ತಾಲಿಬಾನ್ ಆಡಳಿತದಿಂದ ದೂರಾಗುತ್ತಿದೆಯೇ ಸಹಯೋಗಿ ಹಕ್ಕಾನಿ ನೆಟ್‌ವರ್ಕ್?
ಖಲೀಲ್ ಉರ್ ರೆಹಮಾನ್ ಹಕ್ಕಾನಿ ಹತ್ಯೆಯು ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ನಡುವಿನ ಬಿರುಕುಗಳನ್ನು ಬಹಿರಂಗಪಡಿಸಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಮತ್ತು ಅಧಿಕಾರ ಕೇಂದ್ರೀಕರಣದ ಪ್ರಯತ್ನಗಳು ಈ ಉದ್ವಿಗ್ನತೆಗೆ ಕಾರಣವಾಗಿವೆ. ಹಕ್ಕಾನಿ ನೆಟ್‌ವರ್ಕ್ ತಾಲಿಬಾನಿನಿಂದ ದೂರ ಸರಿದರೆ, ಅಫ್ಘಾನಿಸ್ತಾನದಲ್ಲಿ ಆಡಳಿತ ಮತ್ತು ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಡಿಸೆಂಬರ್ 11ರಂದು, ಅಫ್ಘಾನಿಸ್ತಾನದ ಇಸ್ಲಾಮಿಕ್ ಸ್ಟೇಟ್ ಆಫ್ ಖೊರಾಸನ್ ಪ್ರಾವಿನ್ಸ್ (ಐಎಸ್‌ಕೆಪಿ) ಪ್ರದೇಶದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ ಖಲೀಲ್ ಉರ್ ರೆಹಮಾನ್ ಹಕ್ಕಾನಿಯವರ ಹತ್ಯೆ ನಡೆಸಲಾಯಿತು. ಈ ಘಟನೆ ಅಫ್ಘಾನಿಸ್ತಾನದಲ್ಲಿ ಬದಲಾಗುತ್ತಿರುವ ಅಧಿಕಾರ ವ್ಯವಸ್ಥೆಯಲ್ಲಿ ಹೊಸ ಮಜಲನ್ನು ಸೃಷ್ಟಿಸಿದೆ. ಖಲೀಲ್ ಹಕ್ಕಾನಿಯವರು ಹಕ್ಕಾನಿ ನೆಟ್‌ವರ್ಕ್ ಒಳಗೆ ಓರ್ವ ಹಿರಿಯ ಸದಸ್ಯರಾಗಿದ್ದು, ತಾಲಿಬಾನ್ ಸರ್ಕಾರದಲ್ಲಿ ನಿರಾಶ್ರಿತರು ಮತ್ತು ವಾಪಸಾತಿ ಇಲಾಖೆಯ ಸಚಿವರಾಗಿದ್ದರು. ಕಾಬೂಲ್‌ನಲ್ಲಿ ನಡೆದ ಹಕ್ಕಾನಿ ಹತ್ಯೆ, ಅಫ್ಘಾನಿಸ್ತಾನದ ಆಡಳಿತ ವ್ಯವಸ್ಥೆಯ ಒಳಗಿರುವ ಬಿರುಕುಗಳನ್ನು ಬಹಿರಂಗವಾಗಿ ಪ್ರದರ್ಶಿಸಿದೆ.
ಈ ಬೆಳವಣಿಗೆ, ಅಫ್ಘನಿಸ್ತಾನಕ್ಕೆ ಸಂಬಂಧಿಸಿದಂತೆ ಒಂದು ಮಹತ್ವದ ಪ್ರಶ್ನೆಯನ್ನು ಹುಟ್ಟುಹಾಕಿದೆ: ತಾಲಿಬಾನ್ ಜೊತೆಗೆ ಸುದೀರ್ಘ ಅವಧಿಯಿಂದ ಉತ್ತಮ ಬಾಂಧವ್ಯ ಹೊಂದಿದ್ದ ಹಕ್ಕಾನಿ ನೆಟ್‌ವರ್ಕ್, ಸರ್ವೋಚ್ಚ ನಾಯಕ ಹಿಬಾತುಲ್ಲಾ ಅಖುಂಡ್‌ಜಾದಾ ನೇತೃತ್ವದ ತಾಲಿಬಾನಿನಿಂದ ದೂರ ಸರಿದು, ತನ್ನದೇ ಮಾರ್ಗವನ್ನು ರೂಪಿಸುತ್ತಿದೆಯೇ?
ರಷ್ಯಾದ ಬೇಹುಗಾರಿಕಾ ಪ್ರಪಂಚ: ರಹಸ್ಯ ಯುದ್ಧಕ್ಕೆ ಬಲಿಯಾದರೇ ಜನರಲ್ ಕಿರಿಲೊವ್?
ಐತಿಹಾಸಿಕ ಆಯಾಮ: ಘಾಸಿಗೊಳಗಾದ ಸಹಯೋಗ
ಹಕ್ಕಾನಿ ನೆಟ್‌ವರ್ಕ್ ತನ್ನ ಕಾರ್ಯಾಚರಣಾ ಸಾಮರ್ಥ್ಯ ಮತ್ತು ಅಲ್ ಖೈದಾದಂತಹ ಅಂತಾರಾಷ್ಟ್ರೀಯ ಜಿಹಾದಿ ಉಗ್ರ ಸಂಘಟನೆಗಳೊಡನೆ ತನ್ನ ಸಂಬಂಧದಿಂದ ಹೆಸರಾಗಿತ್ತು. ಈ ಹಕ್ಕಾನಿ ಜಾಲ, ತಾಲಿಬಾನಿನ ಮಿಲಿಟರಿ ಮತ್ತು ರಾಜಕೀಯ ಕಾರ್ಯತಂತ್ರಗಳಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಮೂಲತಃ ಅಫ್ಘಾನಿಸ್ತಾನದ ಆಗ್ನೇಯ ಭಾಗ ಮತ್ತು ಪಾಕಿಸ್ತಾನದ ಕೆಲ ಭಾಗಗಳಿಗೆ ಸೇರಿದ ಹಕ್ಕಾನಿ ಜಾಲ, ಆತ್ಮಹತ್ಯಾ ಬಾಂಬ್ ದಾಳಿಗಳನ್ನು ತನ್ನ ಪ್ರಮುಖ ಕಾರ್ಯತಂತ್ರವನ್ನಾಗಿ ರೂಪಿಸಿ, ಆ ಮೂಲಕ ತಾಲಿಬಾನ್‌ಗೆ ಅದರ ಕಾರ್ಯಾಚರಣೆಗಳಲ್ಲಿ ಮಹತ್ವದ ಮೇಲುಗೈ ತಂದುಕೊಟ್ಟಿತ್ತು. 2021ರ ಬಳಿಕ, ಹಕ್ಕಾನಿ ನೆಟ್‌ವರ್ಕ್ ಅನ್ನು ತಾಲಿಬಾನ್ ಉನ್ನತ ಹಂತಕ್ಕೆ ಸೇರ್ಪಡೆಗೊಳಿಸಿದ್ದು ವಾಸ್ತವಿಕ ನಡೆಯಾಗಿತ್ತು. ಯಾಕೆಂದರೆ, ಹಕ್ಕಾನಿ ನೆಟ್‌ವರ್ಕ್ ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತವನ್ನು ಬಲಪಡಿಸಲು ಭಯೋತ್ಪಾದನೆ ಮತ್ತು ಆಡಳಿತಗಳಲ್ಲಿ ಸಮತೋಲನ ಒದಗಿಸುತ್ತಿತ್ತು.
ಆದರೆ, ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ನಡುವಿನ ಸೈದ್ಧಾಂತಿಕ ಮತ್ತು ಕಾರ್ಯತಂತ್ರದ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ, ಈ ಸಹಯೋಗ ನಿರಂತರವಾಗಿ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿತ್ತು. ಕಂದಹಾರ್‌ನಿಂದ ಆಡಳಿತ ನಡೆಸುತ್ತಿದ್ದ ಅಖುಂಡ್‌ಜಾದಾ ತನ್ನ ಅಧಿಕಾರವನ್ನು ಕೇಂದ್ರೀಕೃತಗೊಳಿಸಿ, ಕಾಬೂಲ್ ಮತ್ತು ಪೂರ್ವ ಅಫ್ಘಾನಿಸ್ತಾನದಲ್ಲಿ ಅಪಾರ ಪ್ರಭಾವ ಹೊಂದಿದ್ದ ಹಕ್ಕಾನಿ ನೆಟ್‌ವರ್ಕ್ ಸೇರಿದಂತೆ, ವಿವಿಧ ಗುಂಪುಗಳನ್ನು ಮೂಲೆಗುಂಪು ಮಾಡಿ ಆಡಳಿತ ನಡೆಸುತ್ತಿದ್ದ. ಈಗ ಖಲೀಲ್ ಹಕ್ಕಾನಿ ಹತ್ಯೆಯೂ ನಡೆದಿದ್ದು, ಈ ಉದ್ವಿಗ್ನತೆಗಳನ್ನು ಇನ್ನಷ್ಟು ತೀವ್ರಗೊಳಿಸಿದೆ. ಇದರಿಂದಾಗಿ, ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ಮಧ್ಯೆ ಇದ್ದ ಬಿರುಕುಗಳು ಇನ್ನಷ್ಟು ಹಾನಿಕಾರಕವಾಗಿ ಬದಲಾಗುವ ಸಾಧ್ಯತೆಗಳು ಎದುರಾಗಿವೆ.
ಹಕ್ಕಾನಿ ಹತ್ಯೆ ಮತ್ತು ಅದರ ಪರಿಣಾಮಗಳು
ಖಲೀಲ್ ಹಕ್ಕಾನಿ ಮತ್ತು ಇತರ ಐವರ ಸಾವಿಗೆ ಕಾರಣವಾದ ಭೀಕರ ಆತ್ಮಹತ್ಯಾ ದಾಳಿಯ ಹೊಣೆಯನ್ನು ಐಎಸ್‌ಕೆಪಿ ಹೊತ್ತುಕೊಂಡಿದೆ. 2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಅಧಿಕಾರ ಕಿತ್ತುಕೊಂಡ ಬಳಿಕ, ಇದೇ ಅಲ್ಲಿನ ಮಹತ್ವದ, ದೊಡ್ಡ ಮಟ್ಟದ ಹತ್ಯೆಯಾಗಿದೆ. ತಾಲಿಬಾನ್ ಬಹಿರಂಗವಾಗಿ ಐಎಸ್‌ಕೆಪಿಯನ್ನು ದೂಷಿಸಿದ್ದರೂ, ತಾಲಿಬಾನ್ ಮತ್ತು ಐಎಸ್‌ಕೆಪಿ ನಡುವೆ ಆಂತರಿಕ ಸಹಭಾಗಿತ್ವ ಇದ್ದಿರುವ ಕುರಿತು ಅನುಮಾನಗಳು ವ್ಯಕ್ತವಾಗಿವೆ. ಖಲೀಲ್ ಹಕ್ಕಾನಿ ಹತ್ಯೆಯ ಬಳಿಕ, ಖಲೀಲ್ ಹಕ್ಕಾನಿ ಸಹೋದರನ ಮಗ, ಅಫ್ಘಾನಿಸ್ತಾನದ ಆಂತರಿಕ ಸಚಿವನೂ ಆಗಿರುವ ಸಿರಾಜುದ್ದೀನ್ ಹಕ್ಕಾನಿ ತನ್ನ ಕಮಾಂಡರ್‌ಗಳ ಜೊತೆಗೆ ತುರ್ತು ಸಭೆಯೊಂದನ್ನು ನಡೆಸಿದ್ದರು. ಇದು ಅಖುಂಡ್‌ಜಾದಾ ಗುಪ್ತಚರ ವ್ಯವಸ್ಥೆಯ ಕುರಿತು ಸಿರಾಜುದ್ದೀನ್ ಹೊಂದಿರುವ ಅಪನಂಬಿಕೆಗೆ ಇನ್ನಷ್ಟು ತುಪ್ಪ ಸುರಿದಿದೆ.
ಅಫ್ಘಾನ್ ಮಾಧ್ಯಮ ವರದಿಗಳ ಪ್ರಕಾರ, ಹಕ್ಕಾನಿ ನೆಟ್‌ವರ್ಕ್ ತನ್ನ ನೆಲೆಯನ್ನು ಸಾಂಪ್ರದಾಯಿಕ ತಾಣಗಳಾದ ಖೋಸ್ತ್ ಮತ್ತು ಪಾತಿಕಾ ಪ್ರದೇಶಗಳಿಗೆ ಬದಲಾಯಿಸಿ, ಕಾಬೂಲ್‌ನಲ್ಲಿ ತನ್ನ ಉಪಸ್ಥಿತಿಯನ್ನು ಕಡಿಮೆಗೊಳಿಸುವ ಸಾಧ್ಯತೆಗಳಿವೆ. ಈ ನಡೆ ಒಂದು ಕಾರ್ಯತಂತ್ರದ ವಾಪಸಾತಿಯ ಸಂಕೇತ ನೀಡಿದ್ದು, ಹಕ್ಕಾನಿಗಳು ಮತ್ತು ಕಂದಹಾರ್ ಮೂಲದ ತಾಲಿಬಾನಿ ನಾಯಕತ್ವದ ನಡುವೆ ಕುಸಿಯುತ್ತಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಕರ್ನಾಟಕವೇ ಕೇಂದ್ರಬಿಂದು: ಚಿತ್ರದುರ್ಗದಲ್ಲಿ ವೊರೊನೆಜ್ ರೇಡಾರ್
ಸೈದ್ಧಾಂತಿಕ ಮತ್ತು ಕಾರ್ಯತಂತ್ರದ ಭಿನ್ನಾಭಿಪ್ರಾಯಗಳು
ಸಿರಾಜುದ್ದೀನ್ ಹಕ್ಕಾನಿ ಇತ್ತೀಚೆಗೆ ನೀಡಿರುವ ಸಾರ್ವಜನಿಕ ಹೇಳಿಕೆಗಳು ತಾಲಿಬಾನ್ ಮತ್ತು ಹಕ್ಕಾನಿ ನೆಟ್‌ವರ್ಕ್ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಪ್ರದರ್ಶಿಸಿದೆ. ಮದರಸಾವೊಂದರ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಸಿರಾಜುದ್ದೀನ್ ಹಕ್ಕಾನಿ, ಧಾರ್ಮಿಕ ಅಧಿಕಾರವನ್ನು ಏಕಸ್ವಾಮ್ಯಗೊಳಿಸುವುದನ್ನು ಟೀಕಿಸಿದ್ದರು. "ಧರ್ಮವನ್ನು ಅದು ಕೇವಲ ನನಗೆ ಮಾತ್ರವೇ ಸೇರಿದೆ, ಅದರಿಂದ ಬೇರೆಯವರನ್ನು ಹೊರಗಿಡುತ್ತೇನೆ ಎಂಬ ರೀತಿಯಲ್ಲಿ ವ್ಯಾಖ್ಯಾನಿಸುವುದು ತಪ್ಪು" ಎಂದು ಸಿರಾಜುದ್ದೀನ್ ಹೇಳಿದ್ದರು. ಇದು ಅಖುಂಡ್‌ಜಾದಾ ಆಡಳಿತ ಶೈಲಿಯ ಕುರಿತ ಟೀಕೆ ಎನ್ನಲಾಗಿದ್ದು, ಇತ್ತೀಚಿನ ಸರ್ಕಾರದ ಪುನರ್ ರಚನೆಯ ಕುರಿತು ತಾಲಿಬಾನ್ ಕಮಾಂಡರ್‌ಗಳಲ್ಲಿ ಉಂಟಾಗಿರುವ ಅಸಮಾಧಾನವನ್ನೂ ಪ್ರಕಟಗೊಳಿಸಿದೆ. ಇದು ಅಫ್ಘಾನಿಸ್ತಾನದ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚುತ್ತಿರುವ ಬಿರುಕನ್ನು ಜಾಹೀರುಗೊಳಿಸಿದೆ.
ಅಖುಂಡ್‌ಜಾದಾ ತನ್ನ ಪ್ರಮುಖ ಕಮಾಂಡರ್‌ಗಳಿಗೆ ಹುದ್ದೆಗಳನ್ನು ಮರಳಿ ನೀಡಿ, ಕಾಬೂಲ್ ಬದಲಿಗೆ ಕಂದಹಾರ್‌ಗೆ ನಿಷ್ಠರಾಗಿರುವವರಿಗೆ ಆದ್ಯತೆ ನೀಡುವ ಮೂಲಕ ತನ್ನ ಅಧಿಕಾರವನ್ನು ಭದ್ರಪಡಿಸಲು ಪ್ರಯತ್ನ ನಡೆಸಿರುವುದೂ ಸಹ ಈ ಉದ್ವಿಗ್ನತೆಗಳು ತೀವ್ರಗೊಳ್ಳಲು ಕಾರಣವಾಗಿವೆ. ವರದಿಗಳ ಪ್ರಕಾರ, ಅಖುಂಡ್‌ಜಾದಾ ಹಕ್ಕಾನಿ ನೆಟ್‌ವರ್ಕ್ ಜೊತೆಗೆ ಹೆಚ್ಚಿನ ಬಾಂಧವ್ಯ ಸಾಧಿಸದಂತೆ ತಾಲಿಬಾನ್ ಕಮಾಂಡರ್‌ಗಳಿಗೆ ಎಚ್ಚರಿಕೆ ನೀಡಿದ್ದಾನೆ.
ಸಾರ್ವಜನಿಕವಾಗಿ ನಿರಾಕರಣೆ ಮತ್ತು ಖಾಸಗಿಯಾಗಿ ಪುನರ್ ಜೋಡಣೆ!
ಇವೆಲ್ಲ ಬೆಳವಣಿಗೆಗಳ ನಡುವೆಯೂ, ತಾಲಿಬಾನ್ ನಾಯಕರು ಈಗಾಗಲೇ ಮೂಡಿರುವ ಬಿರುಕನ್ನು ಶಮನಗೊಳಿಸಲು ಪ್ರಯತ್ನ ನಡೆಸಿದ್ದಾರೆ. ಖಲೀಲ್ ಹಕ್ಕಾನಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ, ಅಫ್ಘಾನಿಸ್ತಾನದ ಆರ್ಥಿಕ ವ್ಯವಹಾರಗಳ ಉಪ ಪ್ರಧಾನಿಯಾದ ಮುಲ್ಲಾ ಅಬ್ದುಲ್ ಘನಿ ಬರಾದರ್ ಈಗಾಗಲೇ ಹಬ್ಬಿರುವ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. "ನಮ್ಮ ನಾಯಕರುಗಳ ನಡುವೆ ಸಾಕಷ್ಟು ಪ್ರೀತಿ, ಸ್ನೇಹ, ಮತ್ತು ವಿಶ್ವಾಸಗಳಿವೆ" ಎಂದು ಅವರು ಹೇಳಿದ್ದಾರೆ. ಆದರೆ, ಅಂತ್ಯಕ್ರಿಯೆಯ ವೇಳೆ ಅಪಾರ ಪ್ರಮಾಣದ ಶಸ್ತ್ರಸಜ್ಜಿತ ಯೋಧರ ಉಪಸ್ಥಿತಿ ಮತ್ತು ಅಂತ್ಯ ಸಂಸ್ಕಾರದಲ್ಲಿ ವಿರೋಧಿ ಗುಂಪುಗಳ ಮುಖಂಡರೂ ಭಾಗಿಯಾಗಿದ್ದು ತಾಲಿಬಾನಿನ ಆಂತರಿಕ ಸಹಯೋಗದಲ್ಲಿ ಉಂಟಾಗಿರುವ ಅಪನಂಬಿಕೆಗೆ ಬಹುದೊಡ್ಡ ಸಾಕ್ಷಿ ಒದಗಿಸಿದೆ.
ಅದರೊಡನೆ, ಖಲೀಲ್ ಹಕ್ಕಾನಿ ಅಂತ್ಯ ಸಂಸ್ಕಾರ ಸಾರ್ವಜನಿಕವಾಗಿ ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನದಂತೆಯೂ ಕಂಡುಬಂದಿತ್ತು. ಹಿಜ್ಬ್ ಎ ಇಸ್ಲಾಮಿ ಸಂಘಟನೆಯ ಮುಖಂಡ, ಕಂದಹಾರ್ ನಾಯಕತ್ವದ ವಿರೋಧಿಯೆಂದು ಗುರುತಿಸಲ್ಪಟ್ಟಿರುವ ಗುಲ್ಬುದ್ದೀನ್ ಹೆಕಮತ್ಯಾರ್ ಉಪಸ್ಥಿತಿ ಅಸಮಾಧಾನಗಳಿವೆ ಎಂಬ ಗುಲ್ಲನ್ನು ಅಲ್ಲಗಳೆಯಲು ಕೈಗೊಂಡ ಲೆಕ್ಕಾಚಾರದ ಕ್ರಮ ಎನ್ನಲಾಗಿದೆ.
ಹಕ್ಕಾನಿ - ತಾಲಿಬಾನ್ ಬಿರುಕಿನ ಪರಿಣಾಮಗಳು
ಒಂದು ವೇಳೆ ಹಕ್ಕಾನಿ ನೆಟ್‌ವರ್ಕ್ ಅಧಿಕೃತವಾಗಿ ತಾಲಿಬಾನ್ ಆಡಳಿತದಿಂದ ದೂರಾದರೆ, ಅಫ್ಘಾನಿಸ್ತಾನದ ಆಡಳಿತ ಮತ್ತು ಭದ್ರತೆಯ ಮೇಲೆ ಅದರ ಪರಿಣಾಮಗಳು ಗಂಭೀರವಾಗಿರಲಿವೆ:
* ಆಡಳಿತ ವಿಘಟನೆ: ಹಕ್ಕಾನಿ ನೆಟ್‌ವರ್ಕ್ ಪೂರ್ವ ಅಫ್ಘಾನಿಸ್ತಾನದ ವಿಶಾಲ ಭೂ ಪ್ರದೇಶಗಳ ಆಡಳಿತವನ್ನು ನಿರ್ವಹಿಸುತ್ತದೆ. ಒಂದು ವೇಳೆ, ಹಕ್ಕಾನಿ ನೆಟ್‌ವರ್ಕ್ ದೂರವಾದರೆ, ಪರಿಣಾಮಕಾರಿಯಾಗಿ ಆಡಳಿತ ನಡೆಸುವ ತಾಲಿಬಾನ್ ಸಾಮರ್ಥ್ಯ ಕುಂಠಿತವಾಗಬಹುದು. ಅದರಲ್ಲೂ ಹಕ್ಕಾನಿಗಳ ಪ್ರಭಾವ ಇರುವ ಪ್ರದೇಶಗಳನ್ನು ನಿರ್ವಹಿಸುವುದು ತಾಲಿಬಾನ್‌ಗೆ ಕಷ್ಟಕರವಾಗಲಿದೆ.
* ಭದ್ರತಾ ನಿರ್ವಾತ: ಒಂದು ವೇಳೆ ತಾಲಿಬಾನ್ ವಿಭಜನೆಗೊಂಡರೆ, ಅದು ಐಎಸ್‌ಕೆಪಿ ಮತ್ತು ಇತರ ವಿರೋಧಿ ಗುಂಪುಗಳಿಗೆ ಹೆಚ್ಚಿನ ಧೈರ್ಯ ನೀಡಿ, ಅವುಗಳು ಅಫ್ಘಾನಿಸ್ತಾನವನ್ನು ಮತ್ತೊಂದು ಹೊಸ ಕದನಕ್ಕೆ ಎಳೆಯಬಹುದು.
* ಅಂತರ್ಯುದ್ಧದ ಭೀತಿ: ಅಫ್ಘಾನಿಸ್ತಾನದ ಸಂಪನ್ಮೂಲಗಳು ಮತ್ತು ಪ್ರಾದೇಶಿಕ ನಿಯಂತ್ರಣಕ್ಕಾಗಿ ಹಕ್ಕಾನಿ ನೆಟ್‌ವರ್ಕ್ ಮತ್ತು ತಾಲಿಬಾನ್ ನಡುವೆ ನಡೆಯುವ ಸ್ಪರ್ಧೆಗಳು ಅಫ್ಘಾನಿಸ್ತಾನದಲ್ಲಿ ಹೊಸ ಅಂತರ್ಯುದ್ಧಕ್ಕೆ ನಾಂದಿ ಹಾಡಬಹುದು.
* ಪ್ರಾದೇಶಿಕ ಪರಿಣಾಮಗಳು: ಹಕ್ಕಾನಿ ನೆಟ್‌ವರ್ಕ್ ತಾಲಿಬಾನಿನಿಂದ ದೂರಾದರೆ, ಅದರ ಸುದೀರ್ಘ ಬೆಂಬಲಿಗನಾದ ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದ ಮೇಲಿನ ಹತೋಟಿ ಕೈತಪ್ಪಿ ಹೋದಂತಾಗಬಹುದು. ಅದರೊಡನೆ, ಪಾಕಿಸ್ತಾನದ ಭದ್ರತೆಯ ಆಯಾಮಗಳೂ ಸಂಕೀರ್ಣಗೊಳ್ಳಬಹುದು. ಅದರೊಡನೆ, ಇರಾನ್, ಚೀನಾ, ರಷ್ಯಾದಂತಹ ಪ್ರಾದೇಶಿಕ ಶಕ್ತಿಗಳು ಛಿದ್ರಗೊಂಡ ತಾಲಿಬಾನ್ ಕುರಿತಂತೆ ತಮ್ಮ ಕಾರ್ಯತಂತ್ರಗಳನ್ನು ಬದಲಾಯಿಸಬಹುದು.
ಭವಿಷ್ಯದ ಹಾದಿ
ಖಲೀಲ್ ಹಕ್ಕಾನಿ ಹತ್ಯೆ ಅಧಿಕಾರಕ್ಕಾಗಿ ತಾಲಿಬಾನಿನ ಆಂತರಿಕ ಕಿತ್ತಾಟಕ್ಕೆ ತೀಕ್ಷ್ಣ ಪರಿಹಾರ ತಂದಿದೆ. ತಾಲಿಬಾನ್ ನಾಯಕರ ಬಹಿರಂಗ ಹೇಳಿಕೆಗಳು ಒಗ್ಗಟ್ಟು ಪ್ರದರ್ಶಿಸುವ ರೀತಿ ಇದ್ದರೂ, ಬಹಿರಂಗವಾಗಿಯೇ ಕಾಣುತ್ತಿರುವ ಅಪನಂಬಿಕೆಗಳು ಮತ್ತು ಕಾರ್ಯತಂತ್ರದ ಮರು ಜೋಡಣೆಗಳು ಬಿಕ್ಕಟ್ಟು ತೀವ್ರಗೊಂಡಿರುವುದನ್ನು ಸಾರಿ ಹೇಳುತ್ತಿವೆ. ತಾಲಿಬಾನ್ ಆಡಳಿತದಿಂದ ಹಕ್ಕಾನಿ ನೆಟ್‌ವರ್ಕ್ ಹೊರನಡೆಯುವುದರಿಂದ, ಅಫ್ಘಾನಿಸ್ತಾನದ ರಾಜಕೀಯ ಚಿತ್ರಣ ಬದಲಾಗಿ, ಅಫ್ಘಾನ್ ಆಡಳಿತ ಆಂತರಿಕ ಮತ್ತು ಬಾಹ್ಯ ಸವಾಲುಗಳ ಎದುರು ದುರ್ಬಲಗೊಳ್ಳಬಹುದು.
ಅಫ್ಘಾನಿಸ್ತಾನ ಈಗ ಇಂತಹ ಅನಿಶ್ಚಿತತೆಗಳ ಸುಳಿಗೆ ಸಿಲುಕಿದೆ. ಹೀಗಿರುವಾಗ, ತಾಲಿಬಾನ್ ಆಡಳಿತದ ಬಾಳ್ವಿಕೆ ಮತ್ತು ಅಧಿಕಾರದ ಮೇಲೆ ಅದರ ಹಿಡಿತಗಳು ಆಂತರಿಕ ಬಿಕ್ಕಟ್ಟನ್ನು ಅದು ಹೇಗೆ ನಿಭಾಯಿಸಬಲ್ಲದು, ಬಿರುಕುಗಳನ್ನು ಹೇಗೆ ಸರಿಪಡಿಸಬಲ್ಲದು ಎನ್ನುವುದರ ಮೇಲೆ ಅವಲಂಬಿತವಾಗಿದೆ. ಸದ್ಯದ ಮಟ್ಟಿಗೆ, ತಾಲಿಬಾನ್ ಆಡಳಿತದಲ್ಲಿ ಬಿರುಕುಗಳು, ಬಿಕ್ಕಟ್ಟುಗಳು ತಲೆದೋರಿದ್ದು, 2021ರ ಬಳಿಕ ತಾಲಿಬಾನ್ ಆಡಳಿತದಲ್ಲಿ ಇಲ್ಲಿಯತನಕ ಇದ್ದ ದುರ್ಬಲ ಸಮತೋಲನವನ್ನು ಇಲ್ಲವಾಗಿಸುವ ಅಪಾಯಗಳು ದಟ್ಟವಾಗಿ ಗೋಚರಿಸುತ್ತಿವೆ.