Asianet Suvarna News Asianet Suvarna News

ಕಾವೇರಿ ವಿವಾದಕ್ಕೆ ಕರ್ನಾಟಕ ಒಕ್ಕೂಟ ವ್ಯವಸ್ಥೆಯಿಂದ ಹೊರ ಬರಬೇಕು: ಕುಮಾರಸ್ವಾಮಿ

ಕಾವೇರಿ ವಿಚಾರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ತಮಿಳುನಾಡಿನವರ ದಬ್ಬಾಳಿಕೆ ಸಹಿಸಿಕೊಂಡು ಬಂದಿದ್ದೇವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಬೇಕೆಂದರೆ ಒಕ್ಕೂಟ ವ್ಯವಸ್ಥೆಯಿಂದ ಹೊರ ಹೋಗುವಂತಹ ಕಠಿಣ ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ, ರೈತರು, ಕನ್ನಡಪರ ಎಲ್ಲ ಸಂಘಟನೆಗಳು ಕೈಜೋಡಿಸಬೇಕು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ

Former CM HD Kumaraswamy Talks Over Kaveri Water Dispute grg
Author
First Published Sep 20, 2023, 4:00 AM IST

ರಾಮನಗರ(ಸೆ.20): ರಸ್ತೆಯಲ್ಲಿ ನಿಂತು ಟೈರ್ ಗಳಿಗೆ ಬೆಂಕಿ ಹಚ್ಚುವುದರಿಂದ ಏನೂ ಆಗುವುದಿಲ್ಲ. ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಒಗ್ಗೂಡಿ ಕರ್ನಾಟಕದವರು ಒಕ್ಕೂಟ ವ್ಯವಸ್ಥೆಯಿಂದ ಹೊರ ಹೋಗುವ ಬೆದರಿಕೆ ಹಾಕಿದಾಗ ಮಾತ್ರ ಕಾವೇರಿ ನದಿ ನೀರು ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಬಿಡದಿ ಸಮೀಪದ ಕೇತಗಾನಳ್ಳಿಯ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ತಮಿಳುನಾಡಿನವರ ದಬ್ಬಾಳಿಕೆ ಸಹಿಸಿಕೊಂಡು ಬಂದಿದ್ದೇವೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಬೇಕೆಂದರೆ ಒಕ್ಕೂಟ ವ್ಯವಸ್ಥೆಯಿಂದ ಹೊರ ಹೋಗುವಂತಹ ಕಠಿಣ ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ, ರೈತರು, ಕನ್ನಡಪರ ಎಲ್ಲ ಸಂಘಟನೆಗಳು ಕೈಜೋಡಿಸಬೇಕು ಎಂದು ಹೇಳಿದರು.

ತಮಿಳುನಾಡಿಗೆ ಮತ್ತೆ 15 ದಿನ ತಲಾ 5 ಸಾವಿರ ಕ್ಯೂಸೆಕ್ಸ್‌ ಕಾವೇರಿ ನೀರು ಹರಿಸಿ: ಸಿಡಬ್ಲ್ಯೂಆರ್‌ಸಿ ಸೂಚನೆ

ನಮ್ಮ ಜನರ ಹಣದಲ್ಲಿ ಅಣೆಕಟ್ಟು ನಿರ್ಮಾಣ ಮಾಡಿದ್ದೇವೆ. ಇದಕ್ಕೇನು ಕೇಂದ್ರ ಸರ್ಕಾರ 5 ರುಪಾಯಿ ನೀಡಿಲ್ಲ. ಅಣೆಕಟ್ಟೆ ಇರುವುದು ನಮ್ಮಲ್ಲಿ, ಅದನ್ನು ಕಟ್ಟಿದ್ದು ನಾವು. 200 ವರ್ಷಗಳಿಂದ ಅವರ ದಬ್ಬಾಳಿಕೆ ಸಹಿಸಿಕೊಂಡಿದ್ದೇವೆ. ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆಯಬೇಕಾ ಎಂದು ಕಿಡಿಕಾರಿದರು.

ಕಾವೇರಿಗಾಗಿ ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಗ್ಗೂಡಿ ಹೋರಾಟ ಮಾಡಲೇಬೇಕಿದೆ. ತಮಿಳುನಾಡಿನಲ್ಲಿ ಯಾವ ರೀತಿ ಎಲ್ಲರೂ ಇಂತಹ ಸಂದರ್ಭಗಳಲ್ಲಿ ಒಗ್ಗೂಡುತ್ತಾರೊ ಹಾಗೆಯೇ ನಾವೂ ಒಗ್ಗೂಡಬೇಕು. ಆದರೆ, ರಾಜಕೀಯ ಅಂತ ನಾವಿಲ್ಲಿ ಹೊಡೆದಾಡಿಕೊಂಡು ಕೂತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ತಮಿಳುನಾಡಿನವರ ದಬ್ಬಾಳಿಕೆಯನ್ನು ಎಷ್ಟು ವರ್ಷ ಸಹಿಸಲು ಸಾಧ್ಯ. ಅಂತಿಮವಾಗಿ ನಾವು ಕೂಡ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದೇಶ ಧಿಕ್ಕರಿಸಿದರೆ ಜೈಲಿಗೆ ಹಾಕುತ್ತಾರಾ, ಹಾಕಲಿ. ಅರೆಸೇನಾ ಪಡೆಯನ್ನು ಕರೆಸುತ್ತಾರಾ, ಕರೆಸಲಿ ನೋಡೋಣ. ಹೀಗೆ ನಿರಂತರವಾಗಿ ದಬ್ಬಾಳಿಕೆ ನಡೆಸುತ್ತಿದ್ದರೆ ಸಹಿಸಲು ಸಾಧ್ಯವೆ. ಇದು ಯಾವ ಸೀಮೆ ಒಕ್ಕೂಟದ ವ್ಯವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ನಾಲ್ಕು ವರ್ಷದಿಂದ ಸಮುದ್ರಕ್ಕೆ ನೀರು ಹರಿಸುತ್ತಿದೆ. ಇದನ್ನು ಯಾರು ಪ್ರಶ್ನೆ ಮಾಡುತ್ತಿಲ್ಲ. ಅವರು (ತಮಿಳುನಾಡು) ಬೇಕಾದರೆ ಅಲ್ಲಿ ಅಣೆಕಟ್ಟೆ ಕಟ್ಟಿಕೊಳ್ಳಲಿ ಬೇಡ ಅಂದವರು ಯಾರು. ನಮ್ಮ ಹಣದಲ್ಲಿ ನಾವು ಅಣೆಕಟ್ಟೆ ಕಟ್ಟಲು ಅವರ ಅನುಮತಿ ಬೇಕಾ? ಇದು ಯಾವ ಒಕ್ಕೂಟ ವ್ಯವಸ್ಥೆ ಎಂದು ಪ್ರಶ್ನೆ ಮಾಡಿದರು.

ತಮಿಳುನಾಡಿನವರು ಕರ್ನಾಟಕದವರನ್ನು ಒಕ್ಕೂಟ ವ್ಯವಸ್ಥೆಗೆ ಅಗೌರವ ತರುವವರೆಂಬ ಭಾವನೆಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ. ಆದರೆ, ನಾವಿಲ್ಲಿ ಒಡೆದಾಡಿಕೊಂಡು ಕೂತಿದ್ದೇವೆ. ಪ್ರತಿ ನಾಲ್ಕೈದು ವರ್ಷಕ್ಕೊಮ್ಮೆ ನದಿ ನೀರಿನ ಹಂಚಿಕೆ ಸಮಸ್ಯೆ ಬರುತ್ತಲೇ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜಕೀಯ ಧಿಕ್ಕರಿಸಿ ಎಲ್ಲ ಪಕ್ಷಗಳು ಒಗ್ಗೂಡಬೇಕಾಗಿದೆ ಎಂದು ನಾನು ಎಲ್ಲಾ ಪಕ್ಷದವರಿಗೂ ಮನವಿ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಇತರರಿದ್ದರು.

ಸಂಯೋಜಿತ ಜಲಾಶಯ ನಿರ್ವಹಣಾ ವ್ಯವಸ್ಥೆ ಅಗತ್ಯ

ಕಾವೇರಿಯಂತಹ ಜಲ ವಿವಾದಗಳ ಪರಿಹಾರಕ್ಕೆ ಸಂಯೋಜಿತ ಜಲಾಶಯ ನಿರ್ವಹಣಾ ವ್ಯವಸ್ಥೆ (integrated reservoir management system)ಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಲೋಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಜ್ಯ ಜಲ ವಿವಾದಗಳು ಪದೇಪದೆ ಕಗ್ಗಂಟು ಆಗುವುದನ್ನು ತಪ್ಪಿಸಲು ಸಂಯೋಜಿತ ಜಲಾಶಯ ನಿರ್ವಹಣಾ ವ್ಯವಸ್ಥೆ ಅಗತ್ಯ. ಕೆಲವು ಕಡೆ ಈ ವ್ಯವಸ್ಥೆಯನ್ನು ಯಶಸ್ವಿಯಾಗಿ ಅಳವಡಿಸಿಕೊಂಡು ಮಾದರಿ ರೀತಿಯಲ್ಲಿ ನೀರು ಹಂಚಿಕೆ ಮಾಡಿಕೊಂಡಿರುವ ಉದಾಹರಣೆಯಿದೆ ಎಂದು ಹೇಳಿದರು.

ತಮಿಳುನಾಡಿಗೆ ನೀರು: ಸರ್ಕಾರದ ವೈಫಲ್ಯವನ್ನು ಜನರು ಕ್ಷಮಿಸಲ್ಲ, ಬೊಮ್ಮಾಯಿ

ಅಲ್ಲದೆ, ಯುಎಸ್ ಬಿಆರ್ (United States Bureau of Reclamation-USBR) ಎಂಬ ಅಮೆರಿಕ ಸಂಸ್ಥೆಯ ನಿರ್ದೇಶನದಂತೆ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಲು ಜಗತ್ತಿನ ಅನೇಕ ದೇಶಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ನೀರಿನ ಸದ್ಬಳಕೆ, ಹಂಚಿಕೆ ಬಗ್ಗೆ ಆ ಸಂಸ್ಥೆಯ ಮಾರ್ಗಸೂಚಿಯನ್ನು ನಾವೂ ಅಳವಡಿಸಿಕೊಳ್ಳಬಹುದೆ ಎನ್ನುವ ಬಗ್ಗೆಯೂ ಕೇಂದ್ರ ಸರ್ಕಾರ ಆಲೋಚನೆ ಮಾಡಬೇಕು ಅಥವಾ ಆ ಸಂಸ್ಥೆಯ ನೆರವನ್ನು ಪಡೆದು ಕಾವೇರಿ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಕುಮಾರಸ್ವಾಮಿ ಸಲಹೆ ಮಾಡಿದರು.

ನಾಳಿದ್ದು ದೆಹಲಿಗೆ ಹೋದಾಗ ಮೈತ್ರಿ ಜೊತೆಗೆ ಕಾವೇರಿ ನದಿ ನೀರಿನ ಹಂಚಿಕೆ ವಿಚಾರವನ್ನು ಚರ್ಚೆ ಮಾಡುತ್ತೇನೆ. ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂಬ ಕಾರಣಕ್ಕೆ ಇದರ ಬಗ್ಗೆ ಮಾತಾಡಲು ಹಿಂದೆಮುಂದೆ ನೋಡುವುದಿಲ್ಲ. ಮೈತ್ರಿ ಬಗ್ಗೆ ಮಾತಾಡುವ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಕೂಡ ಚರ್ಚೆ ನಡೆಸುತ್ತೇನೆ. ರಾಜ್ಯದ ಹಿತವನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡುವುದಿಲ್ಲ. ಹಾಗೆಯೇ, ಬಿಜೆಪಿಯವರು ಧೈರ್ಯದಿಂದ ಪ್ರಧಾನಿ ಮೋದಿ ಹಾಗೂ ಜಲ ಸಂಪನ್ಮೂಲ ಸಚಿವರ ಬಳಿ ಹೋಗಿ ಮಾತನಾಡಬೇಕು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

Follow Us:
Download App:
  • android
  • ios