ಪ್ರಿಂಟರ್‌ ಬುಕ್‌ ಮಾಡಿದ ವ್ಯಕ್ತಿಗೆ ಸ್ಪೀಕರ್‌ ಡೆಲಿವರಿ: ಅಮೆಜಾನ್‌ಗೆ 30,000 ದಂಡ..!

ಪ್ರಕರಣದಲ್ಲಿ ಉಂಟಾಗಿರುವ ಸೇವಾ ನ್ಯೂನ್ಯತೆಗೆ ಅಮೆಜಾನ್‌ ಇಂಡಿಯಾ ಜವಾಬ್ದಾರಿಯಾಗಿದೆ. ಇನ್ನು ತಪ್ಪು ಸರಕು ನೀಡುವ ಮೂಲಕ ಟೈಮ್‌ ಸ್ಟೇಷನರೀಸ್‌ ದೂರುದಾರಿಗೆ ಆಘಾತ ನೀಡಿದೆ. ಅದು ಮಾನಸಿಕ ಹಿಂಸೆಗೆ ಕಾರಣವಾಗಬಹುದು. ಆದ್ದರಿಂದ ಅದು ಸಹ ಪರಿಹಾರ ನೀಡಬೇಕು ಎಂದು ಆದೇಶಿಸಿದ ನ್ಯಾಯಾಲಯ 

30000 fine for Amazon for Speaker Given Instead of Printer grg

ಬೆಂಗಳೂರು(ಮೇ.12): ಪ್ರಿಂಟರ್‌ ಖರೀದಿಗೆ ಆರ್ಡರ್‌ ಮಾಡಿದರೆ, ಮಿನಿ ಬ್ಲೂಟೂತ್‌ ಸ್ಪೀಕರ್‌ ಡೆಲಿವರಿ ಮಾಡಿದ ತಪ್ಪಿಗೆ ಅಮೆಜಾನ್‌ ಪ್ರೈವೇಟ್‌ ಇಂಡಿಯಾ ಲಿಮಿಟೆಡ್‌ ಮತ್ತು ಹರಿಯಾಣದ ಟೈಮ್‌ ಸ್ಟೇಷನರೀಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಬೆಂಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 30 ಸಾವಿರ ದಂಡ ವಿಧಿಸಿದೆ.

ಪ್ರಕರಣದಲ್ಲಿ ಉಂಟಾದ ಸೇವಾ ನೂನ್ಯತೆಗೆ ತಾನು ಜವಾಬ್ದಾರನಲ್ಲ ಎಂಬ ಅಮೆಜಾನ್‌ ಇಂಡಿಯಾದ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಆಯೋಗ, ಗ್ರಾಹಕ ಮತ್ತು ಮಾರಾಟಗಾರನ ಮಧ್ಯೆ ಇ-ಕಾಮರ್ಸ್‌ ಮಾರುಕಟ್ಟೆ ಮಧ್ಯವರ್ತಿಯಾಗಿದೆ. ಮಾರಾಟಗಾರ ಮತ್ತು ಗ್ರಾಹಕನ ನಡುವೆ ಒಪ್ಪಂದಯುತ ವಹಿವಾಟು ಒದಗಿಸುತ್ತದೆ. ಆದ್ದರಿಂದ, ದೂರುದಾರರಿಗೆ ತಪ್ಪಾದ ಉತ್ಪನ್ನ ಕಳುಹಿಸಿದ ಹೊಣೆಗಾರಿಕೆಯಿಂದ ಅಮೆಜಾನ್‌ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

‘ಮಗಳ ಸಾಕಲು ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಸುಪರ್ದಿ ಕೇಳುವಂತಿಲ್ಲ': ಹೈಕೋರ್ಟ್.

ಸೇವಾ ನ್ಯೂನ್ಯತೆಗೆ ಅಮೆಜಾನ್‌ ಮತ್ತು ಟೈಮ್‌ ಸ್ಟೇಷನರೀಸ್‌ ಸಂಸ್ಥೆಗಳನ್ನು ಜಂಟಿಯಾಗಿ ಹೊಣೆಗಾರಿಕೆ ಮಾಡಿದ ಆಯೋಗ, ಪ್ರಕರಣದ ದೂರುದಾರರು ಪ್ರಿಂಟರ್‌ ಖರೀದಿಗೆ ಪಾವತಿಸಿದ .11,779ಕ್ಕೆ ವಾರ್ಷಿಕ ಶೇ.10ರಷ್ಟುಬಡ್ಡಿ (2020ರ ಅ.8ರಿಂದ ಮಿನಿ ಸ್ಪೀಕರನ್ನು ದೂರುದಾರರಿಂದ ಸಂಗ್ರಹಿಸುವ ದಿನದವರೆಗೆ) ನೀಡಬೇಕು. ದೂರುದಾರ ಅನುಭವಿಸಿದ ಮಾನಸಿಕ ಹಿಂಸೆ ಮತ್ತು ಸೇವಾ ನೂನ್ಯತೆಗೆ .20 ಸಾವಿರ, ವ್ಯಾಜ್ಯ ಖರ್ಚಿಗೆ .10 ಸಾವಿರ ಪರಿಹಾರ ನೀಡಬೇಕು. ತಪ್ಪಿದರೆ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ.12ರಷ್ಟುಬಡ್ಡಿ ದರ ಪಾವತಿಸಬೇಕು ಎಂದು ಆದೇಶಿಸಿತು. ರಾಜ್ಯ ಸಹಕಾರಿ ಇಲಾಖೆ ನಿವೃತ್ತ ಹೆಚ್ಚುವರಿ ರಿಜಿಸ್ಟ್ರಾರ್‌ ಆರ್‌.ಎಸ್‌. ಹುಚಾಚಾರಿ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯೆ ಕೆ.ಅನಿತಾ ಶಿವಕುಮಾರ್‌ ಈ ಆದೇಶ ಮಾಡಿದ್ದಾರೆ.

ಪ್ರಕರಣ:

ಆರ್‌.ಎಸ್‌. ಹುಚಾಚಾರಿ ಸೇವೆಯಿಂದ ನಿವೃತ್ತರಾದರೂ ಕೆಲ ಕೆಲಸಗಳನ್ನು ಸರ್ಕಾರ ಅವರಿಗೆ ನಿಯೋಜಿಸುತ್ತಿತ್ತು. ಹೀಗಾಗಿ ಸ್ವಂತ ಪ್ರಿಂಟರ್‌ ಹೊಂದಲು 2020ರ ಅ.8ರಂದು ‘ಕೆನಾನ್‌ ಇಮೇಜ್‌ ಕ್ಲಾಸ್‌ 2900 ಬಿ ಸಿಂಗಲ್‌ ಫಂಕ್ಷನ್‌ ಲೇಸರ್‌ ಮೊನೋಕ್ರೋಮ್‌ ಪ್ರಿಂಟರ್‌’ (ಬ್ಲಾಕ್‌) ಅನ್ನು ಅಮೆಜಾನ್‌ ಇ-ಕಾಮರ್ಸ್‌ ಫೋರಂನಲ್ಲಿ ಆರ್ಡರ್‌ ಮಾಡಿ ತಮ್ಮ ಡೆಬಿಟ್‌ ಕಾರ್ಡ್‌ನಿಂದ .11,799 ಪಾವತಿಸಿದ್ದರು.

ಅಮೆಜಾನ್‌ ಇಂಡಿಯಾದ ಡೆಲಿವರಿ ಮ್ಯಾನ್‌ 2020ರ ಅ.14ರಂದು ಪ್ರಿಂಟರ್‌ ಬದಲಿಗೆ ಎಚ್‌.ಪಿ. ಬ್ಲೂಟೂತ್‌ ಮಿನಿ ಸ್ಪೀಕರ್‌ ನೀಡಿದ್ದ. ಇದರಿಂದ ಹುಚಾಚಾರಿ ಆಯೋಗಕ್ಕೆ ದೂರು ನೀಡಿ, ತಾನು ಮಾಡಿದ್ದ ಆರ್ಡರ್‌ನಂತೆ ಪ್ರಿಂಟರ್‌ ನೀಡಬೇಕು. ಮಿನಿ ಸ್ಪೀಕರ್‌ ಕಳುಹಿಸಿದ್ದರಿಂದ ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಆಘಾತಕ್ಕೆ .1 ಲಕ್ಷ ಪರಿಹಾರ ಕಲ್ಪಿಸಬೇಕು. ವ್ಯಾಜ್ಯದ ಖರ್ಚಿಗೆ .50 ಸಾವಿರ ಪಾವತಿಸಬೇಕು ಎಂದು ಅಮೆಜಾನ್‌ ಇಂಡಿಯಾಗೆ ನಿರ್ದೇಶಿಸುವಂತೆ ಕೋರಿದ್ದರು.

ಸಲಿಂಗ ವಿವಾಹ ಕಾಯ್ದೆ ರಚಿಸಲು ಸುಪ್ರೀಂ 'ಸಾಂವಿಧಾನಿಕ ಘೋಷಣೆ'?

ಅಮೆಜಾನ್‌ ಹೊಣೆಗಾರ

ವಿಚಾರಣೆ ವೇಳೆ ಅಮೆಜಾನ್‌ ಇಂಡಿಯಾ ವಾದ ಮಂಡಿಸಿ, ಹುಚಾಚಾರಿ ಅವರು ಆರ್ಡರ್‌ ಸ್ವೀಕರಿಸಿ ಟೈಮ್‌ ಸ್ಟೇಷನರೀಸ್‌ ಸಂಪರ್ಕಿಸಲಾಗಿತ್ತು. ಅದು ನೀಡಿದ ಉತ್ಪನ್ನವನ್ನೇ ದೂರುದಾರರಿಗೆ ಕಳುಹಿಸಲಾಗಿದೆ. ಆದ್ದರಿಂದ ತಮ್ಮ ಸೇವೆಯಲ್ಲಿ ನೂನ್ಯತೆ ಉಂಟಾಗಿಲ್ಲ ಎಂದು ಸಮರ್ಥಿಸಿಕೊಂಡಿತಲ್ಲದೆ, ಪ್ರಕರಣದಲ್ಲಿ ಟೈಮ್‌ ಸ್ಟೇಷನರೀಸ್‌ ತಪ್ಪು ಮಾಡಿದೆ. ಅದನ್ನು ಪರಿಹಾರ ಪಾವತಿಗೆ ಹೊಣೆ ಮಾಡಬೇಕು ಎಂದು ಕೋರಿತ್ತು.

ಈ ವಾದವನ್ನು ತಿರಸ್ಕರಿಸಿದ ಆಯೋಗ, ಗುಣಮಟ್ಟದ ಉತ್ಪನ್ನ ಒದಗಿಸುತ್ತದೆ. ಈ ಸಂಬಂಧ ಮಾರಾಟಗಾರರೊಂದಿಗೆ ಒಪ್ಪಂದ ಹೊಂದಿರುತ್ತದೆ ಎಂದು ಅಮೆಜಾನ್‌ ಇ-ಕಾಮರ್ಸ್‌ ವೆಬ್‌ಸೈಟ್‌ ಮೇಲೆ ದೂರುದಾರರು ನಂಬಿಕೆ ಹೊಂದಿದ್ದರು. ಟೈಮ್‌ ಸ್ಟೇಷನರೀಸ್‌ನೊಂದಿಗೆ ಯಾವುದೇ ಒಪ್ಪಂದ ಹೊಂದಿರಲಿಲ್ಲ. ಅಮೆಜಾನ್‌ ಜೊತೆಗೆ ಮಾತ್ರ ಒಪ್ಪಂದ ಏರ್ಪಡಿಸಿಕೊಂಡಿದ್ದರು. ಆದ್ದರಿಂದ ಪ್ರಕರಣದಲ್ಲಿ ಉಂಟಾಗಿರುವ ಸೇವಾ ನ್ಯೂನ್ಯತೆಗೆ ಅಮೆಜಾನ್‌ ಇಂಡಿಯಾ ಜವಾಬ್ದಾರಿಯಾಗಿದೆ. ಇನ್ನು ತಪ್ಪು ಸರಕು ನೀಡುವ ಮೂಲಕ ಟೈಮ್‌ ಸ್ಟೇಷನರೀಸ್‌ ದೂರುದಾರಿಗೆ ಆಘಾತ ನೀಡಿದೆ. ಅದು ಮಾನಸಿಕ ಹಿಂಸೆಗೆ ಕಾರಣವಾಗಬಹುದು. ಆದ್ದರಿಂದ ಅದು ಸಹ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

Latest Videos
Follow Us:
Download App:
  • android
  • ios