Umesh Keelu: ಮುಂಬೈನ ಧಾರಾವಿ ಸ್ಲಮ್‌ನಲ್ಲಿ ಬೆಳೆದ ಹುಡುಗ ಈಗ ಭಾರತೀಯ ಸೇನೆಯ ಲೆಫ್ಟಿನೆಂಟ್!
ಭಾರತೀಯ ಸೇನೆಗೆ ಸಾಕಷ್ಟು ಮಂದಿ ಅಧಿಕಾರಿಗಳಾಗಿ ಸೇರುತ್ತಾರೆ. ಆದರೆ, ಶನಿವಾರ ಸೇರ್ಪಡೆಯಾದ ಮುಂಬೈನ ಲೆಫ್ಟಿನೆಂಟ್ ಉಮೇಶ್ ಕೀಲು ಜೀವನ ಭಿನ್ನ. ಅದಕ್ಕೆ ಕಾರಣ, ಮುಂಬೈನ ಸಿಯಾನ್-ಕೋಲಿವಾಡ-ಧಾರಾವಿ ಸ್ಲಂನಲ್ಲಿ ಬೆಳೆದ ವ್ಯಕ್ತಿ ಇಂದು ಭಾರತೀಯ ಸೇನೆಗೆ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಮುಂಬೈ (ಮಾ.9): ಬುದುಕಿನ ಉದ್ದೇಶ, ನಾವು ಕಲಿಯುವ ಶಿಕ್ಷಣ ಸರಿಯಾಗಿದ್ದರೆ ವ್ಯಕ್ತಿ ಎಂಥಾ ಸ್ಥಾನಕ್ಕಾದರೂ ಏರಬಹುದು. ಅದಕ್ಕೆ ಜೀವಂತ ಉದಾಹರಣೆಯಾಗಿ ನಿಂತಿದಿದ್ದಾರೆ ಉಮೇಶ್ ಕೀಲು. ಶನಿವಾರ ಉಮೇಶ್ ಕೀಲು ಪಾಲಿಗೆ ಸ್ಮರಣೀಯ ದಿನ. ತಮ್ಮ 20 ವರ್ಷಗಳ ಜೀವನವನ್ನು ಮುಂಬೈನ ಧಾರಾವಿಯ ಸ್ಲಂನಲ್ಲಿದ್ದ 10*5 ಪುಟ್ಟ ಗುಡಿಸಲಿನಲ್ಲಿಯೇ ಕಳೆದಿದ್ದ ಉಮೇಶ್ ಕೀಲು ಶನಿವಾರ ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಿಂದ (ಓಟಿಎ) ಪದವಿ ಪಡೆದು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕವಾಗಿದ್ದಾರೆ. ತಮ್ಮ 20ರ ವಯಸ್ಸಿನಲ್ಲಿರುವ ಲೆಫ್ಟಿನೆಂಟ್ ಕೀಲು, ಬಹುಶಃ ಧಾರಾವಿಯಿಂದ ಶಾರ್ಟ್ ಸರ್ವಿಸ್ ಕಮಿಷನ್ (SSC) ತರಬೇತಿ ಸಂಸ್ಥೆಯಾದ ಓಟಿಎಯಿಂದ ಅಧಿಕಾರಿಯಾಗಿ ನೇಮಕವಾದ ಮೊದಲಿರಾಗಿದ್ದಾರೆ. “ಭಾರತೀಯ ಸೇನೆಯ ಅಧಿಕಾರಿಯಾದ ಮೊದಲಿಗ ನಾನು. ನನ್ನನ್ನು ನೋಡಿ ಬಹುಶಃ ಇತರ ಅನೇಕರು ಸಶಸ್ತ್ರ ಪಡೆಗಳನ್ನು ಸೇರಲು ಪ್ರೇರಣೆ ಪಡೆಯಬಹುದು' ಎಂದು ಶನಿವಾರ ಒಟಿಎ ಪಾಸ್ಡ್ ಔಟ್ ಪರೇಡ್ ಮುಗಿದ ಬೆನ್ನಲ್ಲಿಯೇ ಲೆಫ್ಟಿನೆಂಟ್ ಉಮೇಶ್ ಕೀಲು ಹೇಳಿದ್ದಾರೆ.
ಸಿಯಾನ್-ಕೋಲಿವಾಡ-ಧಾರವಿ ಪ್ರದೇಶದಲ್ಲಿದ್ದ ಲೆಫ್ಟಿನೆಂಟ್ ಕೀಲು ಅವರ ಮನೆ, ನಿಜವಾಗಿ ಮನೆಯೇ ಅಲ್ಲ. ಕೇವಲ 10*5 ಅಳತೆಯ ಗುಡಿಸಲು. ಇದೇ ಗುಡಿಸಲಿನಲ್ಲಿ ನಾಲ್ವರು ಸದಸ್ಯರ ಇವರ ಕುಟುಂಬ ವಾಸವಾಗಿತ್ತು. ಇಡೀ ಮನೆಯಲ್ಲಿ ತಂದೆಯೊಬ್ಬರೇ ದುಡಿಮೆ ಮಾಡುವ ವ್ಯಕ್ತಿ. ಪೇಂಟರ್ ಆಗಿದ್ದ ಕೀಲು ಅವರ ತಂದೆ, ತಮಗೆ ಬರುತ್ತಿದ್ದ ಅಲ್ಪ ಸ್ವಲ್ಪ ಹಣದಲ್ಲಿಯೇ ಮಕ್ಕಳಿಗೆ ಸಾಧ್ಯವಾದಷ್ಟು ಶಿಕ್ಷಣ ನೀಡಿದ್ದರು. ಆದರೆ, 2013ರಲ್ಲಿ ತಂದೆ ಪಾರ್ಶ್ವವಾಯುವಿಗೆ ತುತ್ತಾಗುವುದರೊಂದಿಗೆ ಮನೆಯ ಕಷ್ಟ ಇನ್ನಷ್ಟು ಹೆಚ್ಚಾಯಿತು.
ಮನೆಯ ಕಷ್ಟದ ನಡುವೆ ಲೆಫ್ಟಿನೆಂಟ್ ಉಮೇಶ್ ಕೀಲು ಮಾಹಿತಿ ತಂತ್ರಜ್ಞಾನದಲ್ಲಿ ವಿಜ್ಞಾನ ಪದವಿಯನ್ನು ಪಡೆದರೆ, ನಂತರ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಓದಿನ ನಡುವೆ ಉಮೇಶ್ ಕೀಲು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ನ ಏರ್ ವಿಂಗ್‌ಗೆ ಸೇರಿಕೊಂಡು, 'ಸಿ' ಪ್ರಮಾಣಪತ್ರವನ್ನು ಗಳಿಸಿದ್ದರು. ಇದೇ ಹಂತದಲ್ಲಿ ಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಮಾಡುವ ಸಲುವಾಗಿ ಸ್ಥಳೀಯ ಸೈಬರ್ ಕೆಫೆಯಲ್ಲಿ ಪಾರ್ಟ್‌ಟೈಮ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಆರಂಭಿಸಿದ್ದರು.
ತಮ್ಮ ಪ್ರಯತ್ನದ ಫಲವಾಗಿ ಅವರಿಗೆ ಐಟಿ ಸೇವಾ ವಲಯದ ದೊಡ್ಡ ಕಂಪನಿಯಾದ ಟಿಸಿಎಸ್‌ನಲ್ಲಿ ಉದ್ಯೋಗ ದೊರೆತಿತ್ತು. ಅದರೊಂದಿಗೆ ಕುಟುಂಬಕ್ಕೆ ಸಹಾಯ ಮಾಡಲು ಆರಂಭಿಸಿದ್ದರು. ಕುಟುಂಬದ ಅಗತ್ಯಗಳನ್ನು ಪೂರೈಸುವುದರೊಂದಿಗೆ ತಂದೆಯ ಚಿಕಿತ್ಸೆಯನ್ನು ನೋಡಿಕೊಂಡರು.
ಆದರೆ, ತಂದೆ-ತಾಯಿಗೆ ಮಗ ಸೇನಾ ಯುನಿಫಾರ್ಮ್ ಧರಿಸಬೇಕು ಎನ್ನುವುದು ಆಸೆಯಾಗಿತ್ತು. ಅದಕ್ಕಾಗಿ ಉಮೇಶ್ ಕೀಲು, ಸರ್ವೀಸ್ ಸೆಲೆಕ್ಷನ್ ಬೋರ್ಡ್ ಅಂದರೆ ಎಸ್‌ಎಸ್‌ಬಿ ಪರೀಕ್ಷೆಗೆ ಸಿದ್ಧತೆ ಅರಂಭಿಸಿದ್ದರು. "ನಾನು ನನ್ನ ಶಿಕ್ಷಣವನ್ನು ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ವಿದ್ಯಾರ್ಥಿವೇತನದ ಮೂಲಕ ಪೂರ್ಣಗೊಳಿಸಿದೆ. ನಾನು ಮೂರು ವರ್ಷಗಳ ಕಾಲ TCS ನಲ್ಲಿ ಕೆಲಸ ಮಾಡಿದ್ದೆ. ಇದೇ ಸಮಯದಲ್ಲಿ ಎಸ್‌ಎಸ್‌ಬಿಗೆ ಸಿದ್ಧತೆ ನಡೆಸುತ್ತಿದ್ದೆ. 13 ಪ್ರಯತ್ನಗಳ ನಂತರ ನಾನು ಸೇನೆಗೆ ಆಯ್ಕೆಯಾದೆ' ಎಂದು ತಿಳಿಸಿದ್ದಾರೆ. ಆದರೆ, ಅಕಾಡೆಮಿಗೆ ಸೇರಿದ ಬೆನ್ನಲ್ಲಿಯೇ ತಂದೆಯ ಸಾವಿನ ಸುದ್ದಿ ತಲುಪಿತ್ತು. ವಿಶೇಷ ಮನವಿಯ ಮೇಲೆ ಕುಟುಂಬವನ್ನು ಭೇಟಿ ಮಾಡಲು ಹಾಗೂ ಮಗನ ಕರ್ತವ್ಯಗಳನ್ನು ನಿರ್ವಹಿಸಲು ಅವರಿಗೆ ಅಕಾಡೆಮಿ ಅವಕಾಶ ನೀಡಿತ್ತು. ಆದರೆ, ಅಕಾಡೆಮಿಗೆ ಮರಳಿದ ಬಳಿಕ ಉಮೇಶ್ ಕೀಲುಗೆ ತನ್ನ ತಂದೆಯ ಕನಸನ್ನು ನನಸಾಗಿಸೋದೇ ಮುಖ್ಯವಾಗಿತ್ತು.
ಚೀನಾ ಮೇಲೆ ಹದ್ದಿನ ಕಣ್ಣು: ಗಡಿಯಲ್ಲಿ2 ಪಿನಾಕ ರೆಜಿಮೆಂಟ್ ನಿಯೋಜನೆಗೆ ಮುಂದಾದ ಸೇನೆ
'ಹೌದು ನನಗೂ ಕಷ್ಟಗಳಿದ್ದವು. ಆದರೆ, ಅದರ ಬಗ್ಗೆಯೂ ಯೋಚನೆ ಮಾಡುತ್ತಾ ಕೂರಲಿಲ್ಲ. ಮನಸ್ಸಿದ್ದರೆ ಮಾರ್ಗ ಖಂಡಿತಾ ಇರುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. ನಿಮ್ಮ ಗುರಿಯನ್ನು ಸಾಧಿಸುತ್ತಿರಿ ಎನ್ನುವ ನಂಬಿಕೆ ನಿಮ್ಮಲ್ಲೇ ಇರಬೇಕು' ಎಂದು ಉಮೇಶ್ ಕೀಲು ಹೇಳುತ್ತಾರೆ. 12 ಬಾರಿ ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ವಿಫಲರಾದರೂ, ಎಂದೂ ಕೂಡ ಸೇನೆ ಸೇರುವ ತಮ್ಮ ಆಸೆಯಿಂದ ವಿಚಲಿತನಾಗಿಯೇ ಇರಲಿಲ್ಲ ಎಂದಿದ್ದಾರೆ.
ಭಾರತೀಯ ಸೈನಿಕರಿಗೆ ದೇಶದಲ್ಲಿ ಜಾಗವಿಲ್ಲ: ಮೇ 10ರೊಳಗೆ ಸಂಪೂರ್ಣ ನಿರ್ಗಮಿಸಿ: ಮಾಲ್ಡೀವ್ಸ್ ಗಡುವು