ಚಿಕ್ಕಬಳ್ಳಾಪುರ(ಜೂ.30): ಅಂತಾರಾಜ್ಯ ಕೊಲೆ ಪ್ರಕರಣವೊಂದನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುವ ಗೌರಿಬಿದನೂರು ಪೊಲೀಸರು, ಮರ್ಯಾದೆಗಾಗಿ ಹೆತ್ತ ಮಗಳನ್ನೇ ಕೊಂದ ಪಾಪಿ ತಾಯಿ ಸಮೇತ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಗೌರಿಬಿದನೂರು ತಾಲೂಕಿನ ಹುಲಿಕುಂಟೆ ಗ್ರಾಮದ ಅಶ್ವತ್ಥಪ್ಪ ಎಂಬುವರಿಗೆ ಸೇರಿದ ಕೃಷಿ ಹೊಂಡದಲ್ಲಿ ಸುಮಾರು 18 ವರ್ಷದ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಆದರೆ ಮೃತದೇಹ ಯಾರದು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಪೊಲೀಸರು ತೀವ್ರ ಪರದಾಡುವಂತಾಗಿತ್ತು. ಆದರೆ ಗೌರಿಬಿದನೂರು ವೃತ್ತ ನಿರೀಕ್ಷಕ ರವಿ ನೇತೃತ್ವದ ತಂಡ ತನಿಖೆ ಕೈಗೊಂಡು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಏನು?

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲೂಕಿನ ತೂಮುಕುಂಟೆ ಗ್ರಾಮದ ಸಂಧ್ಯಾ (17) ಮೃತ ಯುವತಿಯಾಗಿದ್ದು, ಇವರಿಗೆ ಮನೆಯವರು ಮದುವೆಗೆ ಸಂಬಂಧಗಳನ್ನು ನೋಡುತ್ತಿದ್ದರು ಎನ್ನಲಾಗಿದೆ. ಆದರೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದ ಸಂಧ್ಯಾ ಮನೆಯವರು ನೋಡಿದ ಸಂಬಂಧಗಳನ್ನು ತಿರಸ್ಕರಿಸುತ್ತಳು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಪ್ರಿಯಕರನೊಂದಿಗೆ ಯುವತಿ ನಾಪತ್ತೆಯಾಗಿದ್ದು, ಇದನ್ನು ತಿಳಿದ ಪೋಷಕರು ಸಂಧ್ಯಾಳನ್ನು ಕೊಲೆ ಮಾಡಿ, ಸೊಂಟಕ್ಕೆ ಸೈಜುಕಲ್ಲನ್ನು ಬಿಗಿದು ತಂದು ಹುಲಿಕುಂಟೆ ಗ್ರಾಮದ ಕೃಷಿಹೊಂಡದಲ್ಲಿ ಶವವನ್ನು ಹಾಕಿ ನಾಪತ್ತೆಯಾಗಿರುವುದು ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ನಾಳೆಯಿಂದ ಅನ್‌ಲಾಕ್‌ 2.0 ಜಾರಿ; ಯಾವುದಕ್ಕೆ ನಿರ್ಬಂಧ? ಯಾವುದಕ್ಕೆ ಇಲ್ಲ?

ಈ ಸಂಬಂಧ ಮೃತಳ ತಾಯಿ ರಾಮಾಂಜಿನಮ್ಮ, ನೇತ್ರಾವತಿ, ಬಾಲಕೃಷ್ಣ, ಅಶೋಕ ಎಂಬುವರನ್ನು ಬಂಧಿಸಲಾಗಿದೆ. ಬಾಲಕೃಷ್ಣ ಮತ್ತು ನೇತ್ರಾವತಿ ಎಂಬುವರು ಗೌರಿಬಿದನೂರು ತಾಲೂಕಿನ ರೆಡ್ಡಿದ್ಯಾವರಹಳ್ಳಿ ಗ್ರಾಮದವರಾಗಿದ್ದು, ಮೃತಳಿಗೆ ಸಂಬಂಧಿಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮರ್ಯಾದೆಗೆ ಅಂಜಿ ಮಗಳನ್ನು ಕೊಂದವರು ಪ್ರಸ್ತುತ ಕಂಬಿ ಎಣಿಸುತ್ತಿದ್ದಾರೆ.