Asianet Suvarna News Asianet Suvarna News

ಮೆಟ್ರೋ ನಿಲ್ದಾಣದಲ್ಲಿ ‘ಸ್ಕ್ರೀನ್‌ ಡೋರ್‌’ಗೆ ಹೆಚ್ಚಿದ ಒತ್ತಡ, ಹಾಗಂದ್ರೇನು?

ಕೆಲ ಘಟನೆಗಳ ಹಿನ್ನೆಲೆ ‘ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಅಂಚಿಗೆ ಸ್ವಯಂಚಾಲಿತ ತೆರೆದುಕೊಳ್ಳುವ ಬಾಗಿಲು ‘ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌’ (ಪಿಎಸ್‌ಡಿ) ಅಳವಡಿಸಬೇಕು ಎಂಬ ಆಗ್ರಹ ಪುನಃ ಮುನ್ನೆಲೆಗೆ ಬಂದಿದೆ.

Demands  Platform screen doors at Bengaluru Namma metro stations gow
Author
First Published Jan 7, 2024, 2:09 PM IST

ಬೆಂಗಳೂರು (ಜ.7): ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಯತ್ನ ಹಾಗೂ ರೈಲು ಮಾರ್ಗಗಳಲ್ಲಿ ಇಳಿಯುವ ಪ್ರಕರಣಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ‘ನಮ್ಮ ಮೆಟ್ರೋದ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಅಂಚಿಗೆ ಸ್ವಯಂಚಾಲಿತ ತೆರೆದುಕೊಳ್ಳುವ ಬಾಗಿಲು ‘ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌’ (ಪಿಎಸ್‌ಡಿ) ಅಳವಡಿಸಬೇಕು ಎಂಬ ಆಗ್ರಹ ಪುನಃ ಮುನ್ನೆಲೆಗೆ ಬಂದಿದೆ.

ರೈಲ್ವೆ ಟ್ರ್ಯಾಕ್‌ ಹಾಗೂ ನಿಲ್ದಾಣದ ನಡುವೆ ‘ಪಿಎಸ್‌ಡಿ’ ಕಾಂಪೌಂಡ್‌ನಂತಿರಲಿದ್ದು, ಮೆಟ್ರೋ ನಿಲ್ದಾಣಕ್ಕೆ ರೈಲು ಬಂದಾಗ ಪ್ರವೇಶ ದ್ವಾರದ ಬಳಿ ಬಾಗಿಲು ತೆರೆದುಕೊಳ್ಳಲಿವೆ. ಇಂತಹ ವ್ಯವಸ್ಥೆ ಅಳವಡಿಸಿದರೆ ಅವಘಡಗಳನ್ನು ತಪ್ಪಿಸಬಹುದಾಗಿದೆ. ಆದರೆ, ಈವರೆಗೆ ಯಾವ ನಿಲ್ದಾಣಗಳಲ್ಲೂ ಪಿಎಸ್‌ಡಿ ಅಳವಡಿಕೆಯಾಗಿಲ್ಲ. ನಗರದಲ್ಲಿ ನೇರಳೆ, ಹಸಿರು ಮಾರ್ಗ ಸೇರಿ ಒಟ್ಟೂ 73.81 ಕಿಲೋ ಮೀಟರ್‌ ಉದ್ದಕ್ಕೆ ಮೆಟ್ರೋ ಸಂಚರಿಸುತ್ತಿದ್ದು, ಒಟ್ಟು 66 ನಿಲ್ದಾಣಗಳಿವೆ. ಪ್ರಸ್ತುತ ನಮ್ಮ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರಂ ಹಳದಿ ಗೆರೆ ದಾಟದಂತೆ ನೋಡಿಕೊಳ್ಳಲು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.

ಪೊಲೀಸರು ಎಲ್ಲಿ ಜಾಲಾಡಿದ್ರೂ ನಟಿ ಜಯಪ್ರದಾ ಪತ್ತೆಯಿಲ್ಲ, ಕಾನೂನಿಂದ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾದ್ರಾ!

ಆರಂಭದಲ್ಲೇ ಮೆಟ್ರೋದ ಎಲ್ಲ ನಿಲ್ದಾಣಗಳಲ್ಲೂ ಪಿಎಸ್‌ಡಿ ಅಳವಡಿಸಬೇಕಿತ್ತು. ಆತ್ಮಹತ್ಯೆ ಯತ್ನ ಘಟನೆಗಳು ಹಲವರಿಗೆ ಪ್ರೇರಣೆ ಎನಿಸುವ ಅಪಾಯವಿದೆ. ಹೀಗಾಗಿ ತಕ್ಷಣ ಬಿಎಂಆರ್‌ಸಿಎಲ್‌ ಕ್ರಮ ವಹಿಸಬೇಕು. ಈಗ ಕೆಲವೊಮ್ಮೆ ಮೆಟ್ರೋ ರೈಲುಗಳು ಪ್ರಯಾಣಿಕರು ಪ್ರವೇಶಿಸಬೇಕಾದ ಹಳದಿ ಗೆರೆ ದಾಟಿ ಮುಂದಕ್ಕೆ ಹೋಗಿ ನಿಲ್ಲುತ್ತಾರೆ. ಆದರೆ, ಪಿಎಸ್‌ಡಿ ಅಳವಡಿಸಿದ ಬಳಿಕ ನಿಗದಿತ ಸ್ಥಳದಲ್ಲೇ ರೈಲು ನಿಲ್ಲಿಸಬೇಕಾಗುತ್ತದೆ. ಹಾಗಾಗಿ ಬಿಎಂಆರ್‌ಸಿಎಲ್‌ ಪಿಎಸ್‌ಡಿ ಅಳವಡಿಸಲು ಸಾರಿಗೆ ತಜ್ಞರು ಒತ್ತಾಯಿಸಿದ್ದಾರೆ.

ದೆಹಲಿ, ಚೆನ್ನೈನ ಹಲವು ಮೆಟ್ರೋ ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಸಲಾಗಿದೆ. ಇಡೀ ರಾಜ್ಯದಲ್ಲಿ ಹುಬ್ಬಳ್ಳಿ-ಧಾರವಾಡ ನಡುವಿನ ಚಿಗರಿ ಮಾರ್ಗ (ಎಚ್‌ಡಿಬಿಆರ್‌ಟಿಎಸ್‌) ಮಾರ್ಗದ ನಿಲ್ದಾಣದಲ್ಲಿ ಮಾತ್ರ ಪಿಎಸ್‌ಡಿ ಅಳವಡಿಕೆಯಾಗಿದೆ. ಆದರೆ, ಪ್ರತಿನಿತ್ಯ ಸರಾಸರಿ 7 ಲಕ್ಷ ಜನ ಸಂಚರಿಸುವ ನಿಲ್ದಾಣಗಳಲ್ಲಿ ಈ ಭದ್ರತೆ ಇಲ್ಲ. ಮೆಜೆಸ್ಟಿಕ್‌ನಲ್ಲಿ ಪ್ರತಿನಿತ್ಯ ಸರಾಸರಿ 45 ಸಾವಿರ, ಇಂದಿರಾನಗರದಲ್ಲಿ 29 ಸಾವಿರ, ಎಂಜಿ ರಸ್ತೆಯ ನಿಲ್ದಾಣದಲ್ಲಿ 23 ಸಾವಿರ, ವಿಜಯನಗರ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣವನ್ನು ಸರಾಸರಿ 22 ಸಾವಿರ ಪ್ರಯಾಣಿಕರು ಬಳಸುತ್ತಾರೆ. ಹೀಗಾಗಿ ತಕ್ಷಣ ಆದ್ಯತೆ ಮೇರೆಗೆ ಇಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಡತನಕ್ಕೆ ದೂಡಿದ ಅಪ್ಪನ ಸಾವು, ಹಿಂದೂ ಧರ್ಮ ತೊರೆದು ಮುಸ್ಲಿಂ ಆದ ಸ್ಟಾರ್‌ , ಈಗ 1748 ಕೋಟಿ ರೂ ಆಸ್ತಿ ಒಡೆಯ!

ಹೆಚ್ಚಾದ ಹಳಿಗೆ ಇಳಿಯುವ ಪ್ರಕರಣ: ಈ ಹಿಂದೆ ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಬಾಲಕನೊಬ್ಬ ಹಳಿಗೆ ಬಿದ್ದಿದ್ದರೆ, ಮೂರ್ನಾಲ್ಕು ವರ್ಷಗಳ ಹಿಂದೆ ನ್ಯಾಷನಲ್‌ ಕಾಲೇಜ್‌ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಆದರೆ, ಕಳೆದ ಒಂದೇ ವಾರದಲ್ಲಿ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಪ್ರಯಾಣಿಕರು ಮೆಟ್ರೋ ಹಳಿಗೆ ಇಳಿದ ಮೂರು ಘಟನೆಗಳು ನಡೆದಿವೆ. ಇಬ್ಬರು ಟ್ರ್ಯಾಕ್‌ಗೆ ಬಿದ್ದ ಮೊಬೈಲ್‌ ಎತ್ತಿಕೊಳ್ಳಲು ಇಳಿದರೆ, ಶುಕ್ರವಾರ ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಮುಂದಿನ ಮಾರ್ಗಗಳಲ್ಲಿ ಪಿಎಸ್‌ಡಿ: ಮುಂದಿನ ಏರ್‌ಪೋರ್ಟ್‌ ಮಾರ್ಗ (ನೀಲಿ) 2, 2ಎ, 2ಬಿ ಹಾಗೂ ಗೊಟ್ಟಿಗೆರೆ-ನಾಗವಾರ (ಗುಲಾಬಿ) ಮಾರ್ಗದ 12 ಸುರಂಗ ಮೆಟ್ರೋ ನಿಲ್ದಾಣದಲ್ಲಿ ಪಿಎಸ್‌ಡಿ ವ್ಯವಸ್ಥೆ ಜಾರಿಗೆ ಬಿಎಂಆರ್‌ಸಿಎಲ್ ಕಳೆದ ವರ್ಷ ಟೆಂಡರ್‌ ಕರೆದಿದೆ. 2025-2026ಕ್ಕೆ ಈ ಮಾರ್ಗದಲ್ಲಿ ಮೆಟ್ರೋ ರೈಲಿನ ಸಂಚಾರ ನಿರೀಕ್ಷೆ ಮಾಡಲಾಗಿದೆ. ಇದಕ್ಕಾಗಿ ಸುಮಾರು ₹10 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಅಲ್ಲದೆ, ಇನ್ಫೋಸಿಸ್‌ ಸಹಯೋಗದಲ್ಲಿ ನಿರ್ಮಿಸಲಾಗುತ್ತಿರುವ ಎಲೆಕ್ಟ್ರಾನಿಕ್ ಸಿಟಿ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲೂ ಈ ಭದ್ರತಾ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತೆ ಯಾಕಿಲ್ಲ?

ಆರಂಭದಲ್ಲೇ ಮೆಟ್ರೋದ ಎಲ್ಲ ನಿಲ್ದಾಣಗಳಲ್ಲೂ ಪಿಎಸ್‌ಡಿ ಅಳವಡಿಸಬೇಕಿತ್ತು. ನೂರಾರು ಕೋಟಿ ವ್ಯಯಿಸಿ ನಿಲ್ದಾಣ ನಿರ್ಮಿಸುವಾಗ ಪ್ರಯಾಣಿಕರ ಭದ್ರತೆಗೆ ಯಾಕೆ ಕ್ರಮ ವಹಿಸಿಲ್ಲ? ಇನ್ನಾದರೂ ಎಲ್ಲೆಡೆ ಪಿಎಸ್‌ಡಿ ಅಳವಡಿಸಬೇಕು.

-ಸತ್ಯ ಅರಿಕುಂದರಾಮ್‌, ನಗರ ಸಾರಿಗೆ ತಜ್ಞ

ಎಲ್ಲ ನಿಲ್ದಾಣದಲ್ಲಿ ಪಿಎಸ್‌ಡಿ

ಎಲ್ಲ ನಿಲ್ದಾಣದಲ್ಲಿ ಪಿಎಸ್‌ಡಿ ಅಳವಡಿಕೆ ಬಗ್ಗೆ ಚಿಂತನೆ ಇದೆ. ಯಾವ ರೀತಿ ಅಳವಡಿಕೆ ಮಾಡಬೇಕು ಎಂಬುದು ಇನ್ನೂ ಅಂತಿಮ ಆಗಿಲ್ಲ.

-ಯಶವಂತ ಚೌಹಾಣ್‌. ಮೆಟ್ರೋ ಪಿಆರ್‌ಒ

Follow Us:
Download App:
  • android
  • ios