ಬೆಂಗಳೂರು (ಅ.28): 2 ವರ್ಷಗಳ ಹಿಂದೆ ಕೇರಳವನ್ನು ಬೆಚ್ಚಿಬೀಳಿಸಿದ್ದ ಇಬ್ಬರು ಸಹೋದರಿಯರ ಅತ್ಯಾಚಾರ-ಆತ್ಮಹತ್ಯೆ ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಸಂಸದ ರಾಜೀವ್ ಚಂದ್ರಶೇಖರ್, ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಮನವಿ ಮಾಡಿದ್ದಾರೆ.

ಪ್ರಕರಣದ ತನಿಖೆಯು ರಾಜಕೀಯ ಪ್ರೇರಿತವಾಗಿದೆ. ಆದ್ದರಿಂದ ಕೇಂದ್ರ ಮಕ್ಕಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಬೇಕು. ಆ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯವೊದಗಿಸುವಂತೆ ಸಂಸದ ರಾಜೀವ್ ಆಗ್ರಹಿಸಿದ್ದಾರೆ. 

ಏನಿದು ಪ್ರಕರಣ?

2017ರಲ್ಲಿ ಕೇರಳದ ಪಾಲಕ್ಕಡ್‌ನಲ್ಲಿ ಆತ್ಯಾಚಾರಕ್ಕೊಳಗಾಗಿದ್ದ 11 ವರ್ಷ ಪ್ರಾಯದ ಬಾಲಕಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಅದಾದ 2 ತಿಂಗಳ ಬಳಿಕ ಆಕೆಯ 9 ವರ್ಷ ಪ್ರಾಯದ ತಂಗಿ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದರ ವಿರುದ್ಧ ಕೇರಳ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.  

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಡರಂಗದ ಕಾರ್ಯಕರ್ತರೆನ್ನಲಾದ ನಾಲ್ವರ ವಿರುದ್ಧ ಕೇಸ್ ದಾಖಲಿಸಿದ್ದರು. ಪ್ರಕರಣದಲ್ಲಿ ಒಬ್ಬ ಆರೋಪಿ ಕಳೆದ ತಿಂಗಳು ಖುಲಾಸೆಗೊಂಡಿದ್ದರೆ, ಕಳೆದ ವಾರ ಮತ್ತೆ ಮೂವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

ಇದನ್ನೂ ಓದಿ | ಕುರ್ ಕುರೆ ಆಸೆ ತೋರಿಸಿ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ...

ಆರೋಪಿಗಳು ಆಡಳಿತರೂಢ ಎಡರಂಗದ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ, ಪೊಲೀಸರು ಪಕ್ಷಪಾತಿಯಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಬಾಲಕಿಯರ ಹೆತ್ತವರು ಮೊದಲ ದಿನದಿಂದಲೇ ಹೇಳುತ್ತಲೇ ಬಂದಿದ್ದಾರೆ. 

ಆದರೆ, ಈಗ ಕೋರ್ಟ್ ತೀರ್ಪು ಅದನ್ನು ಪುಷ್ಠೀಕರಿಸಿದ್ದು, ತನಿಖೆಯ ಮೇಲೆ ರಾಜಕೀಯ ಪ್ರಭಾವ ಕೆಲಸ ಮಾಡಿದೆ ಎಂದು ಸಾಬೀತಾಗಿದೆ. ನ್ಯಾಯಾಲಯ ತೀರ್ಪಿನ ವಿರುದ್ಧ ಮತ್ತೆ ಜನಾಕ್ರೋಶ ಭುಗಿಲೆದ್ದಿದ್ದು, ಪೊಲೀಸರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ.