ಕೊಡಗಿನಲ್ಲಿ ಬಟ್ಟೆ ಒಣಗಿಸಲು ಬಳಂಜಿ, ಅಗ್ಗಿಷ್ಟಿಕೆಗೆ ಬೇಡಿಕೆ, ದೇಹದ ಉಷ್ಣತೆಗಾಗಿ ಭರ್ಜರಿ ಏಡಿ ಮಾರಾಟ!
ಕೊಡಗಿನ ಜನರು ಬಟ್ಟೆಗಳನ್ನು ಒಣಗಿಸಲು, ಮನೆ ಮತ್ತು ಕಚೇರಿಗಳನ್ನು ಬಿಸಿಯಾಗಿಡಲು ಮಳೆಗಾಲದ ಅತಿಥಿ ಬಳಂಜಿ, ಅಗ್ಗಿಷ್ಟಿಕೆಗೆ ಮೊರೆ ಹೋಗುತ್ತಿದ್ದಾರೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.11): ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತ್ತೆಂದರೆ ಮುಗಿಯಿತು. ಇನ್ನು ಸೂರ್ಯನ ದರ್ಶನವಾಗುವುದೇ ಅಪರೂಪ. ಈಗ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಸೂರ್ಯನ ಕಿರಣಗಳೇ ಇಲ್ಲದಂತೆ ಆಗಿ 15 ಕ್ಕೂ ಹೆಚ್ಚು ದಿನಗಳು ಕಳೆದಿವೆ. ಹೀಗಾಗಿ ಜನರು ಬಟ್ಟೆಗಳನ್ನು ಒಣಗಿಸಲು, ಮನೆ ಮತ್ತು ಕಚೇರಿಗಳನ್ನು ಬಿಸಿಯಾಗಿಡಲು ಕೊಡಗಿನ ಮಳೆಗಾಲದ ಅತಿಥಿ ಬಳಂಜಿ, ಅಗ್ಗಿಷ್ಟಿಕೆಗೆ ಮೊರೆ ಹೋಗುತ್ತಿದ್ದಾರೆ. ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತ್ತೆಂದರೆ ನಾಲ್ಕೈದು ತಿಂಗಳ ಕಾಲ ಸೂರ್ಯ ಕಾಣಿಸುವುದೇ ಇಲ್ಲ. ಸೂರ್ಯ ಕಾಣಿಸದೇ ಇರುವುದರಿಂದ ಇಡೀ ವಾತವರಣ ಹವಾನಿಯಂತ್ರಿತ ಶಿಥಲೀಕರಣವೇನೋ ಎನ್ನುವಷ್ಟರ ಮಟ್ಟಿಗೆ ಕೂಲ್ ಕೂಲ್ ಆಗಿಬಿಡುತ್ತದೆ.
ಹೀಗಾಗಿ ಇನ್ನಿಲ್ಲದಂತಹ ಜಡಿ ಮಳೆಯ ಜೊತೆಗೆ ಕರುಳು ನಡುಗಷ್ಟು ಚಳಿಯೂ ಆರಂಭವಾಗಿದೆ. ಜನರು ಮನೆ, ಕಚೇರಿಗಳನ್ನು ಬೆಚ್ಚಗೆ ಇಟ್ಟುಕೊಳ್ಳಲು ಮತ್ತು ಬಟ್ಟೆಗಳನ್ನು ಒಣಗಿಸಲು ಪಡಬಾರದ ಕಷ್ಟ ಪಡುವಂತೆ ಆಗಿದ್ದು, ಅನಿವಾರ್ಯವಾಗಿ ಬಳಂಜಿ ಮತ್ತು ಅಗ್ಗಿಷ್ಟಿಕೆ ಮೊರೆ ಹೋಗಿದ್ದಾರೆ. ಬಿದಿರ ಕಟ್ಟಿಗೆಗಳನ್ನು ಸೀಳಿ ಎತ್ತವಾದ ಗೋಪುದಂತೆ ಮಾಡಿ ಅವುಗಳನ್ನು ತಲಾ 250 ರಿಂದ 300 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ತಲತಲಾಂತರ ವರ್ಷಗಳಿಂದಲೂ ಜನರು ಮಳೆಗಾಲದಲ್ಲಿ ಇವುಗಳನ್ನೇ ಬಳಸುತ್ತಿದ್ದಾರೆ. ಜೊತೆಗೆ ಇಷ್ಟೊಂದು ಮಳೆ, ಚಳಿ ಇರುವುದರಿಂದ ಒಮ್ಮೆ ಬಟ್ಟೆಗಳನ್ನು ತೊಳೆದರೆಂದರೆ ಅವುಗಳನ್ನು ಒಣಗಿಸಲು ವಾರಗಟ್ಟಲೆ ಸಮಯ ಬೇಕು. ಅಷ್ಟರಲ್ಲಿ ಬಟ್ಟೆಗಳಲ್ಲಿ ಪಾಚಿಯಂತೆ ಬೆಳೆದು ಎಷ್ಟೇ ಹೊಸ ಬಟ್ಟೆಗಳಾದರೂ ಅವು ಹಾಳಾಗಿ ಹೋಗುತ್ತವೆ.
ಕಳಪೆ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದ ಎಂಜಿನಿಯರ್ ಗೆ ಕಲ್ಲು ಹೊಡೆದ ಗ್ರಾಮಸ್ಥರು!
ಇದರಿಂದ ಜನರು ಬಳಂಜಿಗಳ ಮೊರೆ ಹೋಗಿದ್ದು ಮಡಿಕೇರಿಯಲ್ಲಿ ಭರ್ಜರಿ ಮಾರಾಟ ಆಗುತ್ತಿವೆ. ಕೇವಲ ಬಳಂಜಿ ಇದ್ದರೆ ಸಾಲದು ಅದಕ್ಕೆ ಅಗ್ಗಿಷ್ಟಿಕೆ ಜೊತೆಗೆ ಇದ್ದಿಲು ಬೇಕು. ಅಗ್ಗಿಷ್ಟಿಕೆಗೆ ಇದ್ದಿಲು ತುಂಬಿ ಅದಕ್ಕೆ ಬೆಂಕಿ ಹಾಕಿ ಬಳಂಜಿಯನ್ನು ಅಗ್ಗಿಷ್ಟಿಕೆಗೆ ಮುಚ್ಚಿ ಅದರ ಮೇಲೆ ಬಟ್ಟೆ ಒಣೆಹಾಕಲಾಗುತ್ತದೆ. ಹೀಗೆ ಮಾಡುವ ಮೂಲಕವೇ ಬಟ್ಟೆಗಳನ್ನು ಒಣಗಿಸಲಾಗುತ್ತಿದೆ. ಇದರಿಂದ ಮಡಿಕೇರಿಯಲ್ಲಿ ಈಗ ಬಳಂಜಿ ಮತ್ತು ಇದ್ದಿಲಿಗೆ ಬಾರಿ ಬೇಡಿಕೆ ಇದ್ದು ಭರ್ಜರಿ ಮಾರಾಟವಾಗುತ್ತಿದೆ.
ಬಳಂಜಿಯನ್ನು ಹಿಂದಿನಿಂದಲೂ ಬಳಸುತ್ತಿದ್ದೇವೆ. ಈಗ ಸ್ಥಿತಿವಂತವರು ಒಳ್ಳೆಯ ವಾಷಿಂಗ್ ಮಿಷನ್ಗಳನ್ನು ಬಳಸುತ್ತಾರೆ. ಆದರೆ ಸಾಮಾನ್ಯ ಜನರು ಈಗಲೂ ಬಳಂಜಿಗಳನ್ನೇ ಬಳಸುತ್ತಿದ್ದೇವೆ ಎನ್ನುತ್ತಾರೆ ಮಡಿಕೇರಿ ನಿವಾಸಿ ಸವಿತಾ ರಾಕೇಶ್. ಇದು ಒಂದೆಡೆಯಾದರೆ ಮತ್ತೊಂದೆಡೆ ಈ ಚಳಿಯಲ್ಲಿ ದೇಹವನ್ನು ಬೆಚ್ಚಗಿಟ್ಟಕೊಳ್ಳುವುದು ಸವಾಲಾಗಿದೆ. ಇಲ್ಲದಿದ್ದರೆ ಬಹಳ ಬೇಗ ಶೀತ ಜ್ವರಕ್ಕೆ ಒಳಗಾಗಬೇಕಾಗುತ್ತದೆ. ಅದಕ್ಕಾಗಿ ಮಳೆಗಾಲದಲ್ಲಿ ಸಿಗುವ ಏಡಿಗಳನ್ನು ಹೆಚ್ಚಿನ ಜನರು ಖರೀದಿಸಿ ಅವುಗಳಿಂದ ಖಾದ್ಯ ಮಾಡಿ ಸೇವಿಸುತ್ತಾರೆ. ಏಡಿಗಳಿಂದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಿ ಶೀತ ವಾತಾವರಣದಲ್ಲಿ ದೇಹ ಬೆಚ್ಚಗಿರಲು ಸಹಾಯ ಮಾಡುತ್ತದೆ ಎನ್ನುವುದು ಜನರು ಕಂಡುಕೊಂಡಿದ್ದಾರೆ.
ಫಸಲ್ ಬಿಮಾ ಯೋಜನೆ ಬೆಳೆ ವಿಮೆ ನೋಂದಣಿಗೆ ಜು. 31 ಕೊನೆಯ ದಿನ
ಆದ್ದರಿಂದಲೇ ಮಳೆಗಾಲದಲ್ಲಿ ಮಡಿಕೇರಿಯಲ್ಲಿ ಏಡಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಅವುಗಳ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ ಎನ್ನುತ್ತಾರೆ ಮಡಿಕೇರಿ ನಿವಾಸಿ ರವಿಗೌಡ. ಒಂದುವರೆಯಿಂದ ಎರಡು ಕೆಜಿ ತೂಗುವಷ್ಟು ಏಡಿಗಳ ಒಂದು ಗೊಂಚಲಿಗೆ 250 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ಇಡೀ ವಾತವರಣ ಸಂಪೂರ್ಣ ತಣ್ಣಗಾಗಿದೆ. ತೀವ್ರ ಚಳಿಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ಬಟ್ಟೆಗಳನ್ನು ಒಣಗಿಸಲು ಅಗ್ಗಿಷ್ಟಿಕೆ, ಬಳಂಜಿಗಳ ಮೊರೆ ಹೋಗಿದ್ದರೆ, ದೇಹದ ಉಷ್ಣತೆಯನ್ನು ಹೆಚ್ಚಿಸಿಕೊಳ್ಳಲು ಏಡಿಗಳ ಮೊರೆ ಹೋಗುತ್ತಿದ್ದಾರೆ.