇನಕೊಪ್ಪ
* ನಾಗರಿಕ ಹಿತಾಭಿವೃದ್ಧಿ ಸಮಿತಿಯಿಂದ ಸಾಮೂಹಿಕ ವಿವಾಹ
* ಬೊಮ್ಮಾಯಿ ಜತೆ ಕಳಸಾ- ಬಂಡೂರಿ ಹೋರಾಟದಲ್ಲಿ ಭಾಗಿ
 

Hubballi Slum Boy Shankar Patil Munenkoppa Got Minister Post grg
Author
Bengaluru, First Published Aug 5, 2021, 7:50 AM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಆ.05): ಇಲ್ಲಿನ ಸ್ಲಂ ಪ್ರದೇಶವಾದ ‘ಗಿರಣಿಚಾಳ್‌’ನಲ್ಲಿ ಆಡಿ ಬೆಳೆದ ಮತ್ತು ಓರ್ವ ಕಾರ್ಮಿಕನ ಪುತ್ರ ಶಂಕರ ಪಾಟೀಲ್‌ ಮುನೇನಕೊಪ್ಪ ಇಂದು ಕರ್ನಾಟಕ ಸರ್ಕಾರದ ಗೌರವಾನ್ವಿತ ಸಚಿವರು! ಹೌದು, ನವಲಗುಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ಗೆಲುವು ಸಾಧಿಸಿ ಶಾಸಕರಾಗಿರುವ ಶಂಕರ ಪಾಟೀಲ್‌ ಮುನೇನಕೊಪ್ಪ ಅವರು ಹುಟ್ಟಿ ಬೆಳೆದದ್ದು, ಓದಿ ಆಡಿದ್ದು, ಸಮಾಜ ಸೇವಕ, ಕಳಸಾ ಬಂಡೂರಿ ಹೋರಾಟಗಾರರಾಗಿ ರೂಪಗೊಂಡದ್ದು ಇದೇ ಗಿರಣಿಚಾಳ್‌ ಸ್ಲಂನಲ್ಲಿ ಎನ್ನುವುದು ಗಮನೀಯ.

ಶಂಕರ ಅವರ ತಂದೆ ಬಸವನಗೌಡ ಪಾಟೀಲ ಇಲ್ಲಿನ ‘ಮಹಾದೇವ ಜವಳಿ ಗಿರಣಿ’ಯ ಸೆಕ್ಯೂರಿಟಿ ಸಿಬ್ಬಂದಿಯಾಗಿದ್ದರು. ಅವರಿಗೆ ನವಲಗುಂದ ತಾಲೂಕಿನ ಅಮರಗೋಳ. ಅಲ್ಲಿ ಹೊಲ, ಮನೆಯಿದ್ದರೂ ಜವಳಿ ಗಿರಣಿಯ ಕೆಲಸದಿಂದಾಗಿ ಉಳಿದ ಕಾರ್ಮಿಕರಂತೆ ಗಿರಣಿಚಾಳ ಸ್ಲಂನಲ್ಲೇ ವಾಸವಿದ್ದರು. ಹೀಗಾಗಿ ಶಂಕರ ಅವರ ಬಾಲ್ಯವೆಲ್ಲ ಕಳೆದಿರುವುದು ಇದೇ ಕೊಳಚೆ ಪ್ರದೇಶದಲ್ಲಿ.

ಗಿರಣಿಚಾಳ ಶಾಲೆಯಿಂದ ಆರಂಭವಾದ ಪ್ರಾಥಮಿಕ ಶಿಕ್ಷಣ ಮುಂದೆ ಕಮರೀಪೇಟೆಯ 6 ನಂಬರ್‌ ಶಾಲೆಯಲ್ಲಿ ಮುಂದುವರೆಯಿತು. ನಂತರ ಇವರ ಕುಟುಂಬ ವಿಶ್ವೇಶ್ವರ ನಗರಕ್ಕೆ ಸ್ಥಳಾಂತರಗೊಂಡರು. ಬಳಿಕ ಲ್ಯಾಮಿಂಗ್ಟನ್‌ ಸ್ಕೂಲ್‌ನಲ್ಲಿ ಪ್ರೌಢಶಿಕ್ಷಣ ಮುಗಿಸಿ, ಪಿಯುಸಿ ಓದಿದ್ದು, ನವಲಗುಂದದ ಶಂಕರ ಪಿಯು ಕಾಲೇಜಿನಲ್ಲಿ. ಅಲ್ಲಿಂದ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗ ಮುಗಿಸಿದರು.

ಒಂದೇ ದಿನ 2 ಬಾರಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಂಕರ ಪಾಟೀಲ್ ಮುನೇನಕೊಪ್ಪ

ಜಿಗರಿ ದೋಸ್ತಗಳು:

ಓದು ಬೇರೆ ಬೇರೆ ಶಾಲಾ- ಕಾಲೇಜುಗಳಲ್ಲಿ ಆಗಿದ್ದರೂ ಗೆಳೆತನ, ಸಾಂಗತ್ಯ ಎಲ್ಲವೂ ಗಿರಣಿಚಾಳ್‌ನ ಬಾಲ್ಯದ ಗೆಳೆಯರೊಂದಿಗೆ ಮುಂದುವರೆದಿತ್ತು. ಆಟ, ಗುದ್ದಾಟ, ಹೋರಾಟಕ್ಕೂ ಆ ಗೆಳೆತನ ನಾಂದಿಯಾಯಿತು. ವೀರಭದ್ರಪ್ಪ ಹಾಲಹರವಿ, ಹನುಮಂತಪ್ಪ ಮಾಲಪಲ್ಲಿ, ಪರಶುರಾಮ ಪೂಜಾರ, ಮೋಹನ ಹಿರೇಮನಿ, ಮಾರುತಿ ಹಾಲಹರವಿ, ಬಸಲಿಂಗಯ್ಯ ಹಿರೇಮಠ, ಬಸವರಾಜ ಬೆಣಕಿನಡೋಣಿ, ಮಾರುತಿ ಬಾರಕೇರ, ಚಂದ್ರು ಮುಶಪ್ಪನವರ, ಬಸವರಾಜ ಗದ್ದರಕಿ, ಗೌಸ ಪರದೇವಾಲೆ, ಮಾಬೂಸಾಬ ಚವ್ಹಾಣ ಹೀಗೆ ಗೆಳೆಯರ ದೊಡ್ಡ ದಂಡೇ ಇತ್ತು.

ಕ್ರಿಕೆಟ್‌ ಪಂದ್ಯಾವಳಿ, ದೇಹದಾಢ್ರ್ಯ ಸ್ಪರ್ಧೆ, ಭಜನಾ ಸ್ಪರ್ಧೆ, ಗಣಪತಿ ಪ್ರತಿಷ್ಠಾಪನೆ ಇತ್ಯಾದಿಗಳಲ್ಲಿ ತೊಡಗಿಕೊಂಡಿದ್ದರು. ಮುಂದೆ ಗಿರಣಿಚಾಳ್‌ ಹಿತಾಭಿವೃದ್ಧಿ ಸಂಘ ಕಟ್ಟಿ ಕಾರ್ಮಿಕರ ಸೂರಿನ ಹಕ್ಕುಪತ್ರ, ಕೆಲಸ ಕಳೆದುಕೊಂಡವರಿಗೆ ಪರಿಹಾರ ಇತ್ಯಾದಿ ಹೋರಾಟಗಳನ್ನು ನಿರಂತರಗೊಳಿಸಿದರು. 33 ಜೋಡಿ ಸಾಮೂಹಿಕ ವಿವಾಹ ಮಾಡಿದರು. ಅಲ್ಲಿಂದ ಇವರ ಹೆಜ್ಜೆಗಳು ರಾಜಕೀಯದತ್ತ ತಿರುಗಿದವು. ಆ ಕಾರ್ಯಕ್ರಮಕ್ಕೆ ಬಂದಿದ್ದ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕರ ಅವರಲ್ಲಿನ ಸಂಘಟನಾ ಚಾತುರ್ಯ ಕಂಡು ತಮ್ಮೊಂದಿಗೆ ಕರೆದೊಯ್ದರು.

ಅದೇತಾನೇ ಶುರುವಾಗಿದ್ದ ಕಳಸಾ ಬಂಡೂರಿ ಹೋರಾಟದಲ್ಲಿ ಶಂಕರ ಪಾಟೀಲ್‌ ರೈತರನ್ನು ಸಂಘಟಿಸುವ, ಪಾದಯಾತ್ರೆಗೆ ವ್ಯವಸ್ಥೆ ಮಾಡಿಕೊಳ್ಳುವ ಇತ್ಯಾದಿ ಹೊಣೆಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದರು. ಬಸವರಾಜ ಬೊಮ್ಮಾಯಿ ಅವರ 290 ಕಿಮೀ ಉದ್ದದ ಪಾದಯಾತ್ರೆಯನ್ನು ಎನ್‌.ಎಚ್‌. ಕೋನರಡ್ಡಿ, ಬಿ.ವಿ.ಸೋಮಾಪುರ ಮುಂತಾದವರ ಸಹಯೋಗದಲ್ಲಿ ಯಶಸ್ವಿಗೊಳಿಸಿದರು.

ರಾಜಕೀಯ ಪಾದಾರ್ಪಣೆ:

ಬೊಮ್ಮಾಯಿ ಅವರನ್ನು ರಾಜಕೀಯ ಗುರು ಎಂದುಕೊಂಡಿದ್ದ ಮುನೇನಕೊಪ್ಪ, 2008ರಲ್ಲಿ ಅವರೊಂದಿಗೆ ಬಿಜೆಪಿ ಸೇರಿದರು. ಅಂದಿನಿಂದ ಪಕ್ಷದ ತತ್ವ ಸಿದ್ಧಾಂತಕ್ಕೆ ತಕ್ಕಂತೆ ಪಕ್ಷನಿಷ್ಠರೆಂದು ಹೆಸರು ಪಡೆದರು. 2008ರಲ್ಲಿ ಬಿಜೆಪಿಯಿಂದ ನವಲಗುಂದ ಕ್ಷೇತ್ರದಲ್ಲಿ ಕಣಕ್ಕಿಳಿದ ಮುನೇನಕೊಪ್ಪ ಮೊದಲ ಪ್ರಯತ್ನದಲ್ಲೇ ವಿಧಾನಸಭೆ ಪ್ರವೇಶಿಸಿದರು. ಇದೇ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಪಡೆದರು.

2013ರಲ್ಲೂ ಚುನಾವಣೆಗೆ ಸ್ಪರ್ಧಿಸಿದರಾದರೂ ಪಕ್ಷ ಇಬ್ಭಾಗವಾದ ಹಿನ್ನೆಲೆ ಕೆಲವೇ ಮತಗಳ ಅಂತರದಲ್ಲಿ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಇವರ ಹೋರಾಟ, ಜನಪರ ಕಾಳಜಿಯಿಂದ ಮತ್ತೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಸಲೀಸಾಗಿ ಆಯ್ಕೆಯಾದರು. 2020ರಿಂದ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ ಅಧ್ಯಕ್ಷರಾಗಿ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದುಂಟು.
ಇಂದು ತಮ್ಮ ರಾಜಕೀಯ ಗುರು, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರಿರುವುದು ನಿಜಕ್ಕೂ ವಿಸ್ಮಯ.
 

Follow Us:
Download App:
  • android
  • ios