ಮೋಡಗಳ ಚೆಲ್ಲಾಟ: ರೈತರಿಗೆ ಪ್ರಾಣ ಸಂಕಟ

ಕಳೆದ 15 ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತ್ತಿದೆ. ಆದರೆ, ಈ ಮಳೆಯನ್ನು ನಂಬಿ ಬಿತ್ತನೆ ಕಾರ್ಯಕ್ಕೆ ಮುಂದಾದ ರೈತರು ನಷ್ಟ ಅನುಭವಿಸುವಂತಾಗಿದೆ. ಬಿತ್ತನೆಗೆ ಹದ ಮಾಡಿದ ಭೂಮಿಯಲ್ಲಿ ತೇವಾಂಶದ ಪ್ರಮಾಣ ಕಡಿಮೆ ಇರುವುದರಿಂದ ಬಿಚ್ಚಿದ ಬೀಜಗಳು ಕಮರಿ ಹೋಗುತ್ತಿವೆ. ಮುಂಗಾರು ಬೆಳೆಗಳು ಕೈತಪ್ಪಿದ್ದರಿಂದ ನಮ್ಮ ಮುಂದಿನ ಬದುಕು ಹೇಗೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Farmers Faces Problems For Crops Dry Without Rain at Athani in Belagavi grg

ಅಣ್ಣಾಸಾಬ ತೆಲಸಂಗ

ಅಥಣಿ(ಜು.22):  ಕಳೆದ ವರ್ಷ ಜೂನ್‌ ತಿಂಗಳಲ್ಲಿ ಚುರುಕುಗೊಂಡಿದ್ದ ಕೃಷಿ ಚಟುವಟಿಕೆಗಳು ಈ ಬಾರಿ ಮಳೆಯ ಅಭಾವದಿಂದ ಜುಲೈ ತಿಂಗಳು ಮುಗಿಯಲು ಬಂದರೂ ಕೃಷಿ ಚಟುವಟಿಕೆಗಳು ನಡೆಯದೇ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ 15 ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಆಗೊಮ್ಮೆ ಈಗೊಮ್ಮೆ ತುಂತುರು ಮಳೆಯಾಗುತ್ತಿದೆ. ಆದರೆ, ಈ ಮಳೆಯನ್ನು ನಂಬಿ ಬಿತ್ತನೆ ಕಾರ್ಯಕ್ಕೆ ಮುಂದಾದ ರೈತರು ನಷ್ಟ ಅನುಭವಿಸುವಂತಾಗಿದೆ. ಬಿತ್ತನೆಗೆ ಹದ ಮಾಡಿದ ಭೂಮಿಯಲ್ಲಿ ತೇವಾಂಶದ ಪ್ರಮಾಣ ಕಡಿಮೆ ಇರುವುದರಿಂದ ಬಿಚ್ಚಿದ ಬೀಜಗಳು ಕಮರಿ ಹೋಗುತ್ತಿವೆ. ಮುಂಗಾರು ಬೆಳೆಗಳು ಕೈತಪ್ಪಿದ್ದರಿಂದ ನಮ್ಮ ಮುಂದಿನ ಬದುಕು ಹೇಗೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಅಥಣಿ ತಾಲೂಕಿನಲ್ಲಿ 85 ಮೀಮೀ ಮಳೆ ಆಗಬೇಕಿತ್ತು. ಆದರೆ, ಇಲ್ಲಿಯವರೆಗೆ ಕೇವಲ 28 ಮೀಮೀ ಹಳೆ ಆಗಿರುವುದರಿಂದ ತಾಲೂಕಿನಲ್ಲಿ ಶೇ.70 ರಷ್ಟುಮಳೆಯ ಅಭಾವ ಎದುರಾಗಿದೆ.
ಅಥಣಿ, ಕಾಗವಾಡ ತಾಲೂಕಿನಲ್ಲಿ ಅನಂತಪುರ ಮತ್ತು ತೆಲಸಂಗ ಹೋಬಳಿಗಳು ಸೇರಿದಂತೆ 1,94,609 ಹೆಕ್ಟೇರ್‌ ಪ್ರದೇಶದಲ್ಲಿ 1,81,216 ಹೆಕ್ಟೇರ್‌ ಕೃಷಿ ಸಾಗುವಳಿ ಭೂಮಿಯಾಗಿದೆ. ಕೃಷ್ಣಾ ನದಿ ಪಾತ್ರದಲ್ಲಿ ನೀರಾವರಿ ಕೃಷಿ ಭೂಮಿ ಇದ್ದು, ಇಲ್ಲಿ ಹೆಚ್ಚಾಗಿ ಕಬ್ಬು ಬೆಳೆಯಲಾಗುತ್ತದೆ. ಇನ್ನು ಉತ್ತರ ಮತ್ತು ಪೂರ್ವ ಭಾಗದಲ್ಲಿ ಮಳೆ ಆಧಾರಿತ ಪ್ರದೇಶವಿದ್ದು, ಮಳೆ ಇಲ್ಲವೆ ಕಾಲುವೆ ನೀರನ್ನು ಅವಲಂಬಿಸಿ ಕೃಷಿ ಮಾಡಬೇಕಾಗುತ್ತದೆ. ಈ ಭಾಗದಲ್ಲಿ ಕಬ್ಬು, ಅರಿಶಿಣ, ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಕೂಡ ಬೆಳೆಯಲಾಗುತ್ತದೆ.

ಮಳೆ ಆರ್ಭಟ ಜೋರು: ಬೆಳಗಾವಿಯಲ್ಲಿ 5ಕ್ಕೂ ಹೆಚ್ಚು ಸೇತುವೆಗಳು ಜಲಾವೃತ

ಬಹುತೇಕ ರೈತರು ಗೋವಿನ ಜೋಳ, ಹೆಸರು, ಉದ್ದು, ತೊಗರಿ ಬಿತ್ತನೆ ಮಾಡುತ್ತಾರೆ. ಕೃಷಿ ಇಲಾಖೆ ಅಧಿಕಾರಿಗಳು ಹೇಳುವಂತೆ ಅಥಣಿ ತಾಲೂಕಿನಲ್ಲಿ 66,402 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆ ಅಭಾವದಿಂದ ಕೇವಲ 37,561 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದು, ಅದರಲ್ಲಿಯೂ ನೀರಿನ ಅಭಾವದಿಂದ ಬೆಳೆ ಹಾನಿಯಾಗುವ ಸಾಧ್ಯತೆ ಇದೆ. ಇನ್ನು ಅನೇಕ ರೈತರು ಮಳೆರಾಯನ ನಿರೀಕ್ಷೆಯಲ್ಲಿ ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆ ಕಾರ್ಯಕ್ಕಾಗಿ ಅಣಿಯಾಗಿದ್ದಾರೆ. ಆದರೆ, ಬಿತ್ತನೆ ಮಾಡುವ ಅವಧಿ ಈಗ ಮುಗಿದು ಹೋಗಿದ್ದು, ಸಾಲ ಮಾಡಿ ತಂದಿದ್ದ ಬೀಜ ಮತ್ತು ಗೊಬ್ಬರ ಮೂಲೆಗುಂಪಾಗಿವೆ.

ಅಥಣಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಮಳೆ ಇಲ್ಲದೆ ಕೃಷ್ಣ ನದಿ ಬತ್ತಿ ತಾಲೂಕಿನಲ್ಲಿ ಅಂತರ್ಜಲ ಮಟ್ಟಕುಸಿದಿತ್ತು. ಬಾವಿಗಳಿಗೆ, ಕೊಳವೆ ಬಾವಿ ಮತ್ತು ಕೆರೆಕಟ್ಟೆಗಳಿಗೆ ನೀರಿಲ್ಲದೆ ಬರದ ಛಾಯೆ ಆವರಿಸಿತ್ತು. ಭಾವಿ ಹಾಗೂ ಬೋರ್‌ವೆಲ…ಗಳನ್ನ ಆಧರಿಸಿ ಮಾಡಲಾಗಿದ್ದ ಕಬ್ಬಿನ ಬೆಳೆ ಮತ್ತು ಇನ್ನಿತರ ಬೆಳೆಗಳು ಒಣಗಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಕಾಲುವೆಗಳಿಗೆ ಹರಿದು ಬರುತ್ತಿರುವ ನೀರು:

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ನೀರು ಹರಿದು ಬಂದಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಇದಲ್ಲದೆ ಆಗೊಮ್ಮೆ, ಇಗೊಮ್ಮೆ ಆಗುವ ತುಂತುರು ಮಳೆ ಕೃಷಿ ಚಟುವಟಿಕೆಗಳಿಗೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಮುಂಗಾರು ಹಂಗಾಮಿನ ಬೀಜಗಳ ಬಿತ್ತನೆಯ ಅವಧಿ ಕೂಡ ಮುಗಿದಿದ್ದು, ಸರ್ಕಾರ ಬರಗಾಲ ಜಿಲ್ಲೆಯನ್ನು ಬರಗಾಲ ಪ್ರದೇಶ ಎಂದು ಘೋಷಿಸುತ್ತದೆ ಎಂಬ ನಿರೀಕ್ಷೆಯಲ್ಲಿ ಅನ್ನದಾತರು ಕಾಯುತ್ತಿದ್ದಾರೆ. ಮುಂಗಾರು ಮಳೆ ಕಳೆದುಕೊಂಡ ಅನ್ನದಾತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಖಾನಾಪುರದಲ್ಲಿ ವರುಣನ ಅಬ್ಬರ: ತುಂಬಿ ಹರಿಯುತ್ತಿರುವ ಮಲಪ್ರಭೆ

ಮುಂಗಾರು ಮಳೆ ಆಗದೇ ಇರುವುದರಿಂದ ಅಥಣಿ ಸೇರಿದಂತೆ ಅನೇಕ ತಾಲೂಕುಗಳಲ್ಲಿ ಬರಗಾಲದ ಛಾಯೆ ಆವರಿಸಿದೆ. ಸರ್ಕಾರ ಬೆಳಗಾವಿ ಜಿಲ್ಲೆಯನ್ನ ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಿ, ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಿ, ರೈತರಿಗೆ ನೆರವಾಗುವದರ ಜೊತೆಗೆ ದನ ಕರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಥಣಿ ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ ಹೇಳಿದ್ದಾರೆ.  

ಮುಂಗಾರು ಹಂಗಾಮಿನ ಬಿತ್ತನಿಗಾಗಿ ಬೀಜ ಮತ್ತು ಗೊಬ್ಬರ ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆರಂಭವಾಗಿದ್ದು, ರೈತರು ತಮ್ಮ ಮೊಬೈಲ್‌ ಮೂಲಕ ಬೆಳೆ ಸಮೀಕ್ಷೆ ಮಾಡಲು ಅವಕಾಶವಿದೆ. ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ಅಥಣಿ ಸಹಾಯಕ ಕೃಷಿ ನಿರ್ದೇಶಕ ನಿಂಗನಗೌಡ ಬಿರಾದಾರ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios