Asianet Suvarna News Asianet Suvarna News

Raichuru: ಕೆಟ್ಟುಹೋದ ಶುದ್ಧೀಕರಣ ಘಟಕ: ಕುಡಿಯಲು ಆರ್ಸೆನಿಕ್, ಫ್ಲೋರೈಡ್ ನೀರೇ ಗತಿ!

ಗ್ರಾಮೀಣ  ಪ್ರದೇಶಗಳಲ್ಲಿ ನಿರ್ಮಿಸಿದ್ದ ಶುದ್ಧ ನೀರಿನ ಘಟಕಗಳು ಹಾಳು
ನೀರು ಶುದ್ಧೀಕರಣ ಘಟಕ ಹಾಳಾದರೂ ಕೇರ್ ಮಾಡದ ಅಧಿಕಾರಿಗಳು!
ಪ್ರತಿ ಘಟಕಗಳನ್ನು ತಲಾ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

Defective water cleaning unit Arsenic and fluoride water for Raichuru rural people to drink sat
Author
First Published Jan 8, 2023, 10:33 PM IST

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್ 

ರಾಯಚೂರು (ಜ.08): ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ ಮತ್ತು ಕೃಷ್ಣ ಎರಡು ಬೃಹತ್ ನದಿಗಳು ಹರಿಯುತ್ತವೆ. ಸರ್ಕಾರ ತಲಾ 15 ಲಕ್ಷ ರೂ. ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದರೂ ಅವುಗಳನ್ನು ಗುತ್ತಿಗೆದಾರರು ನಿರ್ವಹಣೆ ಮಾಡದೇ ಪಾಳುಬಿದ್ದಿವೆ. ಇನ್ನು ಜಿಲ್ಲೆಯ ಬಹುತೇಕ ಗ್ರಾಮೀಣ ಜನರಿಗೆ ಆರ್ಸೆನಿಕ್ ಹಾಗೂ ಫ್ಲೋರೈಡ್ ನೀರೇ ಕುಡಿಯಲು ಗತಿ ಆಗಿದೆ.  

ಜಿಲ್ಲೆಯ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ‌ಮಾಡುವ ಉದ್ದೇಶದಿಂದ ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ನೀರು ಶುದ್ಧೀಕರಣ ಘಟಕಕ್ಕಾಗಿ ಸರ್ಕಾರ 15 ಲಕ್ಷ ರೂ. ವೆಚ್ಚ ಮಾಡಿದೆ. ಟೆಂಡರ್ ಪಡೆದ ಏಜೆನ್ಸಿ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ಮನಬಂದಂತೆ ಕುಡಿಯುವ ನೀರಿನ ಘಟಕಗಳು ನಿರ್ಮಾಣ ಮಾಡಿ ಕೈ ಬಿಟ್ಟಿದೆ. ಈಗ ಆ ಕುಡಿಯುವ ‌ನೀರಿನ ಘಟಕಗಳು ಇದ್ದು ಇಲ್ಲದಂತೆ ಆಗಿದೆ. ಹೀಗಾಗಿ ಗ್ರಾಮೀಣ ಪ್ರದೇಶದ ಜನರು ಗ್ರಾಮದಲ್ಲಿ ಸಿಗುವ ಆರ್ಸೆನಿಕ್ ಮತ್ತು ಫ್ಲೋರೈಡ್ ಕುಡಿದು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ರೋಗಗ್ರಸ್ತ ಕುಡಿಯುವ ‌ನೀರಿನ ಘಟಕ : ಶುದ್ಧ ಕುಡಿಯುವ ನೀರು ಪೂರೈಸಿ ಜನರನ್ನು ಕಾಯಿಲೆ ಮುಕ್ತಗೊಳಿಸುವ ಮಹಾ ಉದ್ದೇಶದಿಂದ, ಸರ್ಕಾರ ಶುದ್ಧ ಕುಡಿಯುವ ನೀರು ಘಟಕಗಳನ್ನು ಎಲ್ಲೆಡೆ ಆರಂಭಿಸಿದೆ. ಅದರಂತೆ ರಾಯಚೂರು ‌ಜಿಲ್ಲೆಯಲ್ಲಿ ಕುಡಿಯುವ ‌ನೀರಿ‌ನ ಘಟಕಗಳು ತೆರೆಯಲಾಗಿದೆ. ಆದ್ರೆ ಜಿಲ್ಲೆಯ ಬಹುತೇಕ ಕುಡಿಯುವ ‌ನೀರಿನ  ಘಟಕಗಳಿಗೆ ನೀರು ಬರುವ ಮುನ್ನವೇ ಘಟಕಗಳು ಹಾಳಾಗಿ ಹೋಗಿವೆ.

Raichur: ರಾಕಿಂಗ್‌ ಸ್ಟಾರ್‌ ಯಶ್‌ ಅಭಿಮಾನಿಗಳಿಂದ ಬೈಕ್‌ ರ್ಯಾಲಿ, ರಕ್ತದಾನ

ನೀರಿನ ಘಟಕಗಳ ನಿರ್ವಹಣೆ ಸಮಸ್ಯೆ: ಶುದ್ಧ ಕುಡಿಯುವ ನೀರು ಘಟಕಗಳ ಬಹುಮುಖ್ಯ ಸಮಸ್ಯೆ ಎಂದರೆ ನಿರ್ವಹಣೆ. ಖಾಸಗಿ ಸಂಸ್ಥೆಗಳು ಅಳವಡಿಸಿದ ಘಟಕಗಳನ್ನು 5ರಿಂದ 7 ವರ್ಷದವರೆಗೆ ಅವರೇ ನಿರ್ವಹಣೆ ಮಾಡಬೇಕು. ಸಹಕಾರ ಸಂಘಗಳು ಅಳವಡಿಸಿದ ಘಟಕಗಳನ್ನು ಅವುಗಳೇ ನಿರ್ವಹಿಸಿದರೆ, ರಾಜ್ಯ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ಸಂಸ್ಥೆ (ಕ್ರೆಡಿಲ್‌) ಮತ್ತು ಸ್ಥಳೀಯ ಆಡಳಿತಗಳ ಮೂಲಕ ಅಳವಡಿಸಿದ ಘಟಕಗಳನ್ನು ಗ್ರಾಮ ಪಂಚಾಯಿತಿಗಳು ನಿರ್ವಹಣೆ ಮಾಡಬೇಕು. ಅವುಗಳಿಗಾಗಿ ನಿರ್ವಹಣೆ ವೆಚ್ಚ ಮತ್ತು ಸಿಬ್ಬಂದಿ ವೇತನ ಭರಿಸಬೇಕಾದ ಹೆಚ್ಚುವರಿ ಹೊರೆ ಗ್ರಾಮ ಪಂಚಾಯಿತಿಗಳ ಮೇಲೆ ಬಿದ್ದಿದೆ.

ವಾರಕ್ಕೊಮ್ಮೆ ಮೆಂಬ್ರೇನ್‌ಗಳ ದುರಸ್ತಿ: ಘಟಕಗಳಲ್ಲಿ ನೀರು ಶುದ್ಧೀಕರಿಸುವ ಮೆಂಬ್ರೇನ್‌ಗಳನ್ನು ಪ್ರತಿ ವಾರ ಸ್ವಚ್ಛಗೊಳಿಸಬೇಕು. ಫ್ಲೋರೈಡ್‌ ಮತ್ತು ಆರ್ಸೆನಿಕ್ ಹೆಚ್ಚು ಇರುವ ಕಡೆಗಳಲ್ಲಿ ಒಂದೇ ವಾರದಲ್ಲಿ ಮೆಂಬ್ರೇನ್‌ ವಾಲ್ಟ್ ಮುಚ್ಚಿ, ಶುದ್ಧೀಕರಣ ಪ್ರಕ್ರಿಯೆ ನಿಂತು ಹೋಗುತ್ತದೆ. ಒಂದು ಮೆಂಬ್ರೇನ್‌ಗೆ 30ರಿಂದ 35 ಸಾವಿರ ರೂ. ಇದ್ದು, ಒಂದು ಘಟಕದಲ್ಲಿ ಅಂತಹ 4 ಮೆಂಬ್ರೇನ್‌ಗಳಿರುತ್ತವೆ. ಅವುಗಳ ಶುದ್ಧೀಕರಿಸುವ ಸಾಮರ್ಥ್ಯ ಕಡಿಮೆ ಆಗದಂತೆ ನಿಗಾವಹಿಸುತ್ತಾ ಇರಬೇಕು. ಅದಕ್ಕಾಗಿ 1ಲಕ್ಷ ರೂ.ಗಿಂತಲೂ ಹೆಚ್ಚು ವೆಚ್ಚ ಭರಿಸುವವರು ಯಾರು? ಅದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಅವಕಾಶವನ್ನೇ ಮಾಡಿಕೊಂಡಿಲ್ಲ. 

ಶುದ್ಧೀಕರಣ ಘಟಕ ದುರಸ್ತಿ ದರ ದುಬಾರಿ:  ಮಾಸಿಕ ವಿದ್ಯುತ್‌ ಶುಲ್ಕ ಭರಿಸುವುದೇ ಕಷ್ಟವಾಗಿರುವಾಗ ಇನ್ನು ನೀರು ಶುದ್ಧೀಕರಣ ಘಟಕಗಳ ನಿರ್ವಹಣೆ, ದುರಸ್ತಿ ಮತ್ತು ಸಿಬ್ಬಂದಿ ವೇತನ ವೆಚ್ಚವನ್ನು ಎಲ್ಲಿಂದ ಭರಿಸುವುದು ಎಂದು ಗ್ರಾಮ ಪಂಚಾಯಿತಿ ಮುಖಂಡರ ಪ್ರಶ್ನೆಯಾಗಿದೆ. ಇದರಿಂದಾಗಿ ಖಾಸಗಿ ಏಜೆನ್ಸಿಗಳು ಘಟಕಗಳನ್ನು ಅಳವಡಿಸಿದ ಬಳಿಕ ನಿರ್ವಹಣೆ ಇರಲಿ ದುರಸ್ತಿಯನ್ನೂ ಮಾಡುತ್ತಿಲ್ಲ. ನಿರ್ವಹಣೆ ವೆಚ್ಚ ದುಬಾರಿಯಾಗುತ್ತಿದ್ದಂತೆ ಗ್ರಾಪಂಗಳು ಅವುಗಳ ಕಡೆಗೆ ತಿರುಗಿ ನೋಡುವ ಗೋಜಿಗೂ ಹೋಗುತ್ತಿಲ್ಲ.  ಹೀಗಾಗಿ ಕುಡಿಯುವ ನೀರು ಶುದ್ಧೀಕರಣ ಘಟಕವೂ ಇದ್ದು ಇಲ್ಲದಂತೆ ಎಲ್ಲರ ಕಣ್ಣು ಮುಂದೆ ಹಾಳಾಗುತ್ತಿವೆ.

ವಿಶ್ವಕರ್ಮ ಎಸ್ಟಿಗೆ ಸೇರ್ಪಡೆಗಾಗಿ ಪಾದಯಾತ್ರೆ: ಕೆ.ಪಿ.ನಂಜುಂಡಿ

ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ: ರಾಯಚೂರು ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ವರ್ಷಗಳೇ ಕಳೆದರೂ, ಯಾರೂ ಗ್ರಾಮದಲ್ಲಿನ‌ ಕುಡಿಯುವ ‌ನೀರಿನ ಘಟಕಗಳ  ಕಡೆ ಮುಖ ಮಾಡಿಲ್ಲ. ಕೆಲವು ಗ್ರಾಮಗಳ ಪರಿಸ್ಥಿತಿ ಅಂತ ಹೇಳದಂತೆ ಆಗಿದೆ. ಕೆಲವರು ನದಿ ನೀರು ಕುಡಿದ್ರೆ, ಇನ್ನೂ ಕೆಲವರು ಕಿಲೋಮೀಟರ್ ಗಟ್ಟಲೇ ಬೈಕ್ ‌ನಲ್ಲಿ ಹೋಗಿ ಶುದ್ಧ ಕುಡಿಯುವ ‌ನೀರು ತರುತ್ತಿದ್ದಾರೆ. ಪ್ರತಿ ದಿನವೂ ಕೆಲಸ, ಕಾರ್ಯ ಬಿಟ್ಟು ದೂರದ ಊರುಗಳಿಗೆ ಅಲೆಯುವಂತಾಗಿದೆ.  ಯಂತ್ರಗಳು ಕೆಟ್ಟಿರುವ ಬಗ್ಗೆ ಗ್ರಾ.ಪಂ.ಗೆ ದೂರು ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಶಾಸಕರ ಗಮನಕ್ಕೆ ತಂದರೂ ಆಸಕ್ತಿ ತೋರುತ್ತಿಲ್ಲ ಎಂದು ಗ್ರಾಮಸ್ಥರ ಆರೋಪವಾಗಿದೆ.

ಶುದ್ಧೀಕರಣ ಘಟಕದ ಯಂತ್ರ ತುಕ್ಕು ಹಿಡಿಯುತ್ತಿವೆ : ರಾಯಚೂರು ಜಿಲ್ಲೆಗೆ 617 ಶುದ್ಧ ನೀರಿನ ಘಟಕಗಳು ಮಂಜೂರಾಗಿವೆ. ಆ ಘಟಕಗಳಲ್ಲಿ 604 ಶುದ್ಧ ನೀರಿನ ಘಟಕಗಳನ್ನು ಸ್ಥಾಪನೆ ‌ಮಾಡಲಾಗಿದೆ. ಆ ಘಟಕಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ನಿರ್ಮಿಸಿರುವ ಶುದ್ಧ ನೀರಿನ ಘಟಕಗಳು ಕಾಯ ನಿರ್ವಹಿಸದಿರುವ ಕಾರಣ ಗ್ರಾಮಸ್ಥರು ಕುಡಿವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಘಟಕದ ಯಂತ್ರೋಪಕರಣಗಳು ತುಕ್ಕು ಹಿಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿವೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಗಮನಹರಿಸಿ ಬಡ ಜನರಿಗೆ ಶುದ್ಧ ಕುಡಿಯುವ ‌ನೀರು ಸರಬರಾಜು ‌ಮಾಡಲು‌ ಮುಂದಾಗಬೇಕಾಗಿದೆ.

Follow Us:
Download App:
  • android
  • ios