ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ: 28 ದಿನಗಳಲ್ಲಿ 74,915 ಸಂಚಾರ ಉಲ್ಲಂಘನೆ ಪ್ರಕರಣ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇನಲ್ಲಿ ಪ್ರತಿ ಗಂಟೆಗೆ 100ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆಗಳು ದಾಖಲಾಗುತ್ತಿವೆ. ಹೆದ್ದಾರಿಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ 22 ಕ್ಯಾಮೆರಾಗಳು ಸಂಚಾರ ಉಲ್ಲಂಘನೆಗಳನ್ನು ಸೆರೆ ಹಿಡಿದಿವೆ.
 

74915 Traffic Violation Cases in 28 days in Bengaluru Mysuru Expressway grg

ರಾಮನಗರ(ಜೂ.01):  ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇಯಲ್ಲಿ ಅಳವಡಿಸಿರುವ ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್ ಪಿಆರ್) ಕ್ಯಾಮೆರಾ ಕಾರ್ಯಾರಂಭ ಮಾಡಿದ ತರುವಾಯ ಕಳೆದ 28 ದಿನಗಳಲ್ಲಿ ಒಟ್ಟು 74,915 ಸಂಚಾರ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌-ವೇನಲ್ಲಿ ಪ್ರತಿ ಗಂಟೆಗೆ 100ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆಗಳು ದಾಖಲಾಗುತ್ತಿವೆ. ಹೆದ್ದಾರಿಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ 22 ಕ್ಯಾಮೆರಾಗಳು ಸಂಚಾರ ಉಲ್ಲಂಘನೆಗಳನ್ನು ಸೆರೆ ಹಿಡಿದಿವೆ.

ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಈ ನಿಯಮ ಮರೆಯಲೇಬೇಡಿ, ಕೇವಲ 16ದಿನದಲ್ಲಿ ದಾಖಲಾಗಿದೆ 12ಸಾವಿರಕ್ಕೂ ಹೆಚ್ಚು ಕೇಸ್!

ಮೇ 1ರಿಂದ ಮೇ 16ವರೆಗೆ ಒಟ್ಟು 12,192 ಕೇಸ್‌ಗಳು ದಾಖಲಾಗಿತ್ತು. ಇದೀಗ 28 ದಿನಗಳಲ್ಲಿ 74,915 ಸಂಚಾರ ಉಲ್ಲಂಘನೆ ಪ್ರಕರಣಗಳು ವರದಿಯಾಗಿದ್ದು, ಇವರೆಲ್ಲರ ಮನೆಗೆ ಶೀಘ್ರದಲ್ಲಿಯೇ ನೋಟಿಸ್ ರವಾನೆಯಾಗಲಿದೆ.
ಈಗ ದಾಖಲಾಗಿರುವುದರಲ್ಲಿ ಚಾಲಕರು ಮತ್ತು ಸಹ ಪ್ರಯಾಣಿಕರು ಸೀಟ್‌ ಬೆಲ್ಟ್‌ ಧರಸದ ಪ್ರಕರಣಗಳೇ ಹೆಚ್ಚಾಗಿವೆ. ಸೀಟ್‌ ಬೆಲ್ಟ್‌ ಧರಿಸದ ಕಾರಣ 57,057 ಪ್ರಕರಣಗಳು ದಾಖಲಾಗಿದ್ದರೆ, 10,945 ಅತಿವೇಗದ ಪ್ರಕರಣಗಳು, 6,046 ಲೇನ್ ಉಲ್ಲಂಘನೆ ಪ್ರಕರಣಗಳು ಹಾಗೂ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ 494 ಪ್ರಕರಣಗಳು ವರದಿಯಾಗಿವೆ.

ಅಪಘಾತಗಳು ಮತ್ತು ಸಂಚಾರ ಉಲ್ಲಂಘನೆಗಳನ್ನು ತಡೆಯಲು ಮೈಸೂರು-ಬೆಂಗಳೂರು ನಡುವಿನ ಎನ್ ಎಚ್ -275ನಲ್ಲಿ ಪೊಲೀಸರು ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ರಸ್ತೆಯ ಪ್ರತಿ ದಿಕ್ಕಿನಲ್ಲಿ ಆರು ಸ್ಥಳಗಳಲ್ಲಿ ಕ್ಯಾಮೆರಾಗಳಿವೆ. ಅಲ್ಲದೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರತಿ ದಿಕ್ಕಿನಲ್ಲಿಯೂ ಐದು ಇತರ ಸ್ಥಳಗಳಲ್ಲಿ ವೀಡಿಯೊ ಕ್ಯಾಮೆರಾಗಳನ್ನು ಅಳವಡಿಸಿದೆ. ಜೊತೆಗೆ, ಗಂಟೆಗೆ 100 ಕಿ.ಮೀ. ವೇಗದ ಮಿತಿಯನ್ನು ನಿಗದಿಪಡಿಸಿದೆ.

ಕ್ಯಾಮೆರಾಗಳಿದ್ದರೂ ಹೆದ್ದಾರಿಯಲ್ಲಿ ಸಂಚರಿಸುವವರು ನಿಯಮ ಉಲ್ಲಂಘಿಸಿ ವೇಗದ ಮಿತಿಯನ್ನು ದಾಟುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದ್ದಾರೆ. ಈಗಾಗಲೇ ಸಂಚಾರ ಪೊಲೀಸರು ಕಳುಹಿಸಿದ ನೋಟಿಸ್ ತಲುಪಿದ 7 ದಿನದಲ್ಲಿ ಸಂಬಂಧಪಟ್ಟ ಸಂಚಾರ ಠಾಣೆಗೆ ಹೋಗಿ ದಂಡ ಪಾವತಿಸಬೇಕು. ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ದಂಡ ಕಟ್ಟದೇ ಮೊಂಡಾಟ ಮಾಡಿದರೆ 6 ತಿಂಗಳು ಜೈಲು ಅಥವಾ 5,000 ರುಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನು ನೋಟಿಸ್‌ನಲ್ಲಿ ನೀಡಲಾಗಿದೆ.

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ANPR ಕ್ಯಾಮೆರಾ ಅಳವಡಿಕೆ..!

ನಿಯಮ ಉಲ್ಲಂಘಸಿದ ಎಲ್ಲರಿಗೂ ನೋಟಿಸ್

ಕಳೆದ 28 ದಿನಗಳಲ್ಲಿ 74ಸಾವಿರಕ್ಕೂ ಹೆಚ್ಚು ಸಂಚಾರ ಉಲ್ಲಂಘನೆ ಪ್ರಕರಣ ದಾಖಲಾಗಿರುವುದು ರಸ್ತೆ ಸುರಕ್ಷತೆಯ ಬಗ್ಗೆ ಜನರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದರಲ್ಲಿ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸದಿರುವುದು, ಅತಿವೇಗ ಮತ್ತು ಲೇನ್ ಉಲ್ಲಂಘನೆಗಳು ಹೆಚ್ಚಾಗಿವೆ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಸೇರಿದಂತೆ ಭಾರೀ ಸರಕು ವಾಹನಗಳು ಕೂಡ ಸಂಚಾರ ನಿಯಮಗಳನ್ನು ಉಲ್ಲಂಘಿಸಿವೆ. ಎಲ್ಲರಿಗೂ ನೋಟಿಸ್ ಜಾರಿ ಮಾಡಲಾಗುವುದು ಎಂದು , ರಾಜ್ಯ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. 

ಸ್ಥಳ ಅಥವಾ ಆನ್‌ಲೈನ್ ಮೂಲಕ ದಂಡ ಪಾವತಿ

ರಾಮನಗರ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ -275 ರ 5 ಸ್ಥಳಗಳಲ್ಲಿ ITMS ರಡಾರ್‌ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡಲಾದ ವಾಹನಗಳನ್ನು ಗುರುತಿಸಿ ದಂಡ ವಿಧಿಸಲಾಗುವುದು. ಸಂಚಾರ ನಿಯಮಗಳ ಉಲ್ಲಂಘನೆ ಕುರಿತಂತೆ ದಾಖಲಾಗುವ ಪ್ರಕರಣಗಳನ್ನು ತಕ್ಷಣವೇ ಸದರಿ ವಾಹನದ ನೊಂದಾಯಿತ ಮೊಬೈಲ್‌ ಸಂಖ್ಯೆಗೆ SMS ಮೂಲಕ ಮಾಹಿತಿ ರವಾನೆಯಾಗಲಿದ್ದು, ಜೂನ್ 1 ರಿಂದ ಸ್ಥಳ ದಂಡ ಪಾವತಿ ಹಾಗೂ ಆನ್‌-ಲೈನ್‌ ವೆಬ್‌ ಸೈಟ್‌ https://payfine.mchallan.com:7271 ರ ಮೂಲಕ ದಂಡ ಪಾವತಿ ಮಾಡಬಹುದಾಗಿರುತ್ತದೆ. ಆದುದ್ದರಿಂದ ಸಾರ್ವಜನಿಕರು ಸಂಚಾರ ನಿಯಮಗಳನ್ನು ಉಲ್ಲಂಘಿಸದೆ, ನಿಯಮಗಳನ್ನು ಪಾಲಿಸುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios