ಬೆಂಗ್ಳೂರಿನ ಶೇ.30ರಷ್ಟು ಕೆರೆಗಳ ನೀರು ಕುಡಿಯಲು ಯೋಗ್ಯವಲ್ಲ..!
ಬೆಂಗಳೂರು ನಗರದ 106 ಕೆರೆಗಳ ಪೈಕಿ ಒಂದೇ ಒಂದು ಕೆರೆಯ ನೀರು ಮನುಷ್ಯರು ಕುಡಿಯಲು ಯೋಗ್ಯವಲ್ಲ: ವರದಿ| ಪೀಣ್ಯ, ದಾಸರಹಳ್ಳಿ ಕೆರೆ ನೀರು ಪ್ರಾಣಿ ಬಳಕೆಗೂ ಯೋಗ್ಯವಿಲ್ಲ| ಲಾಲ್‌ಬಾಗ್, ಯಡಿಯೂರು ಕೆರೆಗಳು ಓಕೆ| ನೀರಿನ ಗುಣಮಟ್ಟ ಕುಸಿಯುತ್ತಲೇ ಇದೆ| ಯಾವುದೇ ಕ್ರಮಕ್ಕೆ ಮುಂದಾಗದ ಸರ್ಕಾರ|
ಎನ್.ಎಲ್. ಶಿವಮಾದು
ಬೆಂಗಳೂರು(ಏ.30): ನಗರದಲ್ಲಿರುವ ಕೆರೆಗಳ ಪೈಕಿ ಶೇ.30ರಷ್ಟು ಕೆರೆಗಳ ನೀರು ಪ್ರಾಣಿ-ಪಕ್ಷಿಗಳು ಕುಡಿಯಲು ಸಹ ಯೋಗ್ಯವಲ್ಲ!
ಕೆರೆಗಳ ನೀರು ಮತ್ತು ಜೀವ ವೈವಿಧ್ಯ ಸಂರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ನಗರದ ಆಕ್ಷನ್ ಏಡ್ ಅಸೋಸಿಯೇಷನ್ ಎಂಬ ಸಂಸ್ಥೆಯು ಇತ್ತೀಚೆಗೆ ನಗರದ ಕೆರೆಗಳ ನೀರಿನ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಈ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ನಗರದ ಪೀಣ್ಯ ಹಾಗೂ ದಾಸರಹಳ್ಳಿ ಕೆರೆಗಳ ನೀರು ತುಂಬಾ ಹಾಳಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲದಿರುವುದು ಬೆಳಕಿಗೆ ಬಂದಿದೆ. ಅದೇ ರೀತಿ ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಲಾಲ್‌ಬಾಗ್, ಯಡಿಯೂರು ಕೆರೆಗಳು ಸುಸ್ಥಿತಿಯಲ್ಲಿದೆ ಎನ್ನುತ್ತಿದೆ ವರದಿ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಸುಮಾರು 106 ಕೆರೆಗಳ ನೀರಿನ ಮಾದರಿಯನ್ನು ಸುಮಾರು ಎರಡು ವರ್ಷಗಳ ಕಾಲ ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಈ ಪೈಕಿ ಯಡಿಯೂರು, ಕೆಂಪಾಂಬುದಿ ಹಾಗೂ ಲಾಲ್‌ಬಾಗ್ ಕೆರೆಗಳು ಪ್ರಾಣಿ ಪಕ್ಷಿಗಳು ನೀರನ್ನು ಕುಡಿಯಲು ಹಾಗೂ ಮೀನುಗಾರಿಕೆಗೆ ಯೋಗ್ಯ ರೀತಿಯಲ್ಲಿವೆ.
ಬೆಂಗಳೂರು ಕೆರೆ ಶುದ್ಧೀಕರಣ: ಅಧಿಕಾರಿಗಳ ಬೆಂಡೆತ್ತಿದ NGT
24ರಲ್ಲಿ ಮಾತ್ರ ಯೋಗ್ಯ ನೀರು:
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಮಾನದಂಡಗಳ ಪ್ರಕಾರವೇ ನೀರಿನ ಮಾದರಿ ಪರೀಕ್ಷೆಗಳನ್ನು ಮಾಡಲಾಗಿದೆ. ಆ ಪ್ರಕಾರ ‘ಎ’ ಕೆಟಗರಿಯಲ್ಲಿ ಬರುವ ನೀರನ್ನು ಮನುಷ್ಯರು ಕುಡಿಯಲು ಯೋಗ್ಯವಾಗಿದೆ ಎಂದರ್ಥ. ‘ಬಿ’ ಮತ್ತು ‘ಸಿ’ ಬಂದರೆ ಸ್ನಾನ ಮಾಡಲು ಯೋಗ್ಯವಾಗಿರುತ್ತದೆ. ‘ಡಿ’ ಬಂದರೆ ಪ್ರಾಣಿ, ಪಕ್ಷಿಗಳು ಕುಡಿಯಲು ಯೋಗ್ಯವಾಗಿದೆ. ‘ಇ’ ಬಂದರೆ ಕೈಗಾರಿಕೆಗಳಿಗೆ ಹಾಗೂ ಕೃಷಿ ಬಳಸಲಷ್ಟೇ ಯೋಗ್ಯವಾಗಿದೆ ಎಂದು ವರದಿ ಹೇಳುತ್ತಿದೆ.
ಸಂಸ್ಥೆಯ ಪ್ರೋಗ್ರಾಂ ಮ್ಯಾನೇಜರ್ ರಾಘವೇಂದ್ರ ಬಿ ಪಚ್ಚಾಪುರ್ ಮಾತನಾಡಿ, ಆ ಪ್ರಕಾರ ಬೆಂಗಳೂರಿನಲ್ಲಿ ಸರ್ವೆ ಮಾಡಿರುವ 106 ಕೆರೆಗಳ ಪೈಕಿ ಕೇವಲ 24 ಕೆರೆಗಳು ಅಷ್ಟೇ ‘ಡಿ’ ವರ್ಗಕ್ಕೆ ಬರಲಿದೆ. ಉಳಿದ ಕೆರೆಗಳ ನೀರನ್ನು ಬಳಸಲು ಸಹ ಯೋಗ್ಯವಾಗಿಲ್ಲ. ಅದರಲ್ಲಿಯೂ ಶಿವಪುರ, ಪೀಣ್ಯ, ಗಂಗೋಂಡನಹಳ್ಳಿ, ಚಿಕ್ಕಬಾಣಾವರ ಮತ್ತು ದಾಸರಹಳ್ಳಿ ಕೆರೆಗಳು ಕೈಗಾರಿಕಾ ಪ್ರದೇಶದಲ್ಲಿರುವ ಕೆರೆಗಳು ‘ಇ’ ಕೆಟಗರಿಯಲ್ಲಿ ಸೇರಿವೆ. ಬಹುತೇಕ ಕೆರೆಗಳ ನೀರನ್ನು ಪ್ರಾಣಿ-ಪಕ್ಷಿಗಳು ಕೂಡ ಕುಡಿಯಲು ಯೋಗ್ಯವಾಗಿಲ್ಲದಷ್ಟುಕೆಟ್ಟದಾಗಿವೆ ಎನ್ನುತ್ತಾರೆ.
ಏಷ್ಯಾದಲ್ಲಿಯೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಪೀಣ್ಯ ಸುತ್ತಮುತ್ತಲಿನ ಪ್ರದೇಶದಲ್ಲಿ ಕೈಗಾರಿಕಾ ತ್ಯಾಜ್ಯವೇ ತುಂಬಿರುವುದರಿಂದ ಯಾವುದೇ ಪ್ರಯೋಜನಕ್ಕೆ ಬಾರದಷ್ಟುಹಾಳಾಗಿವೆ. ಕೆರೆಗಳ ಸುತ್ತಲಿನ ಪ್ರದೇಶದಲ್ಲಿ ಗಬ್ಬೆದ್ದು ನಾರುತ್ತಿವೆ ಎಂದು ಹೇಳುತ್ತಾರೆ.
ವೃಷಭಾವತಿ ಪರಿಸ್ಥಿತಿ ಭಯಾನಕ
ಇದೇ ರೀತಿ ನಗರದ ಕಣಿವೆಗಳ ನೀರನ್ನು ಸಹ ಪರೀಕ್ಷೆ ಮಾಡಲಾಗಿದೆ. ಕೋರಮಂಗಲ- ಚಲ್ಲಘಟ್ಟಕಣಿವೆ ನೀರು ಉತ್ತಮ ಗುಣಮಟ್ಟದಲ್ಲಿದೆ. ವೃಷಭಾವತಿ ವ್ಯಾಲಿ ನೀರು ತೀರಾ ಹಾಳಾಗಿದೆ. ಶೇ.53ರಷ್ಟುನೀರು ‘ಡಿ’ ಕೆಟಗರಿಯಲ್ಲಿ ಬಂದರೆ, ಶೇ.47ರಷ್ಟುನೀರು ‘ಇ’ ಕೆಟಗರಿಯಲ್ಲಿದೆ.
ಒಟ್ಟಾರೆ ಸಂಸ್ಥೆಯು ಎರಡು ವರ್ಷಗಳಲ್ಲಿ ನಗರದ ವಿವಿಧ ಕೆರೆಗಳಲ್ಲಿ 2,351 ಮಾದರಿಗಳನ್ನು ಸಂಗ್ರಹ ಮಾಡಿದೆ. ಈ ಪೈಕಿ ಶೇ.70.42ರಷ್ಟುಅಂದರೆ 1,191 ಕೆರೆಗಳು ‘ಡಿ’ ಕೆಟಗರಿ ಹಾಗೂ 489 ಕೆರೆಗಳು ‘ಇ’ ಕೆಟಗರಿಯಲ್ಲಿವೆ ಎನ್ನುತ್ತಿದೆ. ನಗರದ ಯಾವುದೇ ಕೆರೆಯಲ್ಲಿರುವ ನೀರನ್ನು ಮನುಷ್ಯರು ಕುಡಿಯಲು ಯೋಗ್ಯವಾಗಿಲ್ಲ ಎಂದು ಹೇಳುತ್ತಿದೆ.
ನಗರದ ಕೆರೆಗಳ ನೀರಿನ್ನು ನಿರಂತರವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ನೀರಿನ ಗುಣಮಟ್ಟ ಕುಸಿಯುತ್ತಲೇ ಇದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಪ್ರತಿ ತಿಂಗಳು ವರದಿ ತಯಾರಿಸುತ್ತಿದೆಯೇ ವಿನಾ ಕ್ರಮ ಕೈಗೊಳ್ಳದಿರುವುದು ಕೆರೆಗಳ ದುಃಸ್ಥಿತಿಗೆ ಕಾರಣವಾಗಿದೆ ಎಂದು ಆಕ್ಷನ್ ಏಡ್ ಅಸೋಸಿಯೇಷನ್ ಪ್ರೋಗ್ರಾಂ ಮ್ಯಾನೇಜರ್ ರಾಘವೇಂದ್ರ ಬಿ ಪಚ್ಚಾಪುರ್ ತಿಳಿಸಿದ್ದಾರೆ.