ತುಂಬೆ ಡ್ಯಾಂನಲ್ಲಿ 4 ಮೀಟರ್‌ಗಿಂತ ಕೆಳಗೆ ಇಳಿದ ನೀರು; ಮಂಗಳೂರಿಗೆ ಅಭಾವ ಸಾಧ್ಯತೆ !
ನೇತ್ರಾವತಿ ನದಿ ಹರಿಯುವ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ ಮಟ್ಟ4 ಮೀಟರ್‌ಗಿಂತಲೂ ಕುಸಿದಿದೆ. ಪ್ರಸಕ್ತ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ನಡೆಯುತ್ತಿದ್ದು, ಪೂರ್ತಿ ಒಳಹರಿವು ಸ್ಥಗಿತಗೊಂಡಿದೆ.
ಮಂಗಳೂರು (ಮೇ.9) : ನೇತ್ರಾವತಿ ನದಿ ಹರಿಯುವ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ ಮಟ್ಟ4 ಮೀಟರ್‌ಗಿಂತಲೂ ಕುಸಿದಿದೆ. ಪ್ರಸಕ್ತ ಎರಡು ದಿನಕ್ಕೊಮ್ಮೆ ನೀರಿನ ರೇಷನಿಂಗ್ ನಡೆಯುತ್ತಿದ್ದು, ಪೂರ್ತಿ ಒಳಹರಿವು ಸ್ಥಗಿತಗೊಂಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತೆ ನೀರಿನ ರೇಷನಿಂಗ್ ದಿನ ಬದಲಾಗುವ ಸಾಧ್ಯತೆ ಇದೆ. ಈಗಿನ ಸನ್ನಿವೇಶದಲ್ಲಿ ಮಂಗಳೂರು ಮಹಾನಗರಕ್ಕೆ ಇನ್ನು 15ರಿಂದ 20 ದಿನಗಳಿಗೆ ಸಾಕಾಗುವಷ್ಟುಮಾತ್ರ ನೀರಿನ ಸಂಗ್ರಹ ಇದೆ. ಅದಕ್ಕೂ ಮೊದಲು ಮಳೆ ಬಾರದಿದ್ದರೆ ಮಂಗಳೂರಿಗೆ ತೀವ್ರ ನೀರಿನ ಅಭಾವ ತಟ್ಟಲಿದೆ.
3.98 ಮೀಟರ್‌ಗೆ ಕುಸಿದ ಮಟ್ಟ:
ತುಂಬೆ ಡ್ಯಾಂನಲ್ಲಿ ಮಂಗಳವಾರ ನೀರಿನ ಮಟ್ಟ3.93 ಮೀಟರ್‌ಗೆ ಕುಸಿದಿದೆ. ಕಳೆದ ಆರು ವರ್ಷಗಳಲ್ಲಿ ಇಷ್ಟೊಂದು ಕುಸಿತ ಈವರೆಗೆ ಆಗಿರಲಿಲ್ಲ. 2017ರಲ್ಲಿ ತುಂಬೆ ಡ್ಯಾಂನಲ್ಲಿ 4.88 ಮೀಟರ್, 2022ರಲ್ಲಿ ಇದೇ ಸಮಯಕ್ಕೆ 6 ಮೀಟರ್ ವರೆಗೆ ನೀರಿನ ಸಂಗ್ರಹ ಇತ್ತು. ಈ ಬಾರಿ ಮಾತ್ರ 4 ಮೀಟರ್‌ಗೂ ಕೆಳಗೆ ನೀರಿನ ಸಂಗ್ರಹ ತಲುಪಿದೆ. ಇದು ಆತಂಕಕ್ಕೆ ಕಾರಣವಾಗಿದೆ.
RO ನೀರು ಕುಡಿತಿದೀರಾ? ರಕ್ತಹೀನತೆಗೆ ಕಾರಣವಾಗಬಹುದು ಎಚ್ಚರ
ಎಎಂಆರ್ ಡ್ಯಾಂನಲ್ಲಿ 2017ರಲ್ಲಿ 14.50 ಮೀಟರ್ ಇದ್ದುದು ಈಗ 13.29 ಮೀಟರ್‌ಗೆ ಕುಸಿತ ಕಂಡಿದೆ. ಈ ಡ್ಯಾಂನಿಂದ ಕೈಗಾರಿಕೆಗೆ ನೀರು ಪೂರೈಕೆಯನ್ನು ನಿರ್ಬಂಧಿಸಲಾಗಿದ್ದು, ಉಳಿಕೆ ನೀರನ್ನು ತುಂಬೆ ಡ್ಯಾಂಗೆ ಹರಿಸಲಾಗುತ್ತಿದೆ.
ನಿರ್ಮಾಣ ಕಾಮಗಾರಿಗೆ ನೀರಿಲ್ಲ:
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,082 ಕಟ್ಟಡ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 15 ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಪ್ರಕ್ರಿಯೆ ಹಂತ ಹಂತವಾಗಿ ಕಾರ್ಯಗತಗೊಳ್ಳುತ್ತಿದೆ. ಭಾರಿ ನೀರಿನ ಅಭಾವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಕೈಗಾರಿಕೆಗೆ ಮಾತ್ರ ನೀರು ಪೂರೈಸಲಾಗುತ್ತಿದೆ. 844 ವಾಣಿಜ್ಯ, 543 ಕೈಗಾರಿಕೆ ಹಾಗೂ ಅಂಗಡಿ, ಮುಂಗಟ್ಟು ಸೇರಿದಂತೆ 3,908 ಸಂಪರ್ಕಗಳಿವೆ.
2 ದಿನಕ್ಕೊಮ್ಮೆ ರೇಷನಿಂಗ್:
ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ 2 ದಿನಕ್ಕೊಮ್ಮೆ ನೀರಿನ ರೇಷನಿಂಗ್ ನಡೆಯುತ್ತಿದೆ. ಸುರತ್ಕಲ್ ಹಾಗೂ ಮಂಗಳೂರು ನಗರ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ. ತುಂಬೆಯಿಂದ ಪ್ರತಿದಿನ 160 ಎಂಎಲ್‌ಡಿ ನೀರು ಪೂರೈಕೆ ಸಾಮರ್ಥ್ಯವನ್ನು ಹೊಂದಿದ್ದು, 120 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. ಮೂರ್ನಾಲ್ಕು ಗಂಟೆಗೊಮ್ಮೆ ಪಂಪ್ ಚಾಲನೆಯನ್ನು ಸ್ಥಗಿತಗೊಳಿಸಿ ನೀರಿನ ಮಟ್ಟಕಾಯ್ದುಕೊಳ್ಳಲಾಗುತ್ತಿದೆ. ಪ್ರಸಕ್ತ ತುಂಬೆಯಲ್ಲಿ ನೀರಿನ ಒಳಹರಿವು ಪೂರ್ಣ ಸ್ಥಗಿತಗೊಂಡಿದೆ. ನೀರಿನ ಅಭಾವ ಇದೇ ರೀತಿ ಮುಂದುವರಿದರೆ, ಮುಂದಿನ ದಿನಗಳಲ್ಲಿ ನೀರಿನ ರೇಷನಿಂಗ್ ಮತ್ತಷ್ಟುಬದಲಾಗುವ ಸಂಭವ ಹೇಳಲಾಗಿದೆ.
ಹೊಟೇಲ್‌ಗಳಲ್ಲಿ ಬಾಳೆಲೆ ಬಳಕೆ
ಮಂಗಳೂರು ನಗರದಲ್ಲಿ ಸಾವಿರಕ್ಕೂ ಅಧಿಕ ಹೊಟೇಲ್, ರೆಸ್ಟೋರೆಂಟ್‌ಗಳಿವೆ. ದೊಡ್ಡ ದೊಡ್ಡ ರೆಸ್ಟೋರೆಂಟ್‌ಗಳು ನೀರಿಗೆ ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುತ್ತಿವೆ. ಗ್ರಾಹಕರಿಗೆ ಬಟ್ಟಲು ಬದಲು ಬಾಳೆ ಎಲೆ ನೀಡುತ್ತಿದ್ದಾರೆ.
ಈ ಬಾರಿ ಮಂಗಳೂರಿನಲ್ಲಿ ಬೇಸಗೆ ರಜಾ ಬಂದರೂ ಹೊಟೇಲ್‌ಗಳಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಶಾಲಾ ಕಾಲೇಜುಗಳ ಪರೀಕ್ಷೆ ಮುಕ್ತಾಯಗೊಂಡು ಇನ್ನಷ್ಟೆಪ್ರವಾಸಿಗರು ಆಗಮಿಸಬೇಕು. ಇದೇ ವೇಳೆ ಚುನಾವಣೆ ಬಂದಿದೆ. ಮೌಢ್ಯ ತಿಂಗಳಿನಿಂದಾಗಿ ಮದುವೆ ಕಾರ್ಯಕ್ರಮಗಳೂ ವಿಳಂಬ. ವಿಪರೀತ ಬಿಸಿಲಿನ ಝಳವೂ ಪ್ರವಾಸವನ್ನು ಮುಂದೂಡುವಂತೆ ಮಾಡಿದೆ. ಈ ಎಲ್ಲ ಕಾರಣಗಳಿಂದ ಬೇಸಗೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿಲ್ಲ ಎನ್ನುತ್ತಾರೆ ಹೊಟೇಲ್ ಮಾಲೀಕರು.
2019ರಲ್ಲಿ ನೀರಿನ ಕೊರತೆ ಇತ್ತು
ಮಂಗಳೂರು ನಗರಕ್ಕೆ 2019ರಲ್ಲೂ ನೀರಿನ ಕೊರತೆ ತಲೆದೋರಿತ್ತು. ಆಗ ಕೈಗಾರಿಕೆಗಳಿಗೂ ನೀರು ಪೂರೈಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಅದೇ ಪರಿಸ್ಥಿತಿ ಮರುಕಳಿಸಿದೆ. ಪ್ರತಿ ವರ್ಷ ಬೇಸಗೆಯಲ್ಲಿ ಮಳೆ ಬರುತ್ತದೆ. ಈ ಸಲ ಬೇಸಗೆ ಮಳೆಯೂ ಇಲ್ಲ. ಜನವರಿಯಿಂದಲೇ ನೀರು ಬತ್ತಿಹೋಗಲಾರಂಭಿಸಿದ್ದು, ಈಗ ಒಳ ಹರಿವೂ ಸಂಪೂರ್ಣ ನಿಂತುಹೋಗಿದೆ. ಹಾಗಾಗಿ ಎಲ್ಲೆಲ್ಲೂ ನೀರಿಗೆ ಹಾಹಾಕಾರ ಕಂಡುಬರುತ್ತಿದೆ. ಕಳೆದೆರಡು ದಿನಗಳಿಂದ ಅಲ್ಲಲ್ಲಿ ತುಸು ಮಳೆ ಕಾಣಿಸಿದರೂ ಅದು ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ.
Tungabhadra Dam: ಟಿಬಿ ಡ್ಯಾಂನಲ್ಲಿ ಬರೀ 3 ಟಿಎಂಸಿ ನೀರು; ಕುಡಿಯುವ ನೀರಿಗೆ ಪರದಾಟ, ರೈತರಿಗೂ ಸಂಕಷ್ಟಸಾಧ್ಯತೆ!
ಪ್ರಸಕ್ತ ಎರಡು ದಿನಕ್ಕೊಮ್ಮೆ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಅನಿವಾರ್ಯವಾದರೆ ಮತ್ತಷ್ಟುರೇಷನಿಂಗ್ ಮಾಡಲಾಗುವುದು. ನಿರ್ಮಾಣ ಹಂತದ ಕಾಮಗಾರಿಗಳಿಗೆ ನೀರು ಪೂರೈಕೆ ಪೂರ್ತಿ ಸ್ಥಗಿತಗೊಳಿಸಲಾಗಿದೆ.
-ಚನ್ನಬಸಪ್ಪ, ಆಯುಕ್ತ, ಮಹಾನಗರ ಪಾಲಿಕೆ, ಮಂಗಳೂರು