ತೆಲಂಗಾಣ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ತೃತೀಯಲಿಂಗಿ ವೈದ್ಯರು!
ತೃತೀಯ ಲಿಂಗಿಗಳು ಆಗಿದ್ದ ಕಾರಣಕ್ಕಾಗಿ ಖಾಸಗಿ ಆಸ್ಪತ್ರೆಯಿಂದ ವಜಾಗೊಂಡಿದ್ದ ಡಾ.ಪ್ರಾಚಿ ರಾಥೋಡ್ ಹಾಗೂ ಡಾ.ರುಥ್ ಜಾನ್ ಪೌಲ್ ಅವರನ್ನು ಹೈದರಾಬಾದ್‌ನ ಒಜಿಎಚ್ ಆಸ್ಪತ್ರೆಯಲ್ಲಿ ವೈದ್ಯರನ್ನಾಗಿ ನೇಮಕ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿ ವೈದ್ಯರು ಸೇವೆ ಪ್ರಾರಂಭ ಮಾಡಿದ್ದಾರೆ.
ಹೈದರಾಬಾದ್ (ಡಿ.2): ತೆಲಂಗಾಣ ಸರ್ಕಾರ ಗುರುವಾರ ಇಬ್ಬರು ತೃತೀಯಲಿಂಗಿಗಳನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರನ್ನಾಗಿ ನೇಮಿಸಿದೆ. ಸರ್ಕಾರಿ ಆಸ್ಪತ್ರೆಗೆ ತೃತೀಯ ಲಿಂಗಿಗಳನ್ನು ಅಧಿಕೃತವಾಗಿ ವೈದ್ಯರನ್ನಾಗಿ ನೇಮಕ ಮಾಡಿದ ದೇಶದ ಮೊದಲ ದೃಷ್ಟಾಂತ ಇದಾಗಿದೆ. ಪ್ರಾಚಿ ರಾಥೋಡ್ ಹಾಗೂ ರುತ್ ಜಾನ್ ಪೌಲ್ ಹೆಸರಿನ ವೈದ್ಯರನ್ನು ಹೈದರಾಬಾದ್‌ನ ಆಸ್ಪತ್ರೆಗೆ ವೈದ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ. ತೆಲಂಗಾಣದ ಸರ್ಕಾರಿ ಒಸ್ಮಾನಿಯಾ ಜನರಲ್ ಆಸ್ಪತ್ರೆಯ (ಒಜಿಎಚ್) ವೈದ್ಯಕೀಯ ಅಧಿಕಾರಿಗಳಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತೃತೀಯಲಿಂಗಿ ಆಗಿದ್ದ ಕಾರಣಕ್ಕಾಗಿಯೇ ಪ್ರಾಚಿ ರಾಥೋಡ್‌ಅವರನ್ನು ಖಾಸಗಿ ಆಸ್ಪತ್ರೆಯ ಕೆಲಸದಿಂದ ವಜಾ ಮಾಡಲಾಗಿತ್ತು. ಹೈದರಾಬಾದ್‌ನ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಾಚಿ ರಾಥೋಡ್ ಅಂದಾಜು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು. ಆದರೆ, ಅವರು ಅವೃತೀಯ ಲಿಂಗಿ ಎನ್ನುವುದು ಗೊತ್ತಾಗುತ್ತಿದ್ದಂತೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಬಾಲ್ಯದಿಂದಲೂ ತಾವು ಸಾಮಾಜಿಕ ಕಳಂಕ ಹಾಗೂ ತಾರತಮ್ಯವನ್ನು ಅನುಭವಿಸಿದ್ದೇನೆ ಎಂದು ಪ್ರಾಚಿ ರಾಥೋಡ್ ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದಿಲಾಬಾದ್‌ನ ವೈದ್ಯಕೀಯ ಕಾಲೇಜಿನಿಂದ 2015ರಲ್ಲಿ ಪ್ರಾಚಿ ರಾಥೋಡ್ ಎಂಬಿಬಿಎಸ್ ಪದವಿ ಪಡೆದಿದ್ದರು.
ಎಂಬಿಬಿಎಸ್ ಪದವಿ ಪಡೆದ ಬಳಿಕ ಉನ್ನತ ವ್ಯಾಸಂಗಕ್ಕಾಗಿ ಪ್ರಾಚಿ ರಾಥೋಡ್ ದೆಹಲಿಗೆ ತೆರಳಿದ್ದರು. ಆದರೆ, ಅಲ್ಲಿ ಕಲಿಯುವ ಸೂಕ್ತ ವಾತಾವರಣವಿರಲಿಲ್ಲ. ಪ್ರತಿ ದಿನವೂ ಹಿಂಜರಿಕೆಯಲ್ಲಿ ದಿನ ದೂಡಬೇಕಾಗಿತ್ತು. ಆ ಕಾರಣದಿಂದಾಗಿ ನಾನು ಹೈದರಾಬಾದ್‌ಗೆ ಮರಳಿದೆ. ಬಳಿಕ ಹೈದರಾಬಾದ್‌ನಲ್ಲಿಯೇ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ಡಿಪ್ಲೊಮಾ ಮಾಡಿದ್ದಾಗಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವರು ತೊಂದರೆ ಉಂಟು ಮಾಡಬಹುದು ಎನ್ನುವ ಕಾರಣ ನೀಡಿ ಪ್ರಾಚಿ ದೇಸಾಯಿ ಅವರನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೆಲಸದಿಂದ ವಜಾ ಮಾಡಿತ್ತು. ಅದಾದ ಬಳಿಕ, ಪ್ರಾಚಿ ರಾಥೋಡ್ ಅವರ ಸಹಾಯಕ್ಕೆ ಎನ್‌ಜಿಓ ಆಗಮಿಸಿತ್ತು. ಆ ಎನ್‌ಜಿಓ ತಮ್ಮದೇ ಒಂದು ಕ್ಲಿನಿಕ್‌ನಲ್ಲಿ ಕೆಲಸ ನೀಡಿತ್ತು. ಅದಾದ ಬಳಿಕ ನಾನು ಒಸ್ಮಾನಿಯಾ ಜನರಲ್ ಹಾಸ್ಪಿಟಲ್‌ನಲ್ಲಿ ಕೆಲಸದ ಅವಕಾಶ ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಬಾಲ್ಯದಿಂದಲೂ ವೈದ್ಯೆಯಾಗುವ ಆಸೆ ಇತ್ತು: ಬಾಲ್ಯದಿಂದಲೂ ತನಗೆ ವೈದ್ಯೆಯಾಗಬೇಕು ಎನ್ನುವ ಆಸೆ ಇತ್ತು. ಅದರೆ, ಶಾಲೆಯಲ್ಲಿ ಓದುವಾಗ ಪ್ರತಿ ಬಾರಿಯೂ ಇತರ ವಿದ್ಯಾರ್ಥಿಗಳಿಂದ ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದಳು.ಈ ಹಂತವನ್ನು ತಲುಪಿದ ನಂತರ, ಪ್ರಾಚಿ ಈಗ ಟ್ರಾನ್ಸ್‌ಜೆಂಡರ್‌ಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಭೀಕರ ಘಟನೆ, ಟೈಲರ್‌ನ ಮರ್ಮಾಂಗವನ್ನೇ ಕತ್ತರಿಸಿದ ತೃತೀಯ ಲಿಂಗಿಗಳು!
ನನ್ನ ಟೀನೇಜ್ ಬಹಳ ಕೆಟ್ಟದಾಗಿತ್ತು. 11 ಹಾಗೂ 12ನೇ ತರಗತಿಯಲ್ಲಿ ವೈದ್ಯೆಯಾಗುವ ಕನಸಿಗಿಂತ ಹೆಚ್ಚಾಗಿ ಇತರ ವಿದ್ಯಾರ್ಥಿಗಳ ಹಿಂಸೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆಯೇ ಹೆಚ್ಚಾಗಿ ಯೋಚನೆ ಮಾಡುತ್ತಿದ್ದೆ ಎಂದು ರಾಥೋಡ್ ಹೇಳಿದ್ದಾರೆ. ತೃತೀಯ ಲಿಂಗಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಮಾತನಾಡಿರುವ ಅವರು, ಕೆಲವೊಂದು ಕೆಲಸಗಳಲ್ಲಿ ಅವರಿಗೆ ಮೀಸಲಾತಿ ಹಾಗೂ ಉತ್ತಮ ಶಿಕ್ಷಣ, ತೃತೀಯ ಲಿಂಗಿ ಸಮುದಾಯದ ಗೌರವದ ಬದುಕಿಗೆ ಕಾರಣವಾಗಬಹುದು ಎನ್ನುತ್ತಾರೆ. ಅಲ್ಪಸಂಖ್ಯಾತರನ್ನು ದೃಢೀಕರಣಕ್ಕಾಗಿ ಪರಿಗಣಿಸುವಂತೆ "ಲೈಂಗಿಕ ಅಲ್ಪಸಂಖ್ಯಾತರು" ಅವರನ್ನು ಪ್ರೋತ್ಸಾಹಿಸಲು ಪರಿಗಣಿಸಬೇಕು. ತೆಲಂಗಾಣ ಸರ್ಕಾರಿ ಆಸ್ಪತ್ರೆಯಲ್ಲಿ ನೇಮಕವಾಗಿರುವ ಇನ್ನೊಬ್ಬ ತೃತೀಯ ಲಿಂಗಿ ವೈದ್ಯೆ ರುತ್ ಜಾನ್ ಪೌಲ್ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಾನು ಅವನಲ್ಲ..ಅವಳು ಎಂದಾಗ ಎಲ್ಲರೂ ಗೇಲಿ ಮಾಡಿದರು, ಈಗ ಆಕೆ ಹೆಸರಾಂತ ಡಾಕ್ಟರ್ !
ಕೇರಳ ವೈದ್ಯಕೀಯ ಆಸ್ಪತ್ರೆಗೆ ತೃತೀಯಲಿಂಗಿ ವೈದ್ಯೆ: ಇನ್ನು ಕೇರಳದ ತ್ರಿಶೂರ್‌ನ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಪ್ರಿಯಾ ಸೀತಾರಾಮ್ ಹೆಸರಿನ ತೃತೀಯ ಲಿಂಗಿ ಕೂಡ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಅಂದಾಜು 30 ವರ್ಷಗಳ ಕಾಲ ತನ್ನ ಐಡೆಂಟಿಟಿಯನ್ನು ಇವರು ಗುಪ್ತವಾಗಿ ಇರಿಸಿಕೊಂಡು, 2018ರಲ್ಲಿ ತಾವು ತೃತೀಯ ಲಿಂಗಿ ಎನ್ನುವುದನ್ನು ಪ್ರಕಟಿಸಿದ್ದರು.