Chikkamagaluru: ಅಡುಗೆ ಕೋಣೆಯಲ್ಲಿ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಪತ್ತೆ!
12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಮನೆಯ ಅಡುಗೆ ಕೋಣೆಯೊಳಗೆ ಅವಿತು ಕುಳಿತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪ ಬಳಿ ನಡೆದಿದೆ.
ಚಿಕ್ಕಮಗಳೂರು (ಮೇ.25): 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವೊಂದು ಮನೆಯ ಅಡುಗೆ ಕೋಣೆಯೊಳಗೆ ಅವಿತು ಕುಳಿತ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಶೆಟ್ಟಿಕೊಪ್ಪ ಬಳಿ ನಡೆದಿದೆ. ಎನ್.ಆರ್. ಪುರ ತಾಲೂಕಿನ ಶೆಟ್ಟಿ ಕೊಪ್ಪದ ಮಂಜುನಾಥ್ ಗೌಡ ಅವರ ಮನೆಯ ಹಿಂಬಾಗಿಲನ್ನು ತೆರೆಯುತ್ತಿದ್ದಂತೆ ಏಕಾಏಕಿ ಹಾವು ಮನೆಯೊಳಗೆ ನುಗ್ಗಿದೆ, ಹಾವು ಮನೆಯೊಳಗೆ ಬರುತ್ತಿದ್ದಂತೆ ಮನೆಮಂದಿ ಭಯಭೀತರಾಗಿ ಮನೆಯಿಂದ ಹೊರ ಓಡಿ ಬಂದಿದ್ದಾರೆ.ಕೊಡಲೇ ಸ್ನೇಕ್ ಹರೀಂದ್ರ ಅವರಿಗೆ ವಿಚಾರವನ್ನು ತಿಳಿಸಿದ್ದು ಸ್ಥಳಕ್ಕೆ ಬಂದ ಅವರು ಅಡುಗೆ ಕೊನೆಯಲ್ಲಿ ಅವಿತ್ತಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು ಸುರಕ್ಷಿತ ತಾಣದಲ್ಲಿ ಬಿಟ್ಟಿದ್ದಾರೆ. ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಳೆಯಿಂದ ಆಶ್ರಯ ಪಡೆಯಲು ಹಾವು ಮನೆಯೊಳಗೆ ಪ್ರವೇಶ ಪಡೆದಿದೆ ಎನ್ನಲಾಗಿದೆ.
15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ: ಹೆಬ್ರಿ ತಾಲೂಕಿನ ನಾಡಪಾಲ್ ಗ್ರಾಮದ ಭಾಸ್ಕರ್ ಶೆಟ್ಟಿ ಎಂಬವರ ಮನೆ ಬಳಿ ಬರೋಬ್ಬರಿ 15 ಅಡಿ ಉದ್ದದ 12.5 ಕೆ.ಜಿ. ತೂಕದ ಕಾಳಿಂಗ ಸರ್ಪವೊಂದನ್ನು ರಕ್ಷಣೆ ಮಾಡಲಾಗಿದೆ. ಉರಗ ತಜ್ಞ ಡಾ.ಪಿ.ಗೌರಿ ಶಂಕರ್ ರಕ್ಷಣೆ ಮಾಡಿದ್ದಾರೆ. 15 ಅಡಿ ಉದ್ದದ ಕಾಳಿಂಗ ಹಾವು ಕಾಣಿಸಿದ್ದು ಭಾರತದಲ್ಲಿ ಇದೇ ಮೊದಲು ಎಂದು ಡಾ.ಪಿ. ಗೌರಿಶಂಕರ್ ತಿಳಿಸಿದ್ದಾರೆ. ಕಾಳಿಂಗ ಸರ್ಪ ವಿಶ್ವದ ಅತಿ ಉದ್ದದ ವಿಷಪೂರಿತ ಹಾವುಗಳಾಗಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಹಾವುಗಳು ಹೆಚ್ಚಾಗಿ ಕಂಡು ಬರುತ್ತವೆ.
ಥಾಯ್ಲೆಂಡ್‌ನಲ್ಲಿ 18 ಅಡಿಗಳಷ್ಟು ಉದ್ದವನ್ನು ಹಾವುಗಳಿವೆ. ಆದರೆ ಪ್ರಸ್ತುತ ಆಗುಂಬೆ ಬಳಿ ಪತ್ತೆಯಾಗಿರುವುದು ಭಾರತದಲ್ಲಿ ಅಪರೂಪದ ಹಾವುಗಳಾಗಿವೆ. ಫೆಬ್ರುವರಿಯಿಂದ ಮೇ ತಿಂಗಳು ಸಂತಾನೋತ್ಪತ್ತಿ ಅವಧಿಯಾಗಿದ್ದು, ಈ ಹಾವುಗಳು ತನ್ನ ಸಂಗಾತಿಯನ್ನು ಅರಸಿ ಹೊರಬರುತ್ತವೆ. ಇದರಿಂದಾಗಿ ಈ ಸಂದರ್ಭದಲ್ಲಿ ಮಾನವ-ಹಾವುಗಳ ಸಂಘರ್ಷ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕಾಳಿಂಗ ಫೌಂಡೇಶನ್‌ಗೆ ಹೆಚ್ಚಿನ ಕರೆಗಳು ಬರುತ್ತವೆ ಎಂದು ಡಾ. ಶಂಕರ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಬರ ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಆರೋಪ: ಜಿಲ್ಲಾಧಿಕಾರಿ ಹೇಳಿದ್ದೇನು?
ಸರಾಸರಿ ತೂಕ: ಈ ಹಾವುಗಳ ಸರಾಸರಿ ತೂಕವು ಸಾಮಾನ್ಯವಾಗಿ 3.5 ಕಿ.ಗ್ರಾಂ. ನಿಂದ 7 ಕಿಲೋ ಗ್ರಾಂಗಳ ವರೆಗೆ ಇರುತ್ತದೆ. ಹೆಣ್ಣು 2 ರಿಂದ 3.5 ಕಿಲೋ ಗ್ರಾಂಗಳಷ್ಟು ಮತ್ತು ಗಂಡು 3.5 ರಿಂದ 6 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ. ಆದರೆ, ಪ್ರಸ್ತುತ ರಕ್ಷಣೆ ಮಾಡಿದ ಹಾವು 12.5 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದ್ದು, ಸುಮಾರು 15 ಅಡಿ ಉದ್ದವಿದೆ. ಇಷ್ಟು ದೊಡ್ಡ ಗಾತ್ರದ ಕಾಳಿಂಗ ಸರ್ಪ ಇಡೀ ಭಾರತದಲ್ಲೇ ಸಿಗುವುದು ಅಪರೂಪ. ಈ ಹಾವುಗಳ ಪತ್ತೆ, ಮಲೆನಾಡು ಪ್ರದೇಶದಲ್ಲಿ ಬೆಳೆಯುತ್ತಿರುವ ಆರೋಗ್ಯಕರ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಶಂಕರ್ ತಿಳಿಸಿದ್ದಾರೆ.