ಮಂಗಳೂರು(ಡಿ.15): ಮಳೆಗಾಲದಲ್ಲಿ ಅತಿ ಹೆಚ್ಚು ಹಾನಿಗೀಡಾದ ಬೆಳ್ತಂಗಡಿ ತಾಲೂಕಿನಲ್ಲಿ ಈಗ ಕೃಷಿ ಚಟುವಟಿಕೆ ಉತ್ತೇಜನ, ಅಂತರ್ಜಲ ವೃದ್ಧಿಗಾಗಿ ಸಾಂಪ್ರದಾಯಿಕ ಕಟ್ಟ (ನದಿ, ತೊರೆಗಳ ನೀರು ಶೇಖರಿಸಿಡುವ ಮಣ್ಣಿನ ಒಡ್ಡು)ಗಳನ್ನು ಕಟ್ಟುವ ‘ಆಂದೋಲನ’ ಆರಂಭವಾಗಿದೆ.

ಈ ಪ್ರಾಚೀನ ಪದ್ಧತಿಯನ್ನು ಹೊಸ ಪೀಳಿಗೆಯ ಕಾಲೇಜು ವಿದ್ಯಾರ್ಥಿಗಳಿಗೂ ಪರಿಚಯಿಸುವ ಕಾರ್ಯವೂ ಯಶಸ್ವಿಯಾಗಿ ನಡೆಯುತ್ತಿದೆ. ಈ ಪರಿಸರಸ್ನೇಹಿ ಅಭಿವೃದ್ಧಿಯ ಕೈಂಕರ್ಯ ನಡೆಯುತ್ತಿರುವುದು ಬೆಳ್ತಂಗಡಿಯ ನಾರಾವಿಯಲ್ಲಿ. ಜಿಪಂ ಸದಸ್ಯ ಧರಣೇಂದ್ರ ಕುಮಾರ್ ಅವರ ಮುಂದಾಳತ್ವದಲ್ಲಿ ಡಿ.9ರಿಂದ ಆರಂಭಗೊಂಡು ಇದುವರೆಗೆ 5 ಸಾಂಪ್ರದಾಯಿಕ ಕಟ್ಟಗಳನ್ನು ಕಟ್ಟಲಾಗಿದೆ. ಕ್ಷೇತ್ರದ ಎಲ್ಲೆಡೆ ಒಟ್ಟು 50 ಕಟ್ಟ ಕಟ್ಟುವ ಉದ್ದೇಶ ಹೊಂದಿದ್ದು, ಜನರಲ್ಲಿ ಜಾಗೃತಿ ಮೂಡಿಸಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಕಟ್ಟ ಕಟ್ಟುವ ಜಾಗಗಳನ್ನೂ ಗುರುತಿಸಲಾಗಿದೆ.

200 ಹೆಕ್ಟೇರ್‌ಗೆ ನೀರು:

ನಾರಾವಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ 19 ಗ್ರಾಮಗಳು, 4 ತಾಲೂಕು ಪಂಚಾಯ್ತಿಗಳು ಬರುತ್ತವೆ. ಪ್ರತಿ ಗ್ರಾಮದಲ್ಲೂ ಸಾಂಪ್ರದಾಯಿಕ ಕಟ್ಟ ಕಟ್ಟಲಾಗುವುದು. ಇದರಿಂದ ಸುಮಾರು 200 ಹೆಕ್ಟೇರ್ ಕೃಷಿಗೆ ನೀರು ಸಿಗಲಿದೆ. ಮಾತ್ರವಲ್ಲ, ಇಡೀ ಭೂ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಿ ಬೇಸಗೆಯಲ್ಲೂ ನೀರ ಬವಣೆ ನೀಗುವ ನಿರೀಕ್ಷೆಯಿದೆ ಎನ್ನುತ್ತಾರೆ ಧರಣೇಂದ್ರ ಕುಮಾರ್.

ವಿದ್ಯಾರ್ಥಿಗಳು ಕೈಜೋಡಿಸ್ತಾರೆ:

ಕರಾವಳಿಯ ಸಾಂಪ್ರದಾಯಿಕ ಕಟ್ಟ (ಮಣ್ಣಿನ ಒಡ್ಡು) ಕಟ್ಟಲು ಆಯಾ ಊರಿನವರ ಜತೆಗೆ ವಿವಿಧ ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಮೊದಲ ಹಂತದಲ್ಲಿ ಆಳ್ವಾಸ್ ಕಾಲೇಜಿನ 100 ವಿದ್ಯಾರ್ಥಿಗಳು 7 ದಿನಗಳ ಕಟ್ಟ ಕಟ್ಟುವ ಶ್ರಮದಾನದಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಮೂಡುಬಿದಿರೆ ಪಾಲಿಟೆಕ್ನಿಕ್ ಕಾಲೇಜು, ವಾಮದಪದವು ಡಿಗ್ರಿ ಕಾಲೇಜು, ಮೇಲಂತಬೆಟ್ಟು ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದರ ಪ್ರಾಯೋಗಿಕ ಅನುಭವ ಪಡೆಯಲಿದ್ದಾರೆ. ಹೊಸ ಪೀಳಿಗೆಗೂ ಈ ಕೌಶಲ್ಯವನ್ನು ದಾಟಿಸುವ ಪ್ರಯತ್ನ ನಡೆಯುತ್ತಿದೆ.

ಕಟ್ಟೋದು ಹೇಗೆ?:

ಸಿಮೆಂಟ್‌ನ ದೊಡ್ಡ ಡ್ಯಾಂ ಕಟ್ಟಬೇಕಾದರೆ ಲಕ್ಷ, ಕೋಟಿಗಳ ಲೆಕ್ಕದಲ್ಲಿ ಹಣ ಸುರಿಯಬೇಕು. ಆದರೆ ಸಾಂಪ್ರದಾಯಿಕ ಕಟ್ಟಕ್ಕೆ ಖರ್ಚೇ ಇಲ್ಲ. ಶ್ರಮದಾನಿಗಳ ಊಟ, ತಿಂಡಿಯ ಖರ್ಚು ಮಾತ್ರ! ಮೊದಲಿಗೆ ಹೊಳೆಯ ಅಗಲಕ್ಕೆ (ಸಾಮಾನ್ಯವಾಗಿ 10ರಿಂದ 40 ಮೀಟರ್) ಅನುಗುಣವಾಗಿ ಸಾಕಾಗುವಷ್ಟು ಚೀಲಗಳಲ್ಲಿ ಮಣ್ಣು ತುಂಬಿಸಿಡಬೇಕು. ಬಳಿಕ ಹೊಳೆಯ ಒಂದು ಬದಿಯಿಂದ ಮುಕ್ಕಾಲು ಮೀಟರ್ ಅಂತರದಲ್ಲಿ ಸಮನಾಂತರವಾಗಿ ಹೊಳೆಗೆ ಅಡ್ಡಲಾಗಿ ಈ ಚೀಲಗಳನ್ನು ಜೋಡಿಸುತ್ತಾ ಹೋಗಬೇಕು. ಅದೇ ಹೊತ್ತಿಗೆ ಈ ಚೀಲಗಳ ಸಾಲಿನ ನಡುವಿನ ಖಾಲಿ ಜಾಗದಲ್ಲಿ ಮಣ್ಣು ತುಂಬಿಸಬೇಕು.

ಲಕ್ಷ ದಾಟುತ್ತಿದ್ದ ವಿದ್ಯುತ್ ಬಿಲ್ ಸಾವಿರಕ್ಕಿಳಿಯಿತು..! ಸಕ್ಸಸ್ ಆಯ್ತು ವೈದ್ಯ ದಂಪತಿ ಪ್ಲಾನ್

ಸುಮಾರು 5-6 ಅಡಿ ಎತ್ತರ ಹೀಗೆ ಒಡ್ಡು ಕಟ್ಟಿದ ಬಳಿಕ ಅಣೆಕಟ್ಟಿನಲ್ಲಿದ್ದಂತೆ ನೀರು ಶೇಖರಣೆ ಹೆಚ್ಚುತ್ತಾ ಹೋಗುತ್ತದೆ. 40 ಮೀ. ಅಗಲದ ಹೊಳೆಗೆ ಏನಿಲ್ಲವೆಂದರೂ 500-700 ಚೀಲಗಳು ಬೇಕಾಗುತ್ತವೆ. ಈಗಾಗಲೇ 5 ಸಾವಿರ ಚೀಲಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಶ್ರಮದಾನದಲ್ಲಿ ಪಾಲ್ಗೊಂಡವರಿಗೆ ಊಟ, ತಿಂಡಿಯನ್ನು ಸ್ಥಳೀಯರೇ ಪೂರೈಕೆ ಮಾಡುತ್ತಾರೆ. ಅದು ಬಿಟ್ಟರೆ ಬೇರೆ ಖರ್ಚು ಇಲ್ಲ. ವಿದ್ಯಾರ್ಥಿಗಳೂ ಹುರುಪಿನಿಂದ ತೊಡಗಿಸಿಕೊಂಡಿದ್ದಾರೆ. ಈಗ ಕೆಲವೆಡೆ ಹೊಳೆಗಳ ಹರಿವು ಹೆಚ್ಚಿರುವುದರಿಂದ ಕಟ್ಟದ ಅಂತಿಮ ಕೆಲಸ ಮಾಡಲು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಹರಿವು ಕಡಿಮೆಯಾಗುವುದರಿಂದ ಡಿಸೆಂಬರ್ ಅಂತ್ಯದೊಳಗೆ ಯೋಜಿಸಿದಂತೆ ಎಲ್ಲ ೫೦ ಕಟ್ಟಗಳನ್ನು ಕಟ್ಟಲಾಗುವುದು ಎಂದು ಧರಣೇಂದ್ರ ಕುಮಾರ್ ತಿಳಿಸಿದ್ದಾರೆ.

ಒಂದು ಕಟ್ಟಕ್ಕೆ ಒಂದೇ ದಿನ ಸಾಕು!

ಒಂದು ಚಿಕ್ಕ ಕಿಂಡಿ ಅಣೆಕಟ್ಟು ಕಟ್ಟಬೇಕಾದರೂ ಸರ್ಕಾರಿ ವ್ಯವಸ್ಥೆಗೆ ಹತ್ತಾರು ದಿನಗಳೇ ಹಿಡಿಯುತ್ತವೆ. ಅದಕ್ಕೆ ಹೋಲಿಸಿದರೆ ಈ ಕಟ್ಟವೇ ಬೆಸ್ಟ್! ಕೇವಲ ಒಂದು ದಿನದಲ್ಲಿ ಕೆಲಸ ಪೂರ್ತಿಯಾಗಿ ನೀರು ಶೇಖರಣೆಯಾಗುತ್ತದೆ. ಮುಂದಿನ ಮಳೆಗಾಲದವರೆಗೂ ಇರುವ ಈ ಕಟ್ಟ ನಂತರ ಕೊಚ್ಚಿಹೋಗುತ್ತದೆ. ಮಳೆಗಾಲ ಮುಗಿದ ಮೇಲೆ ಒಂದು ದಿನದ ಕೆಲಸ ಮಾಡಿದರೆ ಇಡೀ ವರ್ಷ ಸಾಕಾಗುವಷ್ಟು ನೀರು ಸಿಗುತ್ತದೆ ಎನ್ನುವುದು ಇದರ ವಿಶೇಷ.

ಗಗನಕ್ಕೇರಿದ್ದ ಈರುಳ್ಳಿ ಧಾರಣೆ ಧರೆಯತ್ತ!

ನಮ್ಮ ಪೂರ್ವಜರು ಪರಿಸರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಈ ಸಾಂಪ್ರದಾಯಿಕ ಕಟ್ಟವೂ ಅವರ ಕೊಡುಗೆಯೇ. ಈಗ ಆಧುನಿಕರಣದಿಂದ ಎಲ್ಲವೂ ಬದಲಾಗುತ್ತಿದೆ. ಆದರೆ ಪರಿಸರಸ್ನೇಹಿಯಾಗಿರುವ ಈ ಕಟ್ಟ ಕಟ್ಟುವುದರಿಂದ ಅಂತರ್ಜಲ ವೃದ್ಧಿಯಾಗುವುದಲ್ಲದೆ, ಕೃಷಿಗೂ ಸಾಕಷ್ಟು ನೀರು ಪೂರೈಕೆಯಾಗುತ್ತದೆ. ಪ್ರಕೃತಿ, ಪ್ರಾಣಿ ಸಂಕುಲಗಳೂ ಉಳಿಯುತ್ತವೆ. ಮುಂದಿನ ಪೀಳಿಗೆಗೂ ಈ ಕೌಶಲ್ಯವನ್ನು ಹಸ್ತಾಂತರಿಸಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳನ್ನು ಇದರಲ್ಲಿ ಒಳಗೊಳಿಸುತ್ತಿದ್ದೇವೆ ? ಜಿಪಂ ಸದಸ್ಯ ಧರಣೇಂದ್ರ ಕುಮಾರ್ ನಾರಾವಿ ಹೇಳಿದ್ದಾರೆ.

-ಸಂದೀಪ್ ವಾಗ್ಲೆ