Asianet Suvarna News Asianet Suvarna News

ಹುಸಿಯಾದ ಸರ್ಕಾರದ ಲೆಕ್ಕಾಚಾರ: ಮದ್ಯದಂಗಡಿಯತ್ತ ಮುಖಮಾಡದ ಕುಡುಕರು..!

ಕಡಿಮೆಯಾತ್ತು ಗುಂಡಿನ ಗಮ್ಮತ್ತಿನ ಕಿಮ್ಮತ್ತು| ಹಾಸನ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಡುವೆ ತೆರೆದ ಮದ್ಯದಂಗಡಿಗಳ ವ್ಯಾಪಾರ ಶೇ.50 ರಷ್ಟು ಕುಸಿತ| ಜನರ ಬಳಿ ಹಣ ಕಡಿಮೆ ಆಗಿದ್ದೆ ಕಡಿಮೆ ಮಾರಾಟಕ್ಕೆ ಕಾರಣ| ಮದ್ಯದಂಗಡಿ ಮಾಲೀಕರು ಲಕ್ಷ್ಮೀಪುತ್ರರು ಎಂಬ ಕಾಲ ಈಗ ಇಲ್ಲ| ಮುಂದೆ ಪರಿಸ್ಥಿತಿ ಸುಧಾರಿಸುತ್ತೋ ಇಲ್ಲ ಇನ್ನೂ ಕುಸಿಯುತ್ತೋ?|

Decline in liquor sales in Hassan District After Unlock
Author
Bengaluru, First Published Jun 1, 2020, 2:37 PM IST

ದಯಾಶಂಕರ ಮೈಲಿ

ಹಾಸನ(ಜೂ.01): ಕೊರೋನಾ ನಿಯಂತ್ರಿಸಲು ಜಾರಿಗೊಳಿಸಿದ್ದ ಲಾಕ್‌ಡೌನ್‌ ವೇಳೆ ಬಂದ್‌ ಮಾಡಿದ್ದ ಮದ್ಯದ ಮಾರಾಟ ಅಂಗಡಿಗಳು ತೆರೆದರೇ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತದೆ ಎಂಬ ಸರ್ಕಾರ ಹಾಗೂ ಅಧಿಕಾರಗಳ ಲೆಕ್ಕಾಚಾರ ಹುಸಿಯಾಗಿದೆ.

ಹಾಸನ ಜಿಲ್ಲಾದ್ಯಂತ 330 ವೈನ್‌ ಸ್ಟೋರ್‌ಗಳು ಇದ್ದು, ಈ ಅಂಗಡಿಗಳಲ್ಲಿ ಮದ್ಯದ ಮಾರಾಟ ಶೇ.50 ರಷ್ಟುಕುಸಿದಿದಿದೆ. ಇದರಿಂದ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ. ಹಾಸನ ನಗರದಲ್ಲಿ ಇರುವ ಒಂದು ವೈನ್‌ ಸ್ಟೋರ್‌ನಲ್ಲಿ ಪ್ರತಿದಿನ ಸರಿ ಸುಮಾರು 60 ರಿಂದ 70 ಸಾವಿರ ರು. ನಾನಾ ಬಗೆಯ ಮದ್ಯ ಮಾರಾಟ ಆಗುತ್ತಿದ್ದವುರು. ಈಗ 25 ಸಾವಿರ ರು. ಮದ್ಯದ ಮಾರಾಟವೂ ಆಗುತ್ತಿಲ್ಲ. ಅಲ್ಲದೇ, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಇರುವ ವೈನ್‌ ಸ್ಟೋರ್‌ ಸ್ಥಿತಿ-ಗತಿ ಇದಕ್ಕಿಂತ ಹೊರತಾಗೇನು ಇಲ್ಲ.

ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲಿ: ಜೆಡಿಎಸ್‌ ನಾಯಕ H D ರೇವಣ್ಣ

27 ದಿನಗಳಲ್ಲಿ

2020 ಮಾರ್ಚ್‌ 24ರಿಂದ ಮದ್ಯದಂಗಡಿಗಳನ್ನು ಬಂದ್‌ ಮಾಡಿಸಲಾಗಿತ್ತು. ಮೇ 4ರಂದು ತೆರೆಯಲಾಯಿತು. ಮೇ 31ರ ವರೆಗೆ ಅಂದರೆ, 27 ದಿನಗಳಲ್ಲಿ ಮದ್ಯ ವ್ಯಾಪಾರ ಕಡಿಮೆಯಾಗಿದೆ.

ಉತ್ಪಾದನೆ ಕಡಿಮೆ ಆಗಿದೆ:

ಹಾಸನ ನಗರದ ಹೊರವಲಯದಲ್ಲಿ ಇರುವ ಯುನೈಟೆಡ್‌ ಸ್ಪೀರಿಟ್‌ ಡಿಸ್ಟಲರಿಸ್‌ ಘಟಕದಲ್ಲಿ ಪ್ರತಿದಿನ ಕಡಿಮೆ ಬೆಲೆ ಹೂವರ್ಡ್‌ ಚಿಯರ್ಸ್‌, ಹೊವರ್ಡ್‌ ಪಂಚ್‌ ಮತ್ತು ಓಟಿ ಎಂಬ ಮದ್ಯ ಲಾಕ್‌ಡೌನ್‌ಗೂ ಮುಂಚೆ 24 ಸಾವಿರ ಬಾಕ್ಸ್‌ ಉತ್ಪಾದನೆ ಆಗುತ್ತಿತ್ತು. ಈಗ 7 ರಿಂದ 8 ಸಾವಿರ ಬಾಕ್ಸ್‌ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಕಡಿಮೆ ಬೆಲೆ ಮದ್ಯ ಖರೀದಿಸುತ್ತಿದ್ದ ಕಾರ್ಮಿಕರು ಅವರವರ ಊರಿಗೆ ತೆರಳಿರುವುದು. ಕಾರ್ಮಿಕರ ಬಳಿ ಉದ್ಯೋಗ ಇಲ್ಲದೇ ಹಣ ಇಲ್ಲದಿರುವುದು ಮತ್ತು 8 ಗಂಟೆಗಳು ಮಾತ್ರ ಉತ್ಪಾದನೆ ನಡೆಯುತ್ತಿರುವುದು.

ಸದ್ಯಕ್ಕೆ ನಿಖರ ಮಾಹಿತಿ ತಿಳಿಯುವುದಿಲ್ಲ:

ಸದ್ಯಕ್ಕೆ ಯಾವ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿದೆ ಎಂಬ ಬಗ್ಗೆ ಮಾಹಿತಿ ತಿಳಿಯುವುದಿಲ್ಲ. ಜೂನ್‌ನಲ್ಲಿ ತಿಳಿಯುತ್ತದೆ ಎಂದು ಅಬ್ಕಾರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಮದ್ಯದಂಗಡಿಗಳನ್ನು ಹೊಂದಿರುವವರು ಲಕ್ಷ್ಮೀಪುತ್ರರು ಎಂಬ ಕಾಲ ಈಗ ಇಲ್ಲ. ಮುಂದಿನ ದಿನಗಳಲ್ಲಿ ಮದ್ಯದ ಮಾರಾಟ ಪರಿಸ್ಥಿತಿ ಸುಧಾರಿಸುತ್ತೋ ಅಥವಾ ಇನ್ನೂ ಕುಸಿಯುತ್ತೋ ಎಂಬುದನ್ನು ಕಾದು ನೋಡಬೇಕಿದೆ.

ಇದಕ್ಕೆ ಕಾರಣಗಳು ಹಲವು...!

ಜಿಲ್ಲಾಡಳಿತ ಪ್ರಕಾರವೇ. ಜಿಲ್ಲಾದ್ಯಂತ ವಿವಿಧ ಕಾಮಗಾರಿಗಳಿಗೆ ದೂರದ ಬಿಹಾರ ಮತ್ತಿತರ ಕಡೆಗಳಿಂದ 3,600 ಕಾರ್ಮಿಕರು ಬಂದಿದ್ದರು. ಇದಲ್ಲದೇ ನಮ್ಮ ಉತ್ತರ ಕರ್ನಾಟಕದ ಬಳ್ಳಾರಿ, ರಾಯಚೂರು ಮತ್ತಿತರ ಕಡೆಗಳಿಂದ 2,900 ಕಾರ್ಮಿಕರು ಬಂದಿದ್ದರು. ಈಗ ಕೊರೋನಾ ಹುಟ್ಟಿಸಿದ ಭಯದಿಂದ ತಮ್ಮ ತಮ್ಮ ತವರಿಗೆ ಹೋಗಿದ್ದರು. ವಾಸ್ತವವಾಗಿ ಹೀಗಿ ದುಡಿಯುವವರೆ ಕಡಿಮೆ ಬೆಲೆ ಮದ್ಯವನ್ನು ಹೆಚ್ಚು ಖರೀದಿಸುತ್ತಿದ್ದರು. ಈಗ ಅವರಿಲ್ಲದ ಕಾರಣ ಆ ಬೆಲೆಯ ಮದ್ಯ ಕಡಿಮೆಯಾಗಿದೆ. ಅಲ್ಲದೇ, ಸ್ಥಳೀಯ ಕಾರ್ಮಿಕರು ಉದ್ಯೋಗವಿಲ್ಲ ಕಾರಣ ಕೈಯಲ್ಲಿ ಹಣ ಕಡಿಮೆ ಆಗಿದೆ.

ಉಳ್ಳವರು ಲಾಕ್‌ಡೌನ್‌ ಇನ್ನು ಮುಂದುವರಿಯುತ್ತದೆ ಎಂದು ಹೇಳಿ ತಿಂಗಳಿಗೂ ಮುಂಚೆಯೇ 20 ರಿಂದ 30 ಸಾವಿರ ಮೌಲ್ಯದ ಹೆಚ್ಚು ಬೆಲೆ ಮದ್ಯವನ್ನು ಖರೀದಿಸಿದ್ದರು. ಅದು ಬಹುತೇಕ ಮಂದಿಯಲ್ಲಿ ಇನ್ನು ಖಾಲಿಯಾಗಿಲ್ಲ. ಹೀಗಾಗಿ ಅವರು ಮದ್ಯದಂಗಡಿಯತ್ತ ಬರುವುದು ಕಡಿಮೆಯಾಗಿದೆ.

ಈಗ ಮದ್ಯದಂಗಡಿ ಮತ್ತು ಬಾರ್‌ಗಳಲ್ಲಿ ಕುಳಿತು ಮದ್ಯ ಸೇವನೆ ಮಾಡುವಂತಿಲ್ಲ. ಪಾರ್ಸಲ್‌ ತೆಗೆದುಕೊಂಡು ಹೋಗಬೇಕು. ಮನೆಯಲ್ಲೇ ಕುಡಿವ ಅವಕಾಶ ಇಲ್ಲದವರು ಮದ್ಯ ಖರೀಸುತ್ತಿಲ್ಲ. ಸರ್ಕಾರ ಎಲ್ಲ ಬಗೆಯ ಮದ್ಯಗಳ ಮೇಲೆ ಹಂತ ಹಂತದಲ್ಲಿ ಶೇ.25 ರಷ್ಟುತೆರಿಗೆ ಹೆಚ್ಚಿಸಿದ್ದು, ಅತ್ಯಂತ ಕಡಿಮೆ ಬೆಲೆಯ ಮದ್ಯಕ್ಕೆ ಶೇ.10, ಮಧ್ಯಮ ಬೆಲೆಯ ಮದ್ಯ ಶೇ.15 ಮತ್ತು ದುಬಾರಿ ಮದ್ಯಕ್ಕೆ ಶೇ.25 ರಷ್ಟುತೆರಿಗೆ ಹೆಚ್ಚಿಸಿತು. ಇದು ಕೂಡ ಮದ್ಯ ಮಾರಾಟ ಕಡಿಮೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಹಾಸನ ಸುತ್ತಮುತ್ತ ಇರುವ ಗ್ರಾರ್ಮೆಂಟ್‌ ಮತ್ತಿತರ ಕಾರ್ಖಾನೆಗಳು ಕೊರೋನಾ ಹಿನ್ನೆಲೆಯಲ್ಲಿ ಮುಚ್ಚಿರುವುದಲ್ಲದೇ, ಜಲ್ಲಿ ಕ್ರಸರ್‌ ಸೇರಿದಂತೆ ಹೆಚ್ಚು ಜನರು ದುಡಿಯುವ ಕಾರ್ಖಾನೆಗಳು ಮುಚ್ಚಿವೆ. ಇದರಿಂದ ಜನರಲ್ಲಿ ಹಣ ಹೆಚ್ಚು ಓಡಾಡುತ್ತಿಲ್ಲ. ಇದು ಕೂಡ ಮದ್ಯ ಮಾರಾಟ ಮೇಲೆ ಎಫೆಕ್ಟ್ ಆಗಿದೆ.

ಮೇ 4ರಂದು ಮದ್ಯದಂಗಡಿ ತೆರೆದಾಗ 3 ದಿನಗಳು ಮಾತ್ರ ಭರ್ಜರಿ ವ್ಯಾಪಾರ ಆಯಿತು. ಈಗ ಶೇ.50ಕ್ಕೂ ಹೆಚ್ಚು ಮದ್ಯ ಮಾರಾಟ ಕುಸಿದಿದೆ. ನಮ್ಮಲ್ಲಿ ಹೆಚ್ಚು ವ್ಯಾಪಾರ ಆಗುತ್ತಿದ್ದದ್ದು ಕಾರ್ಮಿಕರಿಂದಲೇ. ಈಗ ಬಹುತೇಕ ಮಂದಿ ತಮ್ಮ ಊರಿಗೆ ತೆರಳಿದ್ದಾರೆ. ಇರುವ ಸ್ಥಳೀಯ ಕಾರ್ಮಿಕರ ಬಳಿ ಹಣ ವಿಲ್ಲ. ಅಲ್ಲದೇ, ಇಲ್ಲೇ ಕುಡಿಯುವಂತಿಲ್ಲ. ಇದರಿಂದ ವ್ಯಾಪಾರ ಕಡಿಮೆ ಆಗಿದೆ ಎಂದು ವೈನ್‌ ಸ್ಟೋರ್‌ ಮಾಲೀಕ ಶೇಖರ್‌ ಚಂದ್ರಶೇಖರ್‌ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios