ಮಿಷನ್ ದಿವ್ಯಾಸ್ತ್ರ: ಅಗ್ನಿ-5 ಎಂಐಆರ್‌ವಿ ಯಶಸ್ಸಿನೊಡನೆ ಬೀಗುತ್ತಿದೆ ಭಾರತದ ಕ್ಷಿಪಣಿ ಸಾಮರ್ಥ್ಯ
ಮಾರ್ಚ್ 11ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳು ಸ್ವದೇಶೀ ನಿರ್ಮಾಣದ ಅಗ್ನಿ-5 ಕ್ಷಿಪಣಿಯ ಹಾರಾಟ ಪರೀಕ್ಷೆಯನ್ನು ಮಿಷನ್ ದಿವ್ಯಾಸ್ತ್ರ ಯೋಜನೆಯಡಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಘೋಷಿಸಿದ್ದಾರೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮಾರ್ಚ್ 11ರಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳು ಸ್ವದೇಶೀ ನಿರ್ಮಾಣದ ಅಗ್ನಿ-5 ಕ್ಷಿಪಣಿಯ ಹಾರಾಟ ಪರೀಕ್ಷೆಯನ್ನು ಮಿಷನ್ ದಿವ್ಯಾಸ್ತ್ರ ಯೋಜನೆಯಡಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಘೋಷಿಸಿದ್ದಾರೆ.
ಈ ಪರೀಕ್ಷೆ, ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನದ ಪರೀಕ್ಷೆಯನ್ನೂ ಒಳಗೊಂಡಿತ್ತು.
ಸಂಬಂಧ ವೃದ್ಧಿಯ ಹಾದಿ: ಭಾರತದಿಂದ ಮಾರಿಷಸ್‌ನಲ್ಲಿ ಅಭಿವೃದ್ಧಿ!
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪರೀಕ್ಷೆಯ ಕುರಿತು ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನದೊಡನೆ ಸ್ವದೇಶೀ ನಿರ್ಮಿತ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ್ದಕ್ಕಾಗಿ ಡಿಆರ್‌ಡಿಓ ವಿಜ್ಞಾನಿಗಳನ್ನು ಶ್ಲಾಘಿಸಿದರು.
ಅಗ್ನಿ-5 ಒಂದು ಭೂ ಆಧಾರಿತ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಇದನ್ನು ಅಭಿವೃದ್ಧಿ ಪಡಿಸಿದೆ. ಈ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಗಳನ್ನೂ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, 7,000 ಕಿಲೋಮೀಟರ್‌ಗಳನ್ನೂ ಮೀರಿದ ವ್ಯಾಪ್ತಿಯನ್ನು ಹೊಂದಿದೆ. ಕೆಲವು ಚೀನೀ ಸಂಶೋಧಕರು ಈ ಕ್ಷಿಪಣಿ 8,000 ಕಿಲೋಮೀಟರ್‌ಗಳ ವ್ಯಾಪ್ತಿ ಹೊಂದಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಗ್ನಿ-5 ಒಂದು ಘನ ಇಂಧನ ಆಧಾರಿತ, ಮೂರು ಹಂತಗಳ, ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದನ್ನು ಸುಲಭವಾಗಿ ಉಡಾಯಿಸಬಹುದಾಗಿದ್ದು, ಸಂಗ್ರಾಹಕಗಳಲ್ಲಿ (ಕ್ಯಾನಿಸ್ಟರ್) ಸಂಗ್ರಹಿಸಿ ಇಡಬಹುದು.
ಅಗ್ನಿ-5 ಕ್ಷಿಪಣಿಯ ಸಾಮರ್ಥ್ಯಗಳು ಭಾರತಕ್ಕೆ ಏಷ್ಯಾದಾದ್ಯಂತ ಮತ್ತು ಬಹುಶಃ ಯುರೋಪಿನ ಭಾಗಗಳ ಮೇಲೂ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ಒದಗಿಸುತ್ತದೆ. ಇದರ ಹೆಚ್ಚುವರಿ ವ್ಯಾಪ್ತಿಯ ಕಾರಣದಿಂದ, ಅಗ್ನಿ-5 ಕ್ಷಿಪಣಿ, ಚೀನಾದಿಂದ ಬಹಳಷ್ಟು ದೂರದಲ್ಲಿರುವ ಮಧ್ಯ ಮತ್ತು ದಕ್ಷಿಣ ಭಾರತದ ವಿವಿಧ ಭಾಗಗಳಿಂದಲೂ ಸಂಪೂರ್ಣ ಚೀನಾವನ್ನು ತಲುಪಬಲ್ಲದಾಗಿದ್ದು, ಎಂಐಆರ್‌ವಿ ಪೇಲೋಡ್‌ಗಳನ್ನು ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ.
ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನ ಎಂದರೆ, ಒಂದೇ ಕ್ಷಿಪಣಿ ಸ್ವತಂತ್ರವಾಗಿ ವಿವಿಧ ಪ್ರದೇಶಗಳಲ್ಲಿರುವ ಗುರಿಗಳ ಮೇಲೆ ದಾಳಿ ನಡೆಸಬಲ್ಲ ಹಲವಾರು ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯವಾಗಿದೆ. ಒಂದು ಕ್ಷಿಪಣಿಯನ್ನು ಉಡಾವಣೆಗೊಳಿಸುವ ಮೂಲಕ, ಹಲವಾರು ಗುರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿಂದಾಗಿ, ಈ ತಂತ್ರಜ್ಞಾನ ಕ್ಷಿಪಣಿಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ.
ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೇಬಲ್ ರಿ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಸವಾಲುಗಳೂ ಇವೆ. ಅವೆಂದರೆ:
1. ಅಭಿವೃದ್ಧಿ ಮತ್ತು ಅಳವಡಿಕೆ:
ವಿವಿಧ ಸಿಡಿತಲೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ನಿರ್ದೇಶನಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ, ಒಂದೇ ಕ್ಷಿಪಣಿಗೆ ಅಳವಡಿಸುವುದು ತಾಂತ್ರಿಕವಾಗಿ ಸಂಕೀರ್ಣ ಮತ್ತು ಸವಾಲಿನ ಕಾರ್ಯವಾಗಿದೆ.
2. ನಿಖರತೆ
ಪ್ರತಿಯೊಂದು ಸಿಡಿತಲೆಯೂ ಸಹ ಅತ್ಯಂತ ನಿಖರವಾಗಿ ಅದರ ಉದ್ದೇಶಿತ ಗುರಿಯ ಮೇಲೆಯೇ ದಾಳಿ ನಡೆಸುವಂತೆ ಮಾಡುವುದು, ಅದರಲ್ಲೂ ಹಲವು ಸಿಡಿತಲೆಗಳು ಏಕಕಾಲದಲ್ಲಿ ಉಡಾವಣೆಗೊಳ್ಳುವಾಗ ಅವೆಲ್ಲವೂ ಗುರಿ ತಲುಪುವಂತೆ ಮಾಡುವುದು ಒಂದು ಮಹತ್ವದ ಸವಾಲಾಗಿದೆ.
3. ಗುರಿಗಳಲ್ಲಿನ ಭೇದ
ಹಲವು ಗುರಿಗಳನ್ನು ನಿಖರವಾಗಿ ಗುರುತಿಸಿ, ವಿವಿಧ ದಾಳಿಗಳನ್ನು ಆದ್ಯತೆಯಾಗಿಸುವುದು ಕಷ್ಟಕರವಾಗಿದೆ. ಅದರಲ್ಲೂ ಅತ್ಯಂತ ಕ್ಷಿಪ್ರವಾಗಿ ನಿರ್ಧಾರ ಕೈಗೊಳ್ಳಬೇಕಾದ ಅವಶ್ಯಕತೆ ಇರುವಾಗ, ಈ ಕಾರ್ಯ ಸವಾಲಿನದಾಗಿದೆ.
ಇಂತಹ ಸವಾಲುಗಳನ್ನು ಸರಿಪಡಿಸಲು ನಿರಂತರ ಸಂಶೋಧನೆ, ಅಭಿವೃದ್ಧಿ, ಮತ್ತು ರಕ್ಷಣಾ ಮತ್ತು ತಂತ್ರಜ್ಞಾನ ತಜ್ಞರ ನಡುವೆ ಉತ್ತಮ ಸಹಕಾರ ಅವಶ್ಯಕವಾಗಿದೆ. ಆ ಮೂಲಕ ಎಂಐಆರ್‌ವಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ, ಜವಾಬ್ದಾರಿಯಿಂದ ಜಾರಿಗೆ ತರಬಹುದು.
ಸೌರ ಚಟುವಟಿಕೆಗಳ ಅಧ್ಯಯನಕ್ಕೆ ಸಜ್ಜಾದ ಆದಿತ್ಯ ಎಲ್1 ಬಗ್ಗೆ ಒಂದಿಷ್ಟು..!
ಎಂಐಆರ್‌ವಿ ಸಾಮರ್ಥ್ಯ ಹೊಂದಿರುವ ಇತರ ರಾಷ್ಟ್ರಗಳು
ಅಮೆರಿಕಾ
ಎಲ್‌ಜಿಎಂ-30 ಮಿನಿಟ್‌ಮ್ಯಾನ್ 3: ಅಮೆರಿಕಾದ ಭೂ ಆಧಾರಿತ ಅಣ್ವಸ್ತ್ರ ತಡೆಯ ಬೆನ್ನೆಲುಬಾಗಿರುವ ಈ ಕ್ಷಿಪಣಿ 13,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿದ್ದು, ಎಂಐಆರ್‌ವಿಗಳನ್ನು ಒಯ್ಯಬಲ್ಲದು.
ರಷ್ಯಾ
ಆರ್‌ಎಸ್-28 ಸರ್ಮಾಟ್ (ಸತಾನ್ 2): ಇತ್ತೀಚೆಗೆ ಪರಿಚಯಿಸಲಾದ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು (ಐಸಿಬಿಎಂ), 18,000 ಕಿಲೋಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿದೆ ಎನ್ನಲಾಗಿದೆ. ಇದು ಆಧುನಿಕ ಎಂಐಆರ್‌ವಿ ಸಾಮರ್ಥ್ಯ ಹೊಂದಿದ್ದು, ಹೆಚ್ಚಿನ ಸಂಖ್ಯೆಯ ಸಿಡಿತಲೆಗಳನ್ನು ಒಯ್ಯಬಲ್ಲದು.
ಟೋಪೊಲ್-ಎಂ: ರೋಡ್ ಮೊಬೈಲ್ ಐಸಿಬಿಎಂ ಆಗಿದ್ದು, 10,000 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಮತ್ತು ಎಂಐಆರ್‌ವಿ ಸಾಮರ್ಥ್ಯ ಹೊಂದಿದೆ.
ಚೀನಾ
ಡಿಎಫ್-41: ಚೀನಾದ ಪ್ರಾಥಮಿಕ ಭೂ ಆಧಾರಿತ ಐಸಿಬಿಎಂ ಆಗಿದ್ದು, 12,000 - 15,000 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದು, ಎಂಐಆರ್‌ವಿಗಳನ್ನು ಒಯ್ಯಬಲ್ಲ ಕ್ಷಿಪಣಿಯಾಗಿದೆ.
ಫ್ರಾನ್ಸ್
ಎಂ51: ಇದೊಂದು ಸಬ್‌ಮರೀನ್‌ನಿಂದ ಉಡಾವಣೆಗೊಳಿಸಬಹುದಾದ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು (ಎಸ್ಎಲ್‌ಬಿಎಂ), 10,000 ಕಿಲೋಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿ ಮತ್ತು ಎಂಐಆರ್‌ವಿ ಸಾಮರ್ಥ್ಯ ಹೊಂದಿದೆ.