ಬಿಜೆಪಿ, ಎನ್‌ಡಿಎ ಮೈತ್ರಿಕೂಟ ಎಡವಿದ್ದು ಎಲ್ಲಿ? ಏಕೆ?
ಎನ್‌ಡಿಎ ಮೈತ್ರಿಕೂಟ 400 ರ ಆಸುಪಾಸು ಬರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಪೂರ್ಣ ಉಲ್ಟಾ ಹೊಡೆದಿದೆ. ಎನ್‌ಡಿಎ ಹೀಗೆ ನಿರೀಕ್ಷಿತ ಗುರಿ ಮುಟ್ಟದೇ ಇರಲು ಉತ್ತರ ಪ್ರದೇಶವೂ ಸೇರಿದಂತೆ ಕೆಲ ದೊಡ್ಡ ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಕೈಕೊಟ್ಟಿದ್ದೇ ಪ್ರಮುಖ ಕಾರಣವಾಗಿ ಪರಿಣಮಿಸಿದೆ.
ನವದೆಹಲಿ: ಈ ಬಾರಿ ಬಿಜೆಪಿ ಏಕಾಂಗಿಯಾಗಿ 300 ಸ್ಥಾನ ಪಡೆಯಲಿದೆ ಎನ್‌ಡಿಎ ಮೈತ್ರಿಕೂಟ 400 ರ ಆಸುಪಾಸು ಬರಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆ ಪೂರ್ಣ ಉಲ್ಟಾ ಹೊಡೆದಿದೆ. ಎನ್‌ಡಿಎ ಹೀಗೆ ನಿರೀಕ್ಷಿತ ಗುರಿ ಮುಟ್ಟದೇ ಇರಲು ಉತ್ತರ ಪ್ರದೇಶವೂ ಸೇರಿದಂತೆ ಕೆಲ ದೊಡ್ಡ ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಕೈಕೊಟ್ಟಿದ್ದೇ ಪ್ರಮುಖ ಕಾರಣವಾಗಿ ಪರಿಣಮಿಸಿದೆ.
ಇಂಡಿಯಾ ಕೂಟದ ಪರ ಧ್ರುವೀಕರಣಗೊಂಡ ಮುಸ್ಲಿಂ ಮತ
ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜ ಸ್ಥಾನ, ಪಶ್ಚಿಮ ಬಂಗಾಳ ಹಾಗೂ ಹರ್ಯಾಣದಲ್ಲಿ ಬಿಜೆಪಿಗೆ ಅನಿರೀಕ್ಷಿತ ಆಘಾತ ಉಂಟಾಗಿದೆ. ಅಲ್ಪಸಂಖ್ಯಾತ ಮತಗಳು ವಿಭಜನೆಯಾಗದೆ ಇಂಡಿಯಾ ಮೈತ್ರಿಕೂಟದ ಪರ ಸ್ಪಷ್ಟವಾಗಿ ಧ್ರುವೀಕರಣಗೊಂಡಿರುವುದೂ ಪ್ರಮುಖ ಕಾರಣಗಳಲ್ಲಿ ಒಂದು. ಉತ್ತರ ಪ್ರದೇಶವನ್ನು ಗೆದ್ದವರು ಕೇಂದ್ರ ದಲ್ಲಿ ಸರ್ಕಾರ ರಚಿಸುತ್ತಾರೆ, ಅಲ್ಲಿನ ಟ್ರೆಂಡ್ ಹೇಗಿರುತ್ತದೆಯೋ ಅದೇ ಇಡೀ ದೇಶದಲ್ಲಿ ಪ್ರತಿಫಲಿಸುತ್ತದೆ ಎಂಬ ಮಾತಿದೆ. ಈ ಬಾರಿಯೂ ಉತ್ತರ ಪ್ರದೇಶದಲ್ಲಿ ಬಿಜೆಪಿಗೇ ಅಧಿಕ ಸೀಟುಗಳು ಬಂದಿದ್ದರೂ, ಕಳೆದ ಚುನಾವಣೆಗಿಂತ ಸೀಟು ಗಳಿಕೆ ಭಾರೀ ಕಡಿಮೆ ಯಾಗಿದೆ.
ಹಿಂದಿ ಭಾಷಿಕ ಪ್ರದೇಶಗಳಲ್ಲಿ ಮತ್ತೆ ಇಂಡಿ ಕೂಟದ ಪ್ರಾಬಲ್ಯ
80 ಸೀಟುಗಳ ಉತ್ತರ ಪ್ರದೇಶದಲ್ಲಿ ಕಳೆದ ಬಾರಿ 62 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ ಅದು ಕುಸಿದಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಬಿಜೆಪಿಯ ಯೋಗಿ ಆದಿತ್ಯನಾಥ್ ನಾಯಕತ್ವಕ್ಕೆ ಆಘಾತಕಾರಿ ಪೆಟ್ಟು ನೀಡಿದೆ. ರಾಮ ಮಂದಿರ ನಿರ್ಮಾಣವು ನಿರೀಕ್ಷಿತ ಸಂಖ್ಯೆಯಲ್ಲಿ ಬಿಜೆಪಿಗೆ ಮತ ತಂದುಕೊಟ್ಟಿಲ್ಲ. ಅಗ್ನಿವೀರ ಯೋಜನೆಯ ಬಗ್ಗೆ ಯುವಕರ ಅತೃಪ್ತಿ, ಆಡಳಿತ ವಿರೋಧಿ ಅಲೆ, ಮುಸ್ಲಿಂ ಮತಗಳ ಧ್ರುವೀಕರಣ, ನಿರುದ್ಯೋಗ, ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ಪರ ಎದ್ದ ಅಲೆಯಿಂದಾಗಿ ಬಿಜೆಪಿ ನಷ್ಟ ಅನುಭವಿಸಿದೆ.
ಬಿಹಾರದಲ್ಲೂ ಬಿಜೆಪಿಗೆ ಹಿನ್ನಡೆ
40 ಲೋಕಸಭಾ ಕ್ಷೇತ್ರಗಳಿರುವ ಇನ್ನೊಂದು ದೊಡ್ಡ ರಾಜ್ಯ ಬಿಹಾರದಲ್ಲೂ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದ್ದು ಬಿಟ್ಟರೆ ಇನ್ನೆಲ್ಲಾ ಸೀಟುಗಳನ್ನೂ ಎನ್‌ಡಿಎ ಮೈತ್ರಿ ಕೂಟ ಗೆದ್ದಿತ್ತು. ಮತ್ತು ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿತ್ತು. ಈ ಬಾರಿ ಅಂತಹ ಚಿತ್ರಣ ಕಂಡು ಬಂದಿಲ್ಲ. ಮುಖ್ಯವಾಗಿ ಹಿಂದುಳಿದ ವರ್ಗಗಳ ಮತ್ತು ಮುಸ್ಲಿಂ ಸಮುದಾಯದ ಮತ ಇಂಡಿಯಾ ಮೈತ್ರಿಕೂಟದತ್ತ ಧ್ರುವೀಕರಣಗೊಂಡಿದೆ. ತೇಜಸ್ವಿ ಯಾದವ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ಸಾಕಷ್ಟು ಸೀಟು ಗಳಿಸಿಕೊಂಡಿದೆ.
ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರ ಜಸ್ಟ್ ಮಿಸ್ ಆಗಲು ಏನು ಕಾರಣ?
ಮಹಾರಾಷ್ಟ್ರದಲ್ಲಿ ಮಹಾಗಠಬಂಧನ್ ಸರ್ಕಾರವನ್ನು ಉರುಳಿಸಿ ಬಿಜೆಪಿ ಮೈತ್ರಿ ಕೂಟದ ಸರ್ಕಾರ ರಚನೆಯಾಗಿರುವುದರಿಂದ ಎನ್‌ಡಿಎ ಹೆಚ್ಚು ಸ್ಥಾನಗಳನ್ನು ನಿರೀಕ್ಷಿಸಿತ್ತು. 48 ಲೋಕಸಭಾ ಕ್ಷೇತ್ರಗಳಿರುವ ದೊಡ್ಡ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 41 ಸೀಟು ಗಳನ್ನು ಗೆದ್ದಿತ್ತು. ಆದರೆ ಈ ಸಲ ಇಂಡಿಯಾ ಕೂಟಕ್ಕೆ ಹೆಚ್ಚು ಸೀಟುಗಳು ಬಂದಿವೆ. ಬಿಜೆಪಿ ಹಾಗೂ ಶಿವಸೇನೆ (ಸಿಎಂ ಶಿಂಧೆ ಬಣ)ಗೆ ಭಾರೀ ನಷ್ಟವಾಗಿದೆ.
ರಾಜಸ್ಥಾನದಲ್ಲಿ ಕಳೆದ ಬಾರಿ 25ಕ್ಕೆ 25 ಸೀಟುಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಗಣನೀಯವಾಗಿ ಗಳಿಕೆ ಮಾಡಿಕೊಂಡಿವೆ. ಹೀಗಾಗಿ ಬಿಜೆಪಿಗೆ ಭಾರೀ ನಷ್ಟವಾಗಿದೆ.
42 ಕ್ಷೇತ್ರಗಳಿರುವ ಳಿರುವ ಇನ್ನೊಂದು ದೊಡ್ಡ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಕಳೆದ ಚುನಾವಣೆಯಲ್ಲೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವೇ ಹೆಚ್ಚು ಸೀಟು ಗೆದ್ದಿದ್ದರೂ, ಬಿಜೆಪಿ ಕೂಡ ದೊಡ್ಡ ಸಂಖ್ಯೆ ಯಲ್ಲಿ 18 ಸೀಟುಗಳನ್ನು ಗೆದ್ದಿತ್ತು. ಈ ಬಾರಿ ಬಂಗಾಳದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ರಾಜ್ಯದಲ್ಲಿ ಮುಸ್ಲಿಂ ಮತಗಳು ಹೆಚ್ಚಿರುವುದರಿಂದ ಮತ್ತು ಈ ಬಾರಿ ಅವು ಟಿಎಂಸಿ ಪರ ಧ್ರುವೀಕರಣಗೊಂಡಿರುವುದರಿಂದ ಬಿಜೆಪಿಗೆ ನಷ್ಟ ಅಧಿಕವಾಗಿದೆ.
ಹರ್ಯಾಣದಲ್ಲಿ ಕೇವಲ 10 ಸೀಟುಗಳಿದ್ದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಷ್ಟೂ ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಬಿಜೆಪಿಗೆ ಭಾರೀ ನಷ್ಟವಾಗಿದೆ. ಪ್ರಮುಖವಾಗಿ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಹರ್ಯಾಣದಿಂದಲೇ ವೇಗ ಪಡೆದಿತ್ತು. ಅದು ಬಿಜೆಪಿಯ ವಿರುದ್ದ ತಿರುಗಿದ್ದರಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಆಘಾತವಾಗಿದೆ.