ಆರ್‌ಒ ಪ್ಯೂರಿಫೈಯರ್ ನಿಷೇಧಕ್ಕೆ ಆದೇಶ: 2 ತಿಂಗಳಲ್ಲಿ ಕ್ರಮ!
ಆರ್‌ಒ ಪ್ಯೂರಿಫೈಯರ್ ನಿಷೇಧಕ್ಕೆ ಆದೇಶ| ಪ್ರತಿ ಲೀಟರ್ ನೀರಲ್ಲಿ 500 ಮಿ.ಗ್ರಾಂ.ಗಿಂತ ಕಡಿಮೆ ಟಿಡಿಎಸ್ ಇದ್ದ ಪ್ರದೇಶದಲ್ಲಿ ನಿಷೇಧ ಹೇರಿ| 2 ತಿಂಗಳಲ್ಲಿ ಕ್ರಮ ಕೈಗೊಳ್ಳಿ: ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿರ್ದೇಶನ
ನವದೆಹಲಿ[ಜ.16]: ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಅತ್ಯಂತ ಜನಪ್ರಿಯವಾಗಿರುವ ‘ಆರ್‌ಒ ಜಲ ಶುದ್ಧೀಕರಣ ಯಂತ್ರ’ಗಳನ್ನು (ವಾಟರ್ ಪ್ಯೂರಿಫೈಯರ್) ಬಳಸುತ್ತಿರುವವರಿಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಬುಧವಾರ ಭರ್ಜರಿ ಆಘಾತ ನೀಡಿದೆ. ಪ್ರತಿ ಲೀಟರ್ ನೀರಿನಲ್ಲಿ 500 ಮಿಲಿಗ್ರಾಂಗಿಂತ ಕಡಿಮೆ ಟಿಡಿಎಸ್ (ಟೋಟಲ್ ಡಿಸಾಲ್‌್ವ$್ಡ ಸಾಲಿಡ್ಸ್- ಒಟ್ಟು ಮಿಶ್ರಿತ ಘನಪದಾರ್ಥ) ಇರುವ ಪ್ರದೇಶಗಳಲ್ಲಿ ಆರ್‌ಒ ಪ್ಯೂರಿಫೈಯರ್‌ಗಳಿಗೆ ನಿಷೇಧ ಹೇರಿ 2 ತಿಂಗಳೊಳಗಾಗಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ.
ಈ ಆದೇಶವನ್ನು ಪಾಲಿಸುವಲ್ಲಿ ವಿಳಂಬ ಮಾಡುವುದರಿಂದ ಸಾರ್ವಜನಿಕ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಅಪಾಯವಾಗುತ್ತದೆ. ಹೀಗಾಗಿ ಇದನ್ನು ತ್ವರಿತವಾಗಿ ಪಾಲನೆ ಮಾಡಬೇಕು ಎಂದು ಹೇಳಿದೆ. ಇದೇ ವೇಳೆ, ಅಧಿಸೂಚನೆ ಹೊರಡಿಸಲು ನಾಲ್ಕು ತಿಂಗಳು ಸಮಯಾವಕಾಶ ನೀಡಬೇಕು ಎಂಬ ಪರಿಸರ ಸಚಿವಾಲಯದ ಕೋರಿಕೆಯನ್ನು ತಿರಸ್ಕರಿಸಿದೆ. ಮುಂದಿನ ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿದೆ.
ಮಾರುಕಟ್ಟೆಗೆ ಡೈಕಿನ್‌ನ ಹೊಸ ಏರ್‌ಕಂಡೀಶನರ್
ಎನ್‌ಜಿಟಿಯ ಈ ತಾಕೀತಿನೊಂದಿಗೆ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಮಾರಾಟ ಮಾಡುವ ಕಂಪನಿಗಳಿಗೆ ಭಾರಿ ಹಿನ್ನಡೆಯಾಗಿದೆ. ಈ ಹಿಂದೆಯೇ ಸುಪ್ರೀಂಕೋರ್ಟಿನ ಮೆಟ್ಟಿಲನ್ನು ಆ ಕಂಪನಿಗಳು ಹೇರಿದ್ದವಾದರೂ ಯಾವುದೇ ಫಲ ಸಿಕ್ಕಿರಲಿಲ್ಲ.
ಏನಿದು ಪ್ರಕರಣ?:
ಆರ್‌ಒ ಪ್ಯೂರಿಫೈಯರ್‌ಗಳಿಂದ ಶೇ.80ರಷ್ಟುನೀರು ಪೋಲಾಗುತ್ತಿದೆ ಎಂದು ಎನ್‌ಜಿಒ ಫ್ರೆಂಡ್ಸ್ ಎಂಬ ಸಂಸ್ಥೆ ಎನ್‌ಜಿಟಿ ಮೊರೆ ಹೋಗಿತ್ತು. ಈ ಬಗ್ಗೆ ಪರಿಶೀಲನೆ ನಡೆಸಲು ಹಸಿರು ನ್ಯಾಯಾಧಿಕರಣ ಕೇಂದ್ರ ಪರಿಸರ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಭಾರತೀಯ ಗುಣಮಟ್ಟಸಂಸ್ಥೆ (ಬಿಐಎಸ್), ದೆಹಲಿ ಐಐಟಿ ಹಾಗೂ ದೆಹಲಿಯಲ್ಲಿನ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಸ್ಥೆಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು.
ಲೀಟರ್ ನೀರಿನಲ್ಲಿ ಟಿಡಿಎಸ್ ಪ್ರಮಾಣ 500 ಮಿಲಿಗ್ರಾಂಗಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಆರ್‌ಒ ಪ್ಯೂರಿಫೈಯರ್‌ಗಳಿಂದ ಪ್ರಯೋಜನವೇ ಇಲ್ಲ. ಇಂತಹ ನೀರಿನಲ್ಲಿರುವ ಖನಿಜಾಂಶಗಳನ್ನೂ ಆರ್‌ಒ ಘಟಕ ತೆಗೆದುಬಿಡುತ್ತದೆ. ಜತೆಗೆ ನೀರನ್ನು ಪೋಲು ಮಾಡುತ್ತದೆ ಎಂದು ಸಮಿತಿ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಆರ್‌ಒ ಪ್ಯೂರಿಫೈಯರ್‌ಗಳನ್ನು ನಿಷೇಧಿಸುವಂತೆ ಎನ್‌ಜಿಟಿ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಇದರ ವಿರುದ್ಧ ಪ್ಯೂರಿಫೈಯರ್ ಕಂಪನಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಎನ್‌ಜಿಟಿಯಲ್ಲೇ ಮೇಲ್ಮನವಿ ಸೂಚಿಸಲು ಕೋರ್ಟ್ ಸೂಚನೆ ನೀಡಿತ್ತು.
ಇದೀಗ ತಾನು ಹೊರಡಿಸಿರುವ ನಿಷೇಧವನ್ನು ಎರಡು ತಿಂಗಳೊಳಗಾಗಿ ಜಾರಿಗೆ ತರುವಂತೆ ಎನ್‌ಜಿಟಿ ಸೂಚನೆ ನೀಡಿದೆ.
ನೀರಿನಲ್ಲಿ ಟಿಡಿಎಸ್ ಎಷ್ಟಿರಬೇಕು?
300 ಮಿಲಿಗ್ರಾಂ/ಲೀಟರ್ ಕುಡಿಯಲು ಶ್ರೇಷ್ಠ
300-500 ಮಿಲಿಗ್ರಾಂ/ಲೀಟರ್ ಉತ್ತಮ
600-900 ಮಿಲಿಗ್ರಾಂ/ಲೀಟರ್ ಪರವಾಗಿಲ್ಲ
900-1200 ಮಿಲಿಗ್ರಾಂ/ಲೀಟರ್ ಕಳಪೆ
1200 ಮಿಲಿಗ್ರಾಂ/ಲೀಟರ್ ಮೇಲ್ಪಟ್ಟು ಸೇವಿಸತಕ್ಕದ್ದಲ್ಲ
500 ಜಂಕ್ಷನ್‌ಗಳಲ್ಲಿ ಗಾಳಿ ಶುದ್ಧೀಕರಣ ಯಂತ್ರ
ಅರ್ಜಿದಾರರ ವಾದವೇನು?
- ಸಮುದ್ರದ ಉಪ್ಪಿನ ನೀರನ್ನು ಸಿಹಿಯಾಗಿಸಲೆಂದು ಆರ್‌ಒ ವಿಧಾನವನ್ನು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ
- ಭಾರತದಲ್ಲಿ ಕಡಿಮೆ ಟಿಡಿಎಸ್ ಇರುವೆಡೆಯೂ ಇದನ್ನು ಬಳಸುವುದು ವಾಡಿಕೆಯಾಗಿಬಿಟ್ಟಿದೆ
- ಆರ್‌ಒದಿಂದ ಶೇ.80ರಷ್ಟುನೀರು ಪೋಲಾಗುತ್ತಿದೆ. ಇದಕ್ಕೆ ನಿಯಂತ್ರಣ ಹೇರಬೇಕು
ಕೋರ್ಟ್ ಆದೇಶ
1. 500 ಮಿ.ಗ್ರಾಂ.ಗಿಂತ ಕಡಿಮೆ ಟಿಡಿಎಸ್ ಇದ್ದ ಕಡೆ ಪ್ಯೂರಿಫೈಯರ್ ಬೇಡ. ಅವುಗಳಿಂದ ನೀರು ವ್ಯರ್ಥ
2. ನದಿ, ಕೆರೆ ಹಾಗೂ ಕೊಳಗಳಿಂದ ನಗರಪಾಲಿಕೆಗಳು ನೀರು ಸರಬರಾಜು ಮಾಡುತ್ತಿದ್ದರೆ ಆರ್‌ಒ ಬೇಕಾಗಿಲ್ಲ
3. ಅಂತರ್ಜಲಕ್ಕೆ ಹೋಲಿಸಿದರೆ ಮೇಲಿನ ಮೂರೂ ಜಲಮೂಲಗಳಲ್ಲಿ ಟಿಡಿಎಸ್ ಕಡಿಮೆ. ಶುದ್ಧೀಕರಣ ಬೇಕಿಲ್ಲ
ಪರಿಣಾಮ ಏನು?
1. 20 ಲೀಟರ್‌ಗೆ 2 ರು.ನಿಂದ 5 ರು.ವರೆಗೆ ಇರುವ ಶುದ್ಧೀಕರಿಸಿದ ಕುಡಿವ ನೀರು ಘಟಕಗಳ ಮೇಲೆ ಪರಿಣಾಮ
2. 500 ಮಿ.ಗ್ರಾಂ.ಗಿಂತ ಕಡಿಮೆ ಟಿಡಿಎಸ್ ಇರುವ ಕಡೆ ಶುದ್ಧೀಕರಣ ಘಟಕಗಳಲ್ಲಿ ಆರ್‌ಒ ಯಂತ್ರ ಇರುವಂತಿಲ್ಲ
3. ಮನೆಗಳಲ್ಲೂ ನೀರಿನ ಟಿಡಿಎಸ್ ಪ್ರಮಾಣ ಕಡಿಮೆ ಇದ್ದರೆ ಆರ್‌ಒ ಪ್ಯೂರಿಫೈಯರ್ ಯಂತ್ರ ಅಳವಡಿಸುವಂತಿಲ್ಲ
ಗೊಂದಲಗಳು
1. ಮನೆ, ಸಾರ್ವಜನಿಕ ಪ್ರದೇಶಗಳಲ್ಲಿ ಈಗಾಗಲೇ ಆರ್‌ಒ ಯಂತ್ರಗಳಿವೆ. ಅವುಗಳನ್ನು ತೆಗೆಯಬೇಕಾ?
2. ಮನೆ, ಸಾರ್ವಜನಿಕ ಪ್ರದೇಶಗಳಲ್ಲಿ ನೀರಿನ ಟಿಡಿಎಸ್ ಪ್ರಮಾಣ ಅಳೆಯುವವರು ಯಾರು? ಹೇಗೆ?
3. ಟಿಡಿಎಸ್ ಪ್ರಮಾಣದಲ್ಲಿ ಆಗಾಗ್ಗೆ ಬದಲಾವಣೆ ಕಂಡುಬರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು?