ಬೆಂಗಳೂರು: ಬಿಬಿಎಂಪಿಗೆ ಜನಪ್ರತಿನಿಧಿಗಳಿಲ್ಲದೇ 3 ವರ್ಷ ಪೂರ್ಣ
2006ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಗಿ ಮರು ರಚನೆ ಬಳಿಕ ಮೊದಲ ಬಾರಿಗೆ 2010ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಿತು. ಬಳಿಕ 2015ರಲ್ಲಿ ಎರಡನೇ ಬಾರಿ ಚುನಾವಣೆ ನಡೆಯಿತು. ಆ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ 2020ರ ಸೆ.10ಕ್ಕೆ ಕೊನೆಯಾಗಿತ್ತು. ಆ ಬಳಿಕ ಈವರೆಗೆ ಬಿಬಿಎಂಪಿಗೆ ಚುನಾವಣೆ ನಡೆಸಿಲ್ಲ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಅ.13): ರಾಜಧಾನಿ ಬೆಂಗಳೂರಿನ ಮೂಲಸೌರ್ಯ ನಿರ್ವಹಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಜನಪ್ರತಿನಿಧಿಗಳಿಲ್ಲದೇ ಮೂರು ವರ್ಷ ಪೂರ್ಣಗೊಂಡು ನಾಲ್ಕೇ ವರ್ಷಕ್ಕೆ ಕಾಲಿಟ್ಟಿದ್ದು, ಅಧಿಕಾರಿಗಳ ದರ್ಬಾರ್ ಮುಂದುವರೆದಿದೆ. 2006ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಗಿ ಮರು ರಚನೆ ಬಳಿಕ ಮೊದಲ ಬಾರಿಗೆ 2010ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯಿತು. ಬಳಿಕ 2015ರಲ್ಲಿ ಎರಡನೇ ಬಾರಿ ಚುನಾವಣೆ ನಡೆಯಿತು. ಆ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ 2020ರ ಸೆ.10ಕ್ಕೆ ಕೊನೆಯಾಗಿತ್ತು. ಆ ಬಳಿಕ ಈವರೆಗೆ ಬಿಬಿಎಂಪಿಗೆ ಚುನಾವಣೆ ನಡೆಸಿಲ್ಲ.
2020ರ ಸೆ.11ರಿಂದ ಬಿಬಿಎಂಪಿಯಲ್ಲಿ ರಾಜ್ಯ ಸರ್ಕಾರ ನೇಮಕ ಮಾಡಿದ ಹಿರಿಯ ಐಎಎಸ್ ಅಧಿಕಾರಿಯೇ ಆಡಳಿತಾಧಿಕಾರಿಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಈವರೆಗೆ ಒಟ್ಟು ಇಬ್ಬರು ಅಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ. ಸದ್ಯ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಆಡಳಿತಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದಾರೆ.
Bengaluru ಬಿಬಿಎಂಪಿಯಲ್ಲಿ 225 ವಾರ್ಡ್ ರಚಿಸಿದ ಸರ್ಕಾರ: ನಿಮ್ಮ ವಾರ್ಡ್ ಯಾವುದು?
ವಾರ್ಡ್‌ಗೆ ಒಬ್ಬ ನೋಡಲ್ ಅಧಿಕಾರಿ ನೇಮಕ:
ಜನಪ್ರತಿ ನಿಧಿಗಳು ಇಲ್ಲದಿರುವುದರಿಂದ ಜನರ ಸಮಸ್ಯೆ ಆಲಿಸಿ ಪರಿಹಾರ ಕೈಗೊಳ್ಳುವುದಕ್ಕೆ ಬಿಬಿಎಂಪಿಯ ಪ್ರತಿ ವಾರ್ಡ್‌ಗೆ ಒಬ್ಬೊಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಆದರೆ, ನೋಡಲ್ ಅಧಿಕಾರಿಗಳು ಸ್ಥಳೀಯರ ಕೈಗೆ ಸಿಗುತ್ತಿಲ್ಲ. ಇನ್ನು ಬಿಬಿಎಂಪಿಗೆ ಚುನಾವಣೆ ನಡೆಯದಿರುವುದರಿಂದ ವಾರ್ಡ್ ಸಮಿತಿಗಳೂ ತಮ್ಮ ಅಸ್ಥಿತ್ವ ಕಳೆದುಕೊಂಡಿವೆ. ಹೀಗಾಗಿ, ಜನರ ಸಮಸ್ಯೆ ಕೇಳುವರೇ ಇಲ್ಲದಂತಾಗಿದೆ.
ಚುನಾವಣೆ ನಡೆಯುವ ಲಕ್ಷಣ ಇಲ್ಲ
ಸದ್ಯಕ್ಕೆ ಬಿಬಿಎಂಪಿಗೆ ಚುನಾವಣೆ ನಡೆಯುವ ಲಕ್ಷಣ ಕಾಣುತ್ತಿಲ್ಲ. ಬಿಬಿಎಂಪಿಯ ವಾರ್ಡ್ ಗಳ ಪುನರ್ ವಿಂಗಡಣೆ ಆಗಿದ್ದು, 225 ವಾರ್ಡ್ ರಚನೆ ಆಗಿದೆ. ಆದರೆ, ಈ ವಾರ್ಡ್ ಗಳಿಗೆ ಇನ್ನೂ ಮೀಸಲಾತಿ ನಿಗಧಿ ಪಡಿಸಿಲ್ಲ. ಮೀಸಲಾತಿ ನಿಗಧಿ ಪಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಬೇಕು. ಕನಿಷ್ಠ 7 ರಿಂದ 15 ದಿನ ಕಾಲಾವಕಾಶ ನೀಡಬೇಕು. ಈ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಇನ್ನೂ ಆರಂಭಿಸಿಲ್ಲ. ಈ ನಡುವೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಎಲ್ಲಾ ಪಕ್ಷಗಳು ಲೋಕಸಭಾ ಸಮರಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹೀಗಾಗಿ, ಲೋಕಸಭೆ ಚುನಾವಣೆ ಬಳಿಕವೇ ಬಿಬಿಎಂಪಿ ಚುನಾವಣೆ ಎಂಬ ಮಾತುಗಳು ಬಿಬಿಎಂಪಿ ಆವರಣದಲ್ಲಿ ಕೇಳುತ್ತಿವೆ.
ಬಿಬಿಎಂಪಿಯಲ್ಲಿ 15 ಐಎಎಸ್ ದಂಡು
ಸದ್ಯ ಬಿಬಿಎಂಪಿಯ ಆಡಳಿತಕ್ಕೆ ರಾಜ್ಯ ಸರ್ಕಾರವು ಐಎಎಸ್ ಹಾಗೂ ಐಆರ್ ಎಸ್ ಸೇರಿದಂತೆ ಒಟ್ಟು 15 ಮಂದಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದೆ. ಆಡಳಿತಾಧಿಕಾರಿ, ಮುಖ್ಯ ಆಯುಕ್ತರು, ಎಂಟು ವಲಯಗಳಿಗೆ ವಲಯ ಆಯುಕ್ತರು ಹಾಗೂ ವಿವಿಧ ವಿಭಾಗಗಳಿಗೆ ವಿಶೇಷ ಆಯುಕ್ತರು ಸೇರಿದಂತೆ ಒಟ್ಟು 15 ಮಂದಿ ಅಧಿಕಾರಿಗಳು ದಂಡು ಕಾರ್ಯನಿರ್ವಹಿಸುತ್ತಿದೆ.
7 ಬಾರಿ ಆಡಳಿತಾಧಿಕಾರಿ ನೇಮಕ
ಸ್ವಾತಂತ್ರ್ಯ ನಂತರ 1949ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತ ಶುರುವಾಯಿತು. ರಚನೆಯಾದ ಬೆಂಗಳೂರು ನಗರ ಸಭೆಗೆ 1967ರಲ್ಲಿ ಮೊದಲ ಬಾರಿಗೆ ಆಡಳಿತಾಧಿಕಾರಿ ನೇಮಕ ಮಾಡಲಾಯಿತು. ಆ ಬಳಿಯ 2ನೇ ಬಾರಿ 1975ರಿಂದ 1983 ವರೆಗೆ ಆಡಳಿತಾಧಿಕಾರಿಯೇ ಅಧಿಕಾರ ನಡೆಸಿದ್ದಾರೆ.
ಡಿಸೆಂಬರ್ ಒಳಗೆ ಬಿಬಿಎಂಪಿ ಚುನಾವಣೆ: ಸಚಿವ ರಾಮಲಿಂಗಾರೆಡ್ಡಿ
3ನೇ ಬಾರಿ 1989 ರಿಂದ 1990, 4ನೇ ಬಾರಿ 1995 ರಿಂದ 1996 (ಬೆಂಗಳೂರು ಮಹಾನಗರ ಪಾಲಿಕೆ), 5ನೇ ಬಾರಿ 2006 ರಿಂದ 2010 (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ), 6ನೇ ಬಾರಿ ಏಪ್ರಿಲ್ 2015ರಿಂದ ಸೆಪ್ಟಂಬರ್ 2015 ವರೆಗೆ, ಇದೀಗ 2020 ಸೆ.11ರಿಂದ 7ನೇ ಅವಧಿಯ ಆಡಳಿತಾಧಿಕಾರಿ ಅವಧಿ ಚಾಲ್ತಿಯಲ್ಲಿದೆ.
53 ಜನ ಮೇಯರ್ ಕಂಡ ಬೆಂಗಳೂರು
1949ರಲ್ಲಿ ಬೆಂಗಳೂರು ನಗರ ಸಭೆಯಿಂದ ಮೊದಲ ಮೇಯರ್ ಆಯ್ಕೆ ಆಯಿತು. ಆ ಬಳಿಕ ಈ ವರೆಗೆ ಒಟ್ಟು 53 ಮಂದಿ ಮೇಯರ್ ಆಗಿ ಅಧಿಕಾರ ನಿರ್ವಹಿಸಿದ್ದಾರೆ. ಈ ಪೈಕಿ ಬೆಂಗಳೂರು ನಗರ ಸಭೆಯಿಂದ 33 ಮಂದಿ 1949ರಿಂದ 1995 ವರೆಗೆ ಅಧಿಕಾರ ನಡೆಸಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ 1996ರಿಂದ 2006ರ ಅವಧಿಯಲ್ಲಿ 10 ಮಂದಿ, ಬಿಬಿಎಂಪಿ ರಚನೆಯಾದ 2010ರಿಂದ 2020ರ ಅವಧಿಯಲ್ಲಿ 10 ಮಂದಿ ಮೇಯರ್ ಆಗಿದ್ದಾರೆ.