Asianet Suvarna News Asianet Suvarna News

ವಿಜಯಪುರ: 1100 ಅಡಿ ಆಳ ಕೊರೆದರೂ ಸಿಗ್ತಿಲ್ಲ ಜೀವಜಲ, ನೀರಿಗಾಗಿ ಹಾಹಾಕಾರ..!

ಶೀಘ್ರವೇ ಭೀಮಾ ನದಿಗೆ ನೀರು ಬರದಿದ್ದರೆ ನೀರಿನ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರ- ಕರ್ನಾಟಕ ಗಡಿ ಸಂಧಿಸುವ ಭೀಮಾನದಿ ಸಂಪೂರ್ಣ ಬತ್ತಿದ್ದರಿಂದ ಗಡಿಭಾಗದ ಗ್ರಾಮಗಳು ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗುತ್ತಲೆ ಇದೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದರಿಂದ ಬೋರ್‌ವೆಲ್‌ ಡ್ರಿಲ್ ಮಾಡಿದರೆ ಸಾಕು ಬಿಳಿಮಣ್ಣಿನ ಹುಡಿ ಹಾರುತ್ತದೆ. ಕುಡಿಯುವ ನೀರು, ನೀರಾವರಿ ಈ ಎರಡು ಯೋಜನೆಗಳು ಶಾಶ್ವತವಾಗಿ ಆಗಬೇಕಾಗಿರುವುದು ಅಗತ್ಯವಾಗಿದೆ.

Drinking Water Problem at Indi in Vijayapura grg
Author
First Published Mar 10, 2024, 12:30 PM IST

ಖಾಜು ಸಿಂಗೆಗೋಳ

ಇಂಡಿ(ಮಾ.10):  ಬಿರು ಬೇಸಿಗೆ ಆರಂಭವಾಗಿದೆ. ಪ್ರಾರಂಭದಲ್ಲೇ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದ್ದು, ಭೀಮೆಯ ಒಡಲಲ್ಲಿರುವ ಗ್ರಾಮಗಳಲ್ಲಿ ನೀರಿಗೆ ಪರದಾಟ ಶುರುವಾಗಿದೆ. ನಿರಂತರ ಬರದಿಂದ ಅಂತರ್ಜಲ ಮಟ್ಟ ಕೂಡ ಪಾತಾಳ ಕಂಡಿದೆ. ಇಂಡಿ ಕ್ಷೇತ್ರದಲ್ಲಿ 1100 ಅಡಿ ಆಳ ಬೋರ್‌ವೆಲ್‌ ಕೊರೆದರೂ ನೀರು ಸಿಗುತ್ತಿಲ್ಲ.

ಶೀಘ್ರವೇ ಭೀಮಾ ನದಿಗೆ ನೀರು ಬರದಿದ್ದರೆ ನೀರಿನ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರ- ಕರ್ನಾಟಕ ಗಡಿ ಸಂಧಿಸುವ ಭೀಮಾನದಿ ಸಂಪೂರ್ಣ ಬತ್ತಿದ್ದರಿಂದ ಗಡಿಭಾಗದ ಗ್ರಾಮಗಳು ಪ್ರತಿ ವರ್ಷ ಬರಗಾಲಕ್ಕೆ ತುತ್ತಾಗುತ್ತಲೆ ಇದೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದರಿಂದ ಬೋರ್‌ವೆಲ್‌ ಡ್ರಿಲ್ ಮಾಡಿದರೆ ಸಾಕು ಬಿಳಿಮಣ್ಣಿನ ಹುಡಿ ಹಾರುತ್ತದೆ. ಕುಡಿಯುವ ನೀರು, ನೀರಾವರಿ ಈ ಎರಡು ಯೋಜನೆಗಳು ಶಾಶ್ವತವಾಗಿ ಆಗಬೇಕಾಗಿರುವುದು ಅಗತ್ಯವಾಗಿದೆ.

ಬೆಂಗಳೂರಿಗೆ ಬೇಕಿರೋದು 8 ಟಿಎಂಸಿ, ಕೆಆರ್‌ಎಸ್ ಡ್ಯಾಂನಲ್ಲಿ 34 ಟಿಎಂಸಿ ನೀರಿದೆ: ರಾಮ್ ಪ್ರಸಾತ್ ಮನೋಹರ್

ಬ್ರಿಟೀಷರು ಆಡಳಿತ ಮಾಡುವ ಸಂದಭ೯ದಲ್ಲಿ ಬಿಜಾಪೂರ ಪಟ್ಟಣದಲ್ಲಿ ಬರಗಾಲ ನಿವಾರಣೆ ಸಂಸ್ಥೆಯೊಂದನ್ನು ತೆರೆದು ಬರ ನಿವಾರಣೆಗೆ ಪ್ರಯತ್ನಿಸಿದರು. ಆದರೆ, ಬ್ರಿಟೀಷರು ದೇಶವನ್ನು ಬಿಟ್ಟುಹೋಗಿ 75 ವರ್ಷ ಕಳೆದರೂ ಇಂದಿನವರೆಗೆ ವಿಜಯಪುರಕ್ಕೆ ಅಂಟಿದ ಬರಗಾಲ ಜಿಲ್ಲೆ ಎಂಬ ಹಣೆಪಟ್ಟಿ ಕಳಚಿಲ್ಲ. ವಿಜಯಪುರ ಜಿಲ್ಲೆ ಬರಗಾಲದಿಂದ ಮುಕ್ತಿಹೊಂದಲು ಇನ್ನೆಷ್ಟು ವರ್ಷಗಳು ಕಾಯಬೇಕು ಎಂದು ಜನರು ಚಿಂತೆಗೀಡಾಗಿದ್ದಾರೆ. ಇದಕ್ಕೆ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಇಚ್ಛಾಶಕ್ತಿ ಇಲ್ಲದಿರುವುದೇ ಕೊರತೆಯೇ ಕಾರಣ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇಸ್ರೋ ತಂತ್ರಜ್ಞಾನ ಬಳಕೆ:

ಇಂಡಿ ತಾಲೂಕಿನಲ್ಲಿ ಕಳೆದ ಎರಡು ತಿಂಗಳಿನಿಂದ ತಾಲೂಕಾಡಳಿತದಿಂದ ಕುಡಿಯುವ ನೀರಿಗೆ ಸಮಸ್ಯೆಯಿರುವ ಗ್ರಾಮ, ಜನವಸತಿ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಆದರೆ, ಅದು ಸಮರ್ಪಕವಾಗಿ ಸಾಕಾಗುತ್ತಿಲ್ಲ. ಹೀಗಾಗಿ, ರೈತರು ಜಮೀನುಗಳಲ್ಲಿ ಬೋರ್‌ವೆಲ್ ಕೊರೆಸಲು ಹೋದರೆ 1100 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಮರ್ಪಕವಾಗಿ ಮಳೆಯಾದರೆ 150 ಅಡಿಯಷ್ಟು ಕೊರೆದರೆ ನೀರು ಸಿಗುತ್ತದೆ. 2016 ರಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಉಂಟಾಗಿದ್ದಾಗ ಶಾಸಕ ಯಶವಂತರಾಯಗೌಡ ಪಾಟೀಲ ಇಸ್ರೋ ತಂತ್ರಜ್ಞಾನವನ್ನು ತರಿಸಿ ಅವರಿಂದ ಅಂತರ್ಜಲ ಮಟ್ಟವನ್ನು ಗುರುತಿಸುವ ಕೆಲಸ ಮಾಡಿದ್ದರು. ಈಗಲೂ ಅದೇ ಪರಿಸ್ಥಿತಿ ಇಂದು ಕಾಣಿಸಿಕೊಳ್ಳುತ್ತಿದೆ.

ಕೃಷಿಗೆ ನೀರು ಬಳಕೆ: 

ತಾಲೂಕಿನ ಗಡಿಭಾಗದ ಧೂಳಖೇಡ- ಟಾಕಳಿ ಬಳಿ ಹರಿದಿರುವ ಭೀಮಾನದಿಯಲ್ಲಿ ಇಂಡಿ ಪಟ್ಟಣಕ್ಕೆ 24*7 ಕುಡಿಯುವ ನೀರು ಪೊರೈಸುವ ಜಾಕ್‌ವೆಲ್ ನಿಮಿ೯ಸಲಾಗಿದೆ. ಎರಡ್ಮೂರು ವಾರ ಆಗುವಷ್ಟು ನದಿಯಲ್ಲಿ ನೀರಿದೆ ಎಂದು ಹೇಳಲಾಗುತ್ತಿದೆ. ಆದರೆ 15 ದಿನಗಳೊಳಗೆ ಭೀಮಾನದಿಗೆ ನೀರು ಹರಿಸದಿದ್ದರೆ ಇಂಡಿ ಪಟ್ಟಣಕ್ಕೂ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಭೀಮಾನದಿಯಲ್ಲಿ ಅಲ್ಲಲ್ಲಿ ನಿಂತ ಅಲ್ಪಸ್ವಲ್ಪ ನೀರಿಗೆ ಮಹಾರಾಷ್ಟ್ರದ ರೈತರು ಪಂಪ್‌ಸೆಟ್‌ಗಳನ್ನ ಅಳವಡಿಸಿ ಕೃಷಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಗಡಿಭಾಗದ ಗ್ರಾಮಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ನದಿ ದಂಡೆ ಮೇಲಿರುವ ಗ್ರಾಮಗಳು ನೀರಿನ ಅಭಾವ ಎದುರಿಸುತ್ತಿದ್ದು, ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಸದ್ಯ ಅಂತರ್ಜಲ ಮಟ್ಟ ಕುಸಿದಿದೆ. ಕೆರೆ, ಬಾವಿ, ಹಳ್ಳಗಳು ಬತ್ತಿ ಹೋಗಿವೆ. ಟ್ಯಾಂಕರ್ ಮೂಲಕ ನೀರು ಪೊರೈಸದೆ ಬೇರೆ ಮಾರ್ಗವೇ ಇಲ್ಲ ಎನ್ನುವಂತಾಗಿದೆ. ಈಗಾಗಲೆ ತಾಲೂಕಾಡಳಿತ 31 ಗ್ರಾಮಗಳಿಗೆ 74 ಟ್ಯಾಂಕರ್‌ ಮೂಲಕ ಪ್ರತಿ ನಿತ್ಯ 175 ಟ್ರಿಪ್ ಕುಡಿಯುವ ನೀರು ಪೊರೈಕೆ ಮಾಡುತ್ತಿದ್ದು, ಮತ್ತೆ 13 ಗ್ರಾಮಗಳಿಗೆ 30 ಟ್ಯಾಂಕರ್‌ ಮೂಲಕ ಪ್ರತಿ ನಿತ್ಯ 73 ಟ್ರಿಪ್ ನೀರಿನ ಬೇಡಿಕೆ ಇದೆ. ಒಟ್ಟು ತಾಲೂಕಿನ 84 ಗ್ರಾಮಗಳ ಪೈಕಿ 44 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ.

ವರ್ಷ ಗ್ರಾಮ ಟ್ಯಾಂಕರ್‌ ನಿತ್ಯ ಟ್ರಿಪ್

2015-16 94 471 1261
2016-17 144 570 1460
2017-18 75 347 963
2019-19 48 285 814
2019-20 48 285 814
2020-21 12 41 103
2023-24 31 74 175

ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳುವ ಕುರಿತು ತಾಲೂಕಾಡಳಿತಕ್ಕೆ ಸೂಚಿಸಲಾಗಿದೆ. ಬೇಡಿಕೆ ಬಂದಷ್ಟು ಟ್ಯಾಂಕರ್‌ ಮಂಜೂರು ಮಾಡಲು ಸೂಚಿಸಿದ್ದೇನೆ. ಈಗಾಗಲೆ ಕೆಲವು ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ. 

ಬೆಂಗಳೂರು ನಿವಾಸಿಗಳೇ ನೀರಿಗಾಗಿ ಮಾಸಿಕ 6,000 ರೂ. ಭರಿಸಲು ಸಿದ್ಧರಾಗಿ; ಇಲ್ಲವೆಂದರೆ ನೀರು ಸಿಗೊಲ್ಲ!

ಇಂಡಿ ಉಪ ವಿಭಾಗದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇಂಡಿಗೆ ನೀರು ಪೊರೈಸುವ ಧೂಳಖೇಡ ಬಳಿಯ ಭೀಮಾನದಿಯಲ್ಲಿ ಇನ್ನು 10 ದಿನಗಳಿಗೆ ಆಗುವಷ್ಟು ನೀರಿದೆ. ಮೂರ್ನಾಲ್ಕು ದಿನಗಳಲ್ಲಿ ಭೀಮಾನದಿಗೆ ನೀರು ಬಿಡುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿದೆ. ಭೀಮಾನದಿಗೆ ನೀರು ಬರಲಿದೆ, ನೀರು ಬಂದರೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಇಂಡಿ ಉಪವಿಭಾಗದ ಎಸಿ ಅಬೀದ್‌ ಗದ್ಯಾಳ ಹೇಳಿದ್ದಾರೆ.

ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಕ್ಕಿಂತ ಮುಂಚೆಯೇ ಸಮಸ್ಯೆ ಉಂಟಾಗುವ ಗ್ರಾಮಗಳ ಪಟ್ಟಿ ಸಿದ್ದಪಡಿಸಿಕೊಂಡು ನೀರಿನ ಮೂಲ ಹುಡುಕಿ ನೀರು ಒದಗಿಸಲು ಗ್ರಾಪಂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಗ್ರಾಮದಲ್ಲಿ ನೀರಿನ ಲಭ್ಯತೆ ಇಲ್ಲದಿದ್ದರೆ ತಾಲೂಕಾಡಳಿತಕ್ಕೆ ಟ್ಯಾಂಕರ್‌ ಬೇಡಿಕೆ ಸಲ್ಲಿಸಲು ಸೂಚಿಸಲಾಗಿದೆ ಎಂದು ಇಂಡಿ ತಾಪಂ ಪ್ರಭಾರ ಇಒ ಸಂಜಯ ಖಡಗೇಕರ ತಿಳಿಸಿದ್ದಾರೆ. 

Follow Us:
Download App:
  • android
  • ios