ಸತ್ತೇಗಾಲ ಯೋಜನೆ: ದಾಹ ತಣಿಸಲಿದ್ದಾಳೆ ಕಾವೇರಿ..!
ರಾಷ್ಟ್ರೀಯ ಜಲ ನೀತಿಯ ಅನ್ವಯ ಕುಡಿಯುವ ನೀರಿಗೆ ಆದ್ಯತೆ ನೀಡಿ ಕಾವೇರಿ ಜಲ ವಿವಾದ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಹಂಚಿಕೆಯಾಗಿರುವ ನೀರಿನಲ್ಲಿ 3.30 ಟಿಎಂಸಿ ನೀರನ್ನು ಉಪಯೋಗಿಸಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಎಂ.ಅಫ್ರೋಜ್ ಖಾನ್
ರಾಮನಗರ(ಡಿ.15): ಬಯಲು ಸೀಮೆ ಜಿಲ್ಲೆ ರಾಮನಗರಕ್ಕೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವ ಸತ್ತೇಗಾಲ ನೀರಾವರಿ ಯೋಜನೆಯಲ್ಲಿ ಜಲಾಶಯಗಳನ್ನು ತುಂಬಿಸುವುದು ಮಾತ್ರವಲ್ಲದೆ ಕೆರೆಗಳನ್ನೂ ಭರ್ತಿ ಮಾಡಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ಜನರ ನೀರಿನ ದಾಹ ನೀಗಿಸುವ ಉದ್ದೇಶ ಹೊಂದಲಾಗಿದೆ.
ಈ ಯೋಜನೆ ಅಡಿಯಲ್ಲಿ ಮೊದಲ ಹಂತದಲ್ಲಿ ಸತ್ತೇಗಾಲದಿಂದ ಇಗ್ಗಲೂರು ಎಚ್ .ಡಿ.ದೇವೇಗೌಡ ಬ್ಯಾರೇಜ್ , ಕಣ್ವ, ವೈ.ಜಿ.ಗುಡ್ಡ ಹಾಗೂ ಮಂಚನಬೆಲೆ ಜಲಾಶಯ ತುಂಬಿಸಲಾಗುತ್ತದೆ. ಆನಂತರ ಜಲಾಶಯಗಳಿಂದ ಕೆರೆಗಳಿಗೆ ನೀರು ಹರಿಸಿ ಹಳ್ಳಿಗಳು ಮತ್ತು ಬಿಡದಿ, ಕುಂಬಳಗೂಡು ಪಟ್ಟಣಗಳ ಜನವಸತಿ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಮಾಡಲಾಗುತ್ತದೆ. ಈ ಯೋಜನೆಯಿಂದ ಇಡೀ ರಾಮನರ ಜಿಲ್ಲೆಗೆ ಶಾಶ್ವತ ನೀರಾವರಿ ಸಾಧ್ಯವಾಗಲಿದೆ. ಕೇವಲ ರಾಮನಗರಕಷ್ಟೇ ಅಲ್ಲದೆ, ಮಂಡ್ಯ ಭಾಗಕ್ಕೂ ಅನುಕೂಲವಾಗಲಿದೆ.
ರಾಮನಗರ: ಕನಕಪುರ ಬಳಿ ಮಿನಿ ಬಸ್‌ಗೆ ಕಾರು ಡಿಕ್ಕಿ, ಪ್ರೇಮಿಗಳ ದುರ್ಮರಣ
ರಾಮನಗರ ಜಿಲ್ಲೆಯ 5 ತಾಲೂಕುಗಳಲ್ಲಿ 10.82 ಲಕ್ಷ ಜನಸಂಖ್ಯೆ ಹಾಗೂ 9.03 ಲಕ್ಷ ಜಾನವಾರುಗಳಿವೆ. ಜನಸಂಖ್ಯೆ ಆಧಾರದ ಮೇಲೆ ಪ್ರತಿಯೊಬ್ಬರಿಗೆ 85 ಲೀಟರ್ ದಿನಕ್ಕೆ ಲೆಕ್ಕ ಮಾಡಿದಾಗ ಒಟ್ಟು 2.2 ಟಿಎಂಸಿ ನೀರಿನ ಅವಶ್ಯಕತೆ ಇದೆ. ಆದರೆ, ಮಳೆಯ ಅಭಾವದ ಕಾರಣ ಅಂತರ್ಜಲ ಕುಸಿದಿದ್ದು, ಕೊಳವೆ ಬಾವಿಗಳಲ್ಲಿ ದೊರೆಯುವ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ಸತ್ತೇಗಾಲ ನೀರಾವರಿ ಯೋಜನೆ ರೂಪುಗೊಂಡಿತು.
ಈಗ ಸತ್ತೇಗಾಲ ನೀರಾವರಿ ಯೋಜನೆ ಭಾಗಶಃ ಪೂರ್ಣಗೊಂಡಿದ್ದರೆ, ಶೇಕಡ 35ರಷ್ಟು ಕಾಮಗಾರಿ ಮಾತ್ರ ಬಾಕಿಯಿದೆ. ಕಣ್ವ ಜಲಾಶಯದಿಂದ ವೈ.ಜಿ.ಗುಡ್ಡ ಮತ್ತು ಮಂಚನಬೆಲೆ ಜಲಾಶಯಕ್ಕೆ ಕಾವೇರಿ ನೀರನ್ನು ಲಿಫ್ಟ್ ಮಾಡುವ ಕಾಮಗಾರಿ ಪೂರ್ಣಗೊಂಡಿದೆ. ಹಾಗಾಗಿ ಇಗ್ಗಲೂರು - ಎಚ್.ಮೊಗೇನಹಳ್ಳಿ - ಕಣ್ವ ನಡುವೆ ಹಾಲಿ ಇರುವ ಏತ ನೀರಾವರಿ ಯೋಜನೆಯಲ್ಲಿ ನೀರು ಹರಿಸಿಕೊಂಡು ಎರಡೂ ಜಲಾಶಯಗಳನ್ನು ತುಂಬಿಸಲಾಗುತ್ತಿದೆ.
ಯಾವ್ಯಾವ ಜಲಾಶಯಕ್ಕೆ ಎಷ್ಟು ನೀರು?
ಕಾವೇರಿ ನದಿ ನೀರನ್ನು ಸತ್ತೇಗಾಲ ಸಮೀಪದ ಅಣೆಕಟ್ಟೆಯಿಂದ 1.8 ಮೀ. ವ್ಯಾಸದ ಎರಡು ಪೈಪ್ ಗಳಲ್ಲಿ ಗುರುತ್ವಾಕರ್ಷಣೆ ಮೂಲಕ ಇಗ್ಗಲೂರಿನ ಎಚ್ .ಡಿ.ದೇವೇಗೌಡ ಬ್ಯಾರೇಜಿಗೆ ಹರಿಸಲಾಗುತ್ತದೆ. ಆ ಬ್ಯಾರೇಜಿನಿಂದ 1.1 ಟಿಎಂಸಿ ನೀರನ್ನು ಶಿಂಷಾ ನದಿಯ ಮೂಲಕ ಹರಿಸಿ ಕನಕಪುರ ತಾಲೂಕಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ.
ಎಚ್ .ಡಿ.ದೇವೇಗೌಡ ಬ್ಯಾರೇಜಿನ ಹಿನ್ನೀರಿನಿಂದ ಹಾಲಿ ಇರುವ ಕಣ್ವ ಕುಡಿಯುವ ನೀರಿನ ಯೋಜನೆ ಮೂಲಕ 2.2 ಟಿಎಂಸಿ ನೀರನ್ನು ಎತ್ತಿ ಚನ್ನಪಟ್ಟಣ ತಾಲೂಕಿಗೆ ಕುಡಿಯುವ ನೀರನ್ನು ಒದಗಿಸುವ ಜೊತೆಗೆ ಕಣ್ವ ಜಲಾಶಯ ತುಂಬಿಸಲಾಗುವುದು.
ಮೊಗೇನಹಳ್ಳಿ ಕೆರೆಯಿಂದ ಕಣ್ವ ಜಲಾಶಯಕ್ಕೆ ಹೆಚ್ಚುವರಿಯಾಗಿ ನೀರನ್ನು 460 ಎಚ್ ಪಿ ನಾಲ್ಕು ಪಂಪ್ ಗಳನ್ನು ಅಳವಡಿಸಿಕೊಂಡು 180 ದಿನಗಳಲ್ಲಿ ಭರ್ತಿ ಮಾಡಲಾಗುತ್ತದೆ. ಕಣ್ವದಿಂದ ಮಂಚನಬೆಲೆ ಜಲಾಶಯಕ್ಕೆ 0.72 ಟಿಎಂಸಿ ನೀರನ್ನು 1600 ಎಚ್ ಪಿಯ ನಾಲ್ಕು ಪಂಪ್ ಗಳನ್ನು ಅಳವಡಿಸಿ 120 ದಿನಗಳಲ್ಲಿ ತುಂಬಿಸಲಾಗುತ್ತದೆ. ಅಲ್ಲದೆ, ಕಣ್ವ ಜಲಾಶಯದಿಂದ ವೈ.ಜಿ.ಗುಡ್ಡಕ್ಕೆ 0.14 ಟಿಎಂಸಿ ನೀರನ್ನು 800 ಎಚ್ ಪಿ ಮೂರು ಪಂಪ್ ಗಳನ್ನು ಅಳವಡಿಸಿಕೊಂಡು 120 ದಿನಗಳಲ್ಲಿ ಹರಿಸಲಾಗುತ್ತದೆ.
ಈ ರೀತಿ ಸಂಗ್ರಹಿಸಿದ ನೀರನ್ನು ಜಲಧಾರೆ ಯೋಜನೆ ಅಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಶುದ್ಧೀಕರಿಸಿ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.
ಮೂರು ಪಕ್ಷಗಳ ನಾಯಕರಿಗೂ ಕ್ರೆಡಿಟ್ ಸಲ್ಲಿಕೆ
ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸತ್ತೇಗಾಲ ನೀರಾವರಿ ಯೋಜನೆಗೆ ಅಡಿಗಲ್ಲು ಹಾಕಿದರೆ, ಬಿಜೆಪಿ ಸರ್ಕಾರ ಅಗತ್ಯ ಆರ್ಥಿಕ ನೆರವು ಕಲ್ಪಿಸಿ ಕಾಮಗಾರಿಗೆ ವೇಗ ನೀಡಿತು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಕಾಮಗಾರಿಗಿದ್ದ ಅಡ್ಡಿಯನ್ನು ಬಗೆಹರಿಸಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಿತು.
ಇದೇ ಕಾರಣಕ್ಕೆ 10 ವರ್ಷದಲ್ಲಿ 8ಕ್ಕೂ ಹೆಚ್ಚು ಕಾಡಾನೆಗಳ ಸಾವು!
ಜೆಡಿಎಸ್ ವರಿಷ್ಠ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ , ಡಿ.ಕೆ.ಸುರೇಶ್ ಹಾಗೂ ಬಿಜೆಪಿ ನಾಯಕರಾದ ಅಶ್ವತ್ಥ ನಾರಾಯಣ, ಸಿ.ಪಿ.ಯೋಗೇಶ್ವರ್ ರವರು ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಸತ್ತೇಗಾಲ ಯೋಜನೆ ಪರಿಪೂರ್ಣಗೊಳ್ಳಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ಹೀಗಾಗಿ ಮೂರು ಪಕ್ಷಗಳ ನಾಯಕರಿಗೂ ಯೋಜನೆಯ ಕ್ರೆಡಿಟ್ ಸಲ್ಲುತ್ತದೆ.
ಸತ್ತೇಗಾಲ ನೀರಾವರಿ ಯೋಜನೆಗೆ 3.30 ಟಿಎಂಸಿ ನೀರು ಬಳಕೆ
ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಸತ್ತೇಗಾಲ ನೀರಾವರಿ ಯೋಜನೆಗಾಗಿ ಕಾವೇರಿ ನದಿಯಿಂದ 3.30 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಜಲ ನೀತಿಯ ಅನ್ವಯ ಕುಡಿಯುವ ನೀರಿಗೆ ಆದ್ಯತೆ ನೀಡಿ ಕಾವೇರಿ ಜಲ ವಿವಾದ ನ್ಯಾಯ ಮಂಡಳಿಯ ಆದೇಶದ ಪ್ರಕಾರ ಹಂಚಿಕೆಯಾಗಿರುವ ನೀರಿನಲ್ಲಿ 3.30 ಟಿಎಂಸಿ ನೀರನ್ನು ಉಪಯೋಗಿಸಿಕೊಳ್ಳಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.