Asianet Suvarna News Asianet Suvarna News

ಇಸ್ರೋದಲ್ಲಿ ಎಂದಿಗೂ ಟೆಕ್ನಿಕಲ್‌ ಫೇಲ್ಯೂರ್‌ ಆಗೋದಿಲ್ಲ: ಎಸ್‌ ಸೋಮನಾಥ್!

ಇಸ್ರೋದ ಯೋಚನೆಗಳು ಮೊದಲಿದ್ದ ಹಾಗೆ ಇಲ್ಲ. ಮೊದಲಿಗೆ ದೇಶದ ಜನರಿಗೆ ನೇರವಾಗಿ ಸಹಾಯವಾಗಬಲ್ಲಂಥ ಸ್ಯಾಟಲೈಟ್‌ಗಳನ್ನು ಲಾಂಚ್‌ ಮಾಡುತ್ತಿದ್ದವು. ಆದರೆ, ಈಗ ಬಾಹ್ಯಾಕಾಶ ಪರಿಶೋಧನೆ ಕೂಡ ತನ್ನ ಕೆಲಸವನ್ನಾಗಿ ಯೋಚನೆ ಮಾಡಿದೆ ಎಂದು ಸೋಮನಾಥ್‌ ಹೇಳಿದ್ದಾರೆ.
 

There was never a technical failure in ISRO it was a management failure says chairman S Somnath san
Author
First Published Feb 5, 2024, 4:26 PM IST

ಬೆಂಗಳೂರು (ಜ.5): ಇಸ್ರೋದ ಯಾವುದೇ ಯೋಜನೆಗಳಲ್ಲಿ ಟೆಕ್ನಿಕಲ್‌ ಫೇಲ್ಯೂರ್‌ ಅನ್ನೋದು ಆಗೋದಿಲ್ಲ. ಹಾಗೇನಾದರೂ ಫೆಲ್ಯೂರ್‌ ಆದಲ್ಲಿ ಅದು ಮ್ಯಾನೇಜ್‌ಮೆಂಟ್‌ ವಲಯದಲ್ಲಿ ಆಗಿರುತ್ತದೆ. ಈ ತಪ್ಪಿಗೆ ಎಲ್ಲರೂ ಹೊಣೆಗಾರರಾಗಿರುತ್ತಾರೆ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ. ಏಷ್ಯಾನಟ್‌ ಸುವರ್ಣ ನ್ಯೂಸ್‌ ಕಚೇರಿಗೆ ಭೇಟಿ ನೀಡಿದ ಅವರು ಹಿರಿಯ ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಹಲವು ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಅವರು ಮಾತನಾಡಿದರು. ಇಸ್ರೋದಲ್ಲಿ ಯಾವುದೇ ಯೋಜನೆಗಳಿರಲಿ ಅದರ ಕಾರ್ಯಸಾಧ್ಯತೆಯ ಬಗ್ಗೆ ಸಾಕಷ್ಟು ಮುಕ್ತವಾಗಿ ಚರ್ಚೆ ಆಗುತ್ತದೆ. ಅಲ್ಲಿ ವಾದಗಳಿರುತ್ತವೆ, ಹೀಗೆ ಮಾಡಿದ್ರೆ ಸರಿ ಆಗುತ್ತದೆ ಎನ್ನುವ ವಿಚಾರಗಳಿರುತ್ತದೆ. ಇದನ್ನು ಯೋಜನೆಯಲ್ಲಿರುವ ಎಲ್ಲರೂ ಮಾಡಬಹುದು. ನಮ್ಮ ಸಂಸ್ಥೆಯಲ್ಲಿ ಯಾವುದೇ ಯೋಜನೆಯಿರಲಿ ಅದರ ಬಗ್ಗೆ ಪ್ರಶ್ನೆ ಮಾಡುವ ಸಂಸ್ಕೃತಿಯನ್ನು ಬೆಳೆಸಿಕೊಂಡಿದ್ದೇವೆ. ಈ ವೇಳೆ ಕೆಲವೊಂದು ಭಿನ್ನ ಅಭಿಪ್ರಾಯಗಳು ಹಾಗೂ ಭಿನ್ನ ಅಪ್ರೋಚ್‌ಗಳು ಸಿಗುತ್ತದೆ. ಹಾಗಂತ ಯಾರೂ ಅಥಾರಿಟಿಯನ್ನ ಅಲ್ಲಿ ಪ್ರಶ್ನೆ ಮಾಡೋದಿಲ್ಲ. ಒಂದು ಟೀಮ್‌ ತನ್ನ ಕೊನೆಯ ನಿರ್ಧಾರವನ್ನು ಮಾಡಿದಾಗ, ಈ ಬಗ್ಗೆ ಅವರ ಯೋಜನೆಯಲ್ಲಿರುವ ಎಲ್ಲಾ ವ್ಯಕ್ತಿಗಳು ಸಹಮತ ಹೊಂದಿರಬೇಕು. ನಿರ್ಧಾರಗಳು ಆಗೋವರೆಗೂ ಚರ್ಚೆ ನಡೆಯುತ್ತದೆ. ನಮ್ಮಲ್ಲಿ ಆಂತರಿಕವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತದೆ. ಭಿನ್ನ ಹಂತಗಳಲ್ಲಿ ಇದು ನಡೆಯುತ್ತದೆ. ಕೆಲವೊಮ್ಮೆ ಇಂಥ ಚರ್ಚೆಗಳು ಆಗದೇ ಇದ್ದಾಗ ಫೇಲ್ಯೂರ್‌ಗಳು ಆಗುತ್ತದೆ. ಯಾವುದೇ ಯೋಜನೆಯ ಫೇಲ್ಯೂರ್‌ ಎನ್ನುವುದು ಮ್ಯಾನೇಜ್‌ಮೆಂಟ್‌ನದ್ದಾಗಿರುತ್ತದೆ. ಇಸ್ರೋದಲ್ಲಿ ಎಂದಿಗೂ ಟೆಕ್ನಿಕಲ್‌ ಫೇಲ್ಯೂರ್‌ ಆಗೋದೇ ಇಲ್ಲ ಎಂದು ಸೋಮನಾಥ್‌ ತಿಳಿಸಿದರು.

ಮ್ಯಾನೇಜ್‌ಮೆಂಟ್‌ನಲ್ಲಿ ಚರ್ಚೆ, ಪ್ರಶ್ನೆ ಮಾಡುವಂಥ ವ್ಯವಸ್ಥೆಗಳೇ ಇಲ್ಲದಿದ್ದಾಗ ಅದು ಟೆಕ್ನಿಕಲ್‌ ಫೇಲ್ಯೂರ್‌ಗೆ ಕಾರಣವಾಗುತ್ತದೆ. ಇಂಥದ್ದೇ ಒಂದು ಪ್ರಸಂಗ ಚಂದ್ರಯಾನದ ಸಮಯದಲ್ಲೂ ನಡೆದಿತ್ತು ಎಂದ ಸೋಮನಾಥ್‌, ಹೇಗೆ ಮ್ಯಾನೇಜ್‌ಮೆಂಟ್‌ ವಲಯದಲ್ಲಿರುವ ವ್ಯಕ್ತಿಗಳು ಅದಕ್ಕೆ ಸೂಕ್ತ ಪರಿಹಾರವನ್ನು ನೀಡಿದರು ಎನ್ನುವುದನ್ನೂ ವಿವರಿಸಿದರು. ಯಾವಾಗಲೂ ಫಲಿತಾಂಶ ಒಳ್ಳೇಯದೇ ಬರಬೇಕು ಅನ್ನೋ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಒಂದು ಯೋಜನೆ ಜಾರಿಯಾಗಬೇಕು ಅಂದರೆ, ವಿವಿಧ ಸ್ತರಗಳಲ್ಲಿ ಚರ್ಚೆಗಳಾಗುತ್ತವೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುವುದು ಸಾದ್ಯವಾದಾಗ ಡೆಡ್‌ಲೈನ್‌ ಹಾಕಿಕೊಂಡು ಕಾರ್ಯ ನಿರ್ವಹಿಸುತ್ತೇವೆ ಎಂದರು.ಮಹಿಳೆ ವಿಜ್ಞಾನಿಗಳನ್ನು ಹೇಗೆ ಪ್ರೋತ್ಸಾಹಿಸಲಾಗುತ್ತೆ ಎನ್ನುವ ಬಗ್ಗೆ ಮಾತನಾಡಿದ ಅವರು, ಇಸ್ರೋನಲ್ಲಿ ಅನುಭವದ ಆಧಾರದ ಮೇಲೆ ಪ್ರಮೋಷನ್ ಕೊಡೋಲ್ಲ. ಬದಲಾಗಿ, ಮೆರಿಟ್ ಮೇಲೆ ಕೊಡಲಾಗುತ್ತೆ. ಸಹಜವಾಗಿಯೇ ಮಹಿಳಾ ವಿಜ್ಞಾನಿಗಳು ಮದುವೆ, ಮಗು ಅಂತ ಸುಮಾರು 4 ವರ್ಷಗಳ ಕಾಲ ಬ್ಯಾಲೆನ್ಸ್ ಮಾಡಲು ಕಷ್ಟಪಡುತ್ತಾರೆ. ಆದರೆ, ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುವವರಿಗೆ ಹೊಣೆ ನೀಡಲಾಗುತ್ತದೆ. ಪ್ರತಿಭೆ ತಕ್ಕ ಪುರಸ್ಕಾರ ಸಿಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇಸ್ರೋನಲ್ಲಿ ಖಾಸಗಿ ಹೂಡಿಕೆ ಹೇಗಿರುತ್ತೆ ಎನ್ನುವುದರ ಬಗ್ಗೆ ಮಾತನಾಡಿದ ಅವರು, ಖಾಸಗಿಯಾಗಿ ಹೂಡಿಕೆ ಮಾಡಲು ಯಾವುದೇ ನಿಯಂತ್ರಣ ಇರಲಿಲ್ಲ. ಆದರೆ, ಹಲವು ಉದ್ಯಮಿಗಳಿಗೆ ಅವರದ್ದೇ ಸ್ಯಾಟಲೈಟ್ ಲಾಂಚ್ ಮಾಡಬೇಕು ಎನ್ನು ಆಕಾಂಕ್ಷೆ ಇರುತ್ತೆ. ಅವರಿಗೆ ಹೆಲ್ಪ್ ಮಾಡುವುದರೊಂದಿಗೆ, ಬ್ಯುಸಿನೆಸ್ ಮಾಡೋ ರೀತಿಯಲ್ಲಿ ಖಾಸಗಿ ಹೂಡಿಕೆ ಪ್ರೋತ್ಸಾಹಿಸಲಾಗುತ್ತದೆ. ಆದರೆ ಇದಿನ್ನು ಆರಂಭಿಕ ಹಂತದಲ್ಲಿದ್ದು, ಹೇಗೆ ಪ್ರತಿಕ್ರಿಯೆ ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕು. ಕನಿಷ್ಠ ಐದು ಖಾಸಗಿ ಕಂಪನಿಗಳು ಸ್ಯಾಟಲೈಟ್‌ ನಿರ್ಮಾಣಕ್ಕೆ ಆಸಕ್ತಿ ತೋರಿವೆ ಎಂದರು.

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗುತ್ತವೆ ಎಂಬ ಅರಿವು ನಮ್ಮ ದೇಶದಲ್ಲಿ ಜನರಲ್ಲಿ ಮೂಡುತ್ತಿದೆ. ಆದೇ ನಮಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಮಕ್ಕಳೂ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಇಂದು ತಂತ್ರಜ್ಞಾನ ಹಿಂದೆಂದಿಗಿಂತಲೂ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಮುಂಚಿಗಿಂತಲೂ ಹವಾಮಾನ ಸೇರಿ ಹಲವು ಕ್ಷೇತ್ರಗಳ ಮಾಹಿತಿ ನೀಡುವುದು ಹೆಚ್ಚು ಅಕ್ಯೂರೇಟ್ ಆಗುತ್ತಿದೆ. ಆ ರೀತಿ ಸ್ಪೇಸ್ ತಂತ್ರಜ್ಞಾನ ಹಾಗೂ ಉದ್ಯಮ ಬೆಳೆಯುತ್ತಿದೆ ಎಂದರು.

ಜ.6ಕ್ಕೆ ಸೂರ್ಯ ನಮಸ್ಕಾರ ಮಾಡಲಿದೆ ಆದಿತ್ಯ ಎಲ್‌-1, ಬಾಹ್ಯಾಕಾಶದಿಂದಲೇ ದೇಶದ 400 ಉಪಗ್ರಹಗಳ ರಕ್ಷಣೆ!

ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ಬಾಹ್ಯಾಕಾಶ ಕ್ಷೇತ್ರದ ಅಭಿವೃದ್ಧಿಯಲ್ಲಿ ಹಿಂದಿದ್ದೆವು. ಆದರೆ, ಇದೀಗ ಭಾರತವೂ ಎಲ್ಲರಿಗೂ ಸಮಮಾನವಾಗಿ ನಿಂತು, ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದೇವೆ. ಯಾರ ಮೇಲೂ ಅವಲಂಬಿತರಾಗದೇ ನಾವೇ ರಾಕೆಟ್ ತಯಾರಿಸಲು, ಈ ಕ್ಷೇತ್ರದಲ್ಲಿ ಸಂಶೋದನೆ ತೆಗೆದುಕೊಳ್ಳುವ ಸಾಮಾರ್ಥ್ಯ ಹೊಂದಿದ್ದೇವೆ, ಕೃತಕ ತಂತ್ರಜ್ಞಾನವೂ ನಮ್ಮಲ್ಲಿ ಆಗಲೇ ಪರಿಚಯಿಸಿದ್ದೇವೆ. ಚಂದ್ರಯಾನದಲ್ಲೂ ಬೇರೆ ಬೇರೆ ಸ್ಥಳಗಳನ್ನು ಗುರುತಿಸಲು ನಾವು ಕೃತಕ ಬುದ್ಧಿಮತೆಯನ್ನೇ ಅವಲಂಬಿಸಿದ್ದೆವು. ಅದನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡಿದ್ದೇವೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ವಿಜ್ಞಾನಿಗಳನ್ನು ಭೇಟಿ ಮಾಡಿದ ವೇಳೆ ಮೊದಲು ಹೇಳಿದ ಮಾತೇನೆಂದರೆ, ನೀವು ದೇಶದ ಜನರಲ್ಲಿ ಯಾವ ರೀತಿಯ ಇಂಪ್ಯಾಕ್ಟ್‌ ಮಾಡಿದ್ದೀರಿ ಎನ್ನುವುದು ನಿಮಗೇ ಗೊತ್ತಿಲ್ಲ ಎಂದಿದ್ದರು ಎಂದು ಸೋಮನಾಥ್‌ ತಿಳಿಸಿದ್ದಾರೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಗಗನಯಾತ್ರಿಯನ್ನು ಕಳಿಸಲಿದೆ ನಾಸಾ!

ಇಸ್ರೋದ ಯೋಚನೆಗಳು ಬದಲಾಗುತ್ತಿವೆ: ಇಸ್ರೋ ಈಗ ಮೊದಲಿದ್ದ ಹಾಗೆ ಇಲ್ಲ. ಆರಂಭದಲ್ಲಿ ಜನರಿಗೆ ಉಪಯೋಗವಾಗುವಂಥ ಸ್ಯಾಟಲೈಟ್‌ಗಳನ್ನು ಮಾಡುವುದಷ್ಟೇ ಇಸ್ರೋ ಉದ್ದೇಶವಾಗಿತ್ತು. ಮೀನುಗಾರರು, ಹಮಾಮಾನ, ಚಂಡಮಾರುತದ ಬಗ್ಗೆ ಅಲರ್ಟ್‌ ನೀಡಲು ಸ್ಯಾಟಲೈಟ್‌ ಬೇಕಾಗಿತ್ತು. ಆದರೆ, ಈಗ ಇಸ್ರೋ, ಚಂದ್ರ, ಸೂರ್ಯ ಹಾಗೂ ಬಾಹ್ಯಾಕಾಶ ನಿಲ್ದಾಣದ ಬಗ್ಗೆ ಯೋಚನೆ ಮಾಡುತ್ತಿದೆ. ಬಾಹ್ಯಾಕಾಶ ಪರಿಶೋಧನೆ ನಮ್ಮಂಥ ಸಂಸ್ಥೆಗಳಿಗೆ ಬಹಳ ಪ್ರಮುಖ. ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ನಾವು ಬಾಹ್ಯಾಕಾಶ ಪರಿಶೋಧನೆಯನ್ನು ಪರಿಗಣನೆ ಮಾಡದೇ ಇರಲಿ ಸಾಧ್ಯವೇ ಇಲ್ಲ ಎಂದು ಹೇಳಿದರು.

Follow Us:
Download App:
  • android
  • ios