ನುಡಿ ಜಾತ್ರೆ: ಗಡಿ ಕನ್ನಡ ಶಾಲೆಗಳ ಮುಚ್ಚದಂತೆ ನಿರ್ಣಯ

ಗಡಿ ಕನ್ನಡ ಶಾಲೆಗಳ ಮುಚ್ಚದಂತೆ ನಿರ್ಣಯ| ಮಹಾರಾಷ್ಟ್ರ ಜೊತೆಗಿನ ಗಡಿ ವಿವಾದಕ್ಕೆ ಅಂತ್ಯ | 371ನೇ ಜೆ ಕಲಂನಲ್ಲಿನ ಲೋಪಗಳನ್ನು ಶೀಘ್ರ ನಿವಾರಿಸಲು ಆಗ್ರಹ ಎಲ್ಲ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೆ ಶಿಕ್ಷಣ ನೀಡಲು ಒತ್ತಾಯ | ಸಾಹಿತ್ಯ ಸಮ್ಮೇಳನದಲ್ಲಿ 5 ಪ್ರಮುಖ ನಿರ್ಣಯ| 

Five Significant Resolutions  in Kannada Sahitya Sammelana in Kalaburagi

ಕಲಬುರಗಿ[ಫೆ.08]:  ಆಂಧ್ರಪ್ರದೇಶದಲ್ಲಿ ಅಲ್ಲಿನ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದು, ಅದನ್ನು ತಡೆಯುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುವುದೂ ಸೇರಿದಂತೆ ಐದು ಮಹತ್ವದ ನಿರ್ಣಯಗಳನ್ನು 85ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಂಡಿದೆ. 

ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಸುರೇಶ್‌, ಬಳಿಗಾರ್‌ ಜುಗಲ್ಬಂದಿ

ಆಂಧ್ರವೂ ಸೇರಿದಂತೆ ಯಾವುದೇ ರಾಜ್ಯದಲ್ಲಿ ಗಡಿ ಪ್ರದೇಶದಲ್ಲಿರುವ ಕನ್ನಡ ಶಾಲೆಗಳನ್ನು ಮುಚ್ಚದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಮಹಾಜನ್ ವರದಿ ಅನುಷ್ಠಾನಗೊಳಿಸುವ ಮೂಲಕ ಮಹಾರಾಷ್ಟ್ರದ ಜೊತೆಗಿನ ಗಡಿ ವಿವಾದವನ್ನು ಅಂತ್ಯಗೊಳಿಸಬೇಕು. ಕಲ್ಯಾಣ ಕರ್ನಾಟಕದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಕಾಲಮಿತಿಯಲ್ಲಿ ಅಭಿವೃದ್ಧಿಪಡಿಸಬೇಕು. 371ನೇ ಜೆ ಕಲಂನಲ್ಲಿನ ಲೋಪ ಶೀಘ್ರ ನಿವಾರಿಸಿ, ಡಾ.ಡಿ.ಎಂ.ನಂಜುಂಡಪ್ಪ ವರದಿ ಜಾರಿಯಲ್ಲಿನ ತಾರತಮ್ಯಗಳನ್ನೂ ನಿವಾರಿಸಬೇಕು, ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕು ಎಂದು ಈ ಸಮ್ಮೇಳನ ಒಕ್ಕೊರಲಿನಿಂದ ಒತ್ತಾಯಿಸುತ್ತದೆ ಎಂಬ ನಿರ್ಣಯಗಳನ್ನು ಶುಕ್ರವಾರ ನಡೆದ ಬಹಿರಂಗ ಅಧಿವೇಶನದಲ್ಲಿ ಕೈಗೊಳ್ಳಲಾಯಿತು. 

ಕನ್ನಡ ಮಾಧ್ಯಮ ಕಡ್ಡಾಯ ಗೊಳಿಸಿ: 

ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವ ನಿರ್ಣಯ ವನ್ನು ಸಮ್ಮೇಳನಾಧ್ಯಕ್ಷ ಎಚ್.ಎಸ್.ವೆಂಕಟೇಶ ಮೂರ್ತಿ ಅವರೇ ಸೂಚಿಸಿದರು. ಇನ್ನಿತರ ನಿರ್ಣಯಗಳನ್ನು ಕಲಬುರಗಿ, ರಾಯಚೂರು, ಆಂಧ್ರಪ್ರದೇಶ ಹಾಗೂ ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರು ಸೂಚಿಸಿದರು. ಉಡುಪಿ, ಬೀದರ್, ಬಳ್ಳಾರಿ, ಕೇರಳ ಹಾಗೂ ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರು ನಿರ್ಣಯ ಅನುಮೋದಿಸಿದರು. ಎಲ್ಲ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಹಾಗೂ ಮಹಾರಾಷ್ಟ್ರದ ಜೊತೆಗಿನ ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ (ಅರ್ಥಾತ್, ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ) ಎಂಬ ನಿರ್ಣಯಗಳನ್ನು ಈ ಹಿಂದೆಯೂ ಹಲವು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳಲಾಗಿದೆ. ಕನ್ನಡ ಮಾಧ್ಯಮ ಕಡ್ಡಾಯದ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ತೀರ್ಪು ಪ್ರತಿಕೂಲವಾಗಿರುವುದು ಕರ್ನಾಟಕ ಸರ್ಕಾರಕ್ಕೆ ಸಮಸ್ಯೆಯಾಗಿದೆ. 

ಭಾಷಣ ಮಾಡೋವಾಗ ಮೋದಿ ಮೋದಿ ಘೋಷಣೆ: ಡೋಂಟ್ ಕೇರ್ ಎಂದ ಸಿದ್ದು

ಇನ್ನು ಮಹಾರಾಷ್ಟ್ರದ ಜೊತೆಗಿನ ಗಡಿ ವಿವಾದ ಅಂತಾರಾಜ್ಯ ಗಡಿ ವಿವಾದವಾಗಿ ಹಲವು ದಶಕಗಳಿಂದ ಬಗೆಹರಿಯದೆ ಉಳಿದಿದೆ. ಇನ್ನುಳಿದಂತೆ ಈ ಬಾರಿಯ ಸಮ್ಮೇಳನ ನಡೆದಿರುವುದು ಕಲ್ಯಾಣ ಕರ್ನಾಟಕದಲ್ಲಾದ್ದರಿಂದ ಈ ಭಾಗಕ್ಕೆ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಹಾಗೂ ಸರ್ಕಾರದ ಉದ್ಯೋಗ ಪಡೆಯುವುದಕ್ಕೆ ಮೀಸಲು ನೀಡುವ ಸಂವಿಧಾನದ 371 ಜೆ ಕಲಮ್‌ಗೆ ಸಂಬಂಧಿಸಿದ ನಿರ್ಣಯ ಕೈಗೊಳ್ಳಲಾಗಿದೆ. ಈ ಕಲಮ್ ಅಡಿ ಮೀಸಲು ನೀಡಲು ಇರುವ ಸಮಸ್ಯೆಗಳನ್ನು ನಿವಾರಿಸಬೇಕು ಹಾಗೂ ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಡಾ.ಡಿ.ಎಂ.ನಂಜುಂಡಪ್ಪ ಸಮಿತಿ ನೀಡಿದ್ದ ವರದಿಯನ್ನು ಜಾರಿಗೊಳಿಸಬೇಕು ಎಂದು ಸಾಹಿತ್ಯ ಸಮ್ಮೇಳನದಲ್ಲಿ ಆಗ್ರಹಿಸಲಾಗಿದೆ. ಅದೇ ರೀತಿ, ಈ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳ ಅಭಿವೃದ್ಧಿಗೂ ಒತ್ತಾಯಿಸಲಾಗಿದೆ. 

ಗಡಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ: 

ಇನ್ನು, ಆಂಧ್ರಪ್ರದೇಶ ಸರ್ಕಾರ ಇತ್ತೀಚೆಗೆ ಆ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿದೆ. ಅದರಿಂದಾಗಿ ಕರ್ನಾಟಕದ ಗಡಿಯ ಬಳಿಯಿರುವ ಆಂಧ್ರದ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ಮುಚ್ಚಿ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಲಾಗುತ್ತಿದೆ. ಹೀಗಾಗಿ ಕನ್ನಡದ ಶಾಲೆಗಳು ಶಾಶ್ವತವಾಗಿ ಮುಚ್ಚಿದಂತಾಗುತ್ತದೆ. ಆದರೆ ಕರ್ನಾಟಕ ದಲ್ಲಿರುವ ತೆಲುಗು ಮಾಧ್ಯಮದ ಶಾಲೆಗಳಲ್ಲಿ ತೆಲುಗು ಬೋಧನೆಗೆ ಕರ್ನಾಟಕ ಸರ್ಕಾರ ಯಾವುದೇ ಸಮಸ್ಯೆ ಉಂಟುಮಾಡಿಲ್ಲ. ಹೀಗಾಗಿ ಗಡಿಯಲ್ಲಿನ ಕನ್ನಡ ಶಾಲೆಗಳಿಗೆ ಏನೂ ತೊಂದರೆ ಮಾಡದಂತೆ ಆಂಧ್ರ ಹಾಗೂ ಕರ್ನಾಟಕದ ಜೊತೆಗೆ ಗಡಿ ಹಂಚಿಕೊಂಡಿರುವ ಎಲ್ಲ ರಾಜ್ಯಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಲಾಗಿದೆ.

Latest Videos
Follow Us:
Download App:
  • android
  • ios