ಕೃಷಿ ಹೊಂಡಗಳ ಹೆಚ್ಚಳ: ಮೀನು ಮರಿಗಳಿಗೆ ಭಾರೀ ಬೇಡಿಕೆ

ಕೊಡಗಿನಲ್ಲಿ ಕೃಷಿಹೊಂಡಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮೀನುಮರಿಗಳಿಗೂ ಬೇಡಿಕೆ ಹೆಚ್ಚಿದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೃಷಿ ಹೊಂಡಗಳು ನಿರ್ಮಾಣವಾಗಿದೆ. ಜಿಲ್ಲೆಯ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

demand for fishes increased as number of farm pond rises in Kodagu

ಮಡಿಕೇರಿ(ಸೆ.11): ಜಿಲ್ಲೆಯಲ್ಲಿ ಕೃಷಿ ಹೊಂಡಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಮೀನು ಮರಿಗಳಿಗೆ ಕೃಷಿಕರಿಂದ ಭಾರೀ ಬೇಡಿಕೆ ಕಂಡುಬಂದಿದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೃಷಿ ಹೊಂಡಗಳು ನಿರ್ಮಾಣವಾಗಿದ್ದು, ಮೀನು ಕೃಷಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಕೃಷಿಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಮಡಿಕೇರಿ ತಾಲೂಕಿನಲ್ಲಿ ಮೀನು ಮರಿಗಳಿಗೆ ಅತಿ ಹೆಚ್ಚು ಬೇಡಿಕೆ ಕಂಡು ಬಂದಿದ್ದು, ಕೃಷಿಕರು ಮೀನುಗಾರಿಕೆ ಇಲಾಖೆಯಲ್ಲಿ ಮುಗಿಬಿದ್ದು ಮರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

ಈ ಬಾರಿ ಹೆಚ್ಚು ಮೀನುಗಳ ಖರೀದಿ:

ಈ ಹಿಂದಿನ ವರ್ಷಕ್ಕಿಂತ ಈ ಬಾರಿ ಅತಿ ಹೆಚ್ಚು ಮೀನು ಮರಿಗಳನ್ನು ಕೃಷಿಕರು ಖರೀದಿಸಿದ್ದಾರೆ. ಇಲ್ಲಿಯ ವರೆಗೆ ಪ್ರತಿ ಬಾರಿ ನಾಲ್ಕು ಲಕ್ಷ ಮರಿಗಳನ್ನು ವಿತರಿಸಲಾಗುತ್ತಿತ್ತು. ಈ ವರ್ಷ ಈಗಾಗಲೇ 7 ಲಕ್ಷ ಮರಿಗಳನ್ನು ವಿತರಣೆ ಮಾಡಲಾಗಿದ್ದು, ಕೃಷಿಕರು ಮೀನು ಮರಿಗಳಿಗೆ ಇನ್ನೂ ಬೇಡಿಕೆ ಇಡುತ್ತಿದ್ದಾರೆ. ಕೃಷಿ ಹೊಂಡಗಳು ಹೆಚ್ಚಾಗಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೀನುಕೃಷಿಯಲ್ಲಿ ಹೆಚ್ಚಿನ ಆಸಕ್ತಿ:

ಅಸ್ಸಾಂ, ಮಿಜೋರಾಂ, ಮಣಿಪುರ ಭಾಗಗಳಲ್ಲಿ ಮೀನು ಸಾಕಾಣಿಕೆ ಮಾಡುವಂತೆ ಕೊಡಗಿನಲ್ಲೂ ಮಾಡಲಾಗುತ್ತಿದೆ. ಸಣ್ಣ ಸಣ್ಣ ಕೆರೆಗಳಲ್ಲಿ ಮೀನು ಸಾಕಣಿಕೆಯಲ್ಲಿ ಇಲ್ಲಿನ ಕೃಷಿಕರು ತೊಡಗಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಸಾವಿವಾರು ಮಂದಿ ಕೃಷಿಕರು ಮೀನು ಕೃಷಿ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 2,500ಕ್ಕೂ ಕೆರೆಗಳಿವೆ. ಕೃಷಿ ಹೊಂಡಗಳಲ್ಲಿ ಮೀನು ಕೃಷಿ ಮಾಡುವ ಮೂಲಕ ಜಿಲ್ಲೆಯ ಕೃಷಿಕರು ಆದಾಯ ಗಳಿಸುವಲ್ಲಿ ಮುಂದಾಗುತ್ತಿದ್ದಾರೆ.

ಮೀನುಗಾರಿಕೆ ಇಲಾಖೆಯಿಂದ ಕಾಟ್ಲಾ, ರೋಹು, ಮ್ರಿಗಲ್‌, ಸಾಮಾನ್ಯ ಗೆಂಡೆ, ಹುಲ್ಲು ಗೆಂಡೆ ತಳಿಯ ಮೀನು ಮರಿಗಳನ್ನು ವಿತರಣೆ ಮಾಡಲಾಗುತ್ತದೆ. ಈಗಾಗಲೇ ಅವಧಿ ​ಮುಗಿಯುತ್ತಾ ಬಂದಿರುವುದರಿಂದ ಕಾಟ್ಲಾ ತಳಿಯ ಮರಿಗಳು ಖಾಲಿಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ 3 ಲಕ್ಷ, ಹಾರಂಗಿ ಹಿನ್ನೀರಿನಲ್ಲಿ 15 ಲಕ್ಷ, ವಿರಾಜಪೇಟೆ ತಾಲೂಕಿನಲ್ಲಿ 6.5 ಲಕ್ಷ ಹಾಗೂ ಮಡಿಕೇರಿ ತಾಲೂಕಿನಲ್ಲಿ 7 ಲಕ್ಷ ಮೀನು ಮರಿಗಳನ್ನು ವಿತರಣೆ ಮಾಡಲಾಗಿದೆ.

ಮುಂದುವರಿದ ಮಳೆ: ಭಾಗಮಂಡಲದಲ್ಲಿ ಪ್ರವಾಹ

ವಿವಿಧ ತಳಿಯ ಒಂದು ಸಾವಿರ ಮೀನು ಮರಿಗಳಿಗೆ ಮೀನುಗಾರಿಕೆ ಇಲಾಖೆಯಲ್ಲಿ ರು. 258ರಿಂದ 400 ರು. ವರೆಗೆ ಬೆಲೆಯಿದೆ. ಹೆಚ್ಚು ಬೇಡಿಕೆ ಇರುವುದರಿಂದ ಮತ್ತಷ್ಟುಮೀನು ಮರಿಗಳನ್ನು ವಿತರಣೆ ಮಾಡಲಾಗುವುದು. ಬಿಸಿಲು ಬರುವವರೆಗೆ ಮರಿಗಳನ್ನು ವಿತರಣೆ ಮಾಡಲಾಗುವುದು ಎಂದು ಮೀನುಗಾರಿಕೆಯ ಉಪ ನಿರ್ದೇಶಕಿ ದರ್ಶನ್‌ ಹೇಳುತ್ತಾರೆ.

ಮೀನು ಕೃಷಿಕರು ಸಂಪರ್ಕಿಸಿ:

ಮೀನು ಮರಿಗಳನ್ನು ಕೊಂಡುಕೊಳ್ಳುವ ಮೀನು ಕೃಷಿಕರು ಆರಂಭದಲ್ಲಿ ಸೊಳ್ಳೆ ಪರದೆಯಲ್ಲಿ ಒಂದೆರಡು ತಿಂಗಳು ಮರಿಗಳನ್ನು ಪೋಷಣೆ ಮಾಡಬೇಕು. ಅದಕ್ಕೆ ಸಿಗುವ ಸೂಕ್ತ ಆಹಾರವನ್ನು ನೀಡಿ ನಂತರ ಕೆರೆಗೆ ಬಿಡುವುದು ಉತ್ತಮ. ಹೀಗೆ ಮಾಡುವ ಮೂಲಕ ಕಪ್ಪೆ, ಹಾವು, ಆಮೆ, ನೀರು ಕಾಗೆಗಳಿಂದ ಮರಿಗಳನ್ನು ರಕ್ಷಣೆ ಮಾಡಿಕೊಳ್ಳಬಹುದು. ಮೀನು ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಆಸಕ್ತ ಕೃಷಿಕರು ಕಗ್ಗೋಡ್ಲುವಿನ ಕೃಷಿ ಪಂಡಿರಾದ ತೇಜಸ್‌ ನಾಣಯ್ಯ (9448178174) ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

-ವಿಘ್ನೇಶ್ ಎಂ. ಭೂತನಕಾಡು

Latest Videos
Follow Us:
Download App:
  • android
  • ios