ಕಲಬುರಗಿ: ರೈತರಿಗೆ ಮತ್ತೆ ಗಂಟು ಬಿತ್ತು ಸಿಮೆಂಟ್ ಕಾರ್ಖಾನೆ ಜಲಭೂತ..!
ರಸಾಯನಯುಕ್ತ ನೀರನ್ನು ಹರಿಸದಂತೆ ದಶಕದ ಹಿಂದೊಮ್ಮೆ ರೈತರು ಒಂದಾಗಿ ಕಾನೂನು ಸಮರ ಸಾರಿದ್ದರಿಂದ ಸಿಮೆಂಟ್ ಘಟಕದ ನೀರು ಬಂದಾಗಿತ್ತು. ಇದೀಗ ಮತ್ತೆ ತ್ಯಾಜ್ಯ ನೀರು ಪ್ರವಾಹ ರೂಪದಲ್ಲಿ ಹರಿಯುತ್ತಿದ್ದು, ನಮಗೆಲ್ಲರಿಗೂ ದುಸ್ವಪ್ನವಾಗಿ ಕಾಡುತ್ತಿದೆ ಎಂದು ನೊಂದ ರೈತರು ಅಲವತ್ತುಕೊಳ್ಳುತ್ತಿದ್ದಾರೆ.
ಶೇಷಮೂರ್ತಿ ಅವಧಾನಿ
ಕಲಬುರಗಿ(ನ.10): ಸೇಡಂ ತಾಲೂಕಿನ ಹಂಗನಳ್ಳಿಯ 15 ರೈತ ಕುಟುಂಬಗಳ ಪಾಲಿಗೆ ಆ ಊರ ಸೆರಗಲ್ಲೇ ಇರುವ ಅಲ್ಟ್ರಾಟೆಕ್ ಸಿಮೆಂಟ್ ಘಟಕದ ಕಾರ್ಖಾನೆಯ ಕೆಮಿಕಲ್‌ಯುಕ್ತ ಮಲೀನ ನೀರು ಜಲಗಂಡಾಂತರವಾಗಿ ಕಾಡುತ್ತಿದೆ. ಈ ಊರಿನ ರೈತರ ಹೊಲಗಳ ಮೇಲಿರುವ ಸಿಮಂಟ್ ಘಟಕ ವಾರದಲ್ಲಿ ಮೂರ್ನಾಲ್ಕು ಬಾರಿ ಹೊರಬಿಡುವ ರಸಾಯನಯುಕ್ತ ತ್ಯಾಜ್ಯದಿಂದಾಗಿ ರೈತರ 19.20 ಎಕರೆ ಹೊಲಗದ್ದೆಯಲ್ಲಿ ಕೆಮಿಕಲ್ ನೀರಿನ ಬೃಹದಾಕಾರದ ನಾಲಾ ಹುಟ್ಟಿಕೊಂಡಿದೆ.
ಈ ರಸಾಯನ ತ್ಯಾಜ್ಯ ನೀರು ಹರಿಯೋ ಕಾಲುವೆ ಇಕ್ಕೆಲಗಳಲ್ಲಿ ಆಳೆತ್ತರಕ್ಕೆ ಹುಲ್ಲು, ಕಸ ಬೆಳೆದು ನಿಂತಿದ್ದು ಇದರಿಂದಾಗಿ ರೈತರ ಉಳುಮೆಯ ಹೊಲಗದ್ದೆ ಹಾಳಾಗಿವೆ. ರಸಾಯನಯುಕ್ತ ನೀರನ್ನು ಹರಿಸದಂತೆ ದಶಕದ ಹಿಂದೊಮ್ಮೆ ರೈತರು ಒಂದಾಗಿ ಕಾನೂನು ಸಮರ ಸಾರಿದ್ದರಿಂದ ಸಿಮೆಂಟ್ ಘಟಕದ ನೀರು ಬಂದಾಗಿತ್ತು. ಇದೀಗ ಮತ್ತೆ ತ್ಯಾಜ್ಯ ನೀರು ಪ್ರವಾಹ ರೂಪದಲ್ಲಿ ಹರಿಯುತ್ತಿದ್ದು, ನಮಗೆಲ್ಲರಿಗೂ ದುಸ್ವಪ್ನವಾಗಿ ಕಾಡುತ್ತಿದೆ ಎಂದು ನೊಂದ ರೈತರು ಅಲವತ್ತುಕೊಳ್ಳುತ್ತಿದ್ದಾರೆ.
ಕಲಬುರಗಿ: ಟಂಟಂಗೆ ಲಾರಿ ಡಿಕ್ಕಿ, 3 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 6 ಜನರ ದುರ್ಮರಣ
ವಾರದಲ್ಲಿ ಹಲವು ಬಾರಿ ರಸಾಯನಯುಕ್ತ ಫ್ಯಾಕ್ಟರಿ ತ್ಯಾಜ್ಯ ನೀರು ಹರಿದು ಬರೋರದರಿಂದ ರೈತರ ಫಲವತ್ತಾಗಿದ್ದ ಹೊಲ ಜೌಳು ಹಿಡಿದಿದೆ. ಧಾರವಾಡದ ಕೃಷಿ ವಿವಿ ವಿಜ್ಞಾನಿಗಳು ಇವರ ಹೊಲಗದ್ದೆ ಪರಿಶೀಲನೆ ಮಾಡಿದ್ದು, ಕಂಪನಿ ಕೆಮಿಕಲ್ ನೀರಿನಿಂದ ಹೊಲಗಳು ಉಳುಮೆಗೆ ಅಯೋಗ್ಯವಾಗಿವೆ ಎಂಬ ವಿಜ್ಞಾನಿಗಳ ಕಟುಸತ್ಯ ಕಿವಿಗೆ ಬಿದ್ದ ದಿನದಿಂದ ಮತ್ತೆ ರೈತರೆಲ್ಲರೂ ಹೌಹಾರಿದ್ದಾರೆ.
ಅನೇಕ ಬಾರಿ ವಿನಂತಿಸಿದರೂ ಕಾರ್ಖಾನೆಯವರು ಕೇಳದೆ ಕೆಮಿಕಲ್ ನೀರನ್ನು ಹರಿಬಿಡುತ್ತಿದ್ದಾರೆ. ಅವೆಲ್ಲವೂ ಹರಿದು ಬಂದು ನಮ್ಮ ಹೊಲಗದ್ದೆಯಲ್ಲಿ ನಾಲಾ ಸೃಷ್ಟಿ ಮಾಡಿವೆ. ಈ ನೀರು ಹಾಗೆ ಹರಿದು ಹೋಗಿ ಕಾಗಿಣಾ ನದಿ ಸೇರುತ್ತಿದೆ. ಇತ್ತ ಹೊಲಗದ್ದೆ ಹಾಳು, ಅತ್ತ ನದಿ ನೀರು ಮಲೀನವಾಗುತ್ತಿದೆ ಎಂದು ಹಂಗನಹಳ್ಳಿಯ ರೈತರು ಗೋಳಾಡುತ್ತಿದ್ದಾರೆ.
ಕಾರ್ಖಾನೆಯಿಂದ ಹರಿದು ಬರುವ ನೀರಿ ಎಸಿಡಿಕ್, ಅಲ್ಕಲೈನ್:
2007ರಲ್ಲಿ ಕಾರ್ಖಾನೆಯವರು ಹರಿಬಿಟ್ಟಂತಹ ಕೆಮಿಕಲ್ ನೀರಿನ ಮಾದರಿ ಸಂಗಹಿಸಿ ಕೃಷಿ ವಿಜ್ಞಾನ ಕೇಂದ್ರಲ್ಲಿ ವಿಶ್ಲೇಷಣೆಗೊಳಪಡಿಸಿದ್ದಾಗ ಸದರಿ ನೀರಿನ ರಸಸಾರ (ಪಿಎಚ್ ಮೌಲ್ಯ) 6.30 ಎಸಿಡಿಕ್, ಕರಗುವ ಲವಣಾಂಶ 2.25 (ಮಧ್ಯಮ ಅಲ್ಕಲೈನ್), ಸೋಡಿಯಂ ಹೀರುವ ಅನುಪಾತ (ಎಸ್‌ಎಆರ್) 15 ಎಂದು ಫಲಿತಾಂಶ ಬಂದಿತ್ತು. ಇಂತಹ ನೀರು ನೀರಾವರಿಗಾಗಲಿ, ಹೊಲಗದ್ದೆಗಾಗಲೀ ಯೋಗ್ಯವಲ್ಲವೆಂದು ಕೃಷಿ ವಿಜ್ಞಾನ ಕೇಂದ್ರದವರೇ ವರದಿ ನೀಡಿದ್ದರು. ನೀರು ಹರಿದು ಹೋದಂತಹ ಜಾಗದಲ್ಲಿನ ಮಣ್ಣು ಮಾದರಿ ಪರೀಕ್ಷೆಗೊಳಪಡಿಸಿದಾಗಲೂ ಲವಣಾಂಶ 1.1 ಇದ್ದು, ಸವಳಿನಿಂದ ಕೂಡಿತ್ತು. ಅದೇ ಹೊಲದ ನೀರು ಹರಿಯದೆ ಇರುವ ಸ್ಥಳದ ಮಣ್ಣಿನ ಲವಣಾಂಶ ಕೇವಲ 0.3 ಕಂಡುಬಂದು ಆ
ಮಣ್ಣು ಸವಳಾಗಿರಲಿಲ್ಲ.
ತಜ್ಞರ ವರದಿಯನ್ನಾಧರಿಸಿ 2007 ರಲ್ಲೇ ರೈತರ ದೂರಿಗೆ ಸ್ಪಂದಿಸಿದ್ದ ಆಗಿನ ಸಹಾಯಕ ಆಯುಕ್ತರು ಕಾರ್ಖಾನೆಯಿಂದ ಬಿಡುವ ನೀರಿನಿಂದಲೇ ರೈತರ ಹೊಲದ ಮಣ್ಣು, ಬೆಳೆಗೆ ಹಾನಿ ಆಗಿರೋದು ಕಂಡು ಬಂದಿದೆ, ರೈತರ ಅನುಮತಿ ಇಲ್ಲದೆ ಸಿಮೆಂಟ್ ಘಟಕದವರು ಹೀಗೆ ಅನುಪಯುಕ್ತ ತ್ಯಾಜ್ಯ ನೀರನ್ನು ಹೊಲಗಳಲ್ಲಿ ಹರಿಸದೆ ಅದಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದೂ ಸೂಚಿಸಿದ್ದರು.
ಬಿಜೆಪಿಯ ಬರ ಅಧ್ಯಯನ ಬರೀ ಗಿಮಿಕ್: ಅಜಯ್ ಸಿಂಗ್ ವಾಗ್ದಾಳಿ
ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರಿಗೆ ರೈತರ ದೂರು
2007ರ ಹೋರಾಟಕ್ಕೆ ಕಾನೂನು, ಆಡಳಿತ ಹಂತದಲ್ಲಿ ಜಯ ಸಿಕ್ಕಾಗ ಕಾರ್ಖಾನೆಯವರು ಹೆದರಿ ನೀರು ಹರಿಸೋದನ್ನ ಸ್ಥಗಿತಗೊಳಿಸಿದ್ದರು. ಇದೀಗ ಮತ್ತೆ ಕದ್ದುಮುಚ್ಚಿ ರಾತ್ರಿ ಹೊತ್ತಲ್ಲಿ ಯಾರಿಗೂ ಗೊತ್ತಾಗದಂತೆ ತ್ಯಾಜ್ಯ ನೀರನ್ನು ಹೊಲಗಳಲ್ಲಿ ಹರಿಸುತ್ತಿದ್ದಾರೆ. ಇದರಿಂದ ಮತ್ತೆ ನಮ್ಮ ಹೊಲಗಳು ಹಾಳಾಗಿವೆ. ಕಾರ್ಖಾನೆಯವರ ಈ ಧೋರಣೆ ವಿರುದ್ಧ ಡಿಸಿ, ಎಸ್ಪಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಅಧಿಕಾರಿಗಳಿಗೆ ರೈತರಾದ ಗುರುಲಿಂಗಪ್ಪ ಹಂಗನಳ್ಳಿ, ರವೀಂದ್ರ ಹಂಗನಳ್ಳಿ ದೂರು ನೀಡಿದ್ದಾರೆ.
5ನೇ ಘಟಕ ಆರಂಭಕ್ಕೆ ಅನುಮತಿಸಬೇಡಿ
ಅಲ್ಟ್ರಾಟೆಕ್ ಕಂಪನಿ ರೈತರಿಗೆ ಮೋಸ ಮಾಡಿ ಹೀಗೆಲ್ಲಾ ಹಾನಿ ಮಾಡುತ್ತಿದೆ. ಇದೀಗ 5 ನೇ ಘಟಕ ಆರಂಭಕ್ಕೂ ಮುಂದಾಗಿ ಅನುಮತಿ ಕೇಳಿದ್ದಾರೆಂದು ಗೊತ್ತಾಗಿದೆ. ಜಿಲ್ಲಾಡಳಿತ ಇದಕ್ಕೆ ಅನುಮತಿಸಬಾರದು. ರೈತರ ಈ ಸಮಸ್ಯೆಗೆ ಪರಿಹಾರ ಮೊದಲು ನೀಡಬೇಕು. ಹಾಳಾಗಿರುವ 19 ಎಕರೆ ಹೊಲವನ್ನು ಕಾರ್ಖಾನೆ ಖರೀದಿಸಿ ನೀರು ಬಿಡಲು ವ್ಯವಸ್ಥೆ ಮಾಡಲಿ, ಹಾಗೇ ಹೊಲಸು ನೀರು ಹರಿಸಿ ಬಡ ರೈತರಿಗೆ ಯಾಕೆ ಹಾನಿ ಮಾಡಬೇಕು? ಎಂದು ರೈತರಾದ ಶಿವಲಿಂಗಪ್ಪ, ರವೀಂದ್ರ ಪ್ರಶ್ನಿಸಿದ್ದಾರೆ.