ಲೋಕಸಭೆಯಲ್ಲಿ ಕಾಂಗ್ರೆಸ್ ಅದಾನಿ ವಿಷಯವನ್ನು ಪ್ರತಿಪಾದಿಸುತ್ತಿರುವಾಗ, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದ ಷೇರು ಮಾರುಕಟ್ಟೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ ಮತ್ತು ರಾಹುಲ್ ಗಾಂಧಿ ದೇಶದ್ರೋಹಿ ಎಂದು ಆರೋಪಿಸಿದ್ದಾರೆ.
ನವದೆಹಲಿ: ಲೋಕಸಭಾ ಕಲಾಪದಲ್ಲಿ ಕಾಂಗ್ರೆಸ್ ಪಕ್ಷ ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುತ್ತಿದೆ. ಈ ನಡುವೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ನೇರವಾಗಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ನೀವೆಲ್ಲರೂ ಸಂಸತ್‌ನಲ್ಲಿ ಏನಾಗ್ತಿದೆ ಎಂದು ನೋಡುತ್ತಿದ್ದೀರಿ. ದೇಶದ ಆರ್ಥಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯತ್ತಿವೆ. ಭಾರತದ ಷೇರು ಮಾರುಕಟ್ಟೆಯನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸಂಬಿತ್ ಪಾತ್ರಾ ಅರೋಪಿಸಿದರು.
ಕೆಲವು ಶಕ್ತಿಗಳು ಭಾರತದ ಷೇರು ಮಾರುಕಟ್ಟೆ ಮತ್ತು ದೇಶದ ಉದ್ಯೋಗಪತಿಗಳನ್ನು ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿವೆ. ಈ ಮೂಲಕ ಭಾರತವನ್ನು ಒಡೆಯುವ ಪ್ರಯತ್ನದಲ್ಲಿದ್ದಾರೆ ಎಂದು ಸಂಬಿತ್ ಪಾತ್ರಾ ಗಂಭೀರ ಆರೋಪ ಮಾಡಿದರು. ಸಂಸತ್‌ನ ಸದಸ್ಯರು ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಓರ್ವ ದೇಶದ್ರೋಹಿ ಎಂದು ಕಿಡಿಕಾರಿದರು.
ಜಾರ್ಜ್ ಸೊರೊಸ್ ಓಪನ್ ಸೊಸೈಟಿಗೆ ಫಂಡಿಂಗ್ ಮಾಡುತ್ತಾರೆ. ನಂತರ ದೇಶದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದು ದೇಶದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದ ಸಂಬಿತ್ ಪಾತ್ರಾ, ಕೆಲ ದೇಶವಿರೋಧಿ ಶಕ್ತಿಗಳು ಭಾರತವನ್ನು ಒಡೆಯಲು ಬಯಸುತ್ತಿವೆ. ಫ್ರೆಂಚ್ ಪತ್ರಿಕೆ ಮಾಧ್ಯಮವು ಈ ಬಗ್ಗೆ ಕೆಲವು ಬಹಿರಂಗಪಡಿಸಿದೆ. ರಾಹುಲ್ ಗಾಂಧಿ ಕೂಡ ಜಾರ್ಜ್ ಸೊರೊಸ್ ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರ ನಡುವೆ ಸಂಬಂಧವಿದ್ದು, ರಾಹುಲ್ ಗಾಂಧಿ ಒರ್ವ ದೇಶದ್ರೋಹಿ ಎಂದು ಹೇಳಲು ಯಾವುದೇ ಆಳಕಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ: WATCH | 500 ವರ್ಷಗಳ ಹಿಂದೆ ಬಾಬರ್ ಏನು ಮಾಡಿದ್ನೋ, ಅದೇ ಈಗ ಬಾಂಗ್ಲಾದೇಶ, ಸಂಭಾಲ್‌ನಲ್ಲಿ ನಡ್ತೀದೆ: ಸಿಎಂ ಯೋಗಿ ಕೆಂಡ!
ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕರು, ಸಂಸತ್ ಆವರಣದಲ್ಲಿ ಉದ್ಯಮಿ ಗೌತಮ್ ಅದಾನಿ ವಿಷಯವನ್ನು ಮುಂದಿಟ್ಟುಕೊಂಡು ಕೇಂದ್ರ ವಿರುದ್ಧ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ "ಮೋದಿ ಮತ್ತು ಅದಾನಿ ಇಬ್ಬರು ಒಂದೇ" ಎಂದು ಘೋಷಣೆ ಕೂಗಿದರು. ವಿರೋಧ ಪಕ್ಷಗಳು ಗೌತಮ್ ಅದಾನಿ ವಿರುದ್ಧ ತನಿಖೆ ನಡೆಸಬೇಕೆಂದು ಸಂಸತ್ ನಲ್ಲಿ ಆಗ್ರಹಿಸಿವೆ.
ಇದನ್ನೂ ಓದಿ: ಸಂಭಲ್ ಮಸೀದಿ ಸಮೀಕ್ಷೆ ವೇಳೆ ಹಿಂಸೆಗೆ ಪಾಕ್ ನಂಟು: ರಾಹುಲ್ ಭೇಟಿಗೆ ಪೊಲೀಸರ ತಡೆ
