ದೆಹಲಿ ಮದ್ಯ ನೀತಿ ಹಗರಣದ ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್‌ ಸರ್ಕ್ಯುಲರ್‌ ಹೊರಡಿಸಿದೆ. ಆದರೆ, ಮನೀಶ್ ಸಿಸೋಡಿಯಾ ವಿರುದ್ಧ ಹೊರಡಿಸಿಲ್ಲ ಎಂದು ಕೇಂದ್ರೀಯ ತನಿಖಾ ಸಂಸ್ಥೆ ಜಾರಿಗೊಳಿಸಿದೆ. 

ಸಿಬಿಐ (CBI) ತನ್ನ ವಿರುದ್ಧ ಲುಕ್‌ಔಟ್‌ ನೋಟಿಸ್‌ (Look Out Circular) ಜಾರಿಗೊಳಿಸಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಆರೋಪಿಸಿದ್ದರು. ಅಲ್ಲದೆ, ಕೇಂದ್ರ ಸರ್ಕಾರ, ಸಿಬಿಐ ವಿರುದ್ಧ ತರಾಟೆಯನ್ನೂ ತೆಗೆದುಕೊಂಡಿದ್ದರು. ಆದರೆ, ಈ ರೀತಿ ಯಾವ ಲುಕ್‌ಔಟ್‌ ನೋಟಿಸ್‌ ಅನ್ನೂ ಹೊರಡಿಸಿಲ್ಲ. ಕೆಲ ಆರೋಪಿಗಳ ವಿರುದ್ಧ ನೋಟಿಸ್‌ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಸಿಬಿಐ ಹೇಳಿಕೊಂಡಿತ್ತು. ಈಗ ಕೊನೆಗೂ ಕೇಂದ್ರೀಯ ತನಿಖಾ ಸಂಸ್ಥೆ (Central Bureau of Investigation) ಭಾನುವಾರ ದೆಹಲಿ ಮದ್ಯ ಹಗರಣದ 8 ಆರೋಪಿಗಳ ವಿರುದ್ಧ ಲುಕ್‌ಔಟ್‌ ಸರ್ಕ್ಯುಲರ್‌ಗಳನ್ನು ಹೊರಡಿಸಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. 

8 ಖಾಸಗಿ ಆರೋಪಿಗಳ ವಿರುದ್ಧವಷ್ಟೇ ಲುಕ್‌ಔಟ್‌ ಸರ್ಕ್ಯುಲರ್‌ ಹೊರಡಿಸಲಾಗಿದೆಯೇ ಹೊರತು ನಾಲ್ವರು ಸಾಮಾಜಿಕ ಸೇವಕರ ವಿರುದ್ಧ ಅಲ್ಲ ಎಂದೂ ಸಿಬಿಐ ಸ್ಪಷ್ಟನೆ ನೀಡಿದೆ. ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹಾಗೂ ಅಬಕಾರಿ ಇಲಾಖೆಯ ಮಾಜಿ ಅಧಿಕಾರಿಗಳ ವಿರುದ್ಧ ನೋಟಿಸ್‌ ಹೊರಡಿಸಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಸರ್ಕಾರಕ್ಕೆ ಮಾಹಿತಿ ನೀಡದೆ ಸಾಮಾಜಿಕ ಸೇವಕರು ದೇಶ ಇಟ್ಟು ಹೋಗುವುದಿಲ್ಲವಾದ್ದರಿಂದ ಅವರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸುವ ಅವಶ್ಯಕತೆ ಸದ್ಯಕ್ಕಿಲ್ಲ ಎಂದೂ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಸಿಬಿಐನಿಂದ ಲುಕ್‌ಔಟ್‌ ನೋಟಿಸ್‌, ಇದೇನಿದು ಗಿಮಿಕ್ ಮೋದಿಜೀ ಎಂದ ಮನೀಶ್‌ ಸಿಸೋಡಿಯಾ

ಉದ್ಯಮಿ ವಿಜಯ್ ನಾಯರ್ ಸೇರಿದಂತೆ ಒಟ್ಟು 9 ಖಾಸಗಿ ವ್ಯಕ್ತಿಗಳನ್ನು ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಿದೆ. ಈ ಪೈಕಿ ಪೆರ್ನೋಡ್ ರಿಕಾರ್ಡ್ ನ ಮಾಜಿ ಉದ್ಯೋಗಿ ಮನೋಜ್ ರಾಯ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಹೊರಡಿಸಿಲ್ಲ ಎಂದು ತಿಳಿದುಬಂದಿಲ್ಲ. ಇನ್ನೊಂದೆಡೆ, ಓನ್ಲಿ ಮಚ್ ಲೌಡರ್ ಎಂಬ ಮನರಂಜನೆ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮಾಜಿ ಸಿಇಒ ವಿಜಯ್ ನಾಯರ್‌, ಬ್ರಿಂಡ್ಕೊ ಸ್ಪಿರಿಟ್ಸ್ ಮಾಲೀಕ ಮನದೀಪ್ ಧಾಲ್, ಇಂಡೋಸ್ಪಿರಿಟ್‌ನ ಎಂಡಿ ಸಮೀರ್ ಮಹೇಂದ್ರು ಮತ್ತು ಹೈದರಾಬಾದ್ ಮೂಲದ ಅರುಣ್ ರಾಮಚಂದ್ರ ಪಿಳ್ಳೈ ವಿರುದ್ದ ಲುಕ್‌ಔಟ್‌ ಸರ್ಕ್ಯುಲರ್‌ ಹೊರಡಿಸಲಾಗಿದೆ.

ಅಲ್ಲದೆ, ಸಿಸೋಡಿಯಾ ಅವರ ಮೂವರು "ಆಪ್ತ ಸಹವರ್ತಿಗಳು" ಎನ್ನಲಾದ ಗುರ್ಗಾಂವ್‌ನ ಬಡ್ಡಿ ರಿಟೇಲ್ ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಅಮಿತ್ ಅರೋರಾ, ದಿನೇಶ್ ಅರೋರಾ ಮತ್ತು ಅರ್ಜುನ್ ಪಾಂಡೆ ಅವರ ವಿರುದ್ಧವೂ ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದ್ದು, ಇದರ ಜತೆಗೆ ಲುಕ್‌ಔಟ್‌ ಸರ್ಕ್ಯುಲರ್‌ ಅನ್ನೂ ಹೊರಡಿಸಿದೆ. ಸಿಬಿಐ ತನಿಖೆ ನಡೆಸುತ್ತಿರುವ ಅಬಕಾರಿ ನೀತಿ ಪ್ರಕರಣದಲ್ಲಿ ತನ್ನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಿಸೋಡಿಯಾ ಈ ಹಿಂದೆ ಹೇಳಿಕೊಂಡಿದ್ದರು ಮತ್ತು ಸಿಬಿಐನ ಈ ಕ್ರಮವನ್ನು "ನಾಟಕ" ಎಂದು ಬಣ್ಣಿಸಿದ್ದರು.

ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ವ್ಯಕ್ತಿಗಳು ಮತ್ತು ಘಟಕಗಳಲ್ಲಿ ಸಿಸೋಡಿಯಾ ಕೂಡ ಸೇರಿದ್ದಾರೆ. ಸಿಸೋಡಿಯಾ ಅವರ ನಿವಾಸ ಮತ್ತು ಕೆಲವು ಅಧಿಕಾರಿಗಳು ಮಾಜಿ ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣ ಮತ್ತು ಇತರ ಇಬ್ಬರು ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಉದ್ಯಮಿಗಳ ಆವರಣ ಸೇರಿದಂತೆ 31 ಸ್ಥಳಗಳಲ್ಲಿ ಸಂಸ್ಥೆ ಶುಕ್ರವಾರ ಶೋಧ ನಡೆಸಿತು.

ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾರನ್ನು Money Shh ಎಂದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌

ಆಪಾದಿತ ಅಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮದ್ಯದ ವ್ಯಾಪಾರಿಗಳಲ್ಲಿ ಒಬ್ಬರಾಗಿದ್ದ ಮಹೇಂದ್ರು ಅವರು ಮನೀಶ್‌ ಸಿಸೋಡಿಯಾ ಅವರ "ಆಪ್ತ ಸಹಚರರಿಗೆ" ಕನಿಷ್ಠ 2 ಕೋಟಿ ರೂಪಾಯಿ ಮೌಲ್ಯದ ಪೇಮೆಂಟ್‌ ಮಾಡಿದ್ದಾರೆ ಎನ್ನುವುದರ ಮೇಲೆ ಸಿಬಿಐ ಕಣ್ಣು ಬಿದ್ದಿದ್ದು, ಈ ಕುರಿತು ತನಿಖೆ ನಡೆಸುತ್ತಿದೆ ಎನ್ನಲಾಗಿದೆ. ಹಾಗೂ, ಮನೀಶ್‌ ಸಿಸೋಡಿಯಾ ಅವರ "ಆಪ್ತ ಸಹಚರರು" ಆರೋಪಿ ಸಾರ್ವಜನಿಕ ಸೇವಕರಿಗೆ "ಮದ್ಯ ಪರವಾನಗಿದಾರರಿಂದ ಸಂಗ್ರಹಿಸಿದ ಅನಗತ್ಯ ಹಣದ ಲಾಭವನ್ನು ನಿರ್ವಹಿಸುವಲ್ಲಿ ಮತ್ತು ಬೇರೆ ಕಡೆ ವರ್ಗಾಯಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ" ಎಂದು ಎಫ್ಐಆರ್ ಆರೋಪಿಸಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ತನಿಖೆಗೆ ಶಿಫಾರಸು ಮಾಡಿದ ನಂತರ ಎಎಪಿಯ ಅರವಿಂದ್ ಕೇಜ್ರಿವಾಲ್‌ ಸರ್ಕಾರ ಜುಲೈನಲ್ಲಿ ತನ್ನ ಹಳೆಯ ಮದ್ಯ ನೀತಿಯನ್ನು ಹಿಂತೆಗೆದುಕೊಂಡಿತು.