ಬ್ಯಾಡಗಿ(ಸೆ.30) ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿ, ಬ್ಯಾಡಗಿ ಮೆಣಸಿನಕಾಯಿ ನೈಜವಾದ ಬಣ್ಣ ಹಾಗೂ ರುಚಿಯನ್ನು ವಿಶ್ವಕ್ಕೆ ತಲುಪಿಸುವ ಮೂಲಕ ರೈತರು, ಕೂಲಿಕಾರ್ಮಿಕರು ಸೇರಿದಂತೆ ಸರ್ಕಾರದ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಇಲ್ಲಿನ ವ್ಯಾಪಾರಸ್ಥರ ಶ್ರಮಕ್ಕೆ ‘ನನ್ನದೊಂದು ಸಲಾಂ’ ಎಂದು ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.

ಸ್ಥಳೀಯ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಮೆಣಸಿನಕಾಯಿ ವರ್ತಕರ ಸಂಘದ 41ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಥಳೀಯ ವರ್ತಕರು ನಡೆಸುತ್ತಿರುವ ಪಾರದರ್ಶಕ ವ್ಯಾಪಾರದಿಂದ ಮತ್ತು ರೈತರು ನಮ್ಮ ಮೇಲಿಟ್ಟಿರುವ ನಂಬಿಕೆಯಿಂದ ಮಾರುಕಟ್ಟೆ ವಿಶ್ವದಲ್ಲಿಯೇ ಮೊದಲನೇ ಸ್ಥಾನಕ್ಕೆ ತಲುಪಿದ್ದು, ಇದರ ಹಿಂದೆ ರೈತರು ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರ ನಡೆಸುತ್ತಿರುವ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ಪಟ್ಟಣದ ಅಭಿವೃದ್ಧಿಗೆ ಒತ್ತು

ಕೇವಲ ವ್ಯಾಪಾರಕ್ಕಷ್ಟೇ ಸಂಘವು ಸೀಮಿತಗೊಂಡಿಲ್ಲ, ಪಟ್ಟಣದಲ್ಲಿ 1ನೇ ತರಗತಿಯಿಂದ ಪದವಿ ವರೆಗೂ ಶಾಲಾ ಕಾಲೇಜು ಪ್ರಾರಂಭಿಸಿದ್ದು ಜನರಿಗೆ ಶೈಕ್ಷಣಿಕ ಸೌಲಭ್ಯ ಕಲ್ಪಿಸಿದೆ, ಮದುವೆ ಇನ್ನಿತರ ಸಮಾರಂಭಕ್ಕೆ ಕಲ್ಯಾಣ ಮಂಟಪ, ರೈತರು ಮತ್ತು ಪರಪ್ರಾಂತದ ವ್ಯಾಪಾರಸ್ಥರು ತಂಗಲು ವಸತಿಗೃಹ ಹಾಗೂ ಸುಸಜ್ಜಿತವಾದ ಮುಕ್ತಿಧಾಮ ನಿರ್ಮಿಸುವ ಮೂಲಕ ಪಟ್ಟಣದ ಜನರಿಗೆ ಎಲ್ಲ ಹಂತದ ಚಟುವಟಿಕೆಗಳಿಗೆ ಸ್ಪಂದಿಸುತ್ತಿದೆ ಎಂದು ಹೇಳಿದ್ದಾರೆ. 

ಸಾಲ ಸೌಲಭ್ಯಕ್ಕೆ ಸ್ಪಂದಿಸಿ

ಸ್ಥಳೀಯ ವರ್ತಕರಿಂದ ಸರ್ಕಾರಕ್ಕೆ ಕೋಟಿಗಟ್ಟಲೇ ಆದಾಯ ಬರುತ್ತಿದೆ. ಹೀಗಿದ್ದರೂ ವ್ಯಾಪಾರ ಅಭಿವೃದ್ಧಿಗೆ ಸಮರ್ಪಕ ಸಾಲಸೌಲಭ್ಯ ಸಿಗದೇ ಪರದಾಡುತ್ತಿದ್ದಾರೆ, ಅದರಲ್ಲೂ ಕ್ಯಾಶಲೆಸ್‌ ಟ್ರೇಡಿಂಗ್‌ನಂತಹ ನಿರ್ಧಾರಗಳು ವರ್ತಕರಿಗೆ ಬಿಸಿತುಪ್ಪವಾಗಿದ್ದು ಹೈರಾಣಾಗಿದ್ದಾರೆ, ಎಪಿಎಂಸಿ ಅಧಿಕಾರಿಗಳು ಕೂಡಲೇ ಬ್ಯಾಂಕ್‌ನವರೊಂದಿಗೆ ಚರ್ಚಿಸಿ ಮಾರುಕಟ್ಟೆಯಲ್ಲಿನ ನಿವೇಶನ ಸಹಿತ ಅಂಗಡಿಗಳ ಮೇಲೆ ಅಡಮಾನ ವಹಿವಾಟು ಸಾಲ(ಮಾರ್ಟಗೇಜ್‌ ಓಓಡಿ ಲೋನ್‌) ಸಾಲ ಸೌಲಭ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿದರು.\

ವ್ಯಾಪಾರದ ಅಭಿವೃದ್ಧಿಗೆ ರಸ್ತೆಗಳು ಪ್ರಮುಖವಾಗಿವೆ, ಆದರೆ ಪಟ್ಟಣದ ಮುಖ್ಯರಸ್ತೆ ಕಿಷ್ಕಿಂದೆಯಾಗಿ ಸರಕು ಸಾಗಾಣಿಕಾ ವಾಹನಗಳ ಸುಗಮ ಸಂಚಾರ ಅಸಾಧ್ಯ, ಮಾರುಕಟ್ಟೆ ರಾಷ್ಟ್ರೀಯ ಹೆದ್ದಾರಿ-4 ರಿಂದ ಮಾರುಕಟ್ಟೆ ಸುಮಾರು 6 ಕಿ.ಮೀ. ಅಂತರದಲ್ಲಿದ್ದು ಕೂಡಲೇ ಎಪಿಎಂಸಿ ಹಾಗೂ ಲೋಕೋಪಯೋಗಿ ಇಲಾಖೆ ಮುಖ್ಯ ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಿಂದ ಮಾರುಕಟ್ಟೆಗೆ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ (80 ಟನ್‌ ಸಾಮರ್ಥ್ಯದ ಚತುಷ್ಪಥ ರಸ್ತೆ) ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಪಾರ್ಕಿಂಗ್‌ ಟರ್ಮಿನಲ್‌ ಬೇಕು

ಈ ವೇಳೆ ಮಾತನಾಡಿದ ಸಮಸ್ಯೆಗಳ ಪರಿಹಾರ ಸಮಿತಿ ಅಧ್ಯಕ್ಷ ಬಸವರಾಜ ಛತ್ರದ, ಎಪಿಎಂಸಿ ಪ್ರಾಂಗಣಕ್ಕೆ ಮೆಣಸಿನಕಾಯಿ ಹೊತ್ತು ತರುವಂತಹ ಲಾರಿಗಳಿಂದ ಮಾರುಕಟ್ಟೆಯ ಒಳಾಂಗಣದಲ್ಲಿ ನಿಯಂತ್ರಿಸಲು ಸಾಧ್ಯವಾಗದೇ ಟ್ರಾಫಿಕ್‌ ಜಾಮ್‌ ಸಮಸ್ಯೆ ಅತೀವವಾಗಿದೆ, ಎಪಿಎಂಸಿ ಅಧಿಕಾರಿಗಳು ಕೂಡಲೇ ಕಾರ‍್ಯಪ್ರವೃತ್ತರಾಗುವ ಮೂಲಕ ಅನ್‌ ಲೋಡ್‌ ಆದಂತಹ ಲಾರಿಗಳಿಗೆ ಸೂಕ್ತ ಸ್ಥಳ ನಿಗದಿಪಡಿಸಿ ವೈಜ್ಞಾನಿಕ ಪದ್ಧತಿಯಲ್ಲಿ ಪಾರ್ಕಿಂಗ್‌ ಟಿರ್ಮಿನಲ್‌ ನಿರ್ಮಿಸಲು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಅವಕಾಶ ಕಲ್ಪಿಸಿಕೊಡಬೇಕಾಗಿದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕಾರ‍್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಬ್ಯಾಡಗಿ ಮೆಣಸಿನಕಾಯಿ ಮೂಲ ತಳಿ ಅಭಿವೃದ್ಧಿ ಕಾಣದೇ ಅಳಿವಿನಂಚಿಗೆ ತಲುಪಿದೆ, ಒಂದು ಹಂತದಲ್ಲಿ ಗಿಡಗಳಿಗೆ ತಗಲುತ್ತಿರುವ ಮುಟುರು ರೋಗಕ್ಕೂ ಇಲ್ಲಿಯ ವರೆಗೂ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ, ರೈತರು ತಾವೇ ಬೆಳೆದ ಮೆಣಸಿನಕಾಯಿಯಲ್ಲಿನ ಬೀಜ ಸಂಗ್ರಹಿಸಿ ಮರು ಬಿತ್ತನೆ ಮಾಡುತ್ತಿದ್ದು ತಳಿ ಉಳಿಸಿಕೊಂಡು ಬಂದಿರುವ ಸಂಗತಿ ಗಮನಾರ್ಹ, ಸದರಿ ಪದ್ಧತಿಯಿಂದ ಇಳುವರಿ ಕುಂಠಿತ ಸಹಜವಾಗಿದ್ದು ಪ್ರತಿ ಹೆಕ್ಟೇರ್‌ಗೆ ಸುಮಾರು 10 ಕ್ವಿಂಟಲ್‌ ಬರುತ್ತಿದ್ದ ಜಾಗದಲ್ಲಿ ಕೇವಲ 2 ರಿಂದ 3ಕ್ಕೆ ಇಳಿದಿದೆ ಕೂಡಲೇ ಸರ್ಕಾರ ಅಭಿವೃದ್ಧಿಗೆ ಚಿಂತಿಸುವ ಮೂಲಕ ನಷ್ಟಕ್ಕೊಳ್ಳಗಾಗುತ್ತಿರುವ ರೈತರ ನೆರವಿಗೆ ಬರಬೇಕಾಗಿದೆ ಎಂದರು.