ಮಾವಿನ ಇಳುವರಿ ಜೊತೆಗೆ ಬೆಲೆಯೂ ಕುಸಿತ
- ಮಾವನ್ನು ನಂಬಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು
- ಹವಾಮಾನ ವೈಪರಿತ್ಯದಿಂದಾಗಿ ಮಾವು ಇಳುವರಿ ಕುಂಠಿತ
- ಔಷಧಿಗೆ ಖರ್ಚು ಮಾಡಿದಷ್ಟು ಬೆಲೆಯೂ ಸಿಗದ ಪರಿಸ್ಥಿತಿ
-ಎಂ.ಅಫ್ರೋಜ್ ಖಾನ್
ರಾಮನಗರ : ಹಣ್ಣುಗಳ ರಾಜನೆಂದೇ ಖ್ಯಾತಿಯಾಗಿರುವ ಮಾವಿನ ಬೆಳೆಯ ಇಳುವರಿ ಸಾಮಾನ್ಯವಾಗಿ ಕಡಿಮೆಯಾದರೆ ಹೆಚ್ಚಿನ ಬೆಲೆ ಸಿಗುತ್ತಿತ್ತು. ಆದರೆ, ಈ ಬಾರಿ ಮಾವಿನ ಇಳುವರಿ ಜೊತೆಗೆ ಬೆಲೆಯೂ ಕುಸಿತ ಕಂಡಿದೆ.
ಕಡಿಮೆ ಮಳೆ ಹಾಗೂ ಪ್ರಖರ ಬಿಸಿಲಿನಿಂದಾಗಿ ಮಾವು ಬೆಳೆಯ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಚನ್ನಪಟ್ಟಣ ಮತ್ತು ರಾಮನಗರ ಮಾರುಕಟ್ಟೆಗಳಿಗೆ ಕಡಿಮೆ ಪ್ರಮಾಣದ ಮಾವು ಬರುತ್ತಿದ್ದರು ಸಹ ಕೊಳ್ಳುವವರೇ ಇಲ್ಲದಂತಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರಿಗೆ ದಿಕ್ಕೇ ತೋಚದಂತಾಗಿದೆ.
ಸಾಮಾನ್ಯವಾಗಿ ಮಾವು ಬೆಳೆಯಲು ಮಳೆಯ ಜೊತೆಗೆ ಬಿಸಿಲು ಬೇಕಾಗುತ್ತದೆ. ಬಿಸಿಯ ವಾತಾವರಣ ಮಾವು ಬೇಗ ಹಣ್ಣಾಗಲು ಸೂಕ್ತ ಸಮಯವಾಗಿದೆ. ಆದರೆ, ಈ ವರ್ಷ ಹವಾಮಾನ ಬದಲಾವಣೆಯಿಂದ ಮಾವು ಬೆಳೆಯ ಮೇಲೆ ಭಾರಿ ಪರಿಣಾಮ ಬೀರಿದೆ. ತಾಪಮಾನ ಹೆಚ್ಚಾಗಿರುವುದರಿಂದ ಮಾವಿನ ಇಳುವರಿಗೆ ದೊಡ್ಡ ಹೊಡೆತ ನೀಡಿದೆ. ಈ ವರ್ಷ ವಾಡಿಕೆಗಿಂತ ಶೇಕಡಾ 20ರಷ್ಟು ಮಾತ್ರ ಇಳುವರಿ ಬಂದಿದೆ. ಅಂದರೆ ಬರೋಬ್ಬರಿ ಶೇಕಡಾ 80ರಷ್ಟು ಇಳುವರಿ ಕುಂಠಿತವಾಗಿದೆ.
ಜಿಲ್ಲೆಯಲ್ಲಿ ಸುಮಾರು 27 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಬಾದಾಮಿ ಜಾತಿಯ ಮಾವನ್ನು ಬೆಳೆಯುತ್ತಾರೆ. ಇಡೀ ರಾಜ್ಯದಲ್ಲಿ ಮೊದಲು ರಾಮನಗರದಿಂದಲೇ ಮಾವು ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ವರ್ಷ ಹವಾಮಾನ ವೈಪರೀತ್ಯದಿಂದಾಗಿ ತಡವಾಗಿದೆ.
ಆರಂಭದಲ್ಲಿಯೇ ಮಾವಿನ ಮರಗಳಲ್ಲಿ ಹೂವಿನ ಪ್ರಮಾಣ ತೀರಾ ಕಡಿಮೆ ಇತ್ತು. ಶೇಕಡ 10-15ರಷ್ಟು ಪ್ರಮಾಣದ ಮರಗಳಲ್ಲಿ ಮಾತ್ರ ಹೂವು ಬಿಟ್ಟಿತ್ತು. ಉಳಿದಂತೆ ಶೇಕಡ 25-30ರಷ್ಟು ಮರಗಳಲ್ಲಿ ಚಿಗುರು ಮತ್ತು ಹೂವು ಬಂದಿದ್ದರೆ, ಶೇಕಡ 60ರಷ್ಟು ಮರಗಳಲ್ಲಿ ಹೂವು ಬಿಟ್ಟಿರಲೇ ಇಲ್ಲ.
ಇನ್ನು ಹೂವು ಬಿಟ್ಟಿದ್ದ ಮಾವಿನ ಮರಗಳಲ್ಲಿ ಬ್ಲಾಸಂ ಲೈಟ್, ಬೂದಿರೋಗ ಹಾಗೂ ಜೋನೆ ಸೇರಿದಂತೆ ಇತರೆ ರೋಗಗಳು ಕಾಣಿಸಿಕೊಂಡಿತ್ತು. ಅವುಗಳ ನಿಯಂತ್ರಣಕ್ಕೆ ರೈತರು ಲಕ್ಷಾಂತರ ರುಪಾಯಿ ಖರ್ಚು ಮಾಡಿ ಔಷಧಿ ಸಿಂಪಡಿಸಿ ಮಾವು ಬೆಳೆ ಸಂರಕ್ಷಿಸಿದ್ದರು. ಈಗ ಔಷಧಿಗೆ ಖರ್ಚು ಮಾಡಿದಷ್ಟು ಬೆಲೆಯೂ ಮಾವು ಮಾರಾಟದಿಂದ ಸಿಗದ ಪರಿಸ್ಥಿತಿ ಉಂಟಾಗಿದೆ.
ಹೆಚ್ಚಳವಾಗದ ಬೆಲೆ:
ಕಳೆದ 1 ತಿಂಗಳಿಂದಲೂ ಮಾವು ಮಾರುಕಟ್ಟೆಯಲ್ಲಿ ವಹಿವಾಟು ಆರಂಭಗೊಂಡಿದೆ. ಮೊದಲು ಏರಿಕೆಯಲ್ಲಿದ್ದ ಮಾವು ಪ್ರಸ್ತುತ ಇಳಿಕೆ ಕಂಡಿದೆ. ಸೇಂದೂರ ಮಾವಿನ ಕಾಯಿಗೆ ಕಳೆದ ವಾರ 45 ರಿಂದ 70 ರು. ದರ ಇತ್ತು . ಪ್ರಸ್ತುತ 30 ರಿಂದ 40 ರು.ಗಳಿಗೆ ಇಳಿದಿದೆ. ರಸಪೂರಿ 60ರಿಂದ 80 ರು. ಇತ್ತು . ಈಗ 40 ರಿಂದ 60 ರು.ಗಳಾಗಿದೆ. ಬಾದಾಮಿ 80 ರಿಂದ 100 ರು.ಗಳಿತ್ತು. ಈಗ 50 - 70 ರು.ಗಳಿಗೆ ಮಾರಾಟ ನಡೆಯುತ್ತಿದೆ. ಕುಸಿಯುತ್ತಿರುವ ಬೆಲೆಗೆ ಮಾವು ಬೆಳೆಗಾರರು ಕಂಗಾಲಾಗುತ್ತಿದ್ದಾರೆ.
ಹೊರ ರಾಜ್ಯದ ಮಾರಾಟಗಾರರು ಇಲ್ಲ:
ಪ್ರತೀ ವರ್ಷ ರಾಮನಗರ - ಚನ್ನಪಟ್ಟಣ ಮಾವು ಮಾರುಕಟ್ಟೆಗಳಲ್ಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಆಂಧ್ರಪ್ರದೇಶ ಸೇರಿ ಹೊರ ರಾಜ್ಯದ ವ್ಯಾಪಾರಿಗಳು ತುಂಬಿರುತ್ತಿದ್ದರು. ಆದರೆ, ಈ ಬಾರಿ ಮಾವು ಇಳುವರಿ ಇಲ್ಲದಿರುವ ಕಾರಣ ಹೊರ ರಾಜ್ಯದ ಮಾರಾಟಗಾರರು ಮಾರುಕಟ್ಟೆಗಳತ್ತ ಸುಳಿದಿಲ್ಲ. ಸ್ಥಳೀಯ ವರ್ತಕರೇ ರೈತರಿಂದ ಮಾವಿನ ಕಾಯಿನ ಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿಲ್ಲ ಎನ್ನಲಾಗಿದೆ.
ಮಾವಿನ ಇಳುವರಿ ಕುಸಿತ
ಸಾಮಾನ್ಯವಾಗಿ ಮಾವಿನ ಬೆಳೆಯಲ್ಲಿ ಡಿಸೆಂಬರ್, ಜನವರಿಯಲ್ಲಿ ಹೂ ಬರುತ್ತದೆ. ತಡವಾದರೆ ಫೆಬ್ರವರಿ ಮೊದಲ ಮತ್ತು ಎರಡನೇ ವಾರದಲ್ಲಿ ಹೂ ಬರುವುದು ಮುಕ್ತಾಯವಾಗುತ್ತದೆ. ಏಪ್ರಿಲ್ ಕೊನೆಯಲ್ಲಿ ಮತ್ತು ಮೇ ಮಾಹೆಯಲ್ಲಿ ಕೊಯ್ಲು ನಡೆಯುತ್ತದೆ. ಈಗಾಗಲೇ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆಯಾದರೂ ನಿರೀಕ್ಷಿತ ಪ್ರಮಾಣದಷ್ಟು ಇಳುವರಿ ಇಲ್ಲ.
ಡಿಸೆಂಬರ್ ಜನವರಿಯಲ್ಲಿ ಹೂ ಕಾಣಿಸಿಕೊಂಡ ಮರಗಳಲ್ಲೂ ರೋಗ ಬಾಧೆಯಿಂದ ಪಿಂದೆಗಳು ನೆಲಕಚ್ಚಿದ್ದವು. ಹೂವಿನೊಂದಿಗೆ ಚಿಗುರು ಬಂದರೆ ಸರಿಯಾಗಿ ಹೀಚು ಕಟ್ಟುವುದಿಲ್ಲ. ಚಿಗುರಿಗೆ ಬೀಳುವ ಅಂಟುನೊಣ ಹೂವಿನ ನಾಶಕ್ಕೆ ಕಾರಣವಾಗುತ್ತದೆ. ಜಿಗಿಹುಳು ಸ್ರವಿಸುವ ಅಂಟು ಹೂವಿನ ಮೇಲೆ ಸುರಿದು ಹೂ ಹಾಳಾಗುತ್ತದೆ. ಇದರಿಂದ ಇಳುವರಿ ಕುಸಿಯುತ್ತಿದೆ.
ಮಾವಿನ ರುಚಿ, ಗುಣಮಟ್ಟ ಕಡಿಮೆ
ಪ್ರತಿ ವರ್ಷ ಏಪ್ರಿಲ್, ಮೇ ಬಂದರೆ ನಗರದಲ್ಲೆಡೆ ಹಣ್ಣುಗಳ ರಾಜ ಮಾವಿನ ಘಮ ಪಸರಿಸುತ್ತಿತ್ತು. ಈ ಬಾರಿ ಮಾವಿನ ಅಬ್ಬರವೇ ಇಲ್ಲ. ಈ ಅವಧಿಯಲ್ಲಿ ರಸ್ತೆಗಳಲ್ಲಿ ರಾಶಿ ರಾಶಿ ಮಾವಿನಹಣ್ಣು ಕಾಣಬಹುದಿತ್ತು. ವಾಹನಗಳಲ್ಲಿ ತಂದು ಮಾರಾಟ ಮಾಡುವ ದೃಶ್ಯಗಳೂ ಕಾಣ ಸಿಗುತ್ತಿತ್ತು. ಮನೆಗಳಲ್ಲಿ ಮಾವಿನ ಖಾದ್ಯಗಳಿಗೆ ಪ್ರಮುಖ ಸ್ಥಾನ ಇರುತ್ತಿತ್ತು. ಆದರೆ, ಈ ಬಾರಿ ಇಳುವರಿ ಕುಸಿದಿರುವುದರಿಂದ ಬೆಲೆಯೂ ಕಡಿಮೆಯಾಗಿದೆ. ಮಾರುಕಟ್ಟೆಗೆ ಬರುತ್ತಿರುವ ಮಾವು ಹೆಚ್ಚು ಗಾತ್ರ ಮತ್ತು ರುಚಿಯನ್ನು ಹೊಂದಿಲ್ಲ.
ವಾತಾವರಣದಲ್ಲಿ ಹೆಚ್ಚಾದ ಶುಷ್ಕತೆಯ ಪ್ರಮಾಣ
ಸಾಮಾನ್ಯವಾಗಿ ಮಾವನ್ನು ಬೆಳೆಯಲು, ಹಣ್ಣಾಗಲು ಮತ್ತು ಸಿಹಿಯಾಗಲು ಬಿಸಿ ಮತ್ತು ಶುಷ್ಕ ವಾತಾವರಣವು ಸೂಕ್ತವಾಗಿರುತ್ತದೆ. ಆದರೆ, ಈ ವರ್ಷ ಕಂಡುಬಂದ ದೀರ್ಘಕಾಲದ ಒಣ ಹವೆಯು ಮಾವಿನ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮಾವು ಮಳೆಯಾಶ್ರಿತ ಬೆಳೆ. ಈ ಬಾರಿ ಮಳೆ ಕೈಕೊಟ್ಟಿತು. ಹೀಗಾಗಿ, ವಾತಾವರಣದಲ್ಲಿ ಶುಷ್ಕತೆಯ ಪ್ರಮಾಣವೂ ಹೆಚ್ಚಾಯಿತು. ಭೂಮಿಯಲ್ಲಿ ತೇವಾಂಶವಿಲ್ಲದೆ, ಅತಿಯಾದ ಬಿಸಿಲಿನಿಂದಾಗಿ ಮಾವು ಎರಡು ಬಾರಿ ಚಿಗುರೊಡೆಯಿತು. ಹೂ ಬಿಟ್ಟ ನಂತರ ಚಳಿಯ ವಾತಾವರಣವಿದ್ದರೆ ಕಾಯಿಗಳು ಬರುತ್ತವೆ. ಆದರೆ, ಈ ಬಾರಿ ಚಳಿಯ ವಾತಾವರಣ ಅಷ್ಟಾಗಿ ಕಂಡು ಬರಲಿಲ್ಲ. ಬಿಸಿಯ ವಾತಾವರಣವಿದ್ದುದರಿಂದ ಹೂ ಬಿಟ್ಟಿದ್ದ ಮಾವು ನಂತರ ಚಿಗುರೊಡೆಯಲು ಆರಂಭಿಸಿತು. ಇದರಿಂದ ಹೂಗಳಿಗೆ ತಲುಪಬೇಕಾದ ಸಾರವೆಲ್ಲಾ ಚಿಗುರು ಎಲೆಗಳ ಪಾಲಾಗಿ ಹೂವು, ಕಾಯಿ ಉದುರುವುದು ಸಾಮಾನ್ಯ. ಹೀಗಾದಾಗ ಇಳುವರಿ ಕಡಿಮೆಯಾಗುತ್ತದೆ