ಸಂತೋಷ್ ಸೂಸೈಡ್ ಕೇಸ್: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಎಸ್‌ಡಿಪಿಐ ಪ್ರತಿಭಟನೆ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಮನಗರ (ಏ.14): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ (Santhosh Patil Suicide Case) ಸಂಬಂಧ ಸಚಿವ ಈಶ್ವರಪ್ಪ (KS Eshwarappa) ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು (SDPI) ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಹಳೆ ಬಸ್ ನಿಲ್ದಾಣದ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ಬಿಜೆಪಿ (BJP) ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಸಚಿವ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಈಶ್ವರಪ್ಪ ವಿರುದ್ಧ ಶೇ. 40 ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ರವರು ಈಶ್ವರಪ್ಪನವರೇ ನನ್ನ ಸಾವಿಗೆ ನೇರ ಕಾರಣ ಎಂಬುದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪ್ರೇರಣೆ ಕೇಸನ್ನು ದಾಖಲಿಸಿ ಸಚಿವ ಈಶ್ವರಪ್ಪರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಸಂತೋಷ್ ಪಾಟೀಲ್ ಕಳೆದ ಒಂದು ವರ್ಷದಿಂದ ಶೇ. 40ರಷ್ಟುಕಮಿಷನ್ ಬಗ್ಗೆ ಪೀಡಿಸುತ್ತಿರುವ ವಿಚಾರವಾಗಿ ನಿರಂತರ ಹೋರಾಟ ನಡೆಸುತ್ತಿದ್ದರು. ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದಿದ್ದರು. ಅಲ್ಲದೆ, ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.
ಆದರೆ, ಇದುವರೆಗೆ ಬಿಜೆಪಿಯದೇ ಕಾರ್ಯಕರ್ತನಾದ ಸಂತೋಷ್‌ಗೆ ಯಾವುದೇ ನ್ಯಾಯ ದೊರಕಲಿಲ್ಲ. ಬದಲಾಗಿ ಆತ್ಮಹತ್ಯೆಗೆ ಪ್ರೇರಣೆ ಲಭಿಸಿತ್ತು ಎಂಬುದು ಅವರ ಡೆತ್ ನೋಟಿನಿಂದ ಬಹಿರಂಗವಾಗಿದೆ ಎಂದು ದೂರಿದರು. ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಜಿಲ್ಲಾಧ್ಯಕ್ಷ ಮಹಮ್ಮದ್ ನಯಾಜ್ ಪಾಷ ಮಾತನಾಡಿ, ಹಿಂದೂ ನಾವೆಲ್ಲರೂ ಒಂದು ಎನ್ನುತ್ತಾ ನಿರಂತರ ಕೋಮುದ್ವೇಷ ಬಿತ್ತುತ್ತಿರುವ ಸಂಘ ಪರಿವಾರಿದವರಿಗೆ ತಾಕತ್ತಿದ್ದರೆ ನಿಮ್ಮದೇ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಸಾವಿನ ನ್ಯಾಯಕ್ಕಾಗಿ ಈಶ್ವರಪ್ಪರನ್ನು ಬಂಧಿಸಬೇಕೆಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕೆಂದು ಸವಾಲು ಹಾಕಿದರು.
ಸೂಸೈಡ್ ಕೇಸ್: ಈಶ್ವರಪ್ಪ ಬಂಧಿಸಬೇಕೆಂದು ಒತ್ತಾಯಿಸಿ ಎಡಿಜಿಪಿಗೆ ದೂರು ನೀಡಿದ ಕಾಂಗ್ರೆಸ್
ರಾಜ್ಯವನ್ನಾಳುವ ಸಚಿವರ ನಡವಳಿಕೆ ಹೀಗಿದ್ದರೆ ಇನ್ನೂ ಇವರ ಕೆಳಗೆ ಕೆಲಸ ಮಾಡುವ ಅಧಿಕಾರಿಗಳ ಬಾಳು ಯಾವ ರೀತಿಯಲ್ಲಿ ಇರಬೇಕು ಎಂದು ನಾವು ಯೋಚಿಸಬೇಕಾಗಿದೆ. ಕರ್ನಾಟಕ ರಾಜ್ಯವನ್ನು ಲಂಚ ಮುಕ್ತ ರಾಜ್ಯವನ್ನು ಮಾಡಬೇಕಾದರೆ ನಾವು ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ರಾಜ್ಯವನ್ನು ಮಾಡಬೇಕಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ಶಕೀಲ್ ಪಾಷ, ತಾಲೂಕು ಘಟಕ ಅಧ್ಯಕ್ಷ ಸೈಯದ್ ಅಸಾದುಲ್ಲಾ, ಉಪಾಧ್ಯಕ್ಷರಾದ ಅಸ್ಲಂ, ಅಮ್ಜದ್ ಶರೀಫ್, ಆರೀಫ್, ಪಕ್ಷದ ಕಾನೂನು ಸಲಹೆಗಾರ ಚಾನ್ ಪಾಷ ಮತ್ತಿತರರು ಭಾಗವಹಿಸಿದ್ದರು.
ಈಶ್ವರಪ್ಪ ಬಂಧನಕ್ಕೆ ಬಿಎಸ್ಪಿ ಆಗ್ರಹ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕೆಂದು ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ಆಗ್ರಹಿಸಿದ್ದಾರೆ. ಈ ಸಂಬಂಧ ಹೇಳಿಕೆ ನೀಡಿರುವ ಅವರು, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ ಶೇಕಡಾ 40 ಪರ್ಸೆಂಟ್ ಕಮಿಷನ್ ಪಡೆಯುವ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಈ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಜ್ವಲಂತ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ಈಗಾಗಲೇ ಕೆಲವು ತಿಂಗಳ ಹಿಂದೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ರಾಜ್ಯ ಬಿಜೆಪಿ ಸರ್ಕಾರ ಶೇ. 40ರಷ್ಟುಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು ದೂರು ನೀಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಾಗ, ಮುಖ್ಯಮಂತ್ರಿ ಮತ್ತು ಸಚಿವರು ಹಾಗೂ ಶಾಸಕರು, ಬಿಜೆಪಿ ನಾಯಕರು ಈ ಆರೋಪಗಳನ್ನು ಅಲ್ಲಗಳೆದಿದ್ದರು. ಆದರೆ, ಸ್ವತಹ ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಆಗಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ಈ ಬಿಜೆಪಿ ಸರ್ಕಾರದ ಮುಖವಾಡ ಕಳಚಿದೆ ಎಂದು ಟೀಕಿಸಿದ್ದಾರೆ.
ಸಂತೋಷ್ ಸೂಸೈಡ್ ಕೇಸ್: ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನ
ಈ ಘಟನೆ ಗುತ್ತಿಗೆದಾರರ ಆರೋಪ ಸತ್ಯವೆಂಬುದನ್ನು ಸಾಬೀತುಪಡಿಸಿದೆ. ಹಾಗೆಯೇ ಗುತ್ತಿಗೆದಾರರ ಸಂಘದ ಆರೋಪ ಕುರಿತು ಉನ್ನತಮಟ್ಟದ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರನ್ನು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ. ಪಂಚಾಯತ್ ರಾಜ್ ಮಾತ್ರವಲ್ಲ ಲೋಕೋಪಯೋಗಿ ಇಲಾಖೆ, ಜಲ ಸಂಪನ್ಮೂಲ ಮತ್ತು ಇಂಧನ ಇಲಾಖೆ ಹಾಗೂ ಕಂದಾಯ ಇಲಾಖೆಯ ಹಗರಣಗಳನ್ನು ಸಹ ತನಿಖೆಗೆ ಒಳಪಡಿಸಬೇಕು ಎಂದು ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.