ಶಿವಮೊಗ್ಗ(ಆ.24): ಜಿಲ್ಲೆಯಲ್ಲಿ ಅದಾಂಜು 92,181 ಹೆಕ್ಟೇರುಗಳಲ್ಲಿ ಅಡಕೆಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ. ಪ್ರಸಕ್ತ ಮಾಹೆಯಲ್ಲಿ ಜಿಲ್ಲೆಯಾದ್ಯಂತ ಸತತವಾಗಿ ಮಳೆಯಾಗಿರುವ ಕಾರಣ ರೈತರ ತಾಕುಗಳು ತೀವ್ರವಾಗಿ ಕೊಳೆರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ.

ಈ ಕೊಳೆರೋಗವು ಪೈಟೊಪ್ತೆರಾ ಎಂಬ ಶಿಲೀಂದ್ರದಿಂದ ಉಂಟಾಗುತ್ತದೆ. ರೈತರು ಮುಂಜಾಗ್ರತಾ ಕ್ರಮವಾಗಿ ಬೋರ್ಡೋ ಸಿಂಪರಣೆಯನ್ನು ಕೈಗೊಂಡಿದ್ದರೂ ಕೂಡ ಸತತವಾಗಿ ಸುರಿದ ಮಳೆಯಿಂದಾಗಿ ಸಿಂಪರಣೆ ಮಾಡಿದ ಔಷಧವು ಮಳೆನೀರಿನಿಂದ ಸಂಪೂರ್ಣವಾಗಿ ತೊಳೆದುಹೊಗಿರುವ ಸಂಭವವಿರುತ್ತದೆ.

ಶಿವಮೊಗ್ಗ: 'ಸಚಿವ ಸ್ಥಾನ ನೀಡದಿರುವುದು ತೀವ್ರ ನೋವಾಗಿದೆ'

ಮಳೆ ಬರುವ ಸಮಯದಲ್ಲಿ ವಾತಾವರಣದಲ್ಲಿ ಉಷ್ಣಾಂಶ ಕಡಿಮೆಯಿದ್ದು, ಆದ್ರ್ರತೆ ಹೆಚ್ಚಿದ್ದ ಕಾರಣ ರೋಗದ ಬೆಳವಣಿಗೆಗೆ ಸೂಕ್ತ ವಾತಾವರಣ ನಿರ್ಮಾಣವಾಗಿರುತ್ತದೆ ಹಾಗೂ ಮಳೆಯಿಂದ ತೋಟಗಳು ಜಲಾವೃತವಾಗಿದ್ದ ಕಾರಣ ರೋಗದ ಹರಡುವಿಕೆ ತೀವ್ರತೆ ಹೆಚ್ಚಿರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಅಡಕೆ ತೋಟಗಳಲ್ಲಿ ಕೊಳೆರೋಗ ಕಂಡುಬಂದಿರುವ ಬಗ್ಗೆ ವರದಿಯಾಗಿರುತ್ತದೆ. ಆದ್ದರಿಂದ ಅಡಕೆ ಬೆಳೆಯ ಸಂರಕ್ಷಣೆಗೆ ರೈತರು, ರೋಗದ ಸಮಗ್ರ ನಿಯಂತ್ರಣಕ್ಕೆ, ಕೆಲವು ನಿರ್ವಹಣಾ ಕ್ರಮಗಳನ್ನು ತಪ್ಪದೇ ಅನುಸರಿಸಲು ತೋಟಗಾರಿಕೆ ಇಲಾಖೆ ತಿಳಿಸಿದೆ.

ಕೊಳೆರೋಗದ ಲಕ್ಷಣಗಳು:

ಕಾಯಿಗಳ ಮೇಲೆ ಕಂದು ಬಣ್ಣದ ಶಿಲೀಂದ್ರದ ಬೆಳವಣಿಗೆ ಕಂಡು ಬರುತ್ತದೆ. ನಂತರ ಬಿಳಿ ಶಿಲೀಂದ್ರದ ಬೆಳವಣಿಗೆ ಕಂಡು ಬಂದು, ಕಾಯಿಗಳು ಕೊಳೆಯಲು ಪ್ರಾರಂಭಿಸಿ ಉದುರುತ್ತವೆ. ಗೊಂಚಲುಗಳೆಲ್ಲಾ ಕಪ್ಪಾಗಿ ಕಾಣುತ್ತವೆ. ಗಿಡದ ಬೆಳವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಹೆಚ್ಚಿನ ಹಾನಿ ಕಂಡುಬರುತ್ತದೆ. ಜೂನ್‌ ತಿಂಗಳಿನಿಂದ ಸೆಪ್ಟೆಂಬರ್‌ನವರೆಗೆ ರೋಗದ ತೀವ್ರತೆ ಹೆಚ್ಚಿರುತ್ತದೆ.

ನಿರ್ವಹಣಾ ಕ್ರಮಗಳು:

1) ತೋಟದಲ್ಲಿ ಬಸಿಗಾಲುವೆಗಳ ನಿರ್ಮಾಣಮಾಡಬೇಕು ಹಾಗೂ ಬಸಿಗಾಲುವೆಗಳು ಆಳ ಮತ್ತು ಅಗಲವಾಗಿರಬೇಕು. ಯಾವುದೇ ಕಾರಣಕ್ಕೂ ತೋಟದಲ್ಲಿ ನೀರು ನಿಲ್ಲದಂತೆ ಗಮನವಹಿಸಬೇಕು.

2) ತೋಟದಲ್ಲಿ ಬಿದ್ದಂತಹ ರೋಗಭಾದಿತ ಅಡಿಕೆಕಾಯಿಗಳನ್ನು ತೋಟದಿಂದ ಹೊರಗೆ ನಾಶಪಡಿಸಬೇಕು.

3) ಕೊಳೆರೋಗವನ್ನು ತಡೆಗಟ್ಟಲು ಶೇ. 1ರ ಬೋರ್ಡೋದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್‌ ಅಥವಾ 2 ಗ್ರಾಂ ಮೆಟಲಾಕ್ಸಿಲ್‌ + ಮ್ಯಾಂಕೋಜೆಬ್‌ 75 WP2 ಗ್ರಾಂ ಒಂದು ಲೀಟರ್‌ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.

4) ರೋಗಪೀಡಿತ ಎಲೆಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ ಆ ಭಾಗಕ್ಕೆ ಶೇ. 1 ರ ಬೋರ್ಡೋದ್ರಾವಣವನ್ನು ಅಥವಾ 2 ಗ್ರಾಂ ಮೆಟಲಾಕ್ಸಿಲ್‌ + ಮ್ಯಾಂಕೋಜೆಬ್‌ 75WP2 ಗ್ರಾಂ ಒಂದು ಲೀಟರ್‌ ನೀರಿನಲ್ಲಿ ಕರಗಿಸಿ ಸುಳಿ ಭಾಗಕ್ಕೆ ಹಾಕಬೇಕು.

5) ಕಾಯಿಗೊಂಚಲುಗಳನ್ನು ಪ್ಲಾಸ್ಟಿಕ್‌ ಹಾಳೆಯಿಂದ ಮುಚ್ಚುವುದರಿಂದ ಕೊಳೆರೋಗವನ್ನು ನಿಯಂತ್ರಿಸಬಹುದು.

ಶಿವಮೊಗ್ಗ: ಬಿಟ್ಟು ಹೋಗಿದ್ದ ಮಗು ಹುಡುಕಿ ಬಂದ ತಾಯಿ..!