‘ದಕ್ಷಿಣೆ’ ಎಂಬ ಭಿಕ್ಷೆಯಲ್ಲೇ ಬದುಕು ನಡೆಸುತ್ತಿರುವ ಮಸಣ ಕಾರ್ಮಿಕರು!

ಕನಿಷ್ಠ ಆದಾಯವಿಲ್ಲದೆ ಒದ್ದಾಡುತ್ತಿರುವ ಕಾರ್ಮಿಕರು | ದಕ್ಷಿಣೆಯೆಂಬ ಭಿಕ್ಷೆಯನ್ನು ನಂಬಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? | ಪಂಚಾಯಿತಿ ನೌಕರರೆಂದು ಪರಿಗಣಿಸಲು ಒತ್ತಾಯ| ಸರ್ಕಾರಗಳ ನಿರ್ಲಕ್ಷ್ಯದಿಂದ ಅವರ ಜೀವನ ಸ್ಥಿತಿ ದಿನ ದಿನಕ್ಕೆ ದುರ್ಭರವಾಗುತ್ತಿದೆ| ರಾಜ್ಯದಲ್ಲಿನ 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಮಸಣಗಳಲ್ಲಿ ಪಾರ ಸಂಖ್ಯೆಯ ಕಾರ್ಮಿಕರಿದ್ದಾರೆ| ಅಲ್ಲದೆ, ಧರ್ಮದ ಆಧಾರದಲ್ಲಿರುವ ಕಬರ್‌ಸ್ಥಾನ, ಕ್ರೈಸ್ತರ ಸ್ಮಶಾನ, ವೀರಶೈವ ರುದ್ರಭೂಮಿ ಹೀಗೆ ವಿವಿಧೆಡೆ ದುಡಿಯುವ ಕಾರ್ಮಿಕರು ಸಹ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ| 

Government Did not Respond Cemetery Workers

ಕೆ.ಎಂ. ಮಂಜುನಾಥ್

ಬಳ್ಳಾರಿ[ಅ.4]:  ಪಾರಂಪರಿಕವಾಗಿ ಸಾರ್ವಜನಿಕ ಮಸಣ (ಸ್ಮಶಾನ)ಗಳಲ್ಲಿ ಹೆಣ ಹೂಳಲು ಕುಣಿಗಳನ್ನು ಅಗೆಯುವ ಮತ್ತು ಶವಗಳನ್ನು ಹೂಳಿದ ಕುಣಿಗಳನ್ನು ಮುಚ್ಚುವ ಕೆಲಸದಲ್ಲಿ ತೊಡಗಿರುವ ‘ಮಸಣ ಕಾರ್ಮಿಕರು’ ದಕ್ಷಿಣೆ ಎಂಬ ಭಿಕ್ಷೆಯಲ್ಲೇ ಬದುಕು ನಡೆಸಿದ್ದಾರೆ. ಸರ್ಕಾರಗಳ ನಿರ್ಲಕ್ಷ್ಯದಿಂದ ಅವರ ಜೀವನ ಸ್ಥಿತಿ ದಿನ ದಿನಕ್ಕೆ ದುರ್ಭರವಾಗುತ್ತಿದೆ.

ರಾಜ್ಯದಲ್ಲಿನ 25 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಮಸಣಗಳಲ್ಲಿ ಪಾರ ಸಂಖ್ಯೆಯ ಕಾರ್ಮಿಕರಿದ್ದಾರೆ. ಅಲ್ಲದೆ, ಧರ್ಮದ ಆಧಾರದಲ್ಲಿರುವ ಕಬರ್‌ಸ್ಥಾನ, ಕ್ರೈಸ್ತರ ಸ್ಮಶಾನ, ವೀರಶೈವ ರುದ್ರಭೂಮಿ ಹೀಗೆ ವಿವಿಧೆಡೆ ದುಡಿಯುವ ಕಾರ್ಮಿಕರು ಸಹ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ಪೈಕಿ ಬಹುತೇಕರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರಿಗೆ ಯಾವುದೇ ಸೌಲಭ್ಯಗಳನ್ನು ಸರ್ಕಾರ ಈ ವರೆಗೆ ಕಲ್ಪಿಸಿಲ್ಲ.

ಕುಣಿಗಳನ್ನು ತೆಗೆಯುವಾಗ ಅಲ್ಲಿನ ಮಾಲಿನ್ಯ ಲೆಕ್ಕಿಸದೆ ಬರಿಗೈಯಲ್ಲೇ ಕೆಲಸ ಮಾಡಬೇಕು. ಸಾರ್ವಜನಿಕ ಸ್ಮಶಾನಗಳಲ್ಲಿ ಹೆಣಗಳನ್ನು ಹೂಳಲು ಬರುವವರು ನೀಡುವ ಒಂದಷ್ಟು ಹಣವೇ ಅವರಿಗೆ ಆಧಾರ. ಅನೇಕ ಬಡಜನರು ಕುಣಿ ತೋಡಿದ ಹಣವನ್ನು ಸಹ ಕೊಡುವುದಿಲ್ಲ. ಈ ಎಲ್ಲವನ್ನು ಸಹಿಸಿಕೊಂಡೇ ಕಾರ್ಯನಿರ್ವಹಿಸಬೇಕಾದ ಸ್ಥಿತಿ ನಮ್ಮದು ಎಂದು ಮಸಣ ಕಾರ್ಮಿಕರು ಬೇಸರ ವ್ಯಕ್ತಪಡಿಸುತ್ತಾರೆ.

ನೌಕರರೆಂದು ಪರಿಗಣಿಸಿ: 

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸುವ ಮಸಣ ಕಾರ್ಮಿಕರಿಗೆ ಆದಾಯ ಮೂಲವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದ್ದು, ಮಸಣ ಕಾರ್ಮಿಕರನ್ನು ಸ್ಥಳೀಯ ಪಂಚಾಯಿತಿಗಳು ನೌಕರರೆಂದು ಪರಿಗಣಿಸಬೇಕು. ಸ್ಮಶಾನಗಳಲ್ಲಿ ಕುಣಿ ಅಗೆಯುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಬೇಕು ಎಂಬುದು ಕಾರ್ಮಿಕರ ಒತ್ತಾಯವಾಗಿದೆ.

ಪ್ರತಿ ಸಾರ್ವಜನಿಕ ಮಸಣಕ್ಕೆ ಒಬ್ಬರಂತೆ ಮಸಣ ಕಾರ್ಮಿಕರೊಬ್ಬರನ್ನು ಸ್ಥಳೀಯ ಸಂಸ್ಥೆಗಳ ‘ಮಸಣ ನಿರ್ವಾಹಕ’ ನೌಕರರನ್ನಾಗಿ ನೇಮಿಸಿಕೊಳ್ಳಬೇಕು. ರಾಜ್ಯದಲ್ಲಿರುವ ಮಸಣ ಕಾರ್ಮಿಕರ ಸಂಖ್ಯೆಯನ್ನು ಪತ್ತೆ ಹಚ್ಚಲು ಹಾಗೂ ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಮಸಣ ಕಾರ್ಮಿಕರ ಗಣತಿ ಮಾಡಬೇಕು. ಮಸಣದಲ್ಲಿ ಕಾರ್ಯನಿರ್ವಹಿಸಲು ಸುರಕ್ಷತಾ ಸಲಕರಣೆಗಳನ್ನು ನೀಡಬೇಕು. ಮಸಣ
ಕಾರ್ಮಿಕರಿಗೆ ಕನಿಷ್ಠ 3 ಸಾವಿರ ಪಿಂಚಣಿ ನೀಡಬೇಕು ಎಂಬುದು ಕಾರ್ಮಿಕರ ಒತ್ತಾಯವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಬೆಂಗಳೂರಿನ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಸಂಚಾಲಕರಾದ ಯು. ಬಸವರಾಜ್ ಅವರು, ಮಸಣ ಕಾರ್ಮಿಕರ ಸ್ಥಿತಿ ತುಂಬಾ ಗಂಭೀರವಾಗಿದೆ. ಯಾವುದೇ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಕಾರ್ಮಿಕರ ಹಿತ ಕಾಯಲು ಸರ್ಕಾರ ಮುಂದಾಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಈ ಸಂಬಂಧ ಅ. 4 ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶ ಏರ್ಪಡಿಸಿದ್ದೇವೆ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಹಗರಿಬೊಮ್ಮನಹಳ್ಳಿಯ  ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಸಹ ಸಂಚಾಲಕರಾದ ಬಿ. ಮಾಳಮ್ಮ ಅವರು, ಮಸಣ ಕಾರ್ಮಿಕರನ್ನು ಆಯಾ ಪಂಚಾಯಿತಿ ನೌಕರರನ್ನು ಪರಿಗಣಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಅವರ ಬದುಕಿನ ಸ್ಥಿತಿ ಉತ್ತಮಗೊಳಿಸಬೇಕಾದದ್ದು ಸರ್ಕಾರದ ಕರ್ತವ್ಯ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios