ಕನ್ನಡದಲ್ಲೇ ಟಿಇಟಿ ಪರೀಕ್ಷೆಗೆ ಮಹಾರಾಷ್ಟ್ರದ ಕನ್ನಡಿಗರ ಆಗ್ರಹ
ಜತ್ತ ಕಾಂಗ್ರೆಸ್ ಶಾಸಕ ವಿಕ್ರಮ ಸಾವಂತ ಅವರು ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಕನ್ನಡಿಗರ ಪರವಾಗಿ ದನಿ ಎತ್ತಿದ್ದಾರೆ. ಗಡಿ ಕನ್ನಡ ಸರ್ಕಾರಿ ಶಾಲೆಗಳಲ್ಲಿ ಮರಾಠಿ ನಿವೃತ್ತ ಶಿಕ್ಷಕರನ್ನು ನೇಮಕ ಮಾಡಿರುವುದನ್ನು ವಿರೋಧಿಸಿದ್ದು, ಮಹಾರಾಷ್ಟ್ರ ಸರ್ಕಾರ ತಕ್ಷಣ ಅಲ್ಲಿ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು. ಸರ್ಕಾರದ ಧೋರಣೆಗೆ ತಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ
ಅಥಣಿ(ಜು.05): ಟಿಇಟಿ ಪರೀಕ್ಷೆಯನ್ನು ಕನ್ನಡ ವಿಷಯದವರಿಗೆ ಮರಾಠಿ ಭಾಷೆಯ ಬದಲಾಗಿ ಕನ್ನಡದಲ್ಲಿಯೇ ಮಹಾರಾಷ್ಟ್ರ ಸರ್ಕಾರ ನಡೆಸಬೇಕು ಎಂದು ಗಡಿನಾಡು ಕನ್ನಡ ಸಂಘ ಬುಧವಾರ ಪ್ರತಿಭಟನೆ ನಡೆಸಿದೆ.
ಮಹಾರಾಷ್ಟ್ರದ ಸಂಖ ಮತ್ತು ಜತ್ತ ತಾಲೂಕಿನಲ್ಲಿರುವ ಗಡಿ ಕನ್ನಡ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಹಾರಾಷ್ಟ್ರ ಸರ್ಕಾರದ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿದ್ದಾರೆ. ಮಹಾರಾಷ್ಟ್ರ ಗಡಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳಲ್ಲಿ ನಿವೃತ್ತ ಮರಾಠಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುವುದು ಖಂಡನೀಯ. ಜತೆಗೆ ಶಿಕ್ಷಕರ ನೇಮಕಕ್ಕೆ ನಡೆಸುತ್ತಿರುವ ಟಿಇಟಿ ಪರೀಕ್ಷೆಯನ್ನು ಮರಾಠಿಯಲ್ಲಿ ನಡೆಸುವುದರಿಂದ ಕನ್ನಡ ಭಾಷಿಕರು ವಂಚಿತರಾಗುತ್ತಿದ್ದಾರೆ. ಜತೆಗೆ ಮರಾಠಿಯಲ್ಲಿ ಪರೀಕ್ಷೆಯಲ್ಲಿ ಪಾಸಾಗುವುದು ಕೂಡ ಅವರಿಗೆ ಕಷ್ಟವಾಗಿದೆ. ಇದರಲ್ಲಿ ಸುಮಾರು 500 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ಈ ಪೈಕಿ ಕೇವಲ 5 ರಿಂದ 10 ಜನ ಪಾಸಾಗುತ್ತಾರೆ ಎಂದು ದೂರಿದರು.
ಶಿಕ್ಷಕರ ಅರ್ಹತಾ ಪರೀಕ್ಷೆ ರಿಸಲ್ಟ್: 64830 ಅಭ್ಯರ್ಥಿಗಳಿಗೆ ಅರ್ಹತೆ
ಹೀಗಾಗಿ ಕನ್ನಡ ಮಾಧ್ಯಮ ಶಿಕ್ಷಕರ ಕೊರತೆ ಕಾಣಲು ಇದು ಕೂಡ ಪರೋಕ್ಷವಾಗಿ ಕಾರಣವಾಗಿದೆ. ಟಿಇಟಿಯಲ್ಲಿ ಮರಾಠಿಗರೇ ಪಾಸಾಗುವುದರಿಂದ ಕನ್ನಡ ವಿಷಯದ ಬೋಧನೆಗೆ ಅವರೇ ಬರುತ್ತಾರೆ. ಇದು ಕನ್ನಡಿಗರಿಗೆ ಮಾಡುವ ಅನ್ಯಾಯವಾಗಿದೆ ಎಂದು ದೂರಿದರು. ಮರಾಠಿ ಮಾಧ್ಯಮದಲ್ಲಿ ಪರೀಕ್ಷೆ ನಡೆಸುವುದರ ಹಿಂದೆ ಅಪ್ರತ್ಯಕ್ಷವಾಗಿ ಕನ್ನಡವನ್ನು ನಿರ್ಲಕ್ಷ್ಯ ಮಾಡುವ ಹುನ್ನಾರ ಮಹಾರಾಷ್ಟ್ರ ಸರ್ಕಾರ ಹೊಂದಿದೆ ಎಂದು ಆರೋಪಿಸಿದ್ದಾರೆ.
ಜತ್ತ, ಅಕ್ಕಲಕೋಟ, ಸೊಲ್ಲಾಪುರ ಮೊದಲಾದ ಭಾಗಗಳಲ್ಲಿ ಬಹಷ್ಟು ಕನ್ನಡಿಗರು ಇದ್ದಾರೆ. ಇಲ್ಲಿ ಕನ್ನಡ ಭಾಷೆ ಬೆಳೆಯಬೇಕು ಎಂದು ಕನ್ನಡಿಗರು ಒತ್ತಾಯ ಮಾಡಿದ್ದಾರೆ. ಇದರ ಜೊತೆ ಕನ್ನಡಿಗರು ಅಧಿಕ ಜನ ಇರುವ ಗಡಿ ಹಳ್ಳಿಗಳ ಅಭಿವೃದ್ಧಿ ಸಲುವಾಗಿ ನಿರೀಕ್ಷೆ ಮಟ್ಟದಲ್ಲಿ ಸರ್ಕಾರ ಉತ್ಸಾಹ ತೋರಿಸುತ್ತಿಲ್ಲ ಏಕೆ ಎಂದು ಈ ಸಂಘ ಪ್ರಶ್ನಿಸಿದೆ.
ಮಹಾರಾಷ್ಟ್ರ ವಿಧಾನ ಸಭೆಯಲ್ಲಿಯೂ ಚರ್ಚೆ:
ಜತ್ತ ಕಾಂಗ್ರೆಸ್ ಶಾಸಕ ವಿಕ್ರಮ ಸಾವಂತ ಅವರು ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಕನ್ನಡಿಗರ ಪರವಾಗಿ ದನಿ ಎತ್ತಿದ್ದಾರೆ. ಗಡಿ ಕನ್ನಡ ಸರ್ಕಾರಿ ಶಾಲೆಗಳಲ್ಲಿ ಮರಾಠಿ ನಿವೃತ್ತ ಶಿಕ್ಷಕರನ್ನು ನೇಮಕ ಮಾಡಿರುವುದನ್ನು ವಿರೋಧಿಸಿದ್ದು, ಮಹಾರಾಷ್ಟ್ರ ಸರ್ಕಾರ ತಕ್ಷಣ ಅಲ್ಲಿ ಕನ್ನಡ ಶಿಕ್ಷಕರನ್ನು ನೇಮಕ ಮಾಡಬೇಕು. ಸರ್ಕಾರದ ಧೋರಣೆಗೆ ತಮ್ಮ ವಿರೋಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಗಡಿ ಕನ್ನಡಿಗರಿಗೆ ಆಗುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಕುರಿತು ತಾವು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದನ್ನು ಚರ್ಚೆ ವೇಳೆ ಶಾಸಕ ಸಾವಂತ್ ಅವರು ಪ್ರಸ್ತಾಪಿಸಿದ್ದಾರೆ.