ಈರುಳ್ಳಿ ಬೆಳೆದಾಕೆಗೆ ಸಿಎಂ ಕರೆ ಮಾಡಲು ಕಾರಣ ಜಾಲತಾಣ..! ತಡೆರಹಿತ ರಹ'ದಾರಿ'
ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದ್ದು, ನೀವೇ ಕೊಂಡುಕೊಳ್ಳಿ ಎಂದು ಮನವಿ ಮಾಡಿದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿ ಮಾರುಕಟ್ಟೆ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಪ್ರಕರಣ ಎಲ್ಲರಿಗೂ ಗೊತ್ತಿದೆ. ಇದು ಸಾಧ್ಯವಾಗುವುದು ಹೇಗೆ..? ಸಾಮಾಜಿಕ ಜಾಲತಾಣ ಹೇಳಬೇಕಾದ್ದನ್ನು ಕೇಳಬೇಕಾದವರಿಗೆ ನೇರವಾಗಿ ತಲುಪಿಸುವ ಕೆಲಸ ಮಾಡುತ್ತಿದೆ.
ಮಂಗಳೂರು(ಏ.30): ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದ್ದು, ನೀವೇ ಕೊಂಡುಕೊಳ್ಳಿ ಎಂದು ಮನವಿ ಮಾಡಿದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿ ಮಾರುಕಟ್ಟೆ ಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ ಪ್ರಕರಣ ಎಲ್ಲರಿಗೂ ಗೊತ್ತಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕಾಟನಾಯಕನಹಳ್ಳಿ ಗ್ರಾಮದ ವಸಂತಕುಮಾರಿ ತಾನು ಈರುಳ್ಳಿ ಬೆಳೆದ ಪರಿ, ಮಾಡಲಾದ ಖರ್ಚು, ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಕರಿಯಾಗುವ ಸಂಗತಿಗಳ ಕ್ರೋಢೀಕರಿಸಿ ವಿಡಿಯೋವೊಂದನ್ನು ಸಿದ್ಧಪಡಿಸಿದ್ದರು. ಈ ವಿಡಿಯೋವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೋಡುವವರೆಗೆ ಶೇರ್ ಮಾಡಿ ಎಂದು ಮನವಿ ಮಾಡಿ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದರು. ಇದು ಮಾಧ್ಯಮಗಳಲ್ಲೂ ಸದ್ದು ಮಾಡಿತ್ತು. ಕೊನೆಗೂ ವಿಡಿಯೋ ವೀಕ್ಷಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಕ್ಷಣ ಅಧಿಕಾರಿಗಳ ಮೂಲಕ ಆಕೆಗೆ ಕರೆ ಮಾಡಿ ಸಂಪರ್ಕಿಸಿ, ಸಂಕಷ್ಟ ಪರಿಹಾರ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈರುಳ್ಳಿ ಮಾರಾಟವಾಗದೇ ಸಂಕಷ್ಟಕ್ಕೆ ಸಿಲುಕಿದ ರೈತ ಮಹಿಳೆ; ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ
ಕಳೆದ ವಾರವಷ್ಟೇ ಮಂಗಳೂರಿನಲ್ಲಿ ಕೊರೋನಾದಿಂದ ಮೃತಪಟ್ಟ ವೃದ್ಧೆಯ ಅಂತ್ಯ ಸಂಸ್ಕಾರ ಸಂದರ್ಭ ಮಂಗಳೂರು ನಗರದಲ್ಲಿ ಸ್ಮಶಾನದಲ್ಲಿ ಆಕೆಯ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಬಹುಸಂಖ್ಯೆಯಲ್ಲಿ ಸೇರಿದ್ದ ಜನರ ನಿಯಂತ್ರಿಸುವ ಸಲುವಾಗಿ ಸ್ಥಳಕ್ಕೆ ಆಗಮಿಸಿದ್ದ ಶಾಸಕರು ಆಡಿದ ಮಾತುಗಳ ವಿಡಿಯೋ ಜಾಲತಾಗಳಲ್ಲಿ ವೈರಲ್ ಆಗಿತ್ತು. ದೊಡ್ಡ ಸುದ್ದಿಯೂ ಆಯಿತು. ಮರುದಿನ ಸ್ವತಹ ಶಾಸಕರೇ ಈ ಕುರಿತು ಸ್ಪಷ್ಟೀಕರಣ ನೀಡಬೇಕಾಯಿತು.
ದ.ಕ, ಉಡುಪಿ, ಕಾಸರಗೋಡು ಭಾಗದಲ್ಲಿ ಲಾಕ್ ಡೌನ್ ಬಳಿಕ ಏಪ್ರಿಲ್ ಮೊದಲನೇ ಹಾಗೂ ಎರಡನೇ ವಾರದಲ್ಲಿ ತರಕಾರಿ ಹಾಗೂ ಹಣ್ಣು ಬೆಳೆಗಾರರಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ, ಫಸಲು ಸಾಗಾಟ ಸಾಧ್ಯವಾಗದೆ, ಖರೀದಿದಾರರು ಯೋಗ್ಯ ಬೆಲೆ ನೀಡದೆ ಅಥವಾ ಕರೆನ್ಸಿ ಮೂಲಕ ವ್ಯವಹಾರ ನಡೆಸಲು ಧೈರ್ಯ ಸಾಲದೆ ಕಂಗೆಟ್ಟು ಕುಳಿತಿದ್ದರು. ಆಗ ನೆರವಾಗಿದ್ದು ಸಾಮಾಜಿಕ ಜಾಲತಾಣಗಳು. ಬಳಿಕ ಮಾಧ್ಯಮಗಳು ಜಾಲತಾಣಗಳಲ್ಲಿ ಬಂದ ಮಾಹಿತಿಗಳನ್ನು ವರದಿ ಮಾಡಿ, ಆ ವರದಿಗಳೂ ಪುನಹ ವೈರಲ್ ಆಗಿ, ಅಂತಿಮವಾಗಿ ಬಹಳಷ್ಟು ರೈತರಿಗೆ ಈ ವೇದಿಕೆ ಸಹಾಯ ನೀಡಿದ್ದು, ಮಾತ್ರವಲ್ಲದೆ ಬೆಳೆದ ಫಸಲಿಗೆ ನ್ಯಾಯ ದೊರಕಿಸಿಕೊಟ್ಟದ್ದು ಸುಳ್ಳಲ್ಲ.
ಕಾಸರಗೋಡು ಜಿಲ್ಲೆಯ ಬದಿಯಡ್ಕದ ಕುಂಬಳಕಾಯಿ ಬೆಳೆಗಾರರು ಬೆಳೆದ ಕ್ವಿಂಟಲ್ ಗಟ್ಟಲೆ ಫಸಲಿಗೆ ಬೆಲೆ ಇಲ್ಲ ಎಂಬ ಸಂದೇಶ ಜಾಲತಾಣಗಳಲ್ಲಿ ಹರಿದಾಡಿದ್ದೇ ತಡ, ಸ್ವತಹ ಕೇರಳದ ಕೃಷಿ ಸಚಿವರೇ ಬೆಳೆ ಖರೀದಿಗೆ ವ್ಯವಸ್ಥೆ ಕಲ್ಪಿಸಿದರು. ಉಡುಪಿ, ಕಾರ್ಕಳ ಭಾಗದ ಅನನಾಸು, ಪೊಳಲಿ ಭಾಗದ ಕಲ್ಲಂಗಡಿ, ಪೈವಳಿಕೆ ಭಾಗದ ಪಪ್ಪಾಯಿ ಸೇರಿದಂತೆ ನೂರಾರು ಬೆಳೆಗಾರರ ವಿಳಾಸ, ಫೋನ್ ಸಂಖ್ಯೆ ಸಹಿತ ವಾಟ್ಸಪ್ ಫೇಸ್ ಬುಕ್ ವೇದಿಕೆಯಲ್ಲಿ ಸಮಸ್ಯೆಗಳನ್ನು ಹಂಚಿಕೊಂಡ ತಕ್ಷಣ, ಅಥವಾ ಒಂದೆರಡು ದಿನಗಳಲ್ಲಿ ಸಂದೇಶದ ಜಾಡು ಹಿಡಿದು ಖರೀದಿದಾರರೇ ನೇರವಾಗಿ ರೈತರನ್ನು ಸಂಪರ್ಕಿಸಿ ಬೆಳೆ ಖರೀದಿಗೆ ಮುಂದಾಗಿದ್ದು ಜಾತಾಣದ ತಾಕತ್ತನ್ನು ತೋರಿಸಿದೆ.
ಅಮೆರಿಕಾದಲ್ಲಿ ನೌಕೆಯೊಂದರಲ್ಲಿ ಕ್ವಾರಂಟೈನ್ ನಲ್ಲಿ ಅಸಹಾಯಕರಾಗಿ ನಿಂತಿರುವಾಗ ವಾಟ್ಸಪ್ ವಿಡಿಯೋ ಮೂಲಕ ಭಾರತೀಯರನ್ನು ಸಂಪರ್ಕಿಸಿದ ಭಾರತೀಯ ನಿರಾಶ್ರಿತರು, ದುಬೈನಲ್ಲಿ ವಂಚನೆಗೊಳಗಾಗಿ ಮನೆ ಮಾಲೀಕನ ಶೋಷೆಣೆಗೆ ತುತ್ತಾದ ಕೆಲಸದ ಮಹಿಳೆ ವಿಡಿಯೋ ಸಂದೇಶ ಮೂಲಕ ಭಾರತೀಯ ಮಾಧ್ಯಮಗಳನ್ನು ತಲುಪಿದ್ದು, ಮಂಗಳೂರಿನ ಹಿರಿಯ ನಾಗರಿಕರೊಬ್ಬರು ಮರೆವಿನ ಕಾಯಿಲೆಯಿಂದ ಲಾಕ್ ಡೌನ್ ಅರಿವಿಲ್ಲದೆ ರಸ್ತೆಗಿಳಿದು ಪೊಲೀಸರೊಂದಿಗೆ ಜಗಳ ಮಾಡಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮರುದಿನ ಸಹೃದಯರೊಬ್ಬರು ಆ ವೃದ್ಧರ ನೈಜ ಪರಿಸ್ಥಿತಿ ಕುರಿತು ವಿವರಿಸಿ ಸಾರ್ವಜನಿಕರಿಗೆ ಅವರ ಪರಿಸ್ಥಿತಿ ಕುರಿತು ಅರಿವು ಮೂಡಿಸಿದ್ದು, ಯೋಧನಿಗೆ ಪೊಲೀಸರು ಥಳಿಸಿದ್ದು.... ಹೀಗೆ ಎಷ್ಟೊಂದು ಸುದ್ದಿಗಳು ಪ್ರತಿನಿತ್ಯ ವೈರಲ್ ಆಗುತ್ತಾ, ಮಾಧ್ಯಮಗಳಲ್ಲಿ ಸದ್ದು ಮಾಡುತ್ತಾ ಗಮನ ಸೆಳೆಯುತ್ತಿದೆ.
ಇದು ಜಾಲತಾಣಗಳ ತಾಕತ್ತು
ಮುಖ್ಯವಾಗಿ ಲಾಕ್ ಡೌನ್ ನ ಸಂಧಿಗ್ಧ ಪರಿಸ್ಥಿತಿಯಲ್ಲಿ ತಾನೇನು ಎಂಬುದನ್ನು ಜಾಲ ತಾಣ ತೋರಿಸಿಕೊಡುತ್ತಿದೆ. ಮಧ್ಯವರ್ತಿಗಳ ಹಂಗಿಲ್ಲದೆ, ಹೇಳಬೇಕಾದ್ದನ್ನು, ಕೇಳಬೇಕಾದವರಿಗೆ ನೇರವಾಗಿ ಕ್ಷಣಾರ್ಧದಲ್ಲಿ ತಲುಪಿಸುವ ಪವರ್ ಹೊಂದಿವೆ ಜಾಲತಾಣಗಳು.
20 ವರ್ಷಗಳ ಹಿಂದೆ ಅಂತರ್ಜಾಲ ಜನಪ್ರಿಯವಾಗತೊಡಗಿದಾಗ ಗ್ಲೋಬಲ್ ವಿಲೇಜ್ ಎಂಬ ಪದ ಬಳಕೆ ಹೆಚ್ಚಾಯಿತು. ಆಗ ಅದರ ಅರ್ಥ ಜನರಿಗೆ ಅಷ್ಟು ಸ್ಪಷ್ಟವಾಗಿರಲಿಲ್ಲ. ಈಗೀಗ ಹೆಚ್ಚೆಚ್ಚು ಸ್ಪಷ್ಟವಾಗುತ್ತಿದೆ. ಕೈಯ್ಯಲ್ಲಿ ನಗದು, ಜೇಬಿನಲ್ಲಿ ಡೆಬಿಟ್ ಕಾರ್ಡು ಇಲ್ಲದಾಗ್ಯೂ ಕೇವಲ ಮೊಬೈಲ್ ಹಿಡ್ಕೊಂಡು ಹೋಗಿ ನಗದು ರಹಿತವಾಗಿ ತರಕಾರಿ, ದಿನಸಿ ಖರೀದಿ ಸಾಧ್ಯವಾದಾಗ, ಮನೆಯಲ್ಲೇ ಕುಳಿತು ಕರೆಂಟು ಬಿಲ್ಲು, ನೀರಿನ ಬಿಲ್ಲು, ವಿಮಾ ಕಂತು ಪಾವತಿಸಲು ಸಾಧ್ಯವಾದಾಗ, ಕ್ಯೂ ಕಾಟವಿಲ್ಲದೆ ಮನೆಯಲ್ಲೇ ಕುಳಿತು ಬಸ್ಸು, ರೈಲಿನ ಟಿಕೆಟ್ ಕಾಯ್ದಿರಿಸಲು ಅವಕಾಶ ಸಿಕ್ಕಾಗ, ಹೊಲದಿಂದ, ಕಾಡಿನಿಂದ, ಹಳ್ಳಿಯ ಮೂಲೆಯೊಂದರಿಂದ ಮೊಬೈಲು ಮತ್ತು ಇಂಟರ್ ನೆಟ್ ಹೊಂದಿದ ವ್ಯಕ್ತಿ ನೇರವಾಗಿ ದೇಶದ ಪ್ರಧಾನಿಗೋ, ಕೃಷಿ ಸಚಿವರಿಗೋ, ವಿದೇಶಾಂಗ ಸಚಿವರಿಗೋ ಟ್ವೀಟು ಮಾಡಲು ಸಾಧ್ಯವಾದಾಗ, ತಾನು ಪ್ರಯಾಣಿಸುತ್ತಿರುವ ರೈಲಿನ ಟಾಯ್ಲೆಟ್ಟು ಶುಚಿಯಾಗಿಲ್ಲ ಎಂದು ನೇರವಾಗಿ ಅಲ್ಲಿಂದಲೇ ರೈಲ್ವೇ ಸಚಿವರಿಗೆ ಟ್ವೀಟ್ ಮಾಡಿ, ಕೆಲ ನಿಮಿಷಗಳಲ್ಲೇ ಸಮಸ್ಯೆ ಪರಿಹಾರ ಕಂಡಾಗ, ತನ್ನೂರಿನ ರಸ್ತೆಗೆ ದಶಕಗಳಿಂದ ಡಾಂಬರು ಭಾಗ್ಯ ಸಿಕ್ಕಿಲ್ಲ ಅಂತ ಬಾಲಕಿಯೊಬ್ಬಳು ನೇರವಾಗಿ ಪ್ರಧಾನಿ ಕಚೇರಿಗೆ ಮೈಲ್ ಮಾಡಿ, ವಾರದೊಳಗೆ ಅಧಿಕಾರಿಗಳೇ ಬಂದು ಆಕೆಯನ್ನು ಭೇಟಿಯಾಗಿ ಸಮಾಧಾನ ಹೇಳುವುದು ನಿಜವಾದಾಗ ಅರ್ಥವಾಗುತ್ತಿದೆ ಗ್ಲೋಬಲ್ ವಿಲೇಜ್ ಎಂದರೇನು ಅಂತ.
ದೇಶದಲ್ಲಿ ಎಷ್ಟು ಮಂದಿಗೆ ಸ್ಮಾರ್ಟ್ ಫೋನ್ ಹೊಂದಲು ಸಾಧ್ಯ, ಅಥವಾ ದೇಶದಲ್ಲಿ ಅಂತರ್ಜಾಲ ಸಂಪರ್ಕ ಎಷ್ಟುವೇಗವಾಗಿದೆ ಎಂಬಿತ್ಯಾದಿ ಮಿತಿಗಳ ಹೊರತಾಗ್ಯೂ, ಹೀಗೊಂದು ಸಾಧ್ಯತೆಗೆ ನಾವು ಈಗೀಗ ವಿಫುಲವಾಗಿ ತೆರೆದಿಟ್ಟುಕೊಳ್ಳುತ್ತಿದ್ದೇವೆ.
ಫೇಸುಬುಕ್ಕು, ವಾಟ್ಸಪ್ಪು, ಟೆಲಿಗ್ರಾಂ, ಇನ್ ಸ್ಟಾ ಗ್ರಾಂಗಳಲ್ಲಿ ಯಾವುದೇ ಮಧ್ಯವರ್ತಿಗಳ ಹಂಗಿಲ್ಲದೆ ತನಗೆ ತೋಚಿದ್ದು ಬರೆದು ಹಾಕಿ ಕ್ಷಣಮಾತ್ರದಲ್ಲಿ ಸಾವಿರಾರು ಮಂದಿಯನ್ನು ತಲುಪಲು ಸಾಧ್ಯವಿರುವ ಈ ದಿನಗಳಲ್ಲಿ ಸ್ಪಷ್ಟವಾಗಿದೆ ಗ್ಲೋಬಲ್ ವಿಲೇಜ್ ಅಂದರೇನು ಅಂತ. ಲಾಕ್ ಡೌನ್ ನ ಸಂಕಷ್ಟದ ದಿನಗಳಲ್ಲಿ ಮನೆಯಲ್ಲೇ ಕುಳಿತು ಡೇಟಾ ರಿಚಾರ್ಜ್ ಮಾಡಿ, ಬೇಕಾದ ಸಿನಿಮಾ ನೋಡಲು, ಬಿಲ್ ಕಟ್ಟಲು, ದುಡ್ಡು ವರ್ಗಾಯಿಸಲು, ಪೇಪರ್ ಓದಲು, ಟಿ.ವಿ.ನೋಡಲು, ರೇಡಿಯೋ ಕೇಳಲು ಎಲ್ಲವನ್ನೂ ಸಾಧ್ಯವಾಗಿಸಿದ್ದು ಸ್ಮಾರ್ಟ್ ಫೋನ್ ಮತ್ತು ಅಂತರ್ಜಾಲದ ಜಗತ್ತು ಅಥವಾ ಗ್ಲೋಬಲ್ ವಿಲೇಜಿನ ಸಾಕ್ಷಾತ್ಕಾರ.
ಈರುಳ್ಳಿ ನೀವೇ ಕೊಂಡುಕೊಳ್ಳಿ ಎಂದ ಮಹಿಳೆ: ತಕ್ಷಣ ಸ್ಪಂದಿಸಿದ ಸಿಎಂ
ಇಂಟರ್ ನ್ಯಾಷನಲ್ ಡೇಟಾ ಕಾರ್ಪ್ ಸಮೀಕ್ಷೆ ಪ್ರಕಾರ ಭಾರತದಲ್ಲಿ ಕಳೆದ ವರ್ಷಾಂತ್ಯಕ್ಕೆ 450 ಮಿಲಿಯನ್ ನಷ್ಟು ಸ್ಮಾರ್ಟ್ ಫೋನ್ ಬಳಕೆದಾರರಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಸುಮಾರು 550 ಮಿಲಿಯನ್ ನಷ್ಟು ಫೀಚರ್ ಫೋನ್ ಬಳಕೆದಾರರಿದ್ದು, ಈ ಪೈಕಿ ಶೇ.40-45ರಷ್ಟು ಮಂದಿ 1000 ರು. ಒಳಗಿನ ಮುಖಬೆಲೆಯ ಮೊಬೈಲ್ ಫೋನ್ ಬಳಸುತ್ತಿದ್ದಾರೆ. ವಿಶ್ವದಲ್ಲಿ ಸುಮಾರು 2 ಬಿಲಿಯನ್‌ಗೂ ಹೆಚ್ಚು ವಾಟ್ಸ್‌ಆ್ಯಪ್ ಬಳಕೆದಾರರು ಇದ್ದು, ಭಾರತದಲ್ಲೇ 400 ಮಿಲಿಯನ್‌ನಷ್ಟು ಮಂದಿ ವಾಟ್ಸಪ್ ಮೆಸೇಜಿಂಗ್ ಆ್ಯಪ್ ಬಳಸುತ್ತಿದ್ದಾರೆ.
ಭಾರತದವು 2019ರಲ್ಲಿ 560 ಮಿಲಿಯನ್ ಸಕ್ರಿಯ ಅಂತರ್ಜಾಲ ಬಳಕೆದಾರರನ್ನು ಒಳಗೊಂಡಿತ್ತು, ಚೀನಾದ ಬಳಿಕ ಭಾರತ ಎರಡನೇ ಅತಿ ದೊಡ್ಡ ಆನ್ ಲೈನ್ ಮಾರುಕಟ್ಟೆ ಹೊಂದಿದೆ. ಭಾರತದಲ್ಲಿ ತಲಾ ಮೊಬೈಲ್ ಡೇಟಾ ಬಳಕೆ ಸರಾಸರಿ ತಿಂಗಳಿಗೆ 11 ಜಿಬಿ ಎಂದು ನೋಕಿಯಾ ಮೂಲಗಳು ನಡೆಸಿದ ಸರ್ವೇ ತಿಳಿಸಿದೆ.
ಥೈವಾನ್ ರೆಡ್ ಲೇಡಿ ಪಪ್ಪಾಯಿ ಕೇಳೋರಿಲ್ಲ, 30 ಟನ್ ಫಸಲು ನಷ್ಟ
ಭಾರತದ ಅಂತರ್ಜಾಲ ಬಳಕೆದಾರರು 2019ರಲ್ಲಿ ಇತರ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಪ್ ಗಳನ್ನು ಡೌನ್ ಲೋಡ್ ಮಾಡಿರುವುದು ತಿಳಿದುಬಂದಿದೆ. 2019ರಲ್ಲಿ 19 ಬಿಲಿಯನ್ ಆಪ್ ಗಳು ಭಾರತದಲ್ಲಿ ಡೌನ್ ಲೋಡ್ ಆಗಿವೆ. ಭಾರತದ ಸರಾಸರಿ ಅಂತರ್ಜಾಲ ಬಳಕೆ ಅವಧಿ ಪ್ರತಿ ವಾರಕ್ಕೆ ಸುಮಾರು 17 ಗಂಟೆಗಳಷ್ಟಿದೆ.
ಭಾರತದಲ್ಲಿ 290 ಮಿಲಿಯನ್ ಬಳಕೆದಾರರು ಮೊಬೈಲ್ ಫೋನ್ ಮೂಲಕ ಅಂತರ್ಜಾಲ ಬಳಸುತ್ತಿದ್ದಾರೆ. ಭಾರತದಲ್ಲಿ ಫೇಸ್ ಬುಕ್ ಹಾಗೂ ಯೂಟ್ಯೂಬ್ ಅತಿ ಹೆಚ್ಚು ಜನಪ್ರಿಯ ಸಾಮಾಜಿಕ ಜಾಲತಾಣಗಳು, ಅಮೆಝಾನ್ ಹಾಗೂ ಫ್ಲಿಪ್ಕಾರ್ಟ್ ಹೆಚ್ಚು ಜನಪ್ರಿಯ ಆನ್ ಲೈನ್ ಖರೀದಿ ತಾಣಗಳು ಹಾಗೂ ಟಿಕ್ ಟಾಕ್ ಅತಿ ಹೆಚ್ಚು ಮಂದಿ 2019ರಲ್ಲಿ ಡೌನ್ ಲೋಡ್ ಮಾಡಿದ ಆಪ್ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಈ ಅಂಕಿ ಅಂಶವೇ ಹೇಳುತ್ತಿದೆ ಭಾರತದಲ್ಲಿ ಸ್ಮಾರ್ಟ್ ಫೋನ್ ಹಾಗೂ ಅಂತರ್ಜಾಲ (ಡೇಟಾ) ಗ್ರಾಹಕರ ಅಗಾಧತೆಯನ್ನು. ಈ ನಡುವೆ ಜಾಲತಾಣಗಳನ್ನು ಧನಾತ್ಮಕವಾಗಿ ಬಳಸುವುದಕ್ಕಿಂತ ಋಣಾಕ್ಮರ ವಿಚಾರ ಪ್ರಸ್ತಾಪ ಹಾಗೂ ಸುಳ್ಳು ಸುದ್ದಿ ಹರಡಲು ಬಳಸುತ್ತಿರುವುದು ಆಘಾತಕಾರಿ. ಕೆಲವಷ್ಟು ಮಂದಿ ಸ್ವತಹ ತಿಳಿದೂ, ಬಹಳಷ್ಟು ಮಂದಿ ಅರಿವಿಲ್ಲದೆ, ಅಪ್ರಚೋದಿತವಾಗಿ ಸುಳ್ಳು ಸುದ್ದಿಗಳನ್ನು ಜಾಲತಾಣಗಳಲ್ಲಿ ನಂಬುತ್ತಿರುವುದು ಮಾತ್ರವಲ್ಲ, ಕುರುಡರಾಗಿ ಫಾರ್ವರ್ಡ್ ಮಾಡುತ್ತಿದ್ದಾರೆ. ಕೊರೋನಾ ಲಾಕ್ ಡೌನ್ ಅವಧಿಯಲ್ಲೂ ಈ ಪ್ರವೃತ್ತಿ ಅನಿಯಂತ್ರಿತವಾಗಿ ಮುಂದುವರಿದಿತ್ತು. ಕೊರೋನಾ ಸೋಂಕಿತರ ವೈಯಕ್ತಿಕ ಮಾಹಿತಿ ಹಾಗೂ ಫೋಟೋ ಹಂಚಿಕೊಳ್ಳುವುದು, ಶೇರ್ ಮಾಡುವುದು, ಪ್ರಚೋದನಕಾರಿಯಾಗಿ ಬರಹಗಳನ್ನು ಹಾಕಿ ಚರ್ಚೆ ಮಾಡುವುದು ಇತ್ಯಾದಿ ವಿಚಾರಗಳು ಜಾಲತಾಣಗಳಲ್ಲಿ ಹಾಕುವುದು ಅಪರಾಧ ಎಂಬ ಪ್ರಜ್ನೆಯೂ ಬಹಳಷ್ಟು ಬಳಕೆದಾರರಿಗೆ ಇದ್ದಂತಿಲ್ಲ.
ಕೇರಳ ಸರ್ಕಾರದ ನಡೆ ಉಳಿದ ರಾಜ್ಯ ಸರ್ಕಾರಗಳಿಗೆ ಆಗಲಿ ಮಾದರಿ
ತಮ್ಮ ಇನ್ ಬಾಕ್ಸಿಗೆ ಬಂದ ಸಂದೇಶ ಸತ್ಯವೋ, ಸುಳ್ಳೋ, ಅದನ್ನು ಕಳುಹಿಸಿದವರ ಹೆಸರು, ವಿಳಾಸ, ಲಾಂಛನ ಇದೆಯೋ, ಇಲ್ಲವೋ ಎಂಬುದರ ಪರಾಮರ್ಶೆ ಮಾಡದೆ ಸಿಕ್ಕ ಸಿಕ್ಕ ಗ್ರೂಪುಗಳಿಗೆ ಫಾರ್ವರ್ಡ್ ಮಾಡುವುದು ತಪ್ಪು ಕೆಲಸ ಮಾತ್ರವಲ್ಲ, ಕಾನೂನು ಪ್ರಕಾರ ಅಪರಾಧವೂ ಹೌದು. ಸೈಬರ್ ಪೊಲೀಸರು ರಂಗಕ್ಕಿಳಿದರೆ ಸುಲಭವಾಗಿ ಇಂತಹ ಸಂದೇಶಗಳ ಸೃಷ್ಟಿಕರ್ತರು ಹಾಗೂ ಮುಂದೂಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇದೆ. ಯಾರೂ, ಯಾರಿಗೂ, ಯಾವಾಗ ಬೇಕಾದರೂ ಹೇಗೆ ಬೇಕಾದರೂ ಸಂದೇಶ ಕಳುಹಿಸಬಹುದು ಎಂಬ ಸ್ವಾತಂತ್ರ್ಯವನ್ನೇ ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲ ವಿಘ್ನ ಸಂತೋಷಿಗಳು ತಿರುಚಲ್ಪಟ್ಟ, ಅವಹೇಳನಕಾರಿ ಅಥವಾ ಭಯ, ಆತಂಕ ಹುಟ್ಟಿಸುವ ವದಂತಿ ರೂಪದ ಸುದ್ದಿಗಳನ್ನು ಹರಿಯಬಿಟ್ಟು ವಿಕೃತ ಸಂತೋಷ ಮೆರೆಯುತ್ತಿರುತ್ತಾರೆ.
ಫೇಸ್‌ಬುಕ್ ನೋಡಿ 14 ಸಾವಿರ ಕೆಜಿ ಕುಂಬಳ ಖರೀದಿಗೆ ಮುಂದಾದ ಸರ್ಕಾರ
ಯಾವುದೋ, ಊರಿನ, ಯಾವುದೋ ತಾರೀಕಿನ ಹಳೆ ಸಂದೇಶಗಳನ್ನು ಹೊಸದಾಗಿ ವೈರಲ್ ಮಾಡಿ, ಇದನ್ನು ಮುಖ್ಯಮಂತ್ರಿಗೆ ತಲಪುವ ವರೆಗೆ ಫಾರ್ವರ್ಡ್ ಮಾಡ್ತಾ ಇರಿ ಅಂತ ಜನರ ದಾರಿ ತಪ್ಪಿಸೋದು, ಸರ್ಕಾರಿ ಆದೇಶಗಳ ಪ್ರತಿಗಳನ್ನು ಫೋಟೋ ಶಾಪ್ ಬಳಸಿ ತಿರುಚಿ ಹರಿಯಬಿಡುವುದು, ಅಸಂಬದ್ಧ ಫೋಟೋಗಳಿಗೆ ತಪ್ಪು ಅಡಿಬರಹ ನೀಡಿ ಸತ್ಯವೋ ಎಂಬಂತೆ ಹರಿಯಬಿಡುವುದು, ಸರ್ಕಾರ ಅಧಿಕೃತವಾಗಿ ಘೋಷಿಸುವ ಮೊದಲೇ ಎಲ್ಲಿಂದಲೋ ಸೋರಿಕೆಯಾದ ಮಾಹಿತಿಗಳನ್ನು ದುಡುಕಿ ಪ್ರಚಾರ ಮಾಡುವುದು ಇತ್ಯಾದಿ ಅಧಿಕಪ್ರಸಂಗಗಳೂ ಪ್ರತಿ ನಿತ್ಯ ಎಂಬಂತೆ ವಾಟ್ಸಪ್, ಫೇಸ್ ಬುಕ್ ಸಹಿತ ಜಾಲತಾಣಗಳಲ್ಲಿ ನಡೆಯುತ್ತಲೇ ಇರುತ್ತವೆ.
ಒಂದು ವಾಟ್ಸಪ್ ಗ್ರೂಪಿನಲ್ಲಿ ಗರಿಷ್ಠ 257 ಮಂದಿಯನ್ನು, ಸ್ಟೇಟಸ್ಸುಗಳಲ್ಲಿ ನಮ್ಮ ಅಷ್ಟೂ ಕಾಂಟಾಕ್ಟ್ ಲಿಸ್ಟ್ ನಲ್ಲಿ ಇರುವವರನ್ನು, ಫೇಸ್ ಬುಕ್ಕಿನಲ್ಲಿ ನಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ಗರಿಷ್ಠ ಐದು ಸಾವಿರ ಮಂದಿಯನ್ನು ಬ್ಲಾಗ್, ವೆಬ್ ಸೈಟುಗಳಲ್ಲಿ ಲಕ್ಷಾಂತರ ಮಂದಿಯನ್ನು ಏಕಕಾಲಕ್ಕೆ ನಾವು ಯಾವುದೇ ಮಧ್ಯವರ್ತಿಗಳಿಲ್ಲದೆ ತಲುಪಬಹುದು. ಹೀಗಿರುವಾಗ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುವಾಗ ನಮ್ಮ ಮೇಲೆ ಎಷ್ಟು ಜವಾಬ್ದಾರಿ ಇರುತ್ತದೆ ಎಂಬುದನ್ನು ಚಿಂತಿಸಿ. ಲಾಕ್ ಡೌನ್ ಬಳಿಕ ಇಂತಹ ಅಸಂಬದ್ಧ ನಡವಳಿಕೆಯನ್ನು ಕಂಡು ರೋಸಿ ಹೋಗಿ ಆಡಳಿತದ ಕಡೆಯಿಂದಲೂ ಸೂಚನೆ ಹೋದ ಹಿನ್ನೆಲೆಯಲ್ಲಿ ವಾಟ್ಸಪ್ ಸಹ ಹಲವು ನಿರ್ಬಂಧಗಳನ್ನು ಅಳವಡಿಸಿಕೊಳ್ಳಲು ಮುಂದಾಯಿತು.
ಏಪ್ರಿಲ್ ಮೊದಲನೇ ವಾರದಲ್ಲಿ ವಾಟ್ಸಪ್ ಒಂದು ಮೆಸೇಜನ್ನು ಏಕಕಾಲಕ್ಕೆ ಒಬ್ಬರಿಗೆ ಮಾತ್ರ ಫಾರ್ವರ್ಡ್ ಮಾಡುವಂಥಹ ನಿರ್ಬಂಧ ಹೇರಿತ್ತು. ಇದರಿಂದಾಗಿ ಪದೇ ಪದೇ ಒಂದು ಮೆಸೇಜನ್ನು ಕಾಪಿ ಮಾಡಿ ಪ್ರತ್ಯೇಕ ಪ್ರತ್ಯೇಕ ಪೇಸ್ಟ್ ಮಾಡಿ ಫಾರ್ವರ್ಡ್ ಮಾಡಲು ಗ್ರಾಹಕರು ಹೆಣಗಾಡುವಂತಾಯಿತು. ಈ ಮೂಲಕ ಸುಳ್ಳು ಸುದ್ದಿಗಳ ಫಾರ್ವರ್ಡ್ ಪಿಡುಗಿಗೆ ತಡೆ ಹಾಕಲು ವಾಟ್ಸಪ್ ಉದ್ದೇಶಿಸಿತ್ತು.
2019ರಲ್ಲಿ ಏಕಕಾಲಕ್ಕೆ 20 ಮಂದಿಗೆ ಫಾರ್ವರ್ಡ್ ಮಾಡಲು ಸಾಧ್ಯವಿದ್ದ ಫೀಚರನ್ನು ಕಡಿಮೆಗೊಳಿಸಿದ ವಾಟ್ಸಪ್ ಒಂದು ಬಾರಿಗೆ ಐದು ಮಂದಿಗೆ ಮಾತ್ರ ಫಾರ್ವರ್ಡ್ ಮಾಡಲು ಅವಕಾಶ ಕಲ್ಪಿಸಿತ್ತು. ಆಗಲೂ ಇಂಥದ್ದೇ ಸುಳ್ಳು ಸುದ್ದಿಗಳ ಪ್ರಚಾರ ಹಾಗೂ ಉದ್ವಿಗ್ನತೆ ಹರಡುವುದನ್ನು ತಡೆಯುವು ವಾಟ್ಸಪ್ ಉದ್ದೇಶವಾಗಿತ್ತು. ಏ.7ರ ನಂತರ ಪರಿಚಯವಾದ ಒಂದು ಮೇಸೇಜನ್ನು ಏಕಕಾಲಕಕ್ಕೆ ಒಬ್ಬರಿಗೆ ಮಾತ್ರ ಫಾರ್ವರ್ಡ್ ಮಾಡುವ ಅವಕಾಶದ ಬಳಿಕ ವಾಟ್ಸಪ್ ಫಾರ್ವರ್ಡ್ ಪ್ರಮಾಣ ಜಾಗತಿಕವಾಗಿ ಶೇ.70ರಷ್ಟು ಕಡಿಮೆಯಾಗಿರುವುದಾಗಿ ವಾಟ್ಸಪ್ ಹೇಳಿಕೊಂಡಿದೆ.
ಕಳೆದ ವರ್ಷವಷ್ಟೇ ವಾಟ್ಸಪ್ ಫಾರ್ವರ್ಡ್ ಮೆಸೇಜುಗಳಿಗೆ ಅವಳಿ ಬಾಣದ ಗುರುತುಗಳಿರುವ ಫಾರ್ವರ್ಡೆಡ್ ಎಂಬ ಲೇಬಲ್ ಕಾಣಿಸುವ ಫೀಚರ್ ನ್ನು ವಾಟ್ಸಪ್ ಪರಿಚಯಿಸಿತ್ತು. ಈ ಲಕ್ಷಣ ಅಳವಡಿಸಿದ ಬಳಿಕ ಫಾರ್ವರ್ಡ್ ಮನಸ್ಥಿತಿ ಶೇ.25ರಷ್ಟು ಕಡಿಮೆಯಾಗಿದೆ ಎಂದು ವಾಟ್ಸಪ್ ಹೇಳಿಕೊಂಡಿತ್ತು. ಸರ್ಕಾರದ ಪ್ರೆಸ್ ಇನ್ ಫಾರ್ಮೇಶನ್ ಬ್ಯೂರೋ ಆಫ್ ಇಂಡಿಯಾ ಮತ್ತಿತರ ಏಜನ್ಸಿಗಳು ಸಹ ಸುಳ್ಳು ಸುದ್ದಿಗಳ ವಿರುದ್ದ ಕಾಲ ಕಾಲಕ್ಕೆ ಟ್ವೀಟರ್ ಮತ್ತಿತರ ತಾಣಗಳ ಮೂಲಕ ಎಚ್ಚರಿಸುತ್ತಲೇ ಬರುತ್ತಿದೆ.
ಖಚಿತಪಡಿಸದ/ಸುಳ್ಳು ಸುದ್ದಿಗಳ ಪ್ರಚಾರವೂ ಒಂಥರಾ ವೈರಸ್ಸೇ!
ಈಗ ಬಹುತೇಕರು ಮನೇಲಿದ್ದಾರೆ. ಉಚಿತ ಇಂಟರ್ ನೆಟ್ ಇದೆ. ಸ್ಮಾರ್ಟ್ ಫೋನುಗಳಿವೆ. ಶೀರ್ಷಿಕೆಗಳು ಲೆಕ್ಕಕ್ಕೇ ಇಲ್ಲದೆ ಕಂಡ ಕಂಡ whatsapp ಗ್ರೂಪುಗಳಲ್ಲಿ ಕೊರೋನಾ ಜಾಗೃತಿ ಉಕ್ಕಿ ಹರಿಯುತ್ತಿವೆ. ಇವುಗಳಲ್ಲಿ ಬಹಳಷ್ಟು ಖಚಿತ ಪಡಿಸದ ವಾರ್ತೆಗಳು, ಇನ್ನು ಕೆಲವು ವದಂತಿ, ಮತ್ತೆ ಕೆಲವು ಸುಳ್ಳು ಸುದ್ದಿಗಳು. ಕಂಡ ಕಂಡ ಗ್ರೂಪುಗಳಿಗೆ forward ಆಗ್ತಾನೇ ಇವೆ. ಸಾವಿರಗಟ್ಟಲೆ ಮೆಸೇಜುಗಳು ನಿಮಿಷದೊಳಗೆ ಬಂದು ರಾಶಿ ಬೀಳುತ್ತಿವೆ. ನೈಜ ಸುದ್ದಿಗಳನ್ನು ನೀಡಲೆಂದೇ ಇರುವ ಪತ್ರಕರ್ತರನ್ನೂ ಇಕ್ಕಟ್ಟಿಗೆ ಸಿಲುಕಿಸುವಂಥ ಫೇಕ್ ಸುದ್ದಿಗಳನ್ನು ಮನೆಯೊಳಗೆ ಕುಳಿತೇ ನಿರ್ಭೀತರಾಗಿ ಮುಂದೂಡುತ್ತಲೇ ಇದ್ದಾರೆ! ಸುಳ್ಳು ಸುದ್ದಿಗಳ ಸೃಷ್ಟಿ ಮತ್ತು ಪ್ರಚಾರ ಎರಡೂ ಅಪರಾಧ ಎಂಬುದು ಗೊತ್ತೇ ಇಲ್ವೇನೋ!
ಗಮನಿಸಿ:
1) ವೈದ್ಯರ ಕೆಲಸ ವೈದ್ಯರಿಗೆ, ಪೊಲೀಸ ಕೆಲಸ ಪೊಲೀಸರಿಗೆ, ಪತ್ರಕರ್ತರ ಕೆಲಸ ಪತ್ರಕರ್ತರಿಗೆ ಮಾಡಲು ಬಿಡಿ....ಎಲ್ಲರೂ ಎಲ್ಲವೂ ಆಗಲು ಹೊರಡುವ ಆತುರ ಬೇಡ
2) ಮೂಲಗಳೇ ಇಲ್ಲದ ಸುದ್ದಿಗಳನ್ನು forward ಮಾಡುವುದರಿಂದ ಯಾವ ಕೊರೋನಾ ಜಾಗೃತಿಯೂ ಆಗುವುದಿಲ್ಲ. ಸುಳ್ಳು ಸುದ್ದಿಗಳನ್ನು ಹಂಚಿದರೆ ಜನ ನಂಬ್ತಾರೆ, ಪ್ಯಾನಿಕ್ ಆಗ್ತಾರೆ ಅನ್ನುವ ಪ್ರಜ್ಞೆ ಇರಲಿ
3) ಪ್ರಧಾನ ಸುದ್ದಿ ವಾಹಿನಿಗಳಷ್ಟೇ ಜಾಲತಾಣದ ತಲಪುವಿಕೆಯೂ ಸಶಕ್ತವಾಗಿದೆ. ನೀವು ಹಾಕುವ ಪೋಸ್ಟ್ ಕೆಲವೇ ಕ್ಷಣಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ಹರಡುತ್ತದೆ. ತಪ್ಪು ಸುದ್ದಿಗಳು ಅಪಪ್ರಚಾರವಾಗ್ತವೆ ಎಂಬುದು ನೆನಪಿರಲಿ.
4) ಪ್ರತಿ whatsapp ಗ್ರೂಪುಗಳಿಗೂ ದಿನದ 24 ಗಂಟೆಯೂ ಕೊರೋನಾ ಸುದ್ದಿಗಳನ್ನು (I mean ಹೆಸರು ವಿಳಾಸವಿಲ್ಲದ ಪೋಸ್ಟುಗಳನ್ನು) forward ಮಾಡಿಯೇ ಸಿದ್ಧ ಎಂಬ ಕೆಟ್ಟ ಹಠ ಬಿಟ್ಬಿಡಿ. ಸ್ವಲ್ಪ ಮನಸ್ಸನ್ನು ಹಗುರಗೊಳಿಸುವ ವಿಚಾರಗಳನ್ನೂ ಆಯಾ ಗ್ರೂಪುಗಳ ಆಶಯಕ್ಕೆ ಪೂರಕವಾಗಿ ಹಂಚಿಕೊಳ್ಳಿ, ಜನರ ಒತ್ತಡವನ್ನು ಕಡಿಮೆ ಮಾಡಿ.
ಜಾಲತಾಣಗಳನ್ನು ಸದುಪಯೋಗ ಮಾಡಿದರೆ ಕುಳಿತಲ್ಲಿಂದಲೇ ಜಗತ್ತಿನ ಗಮನ ಸೆಳೆಯಬಹುದು, ಕಡಿಮೆ ಶ್ರಮದಲ್ಲಿ ಹೆಚ್ಚಿನ ತಲುಪುವಿಕೆ ಸಾಧಿಸಬಹುದು. ಇದಕ್ಕೆ ತದ್ವಿರುದ್ಧವಾಗಿ ಸುಲಭ ತಂತ್ರಜ್ನಾನ ಅಂಗೈಯಲ್ಲಿದೆ ಎಂಬ ಅಹಂಕಾರದಿಂದ ಜನರ ದಾರಿ ತಪ್ಪಿಸುವ, ಅಶಾಂತಿ ಹರಡುವ ಕಾರ್ಯ ಮಾಡಿದರೆ ಅದು ನಮಗೆ ನಾವು ಮೋಸ ಮಾಡಿಕೊಂಡಂತೆ ಮಾತ್ರವಲ್ಲ, ಕಾನೂನು ಪ್ರಕಾರ ಅಪರಾಧ ಎಂಬುದು ನೆನಪಿರಬೇಕು.
-ಕೃಷ್ಣಮೋಹನ ತಲೆಂಗಳ