ಕಣಿವೆಯಲ್ಲಿ ಮತ್ತೆ ಹರಿದ ನೆತ್ತರು, ಬ್ಯಾಂಕ್‌ಗೆ ನುಗ್ಗಿ ಮ್ಯಾನೇಜರ್ ಹತ್ಯೆಗೈದ ಉಗ್ರರು!
* ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ಬ್ಯಾಂಕ್ ವ್ಯವಸ್ಥಾಪಕರ ಹತ್ಯೆ
* ರಾಜಸ್ಥಾನದ ವಿಜಯ್ ಕುಮಾರ್ ಹತ್ಯೆಗೈದ ಉಗ್ರರು
* ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಲಿಲ್ಲ
ಶ್ರೀನಗರ(ಜೂ.02): ಗುರುವಾರ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ಬ್ಯಾಂಕ್ ವ್ಯವಸ್ಥಾಪಕರನ್ನು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ರಾಜಸ್ಥಾನದ ವಿಜಯ್ ಕುಮಾರ್ ಕೆಲಸ ಮಾಡುತ್ತಿದ್ದಾಗ ಉಗ್ರರು ಬ್ಯಾಂಕ್‌ಗೆ ನುಗ್ಗಿ ಗುಂಡು ಹಾರಿಸಿದ್ದಾರೆ. ತಕ್ಷಣ ಬ್ಯಾಂಕ್‌ನಲ್ಲಿದ್ದವರು ವಿಜಯ್‌ಕುಮಾರ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಪ್ರಾಣ ಉಳಿಸಲಾಗಲಿಲ್ಲ.
ವಿಜಯ್ ಕುಮಾರ್ ಕುಲ್ಗಾಮ್ ಜಿಲ್ಲೆಯ ಅರೆಹ್ ಮೋಹನ್‌ಪೋರಾದಲ್ಲಿರುವ ಸ್ಥಳೀಯ ದೇಹತಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ರಾಜಸ್ಥಾನದ ಹನುಮಾನ್‌ಗಢ ನಿವಾಸಿಯಾಗಿದ್ದರು. ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳ ಜಂಟಿ ತಂಡವು ಭಯೋತ್ಪಾದಕರನ್ನು ಪತ್ತೆಹಚ್ಚಲು ಪ್ರದೇಶವನ್ನು ಸುತ್ತುವರೆದಿದೆ. ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಘಟನೆಯ ಸಿಸಿಟಿವಿ ದೃಶ್ಯ ಬಹಿರಂಗ
ಬ್ಯಾಂಕ್ ಮ್ಯಾನೇಜರ್ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. ಗೇಟಿನ ಮುಂದೆ ಮ್ಯಾನೇಜರ್ ಕುಳಿತಿದ್ದನ್ನು ನೋಡಬಹುದು. ಒಬ್ಬ ಭಯೋತ್ಪಾದಕ ಮುಖಕ್ಕೆ ಮಾಸ್ಕ್ ಧರಿಸಿ ಬ್ಯಾಂಕ್ ಪ್ರವೇಶಿಸುತ್ತಾನೆ. ಅವನ ಕೈಯಲ್ಲಿ ಒಂದು ಚಿಕ್ಕ ಚೀಲವಿತ್ತು. ಅದೇ ಬ್ಯಾಗ್ ನಲ್ಲಿ ಪಿಸ್ತೂಲನ್ನು ಬಚ್ಚಿಟ್ಟಿದ್ದ. ಬ್ಯಾಂಕಿಗೆ ಪ್ರವೇಶಿಸಿದಾಗ, ಭಯೋತ್ಪಾದಕ ಮ್ಯಾನೇಜರ್ ಅನ್ನು ನೋಡಿ ಬಳಿಕ ಹೊರಗೆ ನೋಡುತ್ತಾನೆ ಮತ್ತು ನಂತರ ಹಿಂತಿರುಗಿ ಮ್ಯಾನೇಜರ್ ಅನ್ನು ಹತ್ತಿರದಿಂದ ಶೂಟ್ ಮಾಡುತ್ತಾನೆ. ಗುಂಡು ಹಾರಿಸಿದ ನಂತರ, ವೇಗವಾಗಿ ಅಲ್ಲಿಂದ ಓಡಿ ಪರಾರಿಯಾಗುತ್ತಾನೆ.
ಎರಡು ದಿನಗಳಲ್ಲಿ ಎರಡು ಹತ್ಯೆಯ ಘಟನೆ
ಕಳೆದ ಮೂರು ದಿನಗಳಲ್ಲಿ ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆಗೈದ ಎರಡನೇ ಘಟನೆ ಇದಾಗಿದೆ. ಶಿಕ್ಷಕಿ ರಜನಿ ಬಾಲಾ ಅವರನ್ನು ಕುಲ್ಗಾಮ್‌ನಲ್ಲಿಯೇ ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ. ರಜನಿ ಬಾಲಾ ಕುಲ್ಗಾಮ್ ಜಿಲ್ಲೆಯ ಗೋಪಾಲ್‌ಪೋರಾ ಪ್ರದೇಶದಲ್ಲಿ ಶಾಲಾ ಶಿಕ್ಷಕಿಯಾಗಿದ್ದರು. ಅವರು ಜಮ್ಮು ವಿಭಾಗದ ಸಾಂಬಾದಲ್ಲಿ ಪತಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಕಳೆದ ವಾರ ಬುದ್ಗಾಮ್‌ನ ಚದೂರ ಪ್ರದೇಶದಲ್ಲಿ ಕಿರುತೆರೆ ನಟ ಅಮ್ರಿನ್ ಭಟ್ ಅವರನ್ನು ಲಷ್ಕರ್-ಎ-ತೊಯ್ಬಾ ಉಗ್ರರು ಹತ್ಯೆ ಮಾಡಿದ್ದರು. ಅದೇ ಸಮಯದಲ್ಲಿ, ಮೇ 12 ರಂದು, ಬುದ್ಗಾಮ್ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಉದ್ಯೋಗಿ ರಾಹುಲ್ ಭಟ್ ಅವರನ್ನು ಭಯೋತ್ಪಾದಕರು ಕೊಂದಿದ್ದರು.
ಜಮ್ಮುವಿನಲ್ಲಿ ತೀವ್ರಗೊಂಡ ಪ್ರತಿಭಟನೆ
ಬ್ಯಾಂಕ್ ಮ್ಯಾನೇಜರ್ ಹತ್ಯೆಯ ನಂತರ ಜಮ್ಮುವಿನಲ್ಲಿ ಹಿಂದೂ ಸಮುದಾಯದ ಸರ್ಕಾರಿ ನೌಕರರ ಪ್ರತಿಭಟನೆ ತೀವ್ರಗೊಂಡಿದೆ. ಹೆಚ್ಚುತ್ತಿರುವ ಹತ್ಯೆಗಳ ಘಟನೆಗಳಿಂದಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುವ ಹಿಂದೂ ಅಲ್ಪಸಂಖ್ಯಾತರಲ್ಲಿ ಭಯ ಹೆಚ್ಚಾಗಿದೆ. ಈ ಜನರು ಭದ್ರತಾ ವ್ಯವಸ್ಥೆಗಳನ್ನು ಮತ್ತು ಅವರನ್ನು ಜಮ್ಮುವಿಗೆ ವರ್ಗಾಯಿಸಲು ಒತ್ತಾಯಿಸುತ್ತಿದ್ದಾರೆ.