ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.03): ಗಲ್ಲಿಯಿಂದ ಹಿಡಿದು ಕೊಲ್ಲಿ ರಾಷ್ಟ್ರಗಳವರೆಗೂ ಅಕ್ಕಿಯನ್ನು ರಪ್ತು ಮಾಡುವ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿಯೇ ಕೊರೋನಾ ಎಫೆಕ್ಟ್‌ನಿಂದ ಬತ್ತವನ್ನು ಕೇಳುವವರೇ ಇಲ್ಲದಂತಾಗಿದೆ!
ಕೊರೋನಾ ಎಫೆಕ್ಟ್‌ನಿಂದ ಮಾರುಕಟ್ಟೆಯ ಸಮಸ್ಯೆ ಜತೆಗೆ ಈಗ ಅಕಾಲಿಕ ಮಳೆಯಿಂದ ಕಟಾವು ಮಾಡಿದ ಭತ್ತ  ಕಣ್ಣೆದುರಿಗೆ ನೀರುಪಾಲಾಗುತ್ತಿದ್ದು, ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೋನಾ ಬರೆಯ ಮೇಲೆ ಅಕಾಲಿಕ ಮಳೆಯ ಬರೆ ಎಳೆದಂತೆ ಆಗಿದ್ದು, ರೈತರು ಬೆಂದು ಹೋಗಿದ್ದಾರೆ.

ಸತತ ನಾಲ್ಕು ವರ್ಷಗಳಿಂದ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ಅಭಾವದಿಂದ ಬೇಸಿಗೆ ಹಂಗಾಮಿನ ಬೆಳೆಯೇ ಬಂದಿರಲಿಲ್ಲ. ಆದರೆ, ಈ ವರ್ಷ ಬೇಸಿಗೆ ಹಂಗಾಮಿನ ಭತ್ತವೂ ಅತ್ಯುತ್ತಮವಾಗಿಯೇ ಬಂದಿದ್ದು, ಇನ್ನೇನು ಕೈಗೆ ಬಂದು ಬಾಯಿಗೆ ಬಂದಿತು ಎನ್ನುವಾಗಲೇ ಅಕಾ​ಲಿಕೆ ಮಳೆ​ಯಿಂದಾ​ಗಿ ನೆಲದ ಪಾಲಾಗುತ್ತಿದೆ.

ಲಾಕ್‌ಡೌನ್‌ ಸಡಿಲ: ಸೋಮವಾರದಿಂದ ಬಸ್‌ ಸಂಚಾರ ಪ್ರಾರಂಭ

8.5 ಲಕ್ಷ ಎಕರೆ

ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆ ಸೇರಿ ಸುಮಾರು 8.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಬೇಸಿಗೆ ಹಂಗಾಮಿನಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿಯೇ ಕಟಾವು ಮಾಡಲಾಗುತ್ತದೆ. ಹೀಗಾಗಿ, ಈಗ ಕಟಾವು ಕಾರ್ಯ ನಡೆದಿದ್ದು, ಈಗಾಗಲೇ ಕಟಾವು ಮಾಡಿದ್ದನ್ನು ಕೊಳ್ಳುವವರೇ ಇಲ್ಲದೆ ಇರುವುದರಿಂದ ರಸ್ತೆ, ಹೊಲಗದ್ದೆಗಳಲ್ಲಿಯೇ ರಾಶಿ ಮಾಡಿಕೊಂಡು ರೈತರು ಇವತ್ತಲ್ಲ ನಾಳೆ ಮಾರಾಟವಾಗುತ್ತದೆ ಎಂದು ಕಾಯುತ್ತಿದ್ದಾರೆ.

ಕೇಳುವವರೇ ಇಲ್ಲ

ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಕಟಾವು ಮಾಡಿರುವ ಭತ್ತವನ್ನು ಕೇಳುವರರೇ ಇಲ್ಲದಂತೆ ಆಗಿದೆ. ಸಾಮಾನ್ಯವಾಗಿ ಆನ್‌ಎನ್‌ಆರ್‌, ಗಂಗಾ ಕಾವೇರಿ ಭತ್ತವನ್ನು 1400-1550ಕ್ಕೆ 75 ಕೆಜಿ ಚೀಲವನ್ನು ಖರೀದಿ ಮಾಡುತ್ತಿದ್ದರು. ಆದರೆ . 1200ಗೂ ಕೇಳವವರೂ ಇಲ್ಲದಂತೆ ಆಗಿದೆ. ಇನ್ನು ಸೋನಾಮಸೂರಿ ಭತ್ತವನ್ನು 1500-1600ಕ್ಕೆ ಖರೀದಿ ಮಾಡುತ್ತಿದ್ದರು. ಆದರೆ, ಅದನ್ನು ಕೇಳುವವರೇ ಇಲ್ಲದಂತೆ ಆಗಿದೆ.

ಭಾರಿ ಹೊಡೆತ

ಕೊರೋನಾ ಎಫೆಕ್ಟ್ನಿಂದ ಮಾರುಕಟ್ಟೆಯೇ ಇಲ್ಲದಂತೆ ಆಗಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಅಕಾಲಿಕ ಮಳೆಯಿಂದಲೂ ರೈತರು ಅನುಭವಿಸುತ್ತಿದ್ದಾರೆ. ಕೂಡಲೇ ರೈತರ ಹಿತ ಕಾಯಲು ಸರ್ಕಾರ ಬೆಂಬಲ ಯೋಜನೆಯಡಿ ಖರೀದಿ ಮಾಡುವಂತೆ ಎಷ್ಟೇ ಆಗ್ರಹಿಸಿದರೂ ಖರೀದಿ ಮಾಡುತ್ತಲೇ ಇಲ್ಲ ಎನ್ನುವುದು ರೈತರ ಆಕ್ರೋಶ.

ಮಧ್ಯ ಪ್ರವೇಶ ಮಾಡಲಿ

ರೈತರು ಉತ್ಪಾದನೆ ಮಾಡಿರುವ ಬತ್ತ ಈಗ ಮಾರಾಟವಾಗುತ್ತಿಲ್ಲವಾದ್ದರಿಂದ ಅವುಗಳನ್ನು ಉಗ್ರಾಣದಲ್ಲಿ ಸಂಗ್ರಹ ಮಾಡಿ, ಅದರ ಮೇಲೆ ಸಾಲ ತೆಗೆಯುವ ಮೂಲಕ ರೈತರು ನಂತರ ದಿನಗಳಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಅದಕ್ಕೂ ಸಹ ಬ್ಯಾಂಕಿನವರು ಈ ಬಾರಿ ಮುಂದೆ ಬರುತ್ತಿಲ್ಲ.

ಈ ವಿಷಯ ಕುರಿತು ಸಂಸದ ಸಂಗಣ್ಣ ಕರಡಿ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ರೈತರಿಗೆ ಬತ್ತದ ಅಡಮಾನ ಸಾಲ ನೀಡಲು ಬ್ಯಾಂಕುಗಳಿಗೆ ಸೂಚಿಸುವಂತೆ ಕೋರಿದ್ದರು. ಪರಿಣಾಮ ರಾಜ್ಯ ಬ್ಯಾಂಕರ್ಸ್‌ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿ, ಸಾಲ ನೀಡಲು ಸೂಚನೆ ನೀಡಲಾಗಿದೆಯಾದರೂ ವಾಸ್ತವದಲ್ಲಿ ಅದು ಜಾರಿಯಾಗುತ್ತಿಲ್ಲ.

ಬತ್ತವನ್ನು ಕೇಳುವವರೇ ಇಲ್ಲದಿರುವುದರಿಂದ ತೀವ್ರ ಸಮಸ್ಯೆಯಾಗಿ ಹೊಲಗದ್ದೆ ಮತ್ತು ರಸ್ತೆಯಲ್ಲಿ ಹಾಕಿಕೊಂಡು ಕಾಯುತ್ತಿದ್ದೇವೆ. ಈಗ ಅಕಾಲಿಕ ಮಳೆಯಿಂದ ಅವುಗಳನ್ನು ಸಂರಕ್ಷಣೆ ಮಾಡಿಕೊಳ್ಳುವುದೇ ದೊಡ್ಡ ಸವಾಲು ಆಗಿದೆ ಎಂದು ಅಗಳಿಕೇರಿ ರೈತ ಷಣ್ಮುಖಪ್ಪ ಹೂಗಾರ ಹೇಳಿದ್ದಾರೆ.

ಬತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕುರಿತು ಇದುವರೆಗೂ ಮಾಹಿತಿಯನ್ನೇ ನೀಡುತ್ತಿಲ್ಲ. ರೈತರಿಗೆ ಈ ಕುರಿತು ತಿಳಿವಳಿಕೆ ನೀಡಿ, ಗ್ರೇಡ್‌ ಮಾದರಿಯನ್ನು ಹೇಳಿದರೆ ಅದನ್ನಾದರೂ ರೈತರು ಮಾಡುತ್ತಾರೆ ಎಂದು ಹಿಟ್ನಾಳ ಗ್ರಾಮದ ರೈತ ಉಮೇಶ ಪಲ್ಲೆದ ಅವರು ತಿಳಿಸಿದ್ದಾರೆ.