ಆನಂದ್‌ ಎಂ. ಸೌದಿ

ಯಾದಗಿರಿ(ಮೇ.13): ಕಳೆದ ಒಂದೂವರೆ ತಿಂಗಳಿಂದ ಕೊರೋನಾ ಸೋಂಕಿತರಾರ‍ಯರೂ ಇರದೆ, ಒಂದು ರೀತಿಯ ‘ಸೇಫ್‌ ಝೋನ್‌’ನಲ್ಲಿದ್ದ ಯಾದಗಿರಿ ಜಿಲ್ಲೆಯ ಜನರಿಗೆ ಮಂಗಳವಾರದ ವಿದ್ಯಮಾನ ಆಘಾತ ಮೂಡಿಸಿದೆ. ಗುಜರಾತಿನ ಅಹ್ಮದಾಬಾದಿನಿಂದ ಸುರಪುರ ನಗರಕ್ಕೆ ಆಗಮಿಸಿದ್ದ ದಂಪತಿಗೆ ಕೋವಿಡ್‌-19 ಸೋಂಕು ದೃಢಪಟ್ಟ ಸುದ್ದಿ ಬೆಚ್ಚಿ ಬೀಳಿಸಿದೆ. ದಂಪತಿಯ ಪುತ್ರ ಹಾಗೂ ಕಾರ್‌ ಚಾಲಕನ ವರದಿ ನೆಗೆಟಿವ್‌ ಬಂದು ಸಮಾಧಾನ ಮೂಡಿಸಿದೆ.

ಸಾವಿರಾರು ಜನಜೀವಗಳ ನುಂಗಿದ ಚೀನಾದ ವುಹಾನ್‌ನಲ್ಲಿ ಕಂಡ ‘ಎಲ್‌’ ಟೈಪ್‌ ಕೋವಿಡ್‌-19 ವೈರಸ್‌ ಮಾದರಿಯ ಸೋಂಕು ಹೋಲಿಕೆಯಿಂದಾಗಿ, ನೂರಾರು ಸಾವು ನೋವುಗಳಿಗೆ ಸಾಕ್ಷಿಯಾದ ಗುಜರಾತಿನ ಅಹ್ಮದಾಬಾದಿಗೆ ವ್ಯಾಪಾರಕ್ಕೆಂದು ತೆರಳಿದ್ದ ಸುರಪುರದ ಈ ಜಿಲೇಬಿ ವ್ಯಾಪಾರಸ್ಥ ದಂಪತಿ ಎರಡು ತಿಂಗಳ ನಂತರ ವಾಪಸ್ಸಾಗಿದ್ದಾರೆ. ಈ ಸೋಂಕಿತರು ಗುಜರಾತಿನಿಂದ ಬಂದಿದ್ದಾರೆ ಅನ್ನೋದು ಜಿಲ್ಲಾಡಳಿತಕ್ಕೆ ಹೆಚ್ಚಿನ ಆತಂಕ ಮೂಡಿಸಿದೆ ಎನ್ನಲಾಗಿದೆ.
ಈ ಮಧ್ಯೆ, ಜಿಲ್ಲೆಗೆ ಅನ್ಯ ರಾಜ್ಯಗಳಿಂದ ವಲಸಿಗರ ವಾಪಸ್ಸಾಗುತ್ತಿರುವುದೂ ಹೆಚ್ಚುತ್ತಿದೆ. ಮುಂಬೈಯಿಂದ ವಿಶೇಷ ರೈಲು ಮೂಲಕ ಕಲಬುರಗಿಗೆ ಬಂದಿಳಿದ ಸುಮಾರು ಮುನ್ನೂರು ಜನ ವಲಸಿಗರು/ಕಾರ್ಮಿಕರನ್ನು ಜಿಲ್ಲಾಡಳಿತ ವಿಶೇಷ ಬಸ್‌ ಮೂಲಕ ಜಿಲ್ಲೆಗೆ ಕರೆತಂದು, ಎಲ್ಲ ತಪಾಸಣೆ ನಂತರ 14 ದಿನಗಳ ಕಾಲ ಇನ್ಸಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿರಿಸಿದೆ.

‘ಹಸಿರಾ’ಗಿದ್ದ 3 ಜಿಲ್ಲೆಗಳಿಗೀಗ ಕೊರೋನಾ ಕೆಸರು!

ಇನ್ನು, ಲಾಕ್‌ ಡೌನ್‌.2 ಸಡಿಲಿಕೆ ನಂತರ, ವೈರಸ್‌ ಹೋಗೇ ಬಿಡ್ತು ಅನ್ನೋ ಗುಂಗಿನಲ್ಲಿ ಯದ್ವಾತದ್ವಾ ತಿರುಗಾಡುತ್ತ, ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವಿಕೆ ಮುಂತಾದ ಆರೋಗ್ಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ, ಕಾನೂನು ಕಟ್ಟಳೆಗಳನ್ನು ಧಿಕ್ಕರಿಸಿ, ಕೊರೋನಾಗೆ ಸೆಡ್ಡು ಹೊಡೆದವರಂತೆ ಬೀದಿ ಬೀದಿಗಳಲ್ಲಿ ಕಂಡುಬರುತ್ತಿದ್ದ ಅನಾವಶ್ಯಕ ಜನಜಂಗುಳಿ, ವಾಹನಗಳ ಓಡಾಟದ ಅಬ್ಬರಕ್ಕೆ ಬೇಸ್ತುಬಿದ್ದಿದೆ.

ಸತತ ಎರಡು ತಿಂಗಳುಗಳಿಂದ ಕೊರೋನಾ ಕಟ್ಟಿಹಾಕುವಲ್ಲಿ ದುಡಿದು ಹೈರಾಣಾಗುತ್ತಿದ್ದ ಆಡಳಿತಕ್ಕೆ, ಮೊದಲ ಈ ಪ್ರಕರಣಗಳು ಘಾಸಿ ಮಾಡಿದಂತಿದೆ. ಹಾಗೆ ನೋಡಿದರೆ, ಜಿಲ್ಲೆಯಲ್ಲಿ ಅತೀ ಹೆಚ್ಚು ವಲಸಿಗರು ವಾಪಸ್ಸಾಗುತ್ತಿದ್ದರೂ, ಎಲ್ಲವನ್ನೂ ನಿಭಾಯಿಸುತ್ತಿದ್ದ ಆಡಳಿತಕ್ಕೆ ಸುರಪುರ ಪ್ರಕರಣದಿಂದ ಒಂದು ಕ್ಷಣ ಅಧೀರರನ್ನಾಗಿಸಿದಂತಿತ್ತು.

‘ಬಿ’ ಪಾಸಿಟಿವ್‌ ಆಗೋಣ:

ವಲಸಿಗರ ಆಗಮನದಿಂದ ಮುಂಜಾಗ್ರತಾ ಕ್ರಮವಾಗಿ, ಸೊಮವಾರ ಮಧ್ಯರಾತ್ರಿಯಿಂದಲೇ 24 ಗಂಟೆಗಳ ಕಾಲದ ಸಂಫೂರ್ಣ ನಿಷೇಧಾಜ್ಞೆ ಜಾರಿ ಮಾಡಲಾಗುತ್ತದೆ ಎಂದು ಮಧ್ಯರಾತ್ರಿಯೇ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಮಂಗಳವಾರ ಬೆಳ್ಳಬೆಳಿಗ್ಗೆ ಎಂದಿನಂತೆ ಜನ ಹೊರಗೆ ಬಂದಾಗ ಸೋಂಕಿನ ವಾಸನೆ ಬಡಿದಿದ್ದು, ಮಧ್ಯಾಹ್ನದ ಹೊತ್ತಿಗೆ ಅದು ಖಚಿತವಾಗಿದೆ. ನಮ್ಮ ಜಿಲ್ಲೆಯಲ್ಲೂ ಪಾಸಿಟಿವ ಬಂತೆನ್ನೋ ಕಾರಣಕ್ಕೆಂಬಂತೆ, ಗಲ್ಲಿ ಗಲ್ಲಿಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಜನ ಸಾಮಾಜಿಕ ಅಂತರ, ಮಾಸ್ಕ್‌ ಮುಂತಾದವುಗಳತ್ತ ಗಮನ ಹರಿಸಿದ್ದಾರೆ. ಲಾಕ್‌ ಡೌನ್‌ ಸಡಿಲಿಕೆ ನಂತರ ಇದು ಬಹುತೇಕ ಮಾಯವಾಗಿತ್ತು.

ಪಾಸಿಟಿವ್‌ ಬಂದಿವೆ. ಹಾಗಂತ, ಅಧೀರರಾಗುವ ಬದಲು ಜನರು ಮುಂಜಾಗ್ರತೆ ವಹಿಸಿ ಎಚ್ಚೆತ್ತುಕೊಳ್ಳಬೇಕಾಗಿದೆ. ನಿಯಮಗಳ ಪಾಲನೆಯಲ್ಲಿ ಸಕಾರಾತ್ಮಕ ಚಿಂತನೆಗಳ (ಬಿ ಪಾಸಿಟಿವ್‌) ಜೊತೆಗೆ ರೋಗ ತಡೆಗಟ್ಟಲು ಅರಿವು ಮೂಡಿಸಬೇಕಾಗಿದೆ. ವಲಸಿಗರಾಗಲಿ, ಸೋಂಕಿತರು ಅಥವಾ ಶಂಕಿತರೇ ಆಗಲಿ ಅಥವಾ ಆ ಪ್ರದೇಶದ ಜನರಲ್ಲಿ ಕೀಳರಿಮೆ ತೋರದಂತಾಗಲಿ. ಆತಂಕದ ಬದಲು ಮುಂಜಾಗ್ರತೆ ವಹಿಸುವುದು ಸೂಕ್ತ ಅನ್ನೋ ಸರ್ಕಾರದ/ಪ್ರಜ್ಞಾವಂತರ ಮಾತುಗಳಿಗೆ ಕಿವಿಗೊಡಬೇಕಾಗಿದೆ.