ಕೊಪ್ಪಳ: ಬೆಳೆ ವಿಮೆ ಸಮೀಕ್ಷೆ ಯಡವಟ್ಟು, ಸರ್ಕಾರದಲ್ಲಿ ಧೂಳು ಹಿಡಿದ ಫೈಲ್
ಅಧಿಕಾರಿ ಮಾಡಿದ ಯಡವಟ್ಟಿಗೆ ಬೆಟಗೇರಿ ಗ್ರಾಪಂ ವ್ಯಾಪ್ತಿ ರೈತರಿಗೆ ಹಾನಿ| 1600 ರೈತರು ಬೆಳೆ ವಿಮಾ ಪರಿಹಾರಕ್ಕೆ ಅರ್ಹರಿದ್ದರೂ ಧಕ್ಕಲಿಲ್ಲ| ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮೆ| ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಖಾತೆಗೆ ಮಾತ್ರ ಜಮೆ ಆಗಲೇ ಇಲ್ಲ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.07): ಅಧಿಕಾರಿ ಮಾಡಿದ ಯಡವಟ್ಟಿನಿಂದ ಕೊಪ್ಪಳ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1600 ರೈತರು ‘ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ’ಯ ಪರಿಹಾರದಿಂದ ವಂಚಿತರಾಗಿ ವರ್ಷ ಕಳೆಯುತ್ತ ಬಂದರೂ ಸರ್ಕಾರ ಇದನ್ನು ಸರಿ ಮಾಡಲು ಯತ್ನಿಸುತ್ತಲೇ ಇಲ್ಲ. ರೈತರಿಗೆ ಪರಿಹಾರ ನೀಡಲೇಬೇಕು ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದ ವರದಿ ಧೂಳು ತಿನ್ನುತ್ತಿದೆ.
ರೈತರೇನಾದರೂ ಸಣ್ಣ ತಪ್ಪು ಮಾಡಿದರೆ ಅದನ್ನೇ ಮುಂದೆ ಮಾಡಿ ಅಧಿಕಾರಿಗಳು ರೈತರನ್ನು ಶೋಷಣೆ ಮಾಡುತ್ತಾರೆ. ಆದರೆ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾಡಿದ ಯಡವಟ್ಟಿನಿಂದ ಕೋಟ್ಯಂತರ ರುಪಾಯಿ ಬೆಳೆ ವಿಮಾ ಪರಿಹಾರ ಬಾರದಂತಾಗಿದ್ದರೂ ಇದುವರೆಗೂ ಅದನ್ನು ಸರಿ ಮಾಡುತ್ತಲೇ ಇಲ್ಲ ಎಂದರೇ ಏನರ್ಥ. ಸರ್ಕಾರದ ಹಂತದಲ್ಲಿ ಈಗಾಗಲೇ ಇದನ್ನು ಸರಿ ಮಾಡಬೇಕು ಎನ್ನುವ ಕುರಿತು ಗೊತ್ತುವಳಿ ಮಾಡಲಾಗಿದೆಯಾದರೂ ಅದು ಕಾರ್ಯಗತವಾಗುತ್ತಲೇ ಇಲ್ಲ.
ರೈತರ ಬೆಳೆ ಅಪ್‌ಲೋಡ್‌ಗೆ ಪ್ರತ್ಯೇಕ ಆ್ಯಪ್: ಕೃಷಿ ಸಚಿವ ಬಿ.ಸಿ. ಪಾಟೀಲ
ಏನಿದು ಸಮಸ್ಯೆ?:
2018-19ನೇ ಸಾಲಿನಲ್ಲಿ ಭೀಕರ ಬರ. ಸರ್ಕಾರ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿತ್ತು. ಹೀಗಾಗಿ, ಜಿಲ್ಲಾದ್ಯಂತ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮೆಯಾಯಿತು. ಆದರೆ, ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಖಾತೆಗೆ ಮಾತ್ರ ಜಮೆ ಆಗಲೇ ಇಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು. ರೈತರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಬೆಳೆ ವಿಮೆ ಯಾಕೆ ಬಂದಿಲ್ಲ ಎನ್ನುವ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಪಡೆದರು.
ಅದರಲ್ಲೂ ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಮೆಕ್ಕೆಜೋಳ ಮತ್ತು ಕಡಲೆ ಬೆಳೆ ಬಂದಿದೆ ಎನ್ನುವ ಆಣೆವಾರಿ ವರದಿ ಇತ್ತು. ಇದನ್ನು ನೋಡಿದ ರೈತರು ದಂಗಾಗಿ ಹೋಗಿದ್ದರು. ವರದಿಯನ್ನು ಮರುಪರಿಶೀಲನೆ ಮಾಡಿ ಎಂದು ರೈತರು ದೂರು ನೀಡಿದರು. ಇದಕ್ಕಾಗಿ ರೈತರು ದಾಖಲೆಯನ್ನೂ ಸಂಗ್ರಹಿಸಿದರು. ಮೆಕ್ಕೆಜೋಳ ಮತ್ತು ಕಡಲೆ ಬೆಳೆ ಅತ್ಯುತ್ತಮ ಇಳುವರಿ ಬಂದಿದೆ ಎಂದು ವರದಿಯಲ್ಲಿ ಇತ್ತು.
ಯಾವ ಸರ್ವೇ ನಂಬರ್‌ನಲ್ಲಿ ಮಾಡಲಾಗಿದೆ? ಅದರ ಫೋಟೋಗಳು ಯಾವವು? ಎನ್ನುವುದನ್ನು ಪರಾಮರ್ಶೆ ಮಾಡಿದಾಗಲೇ ಸತ್ಯ ಗೊತ್ತಾಗಿದ್ದು, ಸರ್ವೆ ನಂಬರ್‌ಗೂ, ಫೋಟೋಗಳಿಗೂ ತಾಳೆಯಾಗುತ್ತಲೇ ಇರಲಿಲ್ಲ. ಅಷ್ಟೇ ಅಲ್ಲ, ಸರ್ಕಾರಿ ಶಾಲೆ ಇರುವ ಸರ್ವೇ ನಂಬರ್‌ನಲ್ಲಿ ಕಟಾವು ಮಾಡಲಾಗಿತ್ತು.
ಕಡಲೆ ಬೆಳೆ ಆಣೆವಾರು ಮಾಡುವ ವೇಳೆಯಲ್ಲಿ ಸಾಮಾನ್ಯವಾಗಿ ಕಾಯಿಗಳನ್ನು ಕಟಾವು ಮಾಡಿ, ತೂಕ ಮಾಡಿ, ಇಳುವರಿಯ ಲೆಕ್ಕಾಚಾರ ಮಾಡುತ್ತಾರೆ. ಆದರೆ, ಬೆಟಗೇರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕಡಲೆ ಗಿಡವನ್ನೇ ತೂಕ ಮಾಡಿದ್ದರು. ಇದರಿಂದ ಇಳುವರಿ ನಿಗದಿ ಪ್ರಮಾಣಕ್ಕಿಂತಲೂ ದುಪ್ಪಟ್ಟು ಬಂದಿತ್ತು. ಇದೆಲ್ಲವನ್ನು ರೈತರು ಪತ್ತೆ ಮಾಡಿದ ಮೇಲೆ ಜಿಲ್ಲಾಡಳಿತ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯನ್ನು ಅಮಾನತ್ತು ಮಾಡಿ, ಆದೇಶ ಹೊರಡಿಸಿತು. ಆದರೆ, ಇದು ವರೆಗೂ ರೈತರಿಗೆ ಪರಿಹಾರ ಬರಲೇ ಇಲ್ಲ. ರೈತರ ಆಗ್ರಹದ ಮೇರೆಗೆ ಹಾಗೂ ಆಗಿನ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯ ಮೇರೆಗೆ ಸರ್ಕಾರಕ್ಕೆ ಬೆಳೆ ವಿಮೆ ಪರಿಹಾರ ನೀಡುವ ಕುರಿತ ಪ್ರಸ್ತಾವನೆ ಸಲ್ಲಿಸಲಾಗಿದೆ.
ರೈತರು ನ್ಯಾಯಯುತವಾಗಿ ಬರಬೇಕಾದ ಬೆಳೆವಿಮೆ ಪರಿಹಾರವನ್ನು ನೀಡಿ ಎಂದು ಆಗ್ರಹಿತ್ತಲೇ ಇದ್ದಾರೆ.ರೈತರಿಗೆ ಬರಬೇಕಾದ ಬೆಳೆ ವಿಮಾ ಪರಿಹಾರ ಬರದಿದ್ದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಈ ಕುರಿತು ಅಧಿಕಾರಿಗಳು ಮಾಹಿತಿಯನ್ನು ನನ್ನ ಗಮನಕ್ಕೆ ತನ್ನಿ, ನಾನು ಈ ಕುರಿತು ಅಗತ್ಯ ಕ್ರಮಕೈಗೊಳ್ಳುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಹೇಳಿದ್ದಾರೆ.
ರೈತರಿಗೆ ಬೆಳೆ ವಿಮಾ ಪರಿಹಾರ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದೇ ರೀತಿ ಯಾದಗಿರಿ ಜಿಲ್ಲೆಯಲ್ಲಿಯೂ ಆಗಿದ್ದು, ಅದೊಂದು ಪ್ರಸ್ತಾವನೆ ಬರುತ್ತಿದ್ದಂತೆ ಸರ್ಕಾರ ಅಗತ್ಯ ಕ್ರಮಕೈಗೊಳ್ಳುತ್ತದೆ ಎನ್ನುವ ಮಾಹಿತಿ ಬಂದಿದೆ ಎಂದು ಕೊಪ್ಪಳದ ಜೆಡಿ ಕೃಷಿ ಇಲಾಖೆ ಶಬಾನಾ ಶೇಖ್ ಅವರು ಹೇಳಿದ್ದಾರೆ.