ದೆಹಲಿಯ ಕಾಲ್ಕಾಜಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ, ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನಯವಾದ ರಸ್ತೆ ನಿರ್ಮಿಸುವುದಾಗಿ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಕಾಂಗ್ರೆಸ್ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ.
ನವದೆಹಲಿ: ದೆಹಲಿಯ ಕಾಲ್ಕಾಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ರಮೇಶ್ ಬಿಧುರಿ, ಚುನಾವಣಾ ಪ್ರಚಾರದ ವೇಳೆ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ರಮೇಶ್ ಬಿಧುರಿ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದು, ಇದೊಂದು ಮಹಿಳಾ ವಿರೋಧಿ ಮಾತು. ಬಿಜೆಪಿ ನಾಯಕನಿಗೆ ನಾಚಿಕೆಯಾಗಬೇಕು ಎಂದು ತಿರುಗೇಟು ನೀಡಿದೆ. ಈ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅಲ್ಕಾ ಲಂಬಾ, ಬಿಜೆಪಿ ನಾಯಕ ರಮೇಶ್ ಬಿಧುರಿ ಮಹಿಳೆಯರನ್ನು ಅವಮಾನಿಸುವ ಕೆಲಸ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಮೇಶ್ ಬಿಧುರಿ ಹೇಳಿಕೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಮೇಶ್ ಬಿಧುರಿ ಹೇಳಿದ್ದೇನು?
ಈ ಹಿಂದೆ ಲಾಲೂ ಪ್ರಸಾದ್ ಯಾದವ್, ಬಿಹಾರದ ರಸ್ತೆಗಳನ್ನು ನಟಿ ಹೇಮಾ ಮಾಲಿನಿಯವರ ಕೆನ್ನೆಯಂತೆ ಮಾಡುವೆ ಎಂದು ಹೇಳಿದ್ದರು. ಆದ್ರೆ ಅವರಿಂದ ಆ ಕೆಲಸ ಮಾಡಲು ಆಗಲಿಲ್ಲ. ಇಂದು ನಾನು ನಿಮಗೆಲ್ಲರಿಗೂ ಒಕ್ಲಾ ಮತ್ತು ಸಂಗಮ್ ವಿಹಾರ್ ರಸ್ತೆಗಳಂತೆಯೇ ಕಾಲ್ಕಾಜಿಯ ರೋಡ್‌ಗಳನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿಯವರ ಕೆನ್ನೆಯಂತೆ ನಯವಾಗಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ, ಬಿಜೆಪಿ ಮಹಿಳಾ ವಿರೋಧಿ ಪಕ್ಷವಾಗಿದೆ. ಮಾಜಿ ಸಂಸದ, ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಅವರು, ಪ್ರಿಯಾಂಕಾ ಗಾಂಧಿ ಕುರಿತು ನೀಡಿದ ಹೇಳಿಕೆ ನಾಚಿಕೆಗೇಡಿನ ಸಂಗತಿ. ಮಹಿಳೆಯರ ಕುರಿತು ಅವರಲ್ಲಿನ ಮನಸ್ಥಿತಿಯನ್ನು ತೋರಿಸುತ್ತದೆ. ಸದನದಲ್ಲಿ ಸಹವರ್ತಿ ಸಂಸದರನ್ನು ನಿಂದಿಸಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಇದುವೇ ಬಿಜೆಪಿಯ ಅಸಲಿ ಮುಖ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯ ಮಹಿಳಾ ನಾಯಕರು, ಸಚಿವರು, ಪ್ರಧಾನಿ ಮೋದಿ ಇಂತಹ ಕೀಳುಮಟ್ಟದ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತೀರಾ? ವಾಸ್ತವವಾಗಿ ಪ್ರಧಾನಿ ಮೋದಿಯವರೇ ಮಹಿಳಾ ವಿರೋಧಿ ಕಳಪೆ ಭಾಷೆ ಮತ್ತು ಚಿಂತನೆಯ ಪಿತಾಮಹ. ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಮಂಗಳಸೂತ್ರದಂತಹ ಮಾತುಗಳನ್ನಾಡಿದ್ದರು. ರಮೇಶ್ ಬಿಧುರಿ ಮಾತ್ರವಲ್ಲ ಬಿಜೆಪಿಯ ಉನ್ನತಮಟ್ಟದ ನಾಯಕರು ಈ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಸುಪ್ರಿಯಾ ಶ್ರೀನಾಥೆ ಆಗ್ರಹಿಸಿದರು.
ಇದನ್ನೂ ಓದಿ: 'ಕೇರಳ ಮಿನಿ ಪಾಕಿಸ್ತಾನ, ಅದಕ್ಕೆ ರಾಹುಲ್-ಪ್ರಿಯಾಂಕಾ ಗೆಲ್ತಿದ್ದಾರೆ..' ಮಹಾರಾಷ್ಟ್ರ ಮಂತ್ರಿಯ ವಿವಾದಾತ್ಮಕ ಹೇಳಿಕ
ರಾಷ್ಟ್ರೀಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಅಲ್ಕಾ ಲಂಬಾ, ಬಿಧುರಿ ಮಹಿಳೆಯರ ಬಗ್ಗೆ ತಮ್ಮ ಎಂದಿನ ಅಸಭ್ಯ ಭಾಷೆಯ ಮೂಲಕ ಅವಮಾನಿಸುವುದನ್ನು ಮುಂದುವರೆಸಿದ್ದಾರೆ ಎಂದಿದ್ದಾರೆ. ಇದು ದೊಡ್ಡದಾಗುತ್ತಿದ್ದಂತೆ. ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ. ನನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ರಮೇಶ್ ಬಿಧುರಿ ಹೇಳಿದ್ದಾರೆ.
ಇನ್ನು ತಮ್ಮ ಹೇಳಿಕೆ ದೊಡ್ಡಮಟ್ಟದಲ್ಲಿ ಸುದ್ದಿ ಆಗುತ್ತಿದ್ದಂತೆ ಎಚ್ಚೆತ್ತ ರಮೇಶ್ ಬಿಧುರಿ ವಿಷಾಧ ವ್ಯಕ್ತಪಡಿಸಿದರು. ತಮ್ಮ ಹೇಳಿಕೆಯಿಂದ ಯಾರಿಗಾದ್ರೂ ನೋವು ಆಗಿದ್ರೆ ಮಾತನ್ನು ಹಿಂಪಡೆಯುವ ಅಂದಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಿಜೆಪಿ-ಕಾಂಗ್ರೆಸ್ ನಡುವಿನ ವ್ಯತ್ಯಾಸವೇನು? ವಿದ್ಯಾರ್ಥಿ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ
