ದೇಶಾದ್ಯಂತ ಕಾಮನ್ ಸರ್ವಿಸ್ ಸೆಂಟರ್ ಸ್ಥಾಪನೆ ಚಿಂತನೆ: ಹೆಗ್ಗಡೆ
- ದೇಶಾದ್ಯಂತ ಕಾಮನ್ ಸರ್ವಿಸ್ ಸೆಂಟರ್ ಸ್ಥಾಪನೆ ಚಿಂತನೆ: ಹೆಗ್ಗಡೆ
- ರಾಜ್ಯದಲ್ಲಿರುವ 6 ಸಾವಿರ ಸಿಎಸ್‌ಸಿ ಕೇಂದ್ರಗಳನ್ನು 10 ಸಾವಿರಕ್ಕೆ ವಿಸ್ತರಿಸುವ ಗುರಿ
- ಶಿರಾಡಿ ಘಾಟ್‌ಗೆ ಶಾಶ್ವತ ಯೋಜನೆ ಕುರಿತು ಚರ್ಚೆ
ಮಂಗಳೂರು (ಆ.14) : ಕೇಂದ್ರ ಸರ್ಕಾರದಲ್ಲಿ ಸುಮಾರು 500ಕ್ಕೂ ಅಧಿಕ ಜನೋಪಯೋಗಿ ಯೋಜನೆಗಳಿದ್ದು, ಇದನ್ನು ಜನರಿಗೆ ತಲುಪಿಸುವ ದಿಶೆಯಲ್ಲಿ ಕಾಮನ್ ಸರ್ವಿಸ್ ಸೆಂಟರ್(ಸಿಎಸ್‌ಸಿ)ಗಳನ್ನು ದೇಶಾದ್ಯಂತ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ರಾಜ್ಯಸಭಾ ಸದಸ್ಯರಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಮಂಗಳೂರಿ(Mangaluru)ನಲ್ಲಿ ಶನಿವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ 6 ಸಾವಿರ ಸಿಎಸ್‌ಸಿ(CSC) ಕೇಂದ್ರಗಳಿದ್ದು, ಇದನ್ನು 10 ಸಾವಿರಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಈ ಸಿಎಸ್‌ಸಿ ಕೇಂದ್ರಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ(Dharmasthala Rural Development Scheme) ಕಾರ್ಯನಿರ್ವಹಿಸುತ್ತಿವೆ. ಕೇಂದ್ರ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ದಿಶೆಯಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಸಾಮಾಜಿಕ ಭದ್ರತೆ ಸೇರಿದಂತೆ ಎಲ್ಲ ರೀತಿಯ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಈ ಕೇಂದ್ರಗಳು ನೆರವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಸಿಎಸ್‌ಸಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಇದರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಮಾದರಿಯಲ್ಲಿ ದೇಶದ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಿಎಸ್‌ಸಿ ತೆರೆಯುವ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಚಿಂತನೆ ನಡೆಯುತ್ತಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಯೋಚನೆ ರಾಷ್ಟ್ರಮಟ್ಟಕ್ಕೂ ವಿಸ್ತರಣೆ: ಡಾ.ಹೆಗ್ಗಡೆ
ಸಿಎಸ್‌ಸಿ ಅಡಿಯಲ್ಲಿ ಈಗಾಗಲೇ 32 ಲಕ್ಷ ಇ ಶ್ರಮ್ ಕಾರ್ಡ್(E-Shrama Card) ವಿತರಿಸಲಾಗಿದೆ. ಕೃಷಿ ಕಾರ್ಮಿಕರಿಗೆ ಅನೇಕ ಸೌಲಭ್ಯ ನೀಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆ(Ayushman Bharat Yojana)ಗೆ ನೋಂದಣಿ ಮಾಡುತ್ತಿದ್ದು, ಅನಾರೋಗ್ಯಕ್ಕೆ ಒಳಗಾದರೆ 5 ಲಕ್ಷ ರು. ವರೆಗೆ ಆಸ್ಪತ್ರೆ ಬಿಲ್ ಪಾವತಿ ಸೌಲಭ್ಯ ಇದರಲ್ಲಿದೆ. ಕೃಷಿ ವಿಮೆ, ಆಧಾರ್ ಸವಲತ್ತು ಸೇರಿದಂತೆ ಎಲ್ಲ ರೀತಿಯ ಕೇಂದ್ರ ಯೋಜನೆಗಳ ಮಾಹಿತಿ ಸುಲಭದಲ್ಲಿ ಜನತೆಗೆ ಲಭ್ಯವಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯಡಿ ಆರ್ ಸೆಟಿ ಕಾರ್ಯಕ್ರಮದಲ್ಲಿ ಸ್ವಸಹಾಯ ಗುಂಪುಗಳಿಗೆ ತರಬೇತಿ ಕಾರ್ಯ ನಡೆಸಲಾಗುತ್ತಿದ್ದು, ಇದು ದೇಶದ 590 ಜಿಲ್ಲೆಗಳಲ್ಲಿ ನಡೆಯುತ್ತಿದೆ ಎಂದರು.
ಶಿರಾಡಿ ಘಾಟ್ ಬಗ್ಗೆ ಸಚಿವರ ಭೇಟಿ: ರಾಜಧಾನಿ ಬೆಂಗಳೂರು ಮತ್ತು ಕರಾವಳಿಯನ್ನು ಬೆಸೆಯುವ ಶಿರಾಡಿ ಘಾಟ್(Shiradi Ghat) ಹಾದುಹೋಗುವ ಹೆದ್ದಾರಿ ಬಗ್ಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಜತೆ ಕಳೆದ ಶನಿವಾರ ದೆಹಲಿಯಲ್ಲಿ ಮಾತುಕತೆ ನಡೆಸಲಾಗಿದೆ. ಶಿರಾಡಿ ಘಾಟ್ ಬಳಿಕ ಸಕಲೇಶಪುರ ವ್ಯಾಪ್ತಿಯಲ್ಲಿ ಹೆದ್ದಾರಿ ತೀವ್ರವಾಗಿ ಕೆಟ್ಟುಹೋಗಿದೆ. ಇದನ್ನು ವೀಕ್ಷಿಸುವ ಸಲುವಾಗಿಯೇ ನಾನು ಬೆಂಗಳೂರಿನಿಂದ ಶಿರಾಡಿ ಘಾಟ್ ಮಾರ್ಗವಾಗಿ ಧರ್ಮಸ್ಥಳಕ್ಕೆ ಬಂದಿದ್ದೇನೆ. ಶಿರಾಡಿ ಘಾಟ್‌ನಲ್ಲಿ ಸಮಾನಾಂತರ ಇನ್ನೊಂದು ಹೆದ್ದಾರಿ ನಿರ್ಮಾಣಕ್ಕೆ ಪರಿಸರ ಇಲಾಖೆಯ ವಿರೋಧ ಇರುವುದಾಗಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಿದ ಬಳಿಕವೇ ಶಿರಾಡಿ ಘಾಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಎಂದು ಎಂದಿದ್ದಾರೆ. ಪ್ರತಿ ಬಾರಿಯೂ ತಾತ್ಕಾಲಿಕ ಪರಿಹಾರದಿಂದ ಪ್ರಯೋಜನವಿಲ್ಲ. ಪ್ರತಿ ಬಾರಿಯೂ ಶಿರಾಡಿ ಘಾಟ್ ಹೆದ್ದಾರಿ ಸಮಸ್ಯೆ ತಲೆದೋರುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತರಲು ಪ್ರಯತ್ನಿಸಲಾಗುವುದು ಎಂದರು.
ರಾಜ್ಯಸಭೆಗೆ ಧರ್ಮಾಧಿಕಾರಿ: ಮಂಜುನಾಥನ ಸನ್ನಿಧಿಯಿಂದ, ಪ್ರಜಾಪ್ರಭುತ್ವದ ದೇಗುಲದವರೆಗೆ
ತುಳುವಿಗೆ ತಾಂತ್ರಿಕ ತೊಡಕು: ಕರಾವಳಿಯ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ತಾಂತ್ರಿಕ ತೊಡಕು ಎದುರಾಗಿದೆ. ಕೇವಲ ತುಳು ಒಂದೇ ಭಾಷೆಯನ್ನು ಸೇರ್ಪಡೆಗೊಳಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ತುಳುವಿನ ಜತೆ ಗುಡ್ಡಗಾಡು ಜನತೆಯ ಭಾಷೆಗಳನ್ನೂ ಒಟ್ಟಾಗಿ ಸೇರ್ಪಡೆಗೊಳಿಸುವ ಬಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದರು.
ದ.ಕ.ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಸಂರಕ್ಷಣೆ ದಿಶೆಯಲ್ಲಿ ಪ್ರೊ.ಮಾಧವ ಗಾಡ್ಗೀಳ್, ಡಾ. ಕಸ್ತೂರಿ ರಂಗನ್ ವರದಿ ಬಗೆಗಿನ ಪ್ರಶ್ನೆಗೆ ಡಾ.ಹೆಗ್ಗಡೆ ಅವರು, ಈ ವಿಚಾರದ ಬಗ್ಗೆ ಕೂಲಂಕಷ ತಿಳಿದುಕೊಂಡೇ ಮಾತನಾಡುತ್ತೇನೆ. ಜನತೆಗೆ ತೊಂದರೆಯಾಗದಂತೆ, ಕೇಂದ್ರ ಸರ್ಕಾರ ಜಾರಿಗೊಳಿಸುವ ಕಾನೂನುಗಳ ಬಗ್ಗೆ ಪರಾಮರ್ಶೆ ನಡೆಸಿಯೇ ಹೆಜ್ಜೆ ಇಡಬೇಕಾಗುತ್ತದೆ. ಯಾವುದಕ್ಕೂ ಇದರ ಬಗ್ಗೆ ಅರಿತುಕೊಳ್ಳುವುದಾಗಿ ಹೇಳಿದರು.
ಕೇಂದ್ರ ಕೃಷಿ, ಗ್ರಾಮೀಣಾಭಿವೃದ್ಧಿ ಸಮಿತಿಗೆ ಡಾ.ಹೆಗ್ಗಡೆ?
ರಾಜ್ಯಸಭಾ ಸದಸ್ಯನಾಗಿ ತಾನು ಏಳು ದಿನಗಳ ಕಾಲ ಕಲಾಪ ವೀಕ್ಷಿಸಿದ್ದೇನೆ. ಕಲಾಪದಲ್ಲಿ ಏನೆಲ್ಲ ಇರುತ್ತದೆ ಎಂಬ ಬಗ್ಗೆ ಸಾಧಾರಣ ಪರಿಚಯ ಆಗಿದೆ. ಕೃಷಿ ಮತ್ತು ಗ್ರಾಮಾಭಿವೃದ್ಧಿ ನನ್ನ ನೆಚ್ಚಿನ ಕ್ಷೇತ್ರವಾಗಿದೆ. ರಾಜ್ಯಸಭಾ ಸದಸ್ಯನಾಗಿ ಈ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಇರಾದೆ ಹೊಂದಿದ್ದೇನೆ. ಇದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಯಾವುದಾದರೂ ಒಂದು ಸಮಿತಿಗೆ ಸೇರ್ಪಡೆಯಾಗುವಂತೆ ವಿನಂತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಮಿತಿಯಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದಿದ್ದೇನೆ ಎಂದರು ಡಾ.ಹೆಗ್ಗಡೆ.