ಭ್ರೂಣ ಹತ್ಯೆ ಮಧ್ಯೆ ಲಿಂಗಾನುಪಾತ ತೀವ್ರ ಕುಸಿತ: 1000 ಗಂಡು ಮಕ್ಕಳಿಗೆ 945 ಹೆಣ್ಣು ಮಗು ಜನನ
ಕಳೆದ ವರ್ಷ ಲಿಂಗಾನುಪಾತ 967 ದಾಖಲಾಗಿತ್ತು. ಅಂದರೆ 1000 ಗಂಡು ಮಕ್ಕಳಿಗೆ 967 ಹೆಣ್ಣು ಮಕ್ಕಳ ಜನನವಾಗಿದೆ. ಆದರೆ ಈ ವರ್ಷ ಅಕ್ಟೋಬರ್ ಅಂತ್ಯದವರೆಗೆ 5602-ಗಂಡು, 5292-ಹೆಣ್ಣು ಮಕ್ಕಳ ಜನನವಾಗಿದ್ದು, ಲಿಂಗಾನುಪಾತ 945 ದಾಖಲಾಗಿರುವುದು ಆತಂಕಕ್ಕೆ ಕಾರಣಾಗಿದೆ.
ಚಿತ್ರದುರ್ಗ(ಡಿ.07): ವೀರವನಿತೆ ಓಬವ್ವಳ ನಾಡಲ್ಲಿ ಮಹಿಳೆಯರ ಸಂಖ್ಯೆ ಕುಸಿಯುತ್ತಿದೆಯೇ ? ಲಿಂಗಾನುಪಾತ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿರವುದು ಇಂತಹದ್ದೊಂದು ಆತಂಕ ಮೂಡಲು ಕಾರಣವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಿಂಗಾನುಪಾತದಲ್ಲಿ ಅಗಾಧ ಪ್ರಮಾಣದ ವ್ಯತ್ಯಾಸ ಕಂಡು ಬಂದಿದೆ. ಕಳೆದ ವರ್ಷ ಲಿಂಗಾನುಪಾತ 967 ದಾಖಲಾಗಿತ್ತು. ಅಂದರೆ 1000 ಗಂಡು ಮಕ್ಕಳಿಗೆ 967 ಹೆಣ್ಣು ಮಕ್ಕಳ ಜನನವಾಗಿದೆ. ಆದರೆ ಈ ವರ್ಷ ಅಕ್ಟೋಬರ್ ಅಂತ್ಯದವರೆಗೆ 5602-ಗಂಡು, 5292-ಹೆಣ್ಣು ಮಕ್ಕಳ ಜನನವಾಗಿದ್ದು, ಲಿಂಗಾನುಪಾತ 945 ದಾಖಲಾಗಿರುವುದು ಆತಂಕಕ್ಕೆ ಕಾರಣಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಬುಧವಾರ ನಡೆದ ಪಿಸಿ ಮತ್ತು ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ ಡಿಎಚ್‍ಒ ಡಾ.ಜಿ.ಪಿ.ರೇಣುಪ್ರಸಾದ್ ಲಿಂಗಾನುಪಾತದ ಮಾಹಿತಿ ಬಹಿರಂಗಗೊಳಿಸಿದರು. ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಸಮಿತಿ ಸದಸ್ಯ ಡಾ.ಸತ್ಯನಾರಾಯಣ , ಪ್ರಸವಪೂರ್ವ ಲಿಂಗಪತ್ತೆ ಶಿಕ್ಷಾರ್ಹ ಅಪರಾಧವಾಗಿದೆ, ಸ್ಕ್ಯಾನಿಂಗ್ ಸೆಂಟರ್ಗಳಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ ಎಂದರು.
ಹೆಣ್ಣು ಭ್ರೂಣ ಹತ್ಯೆ ಪ್ರಕರಣದ ಆರೋಪಿ ಡಾ.ಸತೀಶ್ ಸಾವಿನಿಂದ ತನಿಖೆಗೆ ಹಿನ್ನಡೆ?
ಪಿಸಿ ಅಂಡ್ ಪಿಎನ್.ಡಿಟಿ. ಕಾಯ್ದೆ (ಗರ್ಭ ಪೂರ್ವ ಮತ್ತು ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ತಡೆ ಕಾಯ್ದೆ) ಅನ್ವಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಸ್ಕ್ಯಾನಿಂಗ್ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಜಿಲ್ಲೆಯಲ್ಲಿನ ಎರಡು ಸ್ಕ್ಯಾನಿಂಗ್ ಸೆಂಟರ್ ಗಳಿಗೆ ಮಾತ್ರ ಸೇವೆ ನೀಡಲು ಅವಕಾಶವಿದೆ. ವೈದ್ಯರು ಭೇಟಿ ನೀಡುವ ಸ್ಕ್ಯಾನಿಂಗ್ ಸೆಂಟರ್ ಹಾಗೂ ಭೇಟಿ ಸಮಯವನ್ನು ಕಡ್ಡಾಯವಾಗಿ ಎಂಪ್ಯಾನಲ್ ಮಾಡಿಸಬೇಕು ಎಂದು ಈಗಾಗಲೆ ಇಲಾಖೆಯು ಸುತ್ತೋಲೆ ಮೂಲಕ ಸ್ಪಷ್ಟನೆ ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ ರೇಣುಪ್ರಸಾದ್ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿವೆ 72 ಸ್ಕ್ಯಾನಿಂಗ್ ಸೆಂಟರ್:
ಜಿಲ್ಲೆಯಲ್ಲಿ 12 ಸರ್ಕಾರಿ ಹಾಗೂ 60 ಖಾಸಗಿ ಸೇರಿದಂತೆ ಒಟ್ಟು 72 ಸ್ಕ್ಯಾನಿಂಗ್ ಸೆಂಟರ್ ಗಳಿವೆ. ಕಾಯ್ದೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಯಾವ ರೀತಿ ಇರಬೇಕು, ಯಾವ ದಾಖಲೆಗಳು ನಿರ್ವಹಣೆ ಮಾಡಬೇಕು ಇತ್ಯಾದಿ ಅಂಶಗಳನ್ನು ಭೇಟಿ ವೇಳೆ ಪರಿಶೀಲಿಸಿ, ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕ್ರಮವಹಿಸಲಾಗುವುದು ಎಂದು ಡಿಎಚ್‍ಒ ಡಾ. ರೇಣುಪ್ರಸಾದ್ ಹೇಳಿದರು. ಪಿಸಿಪಿ ಅಂಡ್ ಡಿಟಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಗೊಳಿಸಲು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮಾಹಿತಿ ಶಿಕ್ಷಣ ಸಂವಹನ (ಐಇಸಿ) ಚಟುವಟಿಕೆಗಾಗಿ ಹೋರ್ಡಿಂಗ್ಸ್ ಮತ್ತು ಪೋಸ್ಟರ್ ಗಳನ್ನು ಮಾಡಿಸಲು ಸಭೆಯು ಅನುಮತಿ ನೀಡಿತು.
ಆಘಾತಕಾರಿ ಮಾಹಿತಿ: ಹತ್ಯೆಗೈದ ಭ್ರೂಣ ಕಾವೇರಿ ನದಿಗೆಸೆಯುತ್ತಿದ್ದ ದುರುಳರು..!
ಸ್ಕ್ಯಾನಿಂಗ್ ಕೇಂದ್ರಗಳ ಭೇಟಿ ನೀಡದ್ದಕ್ಕೆ ಅಸಮಾಧಾನ
ಕಾಯ್ದೆ ಅನ್ವಯ ಜಿಲ್ಲಾ ಪರಿಶೀಲನಾ ಮತ್ತು ತಪಾಸಣಾ ಸಮಿತಿಯು ಕನಿಷ್ಠ 3 ತಿಂಗಳಿಗೊಮ್ಮೆಯಾದರೂ ಸ್ಕ್ಯಾನಿಂಗ್ ಸೆಂಟರ್ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು, ಈ ಕ್ರಮ ಜಿಲ್ಲೆಯಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲವೆಂದು ಸಮಿತಿ ಸದಸ್ಯ ಡಾ.ಸತ್ಯನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಮ್ಮತಿ ವ್ಯಕ್ತಪಡಿಸಿದ ಡಿಎಚ್‍ಒ ಡಾ.ರೇಣುಪ್ರಸಾದ್ , ಶೀಘ್ರದಲ್ಲಿಯೇ ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್ಗಳಿಗೆ ದಿಢೀರ್ ಭೇಟಿ ನೀಡಿ, ಅಲ್ಲಿನ ಕಾರ್ಯವೈಖರಿ, ದಾಖಲೆಗಳ ನಿರ್ವಹಣೆ, ಬಾಲಿಕಾ ತಂತ್ರಾಂಶ ನಮೂದು, ಕಾಯ್ದೆಯ ಸಂಪೂರ್ಣ ನಿರ್ದೇಶನಗಳ ಪಾಲನೆ ಕುರಿತಂತೆ ಪರಿಶೀಲಿಸುವುದು ಎಂದರು. ಇದಕ್ಕೆ ಸಲಹಾ ಸಮಿತಿಯ ಅಧ್ಯಕ್ಷೆ ಡಾ.ಸೌಮ್ಯ, ಕಾನೂನು ಸಲಹೆಗಾರ ಉಮೇಶ್ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು ದನಿಗೂಡಿಸಿದರು.
ಮೊಳಕಾಲ್ಮುರಲ್ಲಿ ಹೆಣ್ಣುಮಕ್ಕಳು ಜನನ ಪ್ರಮಾಣ ಹೆಚ್ಚು
ಲಿಂಗಾನುಪಾತದ ವಿಷಯದಲ್ಲಿ ಮೊಳಕಾಲ್ಮುರು ತಾಲೂಕು ಮಾತ್ರ ಸಂತಸದ ಸಂಗತಿ ರವಾನಿಸಿದೆ. ಇಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಜನನ ಹೆಚ್ಚಿದೆ. ಲಿಂಗಾನುಪಾತ 1,100 ದಾಖಲಾಗಿದೆ. ಚಳ್ಳಕೆರೆ-989, ಚಿತ್ರದುರ್ಗ-968, ಹೊಳಲ್ಕೆರೆ-921 ದಾಖಲಾಗಿದ್ದರೆ, ಹೊಸದುರ್ಗ ತಾಲೂಕಿನಲ್ಲಿ ಅತ್ಯಂತ ಕನಿಷ್ಠ 866 ಲಿಂಗಾನುಪಾತ ದಾಖಲಾಗಿದೆ. ಇಲ್ಲಿ 411 ಗಂಡುಮಕ್ಕಳು, 356 ಹೆಣ್ಣು ಮಕ್ಕಳ ಜನನವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಲಿಂಗಾನುಪಾತ ವ್ಯತ್ಯಾಸ ಹೆಚ್ಚಾಗಿದೆ.