Areca Nut: ಅಡಕೆ ಬೆಲೆ ಕುಸಿತ; ಬೆಳೆಗಾರರಿಗೆ ಡಬ್ಬಲ್ ಹೊಡೆತ!
: ದರ ಏರಿಕೆಯಲ್ಲಿ ದಾಪುಗಾಲಿಕ್ಕಿ ರೈತರ ಸಂತೋಷಕ್ಕೆ ಕಾರಣವಾಗಿದ್ದ ಅಡಕೆ ಧಾರಣೆ ದಿಢೀರ್ ಕುಸಿತ ಕಂಡಿದೆ! ಮೂರು ತಿಂಗಳಲ್ಲಿ ರಾಶಿ ಇಡಿ ಮಾದರಿ ಅಡಕೆ ಪ್ರತಿ ಕ್ವಿಂಟಲ್‌ಗೆ ಸರಾಸರಿ 11-12 ಸಾವಿರ ರು. ಇಳಿಕೆಯಾಗಿರುವುದು ಅಡಕೆ ಬೆಳೆಗಾರರನ್ನ ಆತಂಕಕ್ಕೆ ದೂಡಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ (ಡಿ.7) : ದರ ಏರಿಕೆಯಲ್ಲಿ ದಾಪುಗಾಲಿಕ್ಕಿ ರೈತರ ಸಂತೋಷಕ್ಕೆ ಕಾರಣವಾಗಿದ್ದ ಅಡಕೆ ಧಾರಣೆ ದಿಢೀರ್ ಕುಸಿತ ಕಂಡಿದೆ! ಮೂರು ತಿಂಗಳಲ್ಲಿ ರಾಶಿ ಇಡಿ ಮಾದರಿ ಅಡಕೆ ಪ್ರತಿ ಕ್ವಿಂಟಲ್‌ಗೆ ಸರಾಸರಿ 11-12 ಸಾವಿರ ರು. ಇಳಿಕೆ ಕಂಡಿದೆ. ದರ ಏರಿದಾಗ ಇನ್ನಷ್ಟುಏರುತ್ತದೆ ಎಂಬ ನಿರೀಕ್ಷೆಯಲ್ಲಿ ಅಡಕೆ ಮಾರಾಟ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದ ರೈತರು ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಈ ಇಳಿಕೆ ಗತಿ ನಿಲ್ಲುವಂತೆ ಕಾಣುತ್ತಿಲ್ಲ. 40 ಸಾವಿರಕ್ಕೆ ಬಂದು ನಿಲ್ಲಬಹುದು ಎಂದು ಊಹಿಸಲಾಗುತ್ತಿದೆ. ಹಾಗೆಂದು ಈ ದರ ಇಳಿಯುತ್ತಿರುವುದ್ಯಾಕೆ? ಮೂರು ತಿಂಗಳ ಹಿಂದೆ ಏರಿಕೆಯಾಗಿದ್ದೇಕೆ ಎಂದು ಅಡಕೆ ಮಾರಾಟಗಾರರು, ಅಡಕೆ ಉದ್ಯಮ ವಲಯದವರನ್ನು ಪ್ರಶ್ನಿಸಿದರೆ ಇದೊಂದು ನಿಗೂಢ ಪ್ರಶ್ನೆ ಎನ್ನುತ್ತಾರೆ. ಯಾರು ಏನು ಹೇಳಿದರೂ ಅದು ನಿಜವಾದ ಕಾರಣ ಆಗುತ್ತದೆ ಎನಿಸುವುದಿಲ್ಲ. ನಮ್ಮ ಯೋಚನಾ ದಾಟಿಗೆ, ತಿಳಿವಳಿಕೆಗೆ, ನಮಗೆ ಬಂದಿರುವ ಮಾಹಿತಿಯನ್ನು ವಿಶ್ಲೇಷಿಸಿ ಹೇಳಬಹುದಷ್ಟೆಎನ್ನುತ್ತಾರೆ.
ಅಡಕೆ ಬೆಳೆಗಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್
ಲಾಗಾಯ್ತಿನಿಂದಲೂ ಅಡಕೆ ದರ ಏರಿಳಿತ ಇದೇ ರೀತಿಯಾಗಿದ್ದು, ಯಾರೂ ಸರಿಯಾಗಿ ಊಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇದರಲ್ಲಿ ಕೆಲವು ಪ್ರಭಾವಿ ಮತ್ತು ಅತಿ ಸಾಮರ್ಥ್ಯದ ವ್ಯಕ್ತಿಗಳ ಕೈವಾಡ ಮಾತ್ರ ಇದ್ದೇ ಇರುತ್ತದೆ ಎಂಬುದು ಈ ಹಿಂದಿನ ಅನೇಕ ಘಟನೆಗಳಿಂದ ಸಾಬೀತಾಗಿದೆ.
ಮೂರು ತಿಂಗಳ ಹಿಂದೆ ಅಡಕೆ ದರ ಏರಿಕೆ ಕಂಡಾಗ ಒಂದು ಮೂಲಗಳು ಇದೇ ಮಾತನ್ನು ಉಚ್ಚರಿಸಿದ್ದವು. ಯಾವುದೋ ಹಂತದಲ್ಲಿ ಅಡಕೆ ಧಾರಣೆ ಇಳಿಕೆಯತ್ತ ಮುಖ ಮಾಡುವ ಸಾಧ್ಯತೆ ಇದೆ. ಕೆಲವು ಭಾರೀ ವ್ಯಾಪಾರಿ ಕುಳಗಳು ಮಾರುಕಟ್ಟೆಯಲ್ಲಿ ಆಟ ಆಡುತ್ತಿದ್ದಾರೆ ಎಂಬ ಸೂಚನೆಯನ್ನು ನೀಡಿದ್ದರು. ಈಗ ಅದು ನಿಜವಾದಂತಿದೆ.
ಗುಜರಾತ್ ಚುನಾವಣೆ...:
ಇದರ ಜೊತೆಗೆ ಗುಜರಾತ್ ಚುನಾವಣೆ, ಅಲ್ಲಿ ನಡೆದಿದೆ ಎನ್ನಲಾದ ಇಡಿ ರೈಡ್‌ಗಳು, ಬಿಲ್ ಇಲ್ಲದ ನೂರಾರು ಲೋಡ್ ಅಡಕೆಯನ್ನು ಸೀಜ್ ಮಾಡಿರುವುದು ಹಣದ ಹರಿವಿಗೆ ಅಡ್ಡಿಯಾಗಿದೆ. ಹೀಗಾಗಿ ಅಡಕೆ ವ್ಯಾಪಾರಲ್ಲಿ ಜೋಷ್ ಇಲ್ಲ ಎಂದು ದರ ಇಳಿಕೆಗೆ ಕೆಲ ವ್ಯಾಪಾರಿಗಳು ಕಾರಣಗಳನ್ನು ಪಟ್ಟಿಮಾಡುತ್ತಾರೆ.
ಜೊತೆಗೆ ಉತ್ತರ ಭಾರತದಲ್ಲಿ ಚಳಿ ಶುರುವಾಗುತ್ತಿದ್ದಂತೆ ಜನ ಮನೆಯಿಂದ ಹೊರ ಬರುವುದು ಕಡಿಮೆಯಾಗುತ್ತದೆ. ಇದರ ಬೆನ್ನಲ್ಲೇ ಗುಟ್ಕಾ ಬಳಕೆ ಕಡಿಮೆಯಾಗುತ್ತದೆ. ಇದು ಹಿಂದಿನಿಂದಲೂ ನಡೆದು ಬಂದಿದ್ದು, ಉತ್ತರ ಭಾರತದ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಇಲ್ಲಿ ದರ ಕುಸಿಯುತ್ತದೆ ಎನ್ನುತ್ತಾರೆ ವ್ಯಾಪಾರಿಯೊಬ್ಬರು.
2022ರ ಆಗಸ್ಟ್ 1 ರಂದು ರಾಶಿಇಡಿ ಮಾದರಿಯ ಅಡಕೆ ಗರಿಷ್ಠ ಕ್ವಿಂಟಲ್‌ಗೆ 38,320 ರು. ಇದ್ದುದು ನಿಧಾನವಾಗಿ ಏರುತ್ತಾ ತಿಂಗಳಾಂತ್ಯಕ್ಕೆ ರಾಶಿಇಡಿ ಮಾದರಿಯ ಅಡಕೆ ಕ್ವಿಂಟಲ್ ಒಂದಕ್ಕೆ ಗರಿಷ್ಠ 54 ಸಾವಿರ ರು. ತಲುಪಿತು. ಸೆ. 1 ರಂದು ಕ್ವಿಂಟಲ್‌ಗೆ 55 ಸಾವಿರ ರು. ತಲುಪಿದ ಅಡಕೆ ಬಳಿಕ ಇಳಿಕೆಯ ಹಾದಿ ಹಿಡಿಯಿತು. ಈ ವೇಳೆಯಲ್ಲಿಯೇ ಮಾರುಕಟ್ಟೆವಿಶ್ಲೇಷಕರಲ್ಲಿ ಕೆಲವರು ದರ ಇಳಿಕೆಯ ಸೂಚನೆ ನೀಡಿದ್ದರು. ಆದರೂ ರೈತರು 60 ಸಾವಿರ ರು. ಮುಟ್ಟಬಹುದೆಂದು ಅಡಕೆಯನ್ನು ಮಾರಾಟ ಮಾಡದೆ ದಾಸ್ತಾನು ಮಾಡಿದ್ದರು.
ಇಳಿಕೆಯ ಹಾದಿ ಹಿಡಿದಿದ್ದ ಅಡಕೆ ನವಂಬರ್ ಮೊದಲ ವಾರದಲ್ಲಿ 48 ಸಾವಿರಕ್ಕೆ ಇಳಿದರೆ, ಮಾಸಾಂತ್ಯಕ್ಕೆ 47 ಸಾವಿರದಲ್ಲಿ ಸ್ಥಿರವಾಗಿತ್ತು. ಡಿಸೆಂಬರ್ ಮೊದಲ ವಾರದಲ್ಲಿ ಮತ್ತೆ ಕುಸಿತ ಕಂಡು ನ. 6 ರಲ್ಲಿ ಪ್ರತಿ ಕ್ವಿಂಟಾಲ್‌ಗೆ 44 ಸಾವಿರಕ್ಕೆ ಇಳಿದಿದೆ.
Chikkamagaluru: ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ
ಈ ದರ ಕುಸಿತ ಇನ್ನಷ್ಟುಇಳಿಯಬಹುದೆಂದು ಊಹಿಸಲಾಗಿದೆ. ಆದರೀಗ ರೈತರು ತಮ್ಮ ಅಡಕೆಯನ್ನು ಕೊಡುವ ಅನಿವಾರ್ಯ ಸ್ಥಿತಿಗೆ ಬಂದಿದ್ದಾರೆ. ಒಂದೆಡೆ ಧಾರಣೆ ಇಳಿಯುತ್ತಿರುವುದು ಕಾರಣವಾದರೆ, ಇನ್ನೊಂದೆಡೆ ಹೊಸ ಅಡಕೆ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬರುತ್ತಿದ್ದು, ಬೇಡಿಕೆ ಕಡಿಮೆಯಾಗಿದೆ. ಇದು ಕೂಡ ಧಾರಣೆ ಇಳಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ.