ಮತ್ತೊಂದು ಎಲೆಫೆಂಟ್ ವಿಸ್ಪರರ್ಸ್ ಕಥೆ, ಮರಿಯಾನೆಯನ್ನು ಮಗುವಿನಂತೆ ಸಾಕುವ ದಂಪತಿ
ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಾಕ್ಷ್ಯ ಚಿತ್ರ ದಿ ಎಲೆಫೆಂಟ್ ವಿಸ್ಪರ್ರ್ಸ್ ಕಥೆಯನ್ನೇ ಹೋಲುವ ನೈಜ ಸಂಗತಿಗೆ ಸಾಕ್ಷಿಯಾಗಿದ್ದಾರೆ ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿರುವ ಕಾವಾಡಿ ದಂಪತಿ.
ವರದಿ - ಪುಟ್ಟರಾಜು.ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್
ಚಾಮರಾಜನಗರ (ಜು.19): ಇದೊಂದು ಹೃದಯಸ್ಪರ್ಶಿ ಕಥೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಾಕ್ಷ್ಯ ಚಿತ್ರ ದಿ ಎಲೆಫೆಂಟ್ ವಿಸ್ಪರ್ರ್ಸ್ ಕಥೆಯನ್ನೇ ಹೋಲುವ ನೈಜ ಸಂಗತಿಗೆ ಸಾಕ್ಷಿಯಾಗಿದ್ದಾರೆ ಚಾಮರಾಜನಗರ ಜಿಲ್ಲೆಯ ಬಂಡೀಪುರದಲ್ಲಿರುವ ಕಾವಾಡಿ ದಂಪತಿ. ತಬ್ಬಲಿಯಾಗಿದ್ದ ಆನೆಮರಿಯೊಂದಕ್ಕೆ ತಂದೆತಾಯಿಯ ಪ್ರೀತಿಯ ಧಾರೆ ಎರೆಯುತ್ತಾ ಸಾಕಿ ಸಲುಹುತ್ತಿದ್ದಾರೆ.
ಇದು ತಾಯಿಯಿಂದ ಆಕಸ್ಮಿಕವಾಗಿ ಬೇರ್ಪಟ್ಟ ಮುದ್ದುಮುದ್ದಾದ 7 ತಿಂಗಳ ಆನೆ ಮರಿ. ತಂದೆ ತಾಯಿಯ ಜೊತೆ ಪುಟ್ಟ ಪುಟ್ಟ ಹೆಜ್ಜೆ ಹಾಕುವ ಮಗುವಿನಂತೆ ಈ ಕಾವಾಡಿ ದಂಪತಿಯ ಜೊತೆ ಹೆಜ್ಜೆ ಹಾಕುತ್ತಿರುವ ಈ ಪುಟಾಣಿ ಮರಿಯಾನೆಯನ್ನು ನೋಡಿದರೆ ಎಂತಹವರಿಗು ಒಮ್ಮೆ ಮುದ್ದಾಡಬೇಕಿನಿಸುತ್ತದೆ. ಇದರ ಚಿನ್ನಾಟಗಳು ಮನಸ್ಸಿಗೆ ಮುದ ನೀಡುತ್ತವೆ ಕೇವಲ 6 ದಿನಗಳಾಗಿದ್ದಲೇ ಈ ಮರಿಯಾನೆ ತಬ್ಬಲಿಯಾಗಿತ್ತು ಎಂಬುದನ್ನು ಕೇಳಿದರೆ ಕರುಳು ಚುರಕ್ಕೆನ್ನದೆ ಇರದು.
ರೈತರಿಗೆ ಹೆಣ್ಣು ಕೊಡ್ತಿಲ್ಲ: ಕನ್ಯಾಭಾಗ್ಯ ಯೋಜನೆ ಜಾರಿಗೆ ತಂದು ಮದುವೆ ಮಾಡಿಸಿ
ತಾಯಿ ಸಿಗದ ಮರಿಯಾನೆಗೆ ತಂದೆ-ತಾಯಿಯಾದ ದಂಪತಿ: ಹೌದು ಬಂಡೀಪುರ ಹುಲಿಸಂರಕ್ಷಿತ ಪ್ರದೇಶ ನುಗು ಅರಣ್ಯ ವಲಯದಲ್ಲಿ ಈ ಮರಿಯಾನೆ ತಾಯಿಯಿಂದ ಬೇರ್ಪಟ್ಟಿತ್ತು. ತಾಯಿ ಆನೆ ಬಳಿ ಸೇರಿಸಲು ಅರಣ್ಯ ಸಿಬ್ಬಂದಿ ಸತತ ಪ್ರಯತ್ನ ನಡೆಸಿದರು. ಆದರೆ ಒಂದು ವಾರ ಕಳೆದರು ಇದರ ತಾಯಿ ಸಿಗದೆ ಕೊನೆಗೆ ಇಲ್ಲಿನ ರಾಮಾಪುರ ಅರಣ್ಯ ಶಿಬಿರಕ್ಕೆ ತಂದಿದ್ದಾರೆ. ಆರಂಭದ ಕೆಲದಿನಗಳ ಕಾಲ ಇಲ್ಲಿನ ಡಿ.ಆರ್.ಎಫ್.ಓ ಜಯಪ್ರಕಾಶ ಎಂಬುವರು ಇದರ ಪಾಲನೆ ಮಾಡಿದ್ದರು ಬಳಿಕ ಇದರ ಹೊಣೆ ಹೊತ್ತವರು ರಾಜು ರಮ್ಯ ಎಂಬ ಕಾವಾಡಿ ದಂಪತಿ. ತಂದೆ ತಾಯಿಯ ಸ್ಥಾನದಲ್ಲಿ ನಿಂತು ಮರಿಯಾನೆಯ ಪಾಲನೆ ಪೋಷಣೆ ಮಾಡುತ್ತಾ ಈ ಮರಿಯಾನೆಯ ಅನಾಥ ಪ್ರಜ್ಞೆ ಹೋಗಲಾಡಿಸುವಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ. ಅಷ್ಟರ ಮಟ್ಟಿಗೆ ಈ ಅನಾಥ ಮರಿಯಾನೆಗೆ ಪ್ರೀತಿಯ ಧಾರೆ ಎರೆಯುತ್ತಿದ್ದಾರೆ.
ಆನೆ ಮರಿಗೆ ಮಗುವಿನಂತೆ ಪ್ರೀತಿ ತೋರಿಸುವ ದಂಪತಿ: ಪುಟಾಣಿ ಆನೆಗೆ ನಿತ್ಯ ಸ್ನಾನ ಮಾಡಿಸುವುದು, ಹಾಲು ಕುಡಿಸುವುದು, ಕಾಡಿನಲ್ಲಿ ವಾಕಿಂಗ್ ಕರೆದೊಯ್ಯುವುದು, ಅದರ ಜೊತೆ ಚಿನ್ನಾಟ ಆಡುವುದು, ಹುಲ್ಲು ತಿನ್ನುವ ಅಭ್ಯಾಸ ಮಾಡಿಸುವುದು ಹೀಗೆ ಇದರ ಪಾಲನೆ ಪೋಷಣೆ ಮಾಡುವಲ್ಲಿ ನಿರತರಾಗಿದ್ದಾರೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರ ದ ನೈಜ ಪಾತ್ರಧಾರಿಗಳಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿಗಳನ್ನೇ ಹೋಲುತ್ತಿದ್ದಾರೆ ಬಂಡೀಪುರದ ರಾಜುರಮ್ಯ ದಂಪತಿ. ಅನಾಥ ಆನೆಮರಿಗೆ ಪ್ರೀತಿಯ ಧಾರೆ ಎರೆಯುತ್ತಾ ಸಾಕಿ ಸಲಹುತ್ತಿದ್ದಾರೆ. ತಾಯಿಯ ಎದೆ ಇಲ್ಲದೆ ಬದುಕುವುದೇ ಕಷ್ಟ ಎನ್ನಲಾಗುತ್ತಿದ್ದ 7 ದಿನಗಳ ಈ ಕಂದಮ್ಮನನ್ನು ಕಳೆದ 7 ತಿಂಗಳಿಂದ ಜತನದಿಂದ ಕಾಪಾಡುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಅಧಿಕೃತ ಆರಂಭ: ಮೊದಲ ಫಲಾನುಭವಿ ಮಹಿಳೆಯರು ಇವರೇ.. ಸುಮಾ, ಆನಂದಿ, ಸತ್ಯಾ
ಒಟ್ಟಾರೆ ಪ್ರಾಣಿ ಮತ್ತು ಮಾನವನ ನಡುವಿನ ಬಾಂಧವ್ಯ ಹಾಗು ಸಹಬಾಳ್ವೆಯ ಪ್ರತೀಕವಾಗಿದೆ ಈ ನೈಜ ಕಥನ. ಇದೇನೆ ಇರಲಿ ಅನಾಥ ಆನೆ ಮರಿಯೊಂದಿಗೆ ಈ ಕಾವಾಡಿ ದಂಪತಿಗೆ ಇರುವ ಬಲವಾದ ಬಾಂಧವ್ಯ ಅನನ್ಯ.