Asianet Suvarna News Asianet Suvarna News

ಬೆಳಗಾವಿ ಗಡಿವಿವಾದ ಚೆಂಡು ಕೇಂದ್ರ ಗೃಹ ಇಲಾಖೆ ಅಂಗಳಕ್ಕೆ..!

ಯಾವುದೇ ಎರಡು ರಾಜ್ಯಗಳ ಗಡಿ ವಿವಾದ ತೀರ್ಮಾನ ಕೋರ್ಟ್‌ ವ್ಯಾಪ್ತಿಗೆ ಬರುವುದಿಲ್ಲ| ಕೇಂದ್ರ ಗೃಹ ಇಲಾಖೆ ಈ ವಿಷಯವನ್ನು ಸಂಸತ್‌ನಲ್ಲಿ ಪ್ರಸ್ತಾಪಿಸಬಹುದು| ಸಂಸತ್‌ ಮಾತ್ರ ಚರ್ಚೆ ಮೂಲಕ ನಿರ್ಧರಿಸಿ ರಾಷ್ಟ್ರಪತಿ ವಿವೇಚನೆಗೆ ಬಿಡಬೇಕು| 

Belagavi Border Dispute Will be Decide Central Home Department grg
Author
Bengaluru, First Published Jan 21, 2021, 1:08 PM IST

ಜಗದೀಶ ವಿರಕ್ತಮಠ 

ಬೆಳಗಾವಿ(ಜ.21): ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ಇನ್ನಿತರೆ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಪ್ರಕರಣದ ವಿಚಾರ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ರಾಜ್ಯಗಳ ಮಧ್ಯದ ಗಡಿ ವಿವಾದ ಕೇಂದ್ರ ಗೃಹ ಸಚಿವರ ಅಂಗಳದಲ್ಲಿದ್ದು, ಇದೀಗ ಕೇಂದ್ರ ಗೃಹ ಖಾತೆ ಸಚಿವ ಅಮಿತ ಶಾ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದ ಕುರಿತು 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರಿಂ ಕೋರ್ಟ್‌ನಲ್ಲಿ ಅತೀ ಹೆಚ್ಚು ಮರಾಠಿ ಮಾತನಾಡುವ ಬೆಳಗಾವಿ ನಗರ ಹಾಗೂ 810 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ವಿಲೀನ ಮಾಡಬೇಕು ಎಂದು ದಿವಾಣಿ ಪ್ರಕರಣವೊಂದನ್ನು ದಾಖಲಿಸಿದೆ. ಆದರೆ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆ 1956 ಕಾಯ್ದೆ 7(1) (ಚಿ) - ಘ್ಕಿ(ಚಿ)ಮತ್ತು 8(1)(ಚಿ)(1)ಯನ್ನು ರದ್ದುಪಡಿಸಿ, ಹೆಚ್ಚಿನ ಸಂಖ್ಯೆಯ ಮರಾಠಿ ಭಾಷಿಕರನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಸೇರಿದಂತೆ ಗಡಿ ಭಾಗದ 810 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ವಾದವನ್ನು ಮುಂದಿಟ್ಟುಕೊಂಡು ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ. ಆದರೆ ಗಡಿ ವಿವಾದವು ಯಾವುದೇ ದಿವಾಣಿ ನ್ಯಾಯಾಲಯ, ಪ್ರಧಾನ ಮಂತ್ರಿ, ಸಂಸದೀಯ ವ್ಯವಹಾರ ಹಾಗೂ ಕಾನೂನು ಮಂತ್ರಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ಸಂಸತ್ತಿನಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಸಂಸತ್‌ನಲ್ಲಿ ಚರ್ಚೆಗೆ ತರಬಹುದಾದಲ್ಲಿ ಪ್ರಕರಣವನ್ನು ಸ್ವತಃ ಕೇಂದ್ರ ಗೃಹ ಸಚಿವರೇ ಪ್ರಸ್ತಾವ ಸಲ್ಲಿಸಬೇಕು. ಅಂದಾಗ ಮಾತ್ರ ಚರ್ಚೆ ನಡೆಸಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.

ದ್ವಂಧ್ವ ನಿಲುವಿನಲ್ಲಿ ಮಹಾರಾಷ್ಟ್ರ:

ಗಡಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ದ್ವಂದ್ವ ನಿಲುವು ತಾಳಿದ್ದಲ್ಲದೇ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಿ ಕೈ ಕಟ್ಟಿಸಿಕೊಂಡಿದೆ. ಎಂಇಎಸ್‌ ಕಾರ್ಯಕರ್ತ ಹಾಗೂ ವಕೀಲ ಅರುಣಕುಮಾರ ದತ್ತಾತ್ರೇಯ ಸರದೇಸಾಯಿ ಎಂಬುವರು 1988ರಲ್ಲೇ ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿನ ದಿವಾಣಿ ನ್ಯಾಯಾಲಯದಲ್ಲಿ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆ 1956 ಕಾಯ್ದೆ 7(1)(ಘ್ಕಿಚಿಘಿಖ) ಮತ್ತು 8(1)(ಘ್ಕಿaಘಿಖ) ಹಾಗೂ 8(2)ಯನ್ನು ರದ್ದುಪಡಿಸಿ, ಹೆಚ್ಚಿನ ಸಂಖ್ಯೆಯ ಮರಾಠಿ ಭಾಷಿಕರನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಸೇರಿದಂತೆ ಗಡಿ ಭಾಗದ 810 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ದೈಹಿಕವಾಗಿ ನಾವು ಈ ಪ್ರದೇಶಲ್ಲಿದ್ದು ಮಾನಸಿಕವಾಗಿ ನಾವೆಲ್ಲರೂ ಮಹಾರಾಷ್ಟ್ರದಲ್ಲಿದ್ದೇವೆ. ಆದ್ದರಿಂದ ಇಲ್ಲಿ ಯಾವುದೇ ರೀತಿಯ ತೆರಿಗೆ ತುಂಬುವುದಿಲ್ಲ. ಕರ್ನಾಟಕ ಸರ್ಕಾರ, ಅಂದಿನ ಬೆಳಗಾವಿ ಎಸ್ಪಿ ಕೆ.ನಾರಾಯಣರಾವ್‌ ಹಾಗೂ ಖಾನಾಪುರ ಠಾಣೆಯ ಪಿಎಸ್‌ಐ ಸುರೇಶ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪೊಲೀಸರು ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ವಾದ ಮಾಡಿದ್ದರು.

ಉದ್ಧವ್ ಉದ್ಧಟತನ ಹೇಳಿಕೆ: ಮತ್ತೆ ಬೆಳಗಾವಿ ಗಡಿ ವಿವಾದ ಕೆದಕಿದ ಮಹಾ ಸಿಎಂ

ಈ ಪ್ರಕರಣದ ವಿಚಾರಣೆ ನಡೆಸಿದ ಖಾನಾಪುರದ ದಿವಾಣಿ ನ್ಯಾಯಾಲಯವು ಗಡಿವಿವಾದ ಪ್ರಕರಣ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ, ಕೇಂದ್ರಿಯ ಕಾಯ್ದೆಗಳು ಸಾಂವಿಧಾನಿಕ ಹಕ್ಕನ್ನು ಪಡೆದುಕೊಂಡು ಬಂದಿರುವುದರಿಂದ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆ 1956 ಕಾಯ್ದೆ 7(1)(ಘ್ಕಿಚಿಘಿಖ) ಮತ್ತು 8(1) (ಘ್ಕಿaಘಿಖ) ಹಾಗೂ 8(2)ಯನ್ನು ರದ್ದುಪಡಿಸುವ ಅಧಿಕಾರ ದಿವಾಣಿ ನ್ಯಾಯಾಲಯದ ವ್ಯಾಪ್ತಿಗಿಲ್ಲ ಎಂದು ತಿಳಿಸಿ, ಈ ಅರ್ಜಿಯನ್ನು ತಿರಸ್ಕರಿಸಿದ್ದರಿಂದ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು, ಜಿಲ್ಲಾ ನ್ಯಾಯಾಲಯವೂ ವಿಚಾರಣೆ ನಡೆಸಿ, ಮತ್ತೆ ಕೆಳ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳ ಪರಿಶೀಲಿಸಿ ಮರುಪರಿಶೀಲನೆ ನಡೆಸುವಂತೆಯೂ ಆದೇಶಿಸಿತ್ತು.

ಇದೇ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ 1988 ನವೆಂಬರ್‌ 07 ರಂದು ಕೈಫಿಯತ (ಆಕ್ಷೇಪಣಾ ಪತ್ರ) ಸಲ್ಲಿಸಿತ್ತು. ಕೈಫಿಯತ್ತಿಗೆ ಕೊಲ್ಹಾಪುರ ಡಿಸ್ಟ್ರಿಕ್ಟ್ ಗವರ್ನ್‌ಮೆಂಟ್‌ ವಕೀಲ ಎಸ್‌.ಜಿ.ನಾಯಿಕ ಎಂಬುವರು ಸಹಿ ಮಾಡಿದ್ದರು. ಕೈಫಿಯತ್ತನಲ್ಲಿ ಗಡಿ ವಿಚಾರವು ದಿವಾಣಿ ನ್ಯಾಯಾಲಯದ ವ್ಯಾಪ್ತಿಗಿಲ್ಲ ಹಾಗೂ ರಾಜ್ಯ ಪುನರ್‌ ವಿಂಗಡಣಾ ಕಾಯ್ದೆಯ ಕಲಂ ಅನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಗಡಿ ವಿಚಾರ ಸಂಸತ್ತಿನಲ್ಲಿ ಚರ್ಚೆ ಮಾಡುವ ಮೂಲಕ ಅಧಿನಿಯಮಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಅಲ್ಲದೆ, ಈ ಮೂಲಕವೇ ಇತ್ಯರ್ಥಪಡಿಸಬೇಕಾಗುತ್ತದೆ ಎಂದು ಕೈಫಿಯತನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ. ಒಂದು ಕಡೆ ಮಹಾರಾಷ್ಟ್ರ ಸರ್ಕಾರದ ಸರ್ಕಾರಿ ವಕೀಲ ಅವರು ಸಿದ್ಧಪಡಿಸಿದ ಕೈಫಿಯತ್ತನಲ್ಲಿ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎಂಬ ಅಂಶವನ್ನು ನಮೂದಿಸಲಾಗಿದ್ದರೂ, ಗಡಿ ವಿಚಾರ ಕುರಿತು 2004ರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿಕೊಂಡು ಸುಪ್ರಿಂ ಕೋರ್ಟ್‌ನ ಮೋರೆ ಹೋಗಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಜಿಜ್ಞಾಸೆ ಈಗ ಆರಂಭಗೊಂಡಿದೆ.

ನ್ಯಾಯಾಲಯದ ವ್ಯಾಪ್ತಿಗೆ ಬರದಿದ್ದರೂ ಮಹಾ ಅರ್ಜಿ ಯಾಕೆ?

ಎರಡು ರಾಜ್ಯಗಳ ಮಧ್ಯದ ಗಡಿ ವಿವಾದ ಇತ್ಯರ್ಥ ಅಧಿಕಾರಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಂವಿಧಾನದಲ್ಲೇ ಹೇಳಿದ್ದರೂ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರಿಂ ಕೋರ್ಟ್‌ ಯಾವ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿತು ಎಂಬ ಪ್ರಮುಖ ಪ್ರಶ್ನೆ ಉದ್ಭವ ಆಗುತ್ತದೆ. ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸಿ ವಕೀಲರೊಬ್ಬರ ಹೇಳಿದ್ದ ಮತ್ತು ಅದು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದನ್ನು ಗಮನಿಸಿರುವ ಪ್ರಕಾರ ಗಡಿಭಾಗದಲ್ಲಿನ ಮರಾಠಿ ಜನರಿಗೆ ಕಿರುಕುಳ ನೀಡುತ್ತಿದೆ. ಅದಕ್ಕಾಗಿ ನಮಗೆ ಅದರಿಂದ ಮುಕ್ತಹೊಂದಲು ನಮ್ಮ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸರೇಸಬೇಕು ಎಂದು ಮಹಾರಾಷ್ಟ್ರ ಸರ್ಕಾರವು ಪ್ರತಿಪಾದಿಸಿದೆ. ಇದನ್ನು ಆಧರಿಸಿ ಸುಪ್ರಿಂ ಕೋರ್ಟ್‌ ಪ್ರಕರಣ ದಾಖಲು ಮಾಡಿಕೊಂಡಿದೆ ಎಂಬುದು. ಇನ್ನು ಈ ಪ್ರಕರಣ ಯಾಕೆ ವಿಚಾರಣೆಗೆ ಬರುತ್ತಿಲ್ಲ ಎಂಬ ಇನ್ನೊಂದು ಪ್ರಮುಖ ಪ್ರಶ್ನೆಯಾಗಿದೆ. ಅದಕ್ಕೆ ಕಾರಣ ಇಷ್ಟೆ.

ಬೆಳಗಾವಿ, ನಿಪ್ಪಾಣಿ, ಕಾರವಾರ ನಮ್ಮದು: ಶಿವಸೇನೆ ಬಳಿಕ ಮಹಾ ಕಾಂಗ್ರೆಸ್‌ ಕ್ಯಾತೆ!

ಈ ಪ್ರಕರಣ ಸುಪ್ರಿಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಮೋಹನ ಎಂ.ಶಾಂತನಗೌಡರ ಎಂಬವರ ಬೆಂಚ್‌ಗೆ ಬರುತ್ತದೆ. ಆಗ ಅವರು ನಾನು ಕರ್ನಾಟಕ ಮೂಲದವನು. ನಾನು ಈ ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಂಡರೆ ಅದು ಕರ್ನಾಟಕ ಪರ ತೀರ್ಪು ಬಂದರೆ ಭಾಷೆ, ರಾಜ್ಯ ಪರ ಕೆಲಸ ಮಾಡಿದ ಆರೋಪ ಕೇಳಿ ಬರುವ ಸಾಧ್ಯತೆ ಇರುವುದರಿಂದ ಈ ಪ್ರಕರಣವನ್ನು ನಾನು ವಿಚಾರಣೆಗೆ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ ಎಂದು ಪ್ರಕರಣ ವಿಚಾರಣೆ ನಡೆಸಲು ನಿರಾಕರಿಸಿದರು. ಇದರಿಂದ ಪ್ರಕರಣ ವಿಚಾರಣೆ ಮುಂದೂಡಲ್ಪಟ್ಟಿತು. ಅವರ ನಂತರ ಮಹಾರಾಷ್ಟ್ರ ಮೂಲವರಾದ ಸುಪ್ರಿಂಕೋರ್ಟ್‌ ನ್ಯಾಯಮೂರ್ತಿ ಯೊಬ್ಬರ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಾಗ ಅವರು ಕೂಡ ನ್ಯಾ. ಮೋಹನ ಎಂ ಶಾಂತನಗೌಡರ ಅವರು ಕೊಟ್ಟಕಾರಣ ನೀಡಿ ಪ್ರಕರಣ ವಿಚಾರಣೆಗೆ ಎತ್ತಿಕೊಳ್ಳಲು ನಿರಾಕರಿಸಿದರು.

ಈ ಕಾರಣದಿಂದ ಗಡಿ ವಿವಾದದ ಈ ಪ್ರಕರಣ ವಿಚಾರಣೆಯಲ್ಲಿ ವಿಳಂಬ ಆಗಿದೆ ಹೊರತು ಬೇರೆ ಯಾವುದೇ ಕಾರಣ ಇಲ್ಲ ಎಂದು ಕಾನೂನು ತಜ್ಞರಿಂದ ಪಡೆದ ಮಾಹಿತಿಯ ಮೂಲವು ಹೇಳುತ್ತಿದೆ. ಇದರಲ್ಲಿ ಈಗ ಕೇಂದ್ರ ಗೃಹ ಖಾತೆ ಮಧ್ಯಪ್ರವೇಶಿಸಿ ಗಡಿ ಭಾಗದಲ್ಲಿನ ವಿವಾದ ಇತ್ಯರ್ಥಪಡಿಸಲು ಸಂಸತ್ತಿನ ಮುಂದೆ ಪ್ರಸ್ತಾಪಿಸಿ ಅಭಿಪ್ರಾಯ ಸಂಗ್ರಹಿಸಿ ರಾಷ್ಟ್ರಪತಿ ಅವರು ಒಪ್ಪಿಗೆ ಪಡೆದು ವಿವಾದಕ್ಕೆ ಅಂತ್ಯ ಹಾಡಬಹುದಾಗಿದೆ ಎನ್ನುತ್ತಾರೆ ಕಾನೂನು ತಜ್ಞರು.

2004ರಲ್ಲಿ ಸುಪ್ರೀಂಗೆ ಹೋಗಿದ್ದ ಮಹಾರಾಷ್ಟ್ರ

1988ರಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ದಿವಾಣಿ ನ್ಯಾಯಾಲಯ ಸ್ಪಷ್ಟವಾಗಿ ನಿರ್ಧಾರ ಕೈಗೊಂಡಿದ್ದರೂ, ಮಹಾರಾಷ್ಟ್ರ ಸರ್ಕಾರವು ಎಸ್‌.ಜಿ.ನಾಯಕ ಮೂಲಕ ಸಲ್ಲಿಸಿರುವ ಕೈಫಿಯತ್‌ನಲ್ಲಿ (ಆಕ್ಷೇಪಣಾ ಪತ್ರ) ಗಡಿ ಪ್ರಕರಣ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೂ 2004 ರಲ್ಲಿ ಮಹಾರಾಷ್ಟ್ರ ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವ ಮೂಲಕ ಸತ್ತ ಹಾವು ಬಡಿದೆಬ್ಬಿಸುವ ಪ್ರಯತ್ನ ನಡೆಸಿದೆ.
ಈಗಾಗಲೇ 1988 ರಲ್ಲಿನ ದಿವಾಣಿ ನ್ಯಾಯಾಲಯದ ತೀರ್ಪು ಸೇರಿದಂತೆ ಒಟ್ಟು 400 ಪುಟಗಳ ಮಹತ್ವದ ದಾಖಲೆಗಳನ್ನು ಈಗಾಗಲೇ ಕೇಂದ್ರ ಸಂಸದೀಯ, ಕಾನೂನು ಮತ್ತು ಪ್ರಧಾನ ಮಂತ್ರಿ ಮಂತ್ರಾಲಯಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮೂರು ಮಂತ್ರಾಲಯಗಳು ಗಡಿ ಪ್ರಕರಣವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ. ಗೃಹ ಮಂತ್ರಾಲಯಕ್ಕೆ ಬರುತ್ತವೆ ಎಂದು ಪತ್ರ ನೀಡಿವೆ. ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಸಲ್ಲಿಸಲಾಗಿದೆ.

ಈ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಅವರು ಕರ್ನಾಟಕ ಗಡಿ ಹಾಗೂ ನದಿ ಸಂರಕ್ಷಣಾ ಆಯೋಗಕ್ಕೂ ಪತ್ರಬರೆದಿದ್ದಾರೆ. ಈ ದಾಖಲೆಗಳನ್ನು ಇಟ್ಟುಕೊಂಡು ಮಹಾರಾಷ್ಟ್ರ ದಾಖಲಿಸಿರುವ ಪ್ರಕರಣವನ್ನು ವಜಾಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿರಿಯ ವಕೀಲ ಹಾಗೂ ಗಡಿತಜ್ಞರಾದ ಡಾ.ರವೀಂದ್ರ ತೋಟಿಗೇರ ಒತ್ತಾಯಿಸಿದ್ದಾರೆ.
 

Follow Us:
Download App:
  • android
  • ios