Padma Awards 2022: ನಿಸ್ವಾರ್ಥ ಸೇವಕರ ಗುರುತಿಸಿದ ಕೇಂದ್ರ: ಈ ಸಲವೂ ತೆರೆಮರೆ ಸಾಧಕರಿಗೆ ಪದ್ಮ ಗೌರವ!

*125 ವರ್ಷದ ಯೋಗ ಗುರು, ‘ಲಕ್ಷ ಸರ್ಜರಿ’ ವೈದ್ಯ ಸೇರಿ ಹಲವು ಎಲೆಮರೆಕಾಯಿಗಳಿಗೆ ಪುರಸ್ಕಾರ
*ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರ ಗುರುತಿಸಿದ ಕೇಂದ್ರ:  ಅರ್ಹರ ಆಯ್ಕೆಯಿಂದ ಪ್ರಶಸ್ತಿಗೇ ಗೌರವ

Yoga Guru Shivanand Doctor Venkata Adinarayana Rao among other padma awardees 2022 mnj

ನವದೆಹಲಿ (ಜ. 27) : ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರಾರಂಭವಾದ ತೆರೆಮರೆಯ ಸಾಧಕರನ್ನು ಹುಡುಕಿ ಅವರಿಗೆ ಪದ್ಮ ಪ್ರಶಸ್ತಿ (Padma Awards) ನೀಡುವ ಸಂಪ್ರದಾಯ ಈ ವರ್ಷವೂ ಮುಂದುವರೆದಿದೆ. ಪ್ರಚಾರದಿಂದ ದೂರವುಳಿದು, ತೆರೆಮರೆಯಲ್ಲೇ ದಶಕಗಳಿಂದ ಸಾಧನೆ ಮಾಡುತ್ತಾ, ಕಲೆ- ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ, ಸಮಾಜದ ಕಷ್ಟಕ್ಕೆ ಧ್ವನಿಯಾಗುತ್ತಿರುವ, ನೊಂದವರಿಗೆ ಆಸರೆಯಾಗುತ್ತಿರುವ ನೂರಾರು ಜನರನ್ನು ಈ ವರ್ಷವೂ ದೇಶದ ಮೂಲೆ ಮೂಲೆಗಳಿಂದ ಆರಿಸಿ ತೆಗೆದು ಕೇಂದ್ರ ಸರ್ಕಾರ ಗೌರವಿಸಿದೆ. ಈ ಮೂಲಕ ಪದ್ಮ ಪ್ರಶಸ್ತಿಗಳ ಗೌರವವನ್ನು ಮತ್ತಷ್ಟುಹೆಚ್ಚಿಸಿದೆ. ಈ ವರ್ಷ ಪ್ರಶಸ್ತಿ ಪಡೆದವರಲ್ಲಿ 125 ವರ್ಷದ ಯೋಗ ಗುರು, ಕೇವಲ 33 ವರ್ಷದ ‘ಕರಾಟೆ ಕಿಡ್‌’ ಸೇರಿದಂತೆ ಹಲವರು ಸೇರಿದ್ದಾರೆ.

125ರ ಯೋಗ ಗುರು: ಉತ್ತರಪ್ರದೇಶದ ಕಾಶಿಯ ಘಾಟ್‌ಗಳಲ್ಲಿ ಯೋಗಭ್ಯಾಸ ಮಾಡುತ್ತಾ ಇತರರಿಗೆ ಯೋಗ ಪಾಠ ಮಾಡುವ ಶಿವಾನಂದ ಅವರಿಗೆ ಪದ್ಮಶ್ರೀ ಪುರಸ್ಕಾರ ಪ್ರಕಟಿಸಲಾಗಿದೆ. ಯೋಗ ಸೇವಕ ಎಂದು ಗುರುತಿಸಲಾಗುವ ಇವರಿಗೆ ಈಗ 125 ವರ್ಷ ಎಂದು ಸರ್ಕಾರವೇ ಹೇಳಿದೆ. ಈ ಮೂಲಕ ಪದ್ಮ ಗೌರವಕ್ಕೆ ಪಾತ್ರರಾದ ಅತ್ಯಂತ ಹಿರಿಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಪೋಲಿಯೋ ಡಾಕ್ಟರ್‌: ಆಂಧ್ರಪ್ರದೇಶದ ವಿಶಾಖಪಟ್ಟಣದ ಪೋಲಿಯೋಪೀಡಿತ ವೈದ್ಯ ಸುಂಕರಾ ವೆಂಕಟ ಆದಿನಾರಾಯಣ ರಾವ್‌ ಒಂದು ಲಕ್ಷಕ್ಕೂ ಹೆಚ್ಚು ಪೋಲಿಯೋ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಪೋಲಿಯೋಪೀಡಿತ ರೋಗಗಳಿಗೆ ಉಚಿತ, ಕನಿಷ್ಠ ಶುಲ್ಕದಲ್ಲಿ ಚಿಕಿತ್ಸೆ ನೀಡಿದ್ದಾರೆ.

ಇದನ್ನೂ ನೋಡಿPadma Awards : ಪ್ರಶಸ್ತಿ ಧಿಕ್ಕರಿಸಿದ ಮೂವರು ಬಂಗಾಳಿಗರು, ಹಿಂದೆಯೂ ಆಗಿತ್ತು ಇಂಥ ಘಟನೆಗಳು!

ಹಾವು ಕಡಿತದಿಂದ ರಕ್ಷಣೆ: ಮಹಾರಾಷ್ಟ್ರದ ಹಿಮ್ಮತ್‌ರಾವ್‌ ಬಾವಾಸ್ಕರ್‌ ಚೇಳು ಹಾಗೂ ಹಾವಿನ ಕಡಿತಕ್ಕೆ ಚಿಕಿತ್ಸೆ ನೀಡುವುದಕ್ಕಾಗಿ ಮಲಾಡ್‌ ಪ್ರಾಂತ್ಯದಲ್ಲಿ ಹೆಸರುವಾಸಿಯಾಗಿದ್ದಾರೆ. ಸಂಪನ್ಮೂಲಗಳ ಅಭಾವದಲ್ಲೂ ಇವರು, ‘ಪ್ರಾಜೋಸಿನ್‌’ ಅನ್ನು ಚಿಕಿತ್ಸೆಗೆ ಬಳಸುವುದರಿಂದ ಸಾವಿನ ದರ ಶೇ.40ರಿಂದ ಶೇ.1ಕ್ಕೆ ಇಳಿಕೆಯಾಗುತ್ತದೆ ಎಂಬುದನ್ನು ಕಂಡುಹಿಡಿದರು.

ಕುಷ್ಠ ರೋಗಿಗಳ ಸೇವಕ: ಮೊಹಾಲಿಯ ಸಮಾಜ ಸೇವಕರಾದ ಪ್ರೇಮ್‌ ಸಿಂಗ್‌ ಕಳೆದ ಮೂರು ದಶಕಗಳ ಕಾಲದಿಂದ 1,000 ಕ್ಕೂ ಹೆಚ್ಚು ಕುಷ್ಠ ರೋಗಿಗಳಿಗೆ ಸೇವೆ ನೀಡಿದ್ದಾರೆ. ಇವರು ತಮ್ಮ ವೈಯಕ್ತಿಕ ಆಸ್ತಿ ಮಾರಿ, ಸಾಲವನ್ನು ಪಡೆದು ರೋಗಿಗಳಿಗೆ ಚಿಕಿತ್ಸೆ ನಡೆಸುತ್ತಿದ್ದಾರೆ.

70 ವರ್ಷದಿಂದ ನಾದಸ್ವರ ವಾದನ: ಗೋಸವೀಡು ಶೇಖ್‌ ಹಸನ್‌ ಕಳೆದ 7 ದಶಕಗಳಿಂದ ಆಂಧ್ರಪ್ರದೇಶದ ಭದ್ರಾಚಲಂನಲ್ಲಿರುವ ಸೀತಾ ರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ಪ್ರತಿದಿನವೂ ಸುಪ್ರಭಾತವಾಗಿ ನಾದಸ್ವರಂ ನುಡಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಪದ್ಮಶ್ರೀ ನೀಡಲಾಗಿದೆ.

ಇದನ್ನೂ ಓದಿ: Padma Awards: ಅಣ್ಣಿಗೇರಿಯ ಕೃಷಿ ಯಂತ್ರ ಸಂಶೋಧಕ ನಡಕಟ್ಟಿನಗೆ ‘ಪದ್ಮಶ್ರೀ’ ಗೌರವ

102 ವರ್ಷದ ಶಕುಂತಲಾ: ಅಸ್ಸಾಂ ಕಾಮ್‌ಪುರದ 102 ವರ್ಷದ ಶಕುಂತಲಾ ಚೌಧರಿ ಮಹಾತ್ಮಾ ಗಾಂಧಿ ಹಾಗೂ ವಿನೋಬಾ ಬಾವೆಯವರ ಅನುಯಾಯಿಯಾಗಿದ್ದು, ಈಶಾನ್ಯ ಭಾರತದಲ್ಲಿ ಗ್ರಾಮ ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಸ್ತ್ರೀ ಶಕ್ತಿ ಜಾಗರಣ ಆಂದೋಲನ ಆರಂಭಿಸಿದ ಇವರು ಹಳ್ಳಿಯ ಮಹಿಳೆಯರ ಒಳಿತಿಗಾಗಿ ಕಳೆದ 7 ದಶಕಗಳಿಂದ ಶ್ರಮಿಸುತ್ತಿದ್ದಾರೆ.

ಕಾಶ್ಮೀರದ ಕರಾಟೆ ಕಿಡ್‌: ‘ಕಾಶ್ಮೀರದ ಕರಾಟೆ ಕಿಡ್‌’(ಬಾಲಕ) ಎಂದೇ ಪ್ರಖ್ಯಾತಿ ಪಡೆದ ಬಂಡಿಪೋರಾದ ಫೈಜಲ್‌ ಅಲಿ ದಾರ್‌ (33) ಕ್ರೀಡೆ ಹಾಗೂ ಕರಾಟೆ ಸೇರಿದಂತೆ ಸಮರ ಕಲೆಗಳ ಅಕಾಡೆಮಿ ಸ್ಥಾಪಿಸಿದ್ದಾರೆ. ಉಗ್ರರ ದಾಳಿಗೆ ಸತತವಾಗಿ ತುತ್ತಾಗುವ ಸೂಕ್ಷ್ಮ ವಲಯದ ಯುವಕರ ಸಶಕ್ತೀಕರಣಕ್ಕಾಗಿ ಇವರು ಶ್ರಮಿಸಿದ್ದು 4000ಕ್ಕೂ ಹೆಚ್ಚು ಯುವಕರಿಗೆ ತರಬೇತಿ ನೀಡಿದ್ದಾರೆ. ಇವರ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಕಿಕ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಪದಕ ಪಡೆದಿದ್ದಾರೆ.

ಬಡವರ ವಸ್ತ್ರ ಬ್ಯಾಂಕ್‌ ಸ್ಥಾಪಕಿ: ಗುಜರಾತ್‌ನ ಪ್ರಭಾಬೆನ್‌ ಷಾ (91) 2001ರಲ್ಲಿ ಕಛ್‌ ಭೂಕಂಪ ಸಂತ್ರಸ್ತರಿಗಾಗಿ ವಸ್ತ್ರ ಬ್ಯಾಂಕ್‌ ಆರಂಭಿಸಿದ್ದರು. ಬಡ ರೋಗಿಗಳಿಗಾಗಿ ಹಲವಾರು ಆಸ್ಪತ್ರೆಗಳಲ್ಲಿ ಕ್ಯಾಂಟೀನ್‌ ಆರಂಭಿಸಿದ್ದಾರೆ. ಅಂದು ಆರಂಭವಾಗಿದ್ದ ಬಡವರ ಪರ ಸೇವೆ ಇಂದಿಗೂ ಮುಂದುವರೆದಿದೆ.

ಮೊದಲ ಜೈವಿಕ ಕರು ಸೃಷ್ಟಿಕರ್ತ: ಮೋತಿ ಲಾಲ್‌ ಮದನ್‌ (82) ಹರಾರ‍ಯಣದ ಜೈವಿಕ ತಂತ್ರಜ್ಞಾನ ಶಾಸ್ತ್ರಜ್ಞ. ವಿಶ್ವದ ಮೊದಲ ಯಶಸ್ವಿ ಐವಿಎಫ್‌ನ ಮೂಲಕ ಪ್ರಥಮ್‌ ಎಂಬ ಕರುವಿನ ಸೃಷ್ಟಿಗೆ ಕಾರಣರಾದರು. ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಕ್ಲೋನಿಂಗ್‌ ಇನ್ನಿತರ ಕ್ಷೇತ್ರದಲ್ಲೂ ಕೊಡುಗೆ ನೀಡಿದ್ದಾರೆ.

ಬಯಲು ಶೌಚಾಲಯ ಮುಕ್ತ ಹೋರಾಟಗಾರ್ತಿ: ಗುಜರಾತಿನ ಗಮಿತ್‌ ರಮಿಲಾಬೇನ್‌ ರೇಸಿಂಗ್‌ಭಾಯ್‌ (52) ತಾಪಿ ಬುಡಕಟ್ಟು ಜನಾಂಗದ ಸಾಮಾಜಿಕ ಕಾರ್ಯಕರ್ತೆ. ಪ್ರಯತ್ನದಿಂದ 9 ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ. ಇವರು ಬುಡಕಟ್ಟು ಪ್ರದೇಶದಲ್ಲಿ 300ಕ್ಕೂ ಹೆಚ್ಚು ನೈರ್ಮಲ್ಯ ಘಟಕಗಳನ್ನು ರಚಿಸಿದ್ದಾರೆ.

ಇದನ್ನೂ ಓದಿ: Padma Awards 2022: 128 ಸಾಧಕರಿಗೆ ಪದ್ಮ ಗೌರವ: ಯೋಧರಿಗೆ ಶೌರ್ಯ ಪದಕ!

ಜಾನಪದ ಕಲೆ ಸಂರಕ್ಷಣೆ: ದರ್ಶನಂ ಮೊಗಿಲೈಯ್ಯಾ ಬುಡಕಟ್ಟು ತೆಲುಗು ಜಾನಪದ ಹಾಡುಗಾರ ಹಾಗೂ ಕಿನ್ನಾರಾ ವಾದಕರು. ತೆಲಂಗಾಣದ ನಾಗರಕರ್ನೂಲಿನವರು. 50 ವರ್ಷದಿಂದಲೂ ತಮ್ಮ ಜಾನಪದ ಸಂಸ್ಕೃತಿಯನ್ನು ಪೋಷಿಸಿ ಸಂರಕ್ಷಿಸಿದ್ದಾರೆ.

ಸಾದಿರ್‌ ಕಲೆ ಸಂರಕ್ಷಕಿ: ತಮಿಳುನಾಡಿನ ಆರ್‌. ಮುತ್ತುಕನ್ನಮ್ಮಾಳ್‌ ವಿರಾಲಿಮಲೈನ ಸಾದಿರ್‌ ನರ್ತಕಿಯಾಗಿದ್ದಾರೆ. ಕಳೆದ 70 ವರ್ಷದಲ್ಲಿ ಅವರು 1,000ಕ್ಕೂ ಹೆಚ್ಚು ನೃತ್ಯ, ಗಾಯನ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯದ ಆರಂಭಿಕ ಕಲೆ ಸಾದಿರ್‌ ಕಲಾಪ್ರಾಕಾರದ ರಕ್ಷಕಿಯೆಂದೇ ಕರೆಯಲಾಗುವ ಇವರು ಈ ತಲೆಮಾರಿನ ಒಬ್ಬರೇ ಜೀವಂತ ದೇವದಾಸಿಯಾಗಿದ್ದಾರೆ.

ಜಗದ್ವಿಖ್ಯಾತ ಗೀತಾ ಪ್ರೆಸ್‌ ಮಾಲೀಕ: ಉತ್ತರಪ್ರದೇಶದ ರಾಧೇಶ್ಯಾಮ್‌ ಖೇಮ್ಕಾರಿಗೆ ಮರಣೋತ್ತರ ಪದ್ಮಶ್ರೀ ನೀಡಲಾಗಿದೆ. ಇವರು ಭಗವದ್ಗೀತೆ, ಮಹಾಭಾರತ, ರಾಮಾಯಣ ಪುಸ್ತಕಗಳ ಪ್ರಕಾಶಕರಾಗಿದ್ದರು. ಆಧ್ಯಾತ್ಮಿಕವಾದ ಕಲ್ಯಾಣ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಪುರಾಣಗಳು, ಭಾರತದ ಇತಿಹಾಸ, ಆಧ್ಯಾತ್ಮಿಕತೆ, ಸಂಸ್ಕೃತಿ ಮೊದಲಾದವುಗಳ ಪುಸ್ತಕ ಪ್ರಕಟಿಸಿ ಜನಪ್ರಿಯವಾಗುವಂತೆ ಮಾಡಿದ್ದರು.

Latest Videos
Follow Us:
Download App:
  • android
  • ios