ಬಾಬಾ ಸಿದ್ಧೇಶ್ವರನಾಥ್ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 7 ಭಕ್ತರು ಮೃತಪಟ್ಟಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶ್ರಾವಣ ತಿಂಗಳ ವಾರ್ಷಿಕ ವಿಶೇಷ ಪೂಜೆ ವೇಳೆ ಈ ಅವಘಡ ಸಂಭವಿಸಿದೆ.
ಪಾಟ್ನಾ(ಆ.12) ಬಾಬಾ ಸಿದ್ಧೇಶ್ವರನಾಥ್ ದೇವಸ್ಥಾನದ ಶ್ರಾವಣ ತಿಂಗಳ ವಿಶೇಷ ಪೂಜೆಗೆ ಅಪಾರ ಭಕ್ತರು ಸೇರಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 7 ಭಕ್ತರು ಮೃತಪಟ್ಟಿದ್ದಾರೆ. ಕನಿಷ್ಠ 35ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಬಿಹಾರದ ಬರಾವರ ಬೆಟ್ಟದಲ್ಲಿ ನಡೆದಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ. ಇತ್ತ ಮೃತಪಟ್ಟವರ ಕುರಿತು ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಪೊಲೀಸರು, ಏಕಾಏಕಿ ಕಾಲ್ತುಳಿತಕ್ಕೆ ಕಾರಣವೇನು ಅನ್ನೋದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕಾರಣ ಎಲ್ಲಾ ಭದ್ರತೆಗಳನ್ನು ಕೈಗೊಳ್ಳಲಾಗಿತ್ತು. ಇದರ ನಡುವೆ ಕಾಲ್ತುಳಿತ ಹೇಗಾಯ್ತು ಅನ್ನೋದು ಇದೀಗ ಎದ್ದಿರುವ ಪ್ರಶ್ನೆ. ಭದ್ರತೆಯಲ್ಲಿ, ಭಕ್ತರ ಸುರಕ್ಷತೆ ಕೈಗೊಂಡ ಕ್ರಮಗಳಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಜೆನಾಬಾದ್ ಎಸ್‌ಹೆಚ್ಒ ದಿವಾಕರ್ ಕುಮಾರ್ ವಿಶ್ವಕರ್ಮ ಹೇಳಿದ್ದಾರೆ.
121 ಜನರ ಬಲಿ ಪಡೆದ ಹತ್ರಾಸ್ ಸತ್ಸಂಗದ ಹಿಂದಿರುವ ಗುರು ಬೋಲೇಬಾಬಾ ಯಾರು?
ಘಟನೆಯಲ್ಲಿ ಆಪ್ತರನ್ನು ಕಳೆದುಕೊಂಡ ಹಲವು ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವೇಳೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸೂಕ್ತ ವ್ಯವಸ್ಥೆ ಮಾಡಿಲ್ಲ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಆದರೆ ಆಡಳಿತ ಮಂಡಳಿ ಭಕ್ತರ ಸುರಕ್ಷತೆ ಕುರಿತು ನಿರ್ಲಕ್ಷ್ಯವಹಿಸಿದೆ. ಜನಸಾಗರ ನಿಯಂತ್ರಿಸಲು ಆಡಳಿತ ಮಂಡಳಿ ಎನ್‌ಸಿಸಿ ಸ್ವಯಂ ಸೇವಕರನ್ನು ನಿಯೋಜಿಸಿದೆ. ಈ ಸ್ವಯಂ ಸೇವಕರು ಭಕ್ತರ ಮೇಲೆ ಲಾಠಿ ಬೀಸಿದ್ದಾರೆ. ಇದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ಭಕ್ತರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಬಾಬಾ ಸಿದ್ದೇಶ್ವರನಾಥ್ ದೇವಸ್ಥಾನದಲ್ಲಿ ಪ್ರತಿ ವರ್ಷ ಶ್ರಾವಣ ತಿಂಗಳಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಬಿಹಾರದ ಬಹುತೇಕ ಜಿಲ್ಲೆಗಳಿಂದ ಈ ದೇವಸ್ಥಾನಕ್ಕೆ ಭಕ್ತರು ಆಗಮಿಸುತ್ತಾರೆ. ಭಕ್ತರನ್ನು ನಿಯಂತ್ರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನ ನಿಯೋಜಿಸಬೇಕಿತ್ತು. ಆದರೆ ಆಡಳಿತ ಮಂಡಳಿ ಸ್ವಯಂ ಸೇವಕರನ್ನು ನಿಯೋಜಿಸಿ ತಪ್ಪು ಮಾಡಿದೆ. ಹಣ ಉಳಿಸಲು ಆಡಳಿತ ಮಂಡಳಿ ಈ ಕಸರತ್ತು ನಡೆಸಿದೆ. ಇದರಿಂದ ಭಕ್ತರು ಬಲಿಯಾಗಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.
ಅನನುಭವಿ ಸ್ವಯಂ ಸೇವಕರು ಲಾಠಿ ಬೀಸಿದ ಪರಿಣಾಮ ಆತಂಕ ಮನೆ ಮಾಡಿತ್ತು. ಕೆಲ ಭಕ್ತರು ಆಕ್ರೋಶಗೊಂಡಿದ್ದರು. ಈ ವೇಳೆ ಅಚಾನಕ್ಕಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಭಕ್ತರು ಹೇಳಿದ್ದಾರೆ.
ಉತ್ತರ ಪ್ರದೇಶದ ಸತ್ಸಂಗದಲ್ಲಿ ಭೀಕರ ದುರಂತ: ಕಾಲ್ತುಳಿತಕ್ಕೆ 120 ಬಲಿ..!
