ಶಿವಮೊಗ್ಗ(ಜು.06): ಮಾರಕ ಕೊರೋನಾ ದಿನೇ ದಿನೇ ತನ್ನ ಕಬಂಧ ಬಾಹು ಚಾಚುತ್ತಿರುವುದರ ನಡುವೆಯೇ ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿರುವ ಪೊಲೀಸ್‌ ಸಿಬ್ಬಂದಿಯ ಕರ್ತವ್ಯಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಪ್ರೊಸಿಡರ್‌ (ಎಸ್‌ಒಪಿ)ಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಸಾರ್ವಜನಿಕರು ಯಾರೇ ಆದರೂ ಇನ್ನು ಮುಂದೆ ಪೊಲೀಸ್‌ ಠಾಣೆಯಲ್ಲಿ ದೂರ ನಿಂತೇ ದೂರು ನೀಡಬೇಕು !

ಕೊರೋನಾ ವಾರಿಯ​ರ್ಸ್ ಆಗಿದ್ದು, ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸರಲ್ಲಿ ಅನೇಕರು ಸೋಂಕಿಗೆ ತುತ್ತಾಗುತ್ತಿರುವ ಹಿನ್ನೆಲೆ ಅವರ ರಕ್ಷಣೆಗಾಗಿ ಕೆಲವೊಂದು ಅಗತ್ಯ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು ಸುತ್ತೋಲೆ ರವಾನಿಸಿದ್ದಾರೆ. ಇವರ ಸೂಚನೆ ಮೇರೆಗೆ ವಿವಿಧ ವಲಯಗಳ ಪೊಲೀಸ್‌ ಮಹಾ ನಿರೀಕ್ಷಕರು ಪೊಲೀಸ್‌ ಸಿಬ್ಬಂದಿ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಮ್ಮ ತಮ್ಮ ವ್ಯಾಪ್ತಿಯ ಜಿಲ್ಲೆಯ ಎಸ್ಪಿಗಳಿಗೆ ಸುತ್ತೋಲೆ ಕಳಿಸಿದ್ದಾರೆ.

ಡಿಪಿಒ, ಎಸ್‌ಡಿಪಿಒ, ವೃತ್ತ, ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಲಿಪಿಕ ಹಾಗೂ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಅನುಸರಿಸಬೇಕಾದ ಕ್ರಮ ಸೇರಿದಂತೆ ಒಟ್ಟಾರೆ ವಿವಿಧ 29 ರೀತಿಯ ಕರ್ತವ್ಯದಲ್ಲಿ ತೊಡಗುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಸ್ಪಷ್ಟಸೂಚನೆ ಸಹ ನೀಡಲಾಗಿದೆ.

ಇವುಗಳಲ್ಲಿ ಪ್ರಮುಖವಾಗಿ ಪೊಲೀಸ್‌ ಠಾಣೆಯಲ್ಲಿ ಸಂದರ್ಶಕರು, ದೂರುದಾರರು ಹಾಗೂ ಇತರೆ ಸಾರ್ವಜನಿಕರು ಠಾಣೆಗೆ ಬಂದಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಸ್ಪಷ್ಟನಿರ್ದೇಶನವಿದ್ದು, ಅದರನ್ವಯ ದೂರುದಾರರು ಇನ್ನು ಮುಂದೆ ಠಾಣೆಯ ಹೊರ ಭಾಗದಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಟೆಂಟ್‌ನಲ್ಲೇ ತಮ್ಮ ದೂರು-ದುಮ್ಮಾನ ಹೇಳಿಕೊಳ್ಳಬೇಕಿದೆ. ಈ ತನಕ ಯಾವುದೇ ಪೊಲೀಸ್‌ ಸಿಬ್ಬಂದಿಯಲ್ಲಿ ಕೊರೋನಾ ವೈರಸ್‌ ಕಂಡು ಬಂದರೆ ಆ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಠಾಣೆಯನ್ನು ಮಾತ್ರ ಸೀಲ್‌ ಡೌನ್‌ ಮಾಡಿ ಠಾಣೆಯಿಂದ ಹೊರಗೆ ಸಾರ್ವಜನಿಕರಿಂದ ದೂರು ಸ್ವೀಕರಿಸಲಾಗುತ್ತಿತ್ತು.

ಕರ್ನಾಟಕದ ಕಾಂಗ್ರೆಸ್-ಬಿಜೆಪಿ ಶಾಸಕರಿಗೂ ತಗುಲಿದ ಕೊರೋನಾ ಸೋಂಕು

ಹೀಗೆ ಠಾಣೆಯನ್ನೇ ಸೀಲ್‌ಡೌನ್‌ ಮಾಡುವುದರಿಂದ ಉಂಟಾಗಬಹುದಾದ ತೊಂದರೆಯ ಹಿನ್ನೆಲೆ ಈ ಬದಲಾವಣೆ ಜಾರಿ ಮಾಡಲಾಗಿದೆ. ಇದೀಗ ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಯ ಹೊರಗೆ ದೂರು ಸ್ವೀಕಾರ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.

ಹೊಸ ಮಾರ್ಗ ಸೂಚಿಗಳು:

- ಠಾಣೆಗಳ ಆವರಣದಲ್ಲಿ ಸಾರ್ವಜನಿಕರಿಗೆ ಮರ ನೆರಳು ಅಥವಾ ತಾತ್ಕಾಲಿಕ ಛಾವಣಿ ನಿರ್ಮಿಸಿ ಅದರಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಪಾರ್ಟಿ 1 ಮತ್ತು ಪಾರ್ಟಿ 2 ಎಂದು ಪ್ರತ್ಯೇಕವಾಗಿ ಆಸನಗಳಿರುವಂತೆ ವ್ಯವಸ್ಥೆ ಮಾಡಿ ಅಲ್ಲಿಯೇ ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕು. ಇದಕ್ಕೆ ಪ್ರತ್ಯೇಕ ಬ್ಯಾರಿಕೇಡ್‌ ಬಳಸಬಹುದಾಗಿದೆ.

- ಠಾಣೆ, ಕಚೇರಿಯಲ್ಲಿ ಸಂದರ್ಶಕರ ರಿಜಿಸ್ಟರ್‌ ನಿರ್ವಹಣೆ ಮಾಡಿ ಕಚೇರಿಗೆ ಭೇಟಿ ನೀಡುವವರ ವಿವರ, ಅವರು ಬಂದ ಉದ್ದೇಶ ಬರೆದಿಡಬೇಕು. ಒಂದು ವೇಳೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾದಲ್ಲಿ ಟೋಕನ್‌ ವ್ಯವಸ್ಥೆ ಮಾಡಿ ಸಂಖ್ಯೆ ಪ್ರಕಾರ ಒಳ ಬಿಡಬೇಕು.

- ಎಸ್‌ಎಚ್‌ಒ ಟೇಬಲ್‌ನ್ನು ಸಾಧ್ಯವಾದಷ್ಟುಠಾಣೆಯ ಹೊರ ಆವರಣದಲ್ಲಿ ಹಾಕಬೇಕು. ಟೇಬಲ್‌ ಮುಂದೆ ಒಂದು ಮೀಟರ್‌ ಅಂತರದಲ್ಲಿ ಟೇಪನ್ನು ಕಟ್ಟಿಠಾಣೆಗೆ ದೂರ ನೀಡಲು ಬರುವವರನ್ನು ಟೇಪ್‌ನ ಹಿಂದೆ ಕೂರಿಸಬೇಕು.

- ದೂರು ನೀಡಲು ಬಂದಿರುವವರು ಯಾರು ಅಥವಾ ಸಮಸ್ಯೆ ಇರುವ ವ್ಯಕ್ತಿ ಯಾರು ಎಂಬುದನ್ನು ವಿಚಾರಿಸಿ ಅವರನ್ನು ಮಾತ್ರ ಒಳಗಡೆ ಬಿಡಬೇಕು. ಅವರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು.

- ದೂರು ನೀಡಲು ಬಂದಿರುವವರಿಂದಲೇ ದೂರನ್ನು ಓದಿಸಿ ಕೇಳಿಸಿಕೊಂಡು ಕ್ರಮ ಕೈಗೊಳ್ಳಬೇಕು. ದೂರುದಾರನಿಗೆ ಓದಲು ಬಾರದಿದ್ದರೆ ದೂರು ಪ್ರತಿಯನ್ನು ನೇರವಾಗಿ ಕೈಯಿಂದ ಮುಟ್ಟದೆ ತಮ್ಮ ಮೊಬೈಲ್‌ ನಿಂದ ಅದರ ಫೋಟೊ ತೆಗೆದುಕೊಂಡು ಓದಿ ಕ್ರಮ ಜರುಗಿಸಬೇಕು. ಒಂದು ವೇಳೆ ದೂರುದಾರ ಪ್ರತಿಯನ್ನು ಮುಟ್ಟಿದ್ದರೆ ಕಡ್ಡಾಯವಾಗಿ ಹ್ಯಾಂಡ್‌ ಗ್ಲೌಸ್‌ ಬಳಸಬೇಕು.

- ಠಾಣೆಗೆ ದೂರು ನೀಡಲು ಬಂದಿರುವವರಿಗೆ ಬರೆಯಲು ಸಾಧ್ಯವಾಗದೆ ಇದ್ದರೆ ಅವರ ಹೇಳಿಕೆ ಪಡೆದು ಅವರ ಕೈಗೆ ಸ್ಯಾನಿಟೈಸರ್‌ ಹಾಕಿ ನಂತರ ಅವರಿಂದ ಸಹಿ ಅಥವಾ ಬೆರಳಚ್ಚು ಗುರುತು ಪಡಿಯುವಂತೆ ಸೂಚನೆಯಲ್ಲಿ ತಿಳಿಸಲಾಗಿದೆ.

ಒಟ್ಟಿನಲ್ಲಿ ಹೊಸ ಮಾರ್ಗ ಸೂಚನೆಯನ್ವಯ ದೂರು ನೀಡಲು ಠಾಣೆಗೆ ಹೋಗುವವರು ಠಾಣೆಗೆ ಹೊರ ಭಾಗದಲ್ಲಿಯೇ ತೆರೆಯಲಾಗಿರುವ ತಾತ್ಕಾಲಿಕ ಶೆಡ್‌ ಮಾದರಿಯ ದೂರು ಸ್ವೀಕಾರ ಕೇಂದ್ರದಲ್ಲೇ ತಮ್ಮ ದುಃಖ-ದುಮ್ಮಾನವನ್ನು ಹೇಳಿಕೊಂಡು ಬರುವುದು ಅನಿವಾರ್ಯವಾಗಲಿದೆ.